Site icon Vistara News

Tahawwur Rana: 26/11 ಮುಂಬೈ ದಾಳಿಯ ಭಾಗವಾಗಿದ್ದ ಪಾಕ್‌ ಮೂಲದ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಗೆ

Tahawwur Rana

ವಾಷಿಂಗ್ಟನ್‌: 2008ರ 26/11 ಮುಂಬೈ ಭಯೋತ್ಪಾದಕ ದಾಳಿ (26/11 Mumbai terror attacks)ಯಲ್ಲಿ ಶಾಮೀಲಾಗಿರುವ ಪಾಕ್‌ ಮೂಲದ ಕೆನಡಾ ಉದ್ಯಮಿ ತಹವ್ವೂರ್‌ ರಾಣಾ (Tahawwur Rana)ನನ್ನು ಹಸ್ತಾಂತರಿಸಬೇಕೆಂದು ಕೋರಿದ್ದ ಭಾರತದ ಮನವಿಯನ್ನು ಅಮೆರಿಕ ಕೋರ್ಟ್‌ ಅಂಗೀಕರಿಸಿದೆ. ಉಭಯ ದೇಶಗಳ ನಡುವಿನ ಹಸ್ತಾಂತರ ಒಪ್ಪಂದದ ಪ್ರಕಾರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ಮಹತ್ವದ ತೀರ್ಪು ನೀಡಿದೆ.

ಮುಂಬೈ ದಾಳಿಯ ಮುನ್ನ ಬೇಹುಗಾರಿಕೆ ನಡೆಸಲು ಡೇವಿಡ್ ಕೋಲ್ಮನ್ ಹೆಡ್ಲಿಗೆ ರಾಣಾ ಸಹಾಯ ಮಾಡಿದ್ದಾನೆ ಮತ್ತು 24 ವಿದೇಶಿ ಪ್ರಜೆಗಳು ಸೇರಿದಂತೆ 166 ಜನರ ಸಾವಿಗೆ ಕಾರಣವಾದ ಈ ದಾಳಿಯನ್ನು ಸಂಘಟಿಸುವಲ್ಲಿ ಲಷ್ಕರ್-ಎ-ತೈಬಾ (LeT) ಸಂಘಟನೆಗೆ ಬೆಂಬಲವನ್ನು ಒದಗಿಸಿದ್ದಾನೆ ಎಂದು ಭಾರತೀಯ ಅಧಿಕಾರಿಗಳು ಆರೋಪಿಸಿ, ಆತನನ್ನು ಹಸ್ತಾಂತರಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಮುಂಬೈ ಮತ್ತು ಕೋಪನ್ ಹ್ಯಾಗನ್ ಸೇರಿದಂತೆ ಅಮೆರಿಕ ಹೊರಗೆ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಿತೂರಿ ಮಾಡಿದ್ದಾಕ್ಕಾಗಿ ರಾಣಾನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ (FBI) 2009ರಲ್ಲಿ ಬಂಧಿಸಿತ್ತು.

“ರಾಣಾ ಭಾಗಿಯಾಗಿದ್ದ ಅಪರಾಧ ಕೃತ್ಯವು ಅಮೆರಿಕ ಮತ್ತು ಭಾರತದ ನಡುವಿನ ಹಸ್ತಾಂತರ ಒಪ್ಪಂದದ ನಿಯಮದ ಅಡಿಯಲ್ಲಿ ಬರುತ್ತದೆ. ಹೀಗಾಗಿ ರಾಣಾನ ಹಸ್ತಾಂತರಕ್ಕೆ ಯಾವುದೇ ಕಾನೂನು ತೊಡಕು ಎದುರಾಗುವುದಿಲ್ಲʼʼ ಎಂದು ಅಮೆರಿಕದ 9ನೇ ಸರ್ಕ್ಯೂಟ್‌ನ ಮೇಲ್ಮನವಿ ನ್ಯಾಯಾಲಯ ಸ್ಪಷ್ಪಪಡಿಸಿದೆ.

ಕಳೆದ ವರ್ಷ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಮುಂಬೈ ಪೊಲೀಸ್‌ನ ಅಪರಾಧ ವಿಭಾಗವು ಹೆಡ್ಲಿಯೊಂದಿಗೆ ರಾಣಾ ಸಹ-ಪಿತೂರಿಗಾರ ಮಾತ್ರವಲ್ಲ, ದಾಳಿ ನಡೆಸುವ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾನೆ ಎಂದು ಉಲ್ಲೇಖಿಸಿತ್ತು. 2020ರಲ್ಲಿ ರಾಣಾ ಹಸ್ತಾಂತರಕ್ಕಾಗಿ ಭಾರತವು ಸಲ್ಲಿಸಿದ್ದ ಮನವಿಗೆ ಜೋ ಬೈಡನ್ ಸರ್ಕಾರ ಬೆಂಬಲ ಸೂಚಿಸಿತ್ತು. 2023ರ ಮೇ 1ರಂದು ನ್ಯಾಯಾಲಯವು ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ ಸೂಚಿಸಿತ್ತು. ಬಳಿಕ ಇದರ ವಿರುದ್ಧ 63 ವರ್ಷದ ರಾಣಾ ಕ್ಯಾಲಿಫೋರ್ನಿಯಾದ ಹೇಬಿಯಸ್ ನ್ಯಾಯಾಲಯದ ಮೊರೆ ಹೋಗಿದ್ದ. ಅದಾಗ್ಯೂ 2023ರ ಆಗಸ್ಟ್ 10ರಂದು ಈ ಅರ್ಜಿಯನ್ನು ಕೋರ್ಟ್‌ ತಿರಸ್ಕರಿಸಿತ್ತು. ನಂತರ ಆತ ಸರ್ಕ್ಯೂಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದ. ಇದೀಗ ಇಲ್ಲೂ ಹಿನ್ನಡೆಯಾಗಿದೆ.

ಇನ್ನೂ ಅವಕಾಶವಿದೆ

ಅಚ್ಚರಿ ಎಂದರೆ ರಾಣಾಗೆ ತೀರ್ಪಿನ ವಿರುದ್ಧ ಇನ್ನೂ ಮೇಲ್ಮನವಿ ಸಲ್ಲಿಸುವ ಆಯ್ಕೆ ಇದೆ. ಭಾರತಕ್ಕೆ ಗಡೀಪಾರು ಮಾಡುವುದನ್ನು ತಡೆಯುವಂತೆ ಮನವಿ ಸಲ್ಲಿಸಲು ಹಲವು ಮಾರ್ಗಗಳಿವೆ ಎಂದು ಮೂಲಗಳು ತಿಳಿಸಿವೆ. ಅಮೆರಿಕ ಕಾನೂನಿನ ಪ್ರಕಾರ, ರಾಣಾನನ್ನು ಭಾರತಕ್ಕೆ ಹಸ್ತಾಂತರಿಸದಿದ್ದರೆ 2027ರಲ್ಲಿ ಜೈಲು ಶಿಕ್ಷೆ ಪೂರ್ಣಗೊಂಡ ನಂತರ ಆತನನ್ನು ತಾಯ್ನಾಡಾದ ಕೆನಡಾಕ್ಕೆ ಗಡೀಪಾರು ಮಾಡಲಾಗುತ್ತದೆ.

ಭಯೋತ್ಪಾದಕ ದಾಳಿಯ ಕರಾಳ ನೆನಪು

2008ರ ನವೆಂಬರ್ 26ರಂದು ಲಷ್ಕರ್-ಎ-ತೊಯ್ಬಾದ 10 ಭಯೋತ್ಪಾದಕರು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಬಂದು, ನಗರದಾದ್ಯಂತ ಹಲವು ಸ್ಥಳಗಳಲ್ಲಿ ದಾಳಿ ಮಾಡಿದರು. ದಾಳಿಯಲ್ಲಿ 26 ವಿದೇಶಿ ನಾಗರಿಕರು ಸೇರಿದಂತೆ 166 ಜನರು ಸಾವನ್ನಪ್ಪಿದ್ದರು.

ಇದನ್ನೂ ಓದಿ: Sajid Mir: ಮುಂಬೈ ದಾಳಿಯ ಉಗ್ರನಿಗೆ ಪಾಕ್‌ ಜೈಲಿನಲ್ಲೇ ವಿಷ ಪ್ರಾಶನ!

Exit mobile version