Site icon Vistara News

ಮುಂದುವರಿದ ʼಅಪರಿಚಿತರʼ ಕಾರ್ಯಾಚರಣೆ; ಭಾರತೀಯ ಸೇನಾನೆಲೆ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಪಾಕ್ ಸೇನಾಧಿಕಾರಿ ಹತ್ಯೆ

Shot Dead

Shot Dead

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಯ ಗುಂಡಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಪಾಕಿಸ್ತಾನ ಸೇನೆಯ ನಿವೃತ್ತ ಬ್ರಿಗೇಡಿಯರ್, ಆರು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯ ಸಂಚುಕೋರ ಎನ್ನಲಾದ ಅಮೀರ್ ಹಮ್ಜಾ (Ameer Hamza)ನನ್ನು ಪಾಕಿಸ್ತಾನದ ಪಂಜಾಬ್‌ನ ಝೀಲಂ ಪ್ರದೇಶದ ಲಿಲ್ಲಾ ಇಂಟರ್‌ಜಾರ್ಜ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ (Shot Dead). ಬ್ರಿಗೇಡಿಯರ್ ಹಮ್ಜಾ ಕಾರಿನಲ್ಲಿ ತನ್ನ ಪತ್ನಿ ಮತ್ತು ಮಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ದಾಳಿ ನಡೆದಿದೆ. ಪತ್ನಿ ಮತ್ತು ಮಗಳು ಗಾಯಗೊಂಡಿದ್ದಾರೆ.

ದಾಳಿಕೋರರು ಯಾವುದೇ ಬೇಡಿಕೆಯಿಲ್ಲದೆ ಏಕಾಏಕಿ ಗುಂಡು ಹಾರಿಸಿದರು. ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿ ಎಂದು ವರದಿ ಹೇಳಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ʼʼಈ ಕೊಲೆ ಪ್ರಕರಣದ ತನಿಖೆ ಆರಂಭಿಸಿದ್ದೇವೆ. ಎಫ್‌ಐಆರ್‌ ದಾಖಲಿಸಲಾಗಿದೆ. ಇದು ಭಯೋತ್ಪಾದಕರ ದಾಳಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲʼʼ ಎಂದು ಅದಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ತುರ್ತು ಸೇವೆಗಳ ಅಕಾಡೆಮಿ 1122ರ ಮಾಜಿ ಡಿಜಿ ಬ್ರಿಗೇಡಿಯರ್ ಅಮೀರ್ ಹಮ್ಜಾ 2018ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಂಜ್ವಾನ್ ಸೇನಾ ಶಿಬಿರದ ಮೇಲೆ ನಡೆದ ಶಂಕಿತ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬ ಎನ್ನಲಾಗಿದೆ. 2018ರ ಫೆಬ್ರವರಿ 10ರಂದು ನಡೆದ ದಾಳಿಯಲ್ಲಿ ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು (ಜೆಸಿಒ) ಮತ್ತು ಸೈನಿಕನ ತಂದೆ ಸೇರಿದಂತೆ ಐವರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ಆರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹತ್ತು ಜನರು ಗಾಯಗೊಂಡಿದ್ದರು. ಈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ ಈಗ ಪ್ರತಿಕಾರ ತೀರಿಸಿಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

ಪಾಕಿಸ್ತಾನದಲ್ಲಿ ಮುಂದುವರಿದ ಅಪರಿಚಿತ ವ್ಯಕ್ತಿಗಳ ದಾಳಿ

ಭಾರತಕ್ಕೆ ದ್ರೋಹ ಬಗೆದು ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಅನೇಕರನ್ನು ಗುರಿಯಾಗಿಸಿ ಅವರನ್ನು ಹೊಡೆದುರುಳಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚಿನ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ವರದಿ ಮಾಡಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾ ಎಂಬಾತನನ್ನು ಏಪ್ರಿಲ್‌ 14ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಇನ್ನು ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿರುವ ಡಾನ್‌ ದಾವೂದ್‌ ಇಬ್ರಾಹಿಂ ಕೂಡ ಈ ಅಪರಿಚಿತರಿಗೆ ಹೆದರಿ ಮುಕ್ತವಾಗಿ ಹೊರಗೆ ಓಡಾಡುತ್ತಿಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಭಾರತದ ವಿರುದ್ಧ ಸಂಚು ರೂಪಿಸಿದವರಿಗೆ ಅಪರಿಚಿತ ವ್ಯಕ್ತಿಗಳು ನಡುಕ ಹುಟ್ಟಿಸಿದ್ದಾರೆ.

Exit mobile version