Site icon Vistara News

ವಿಸ್ತಾರ ಸಂಪಾದಕೀಯ | ಭಾರತ ವಿರುದ್ಧದ ಸೋಲಿನ ಪಾಠ, ದುಷ್ಟ ಪಾಕ್‌ಗೆ ಇನ್ನಾದರೂ ಬುದ್ಧಿ ಬರಲಿ

indvspak

ಏಳು ದಶಕಗಳ ಹಗೆತನದ ಬಳಿಕ ಮೊದಲ ಬಾರಿಗೆ ಪಾಕಿಸ್ತಾನದ ಆಡಳಿತಗಾರರಿಗೆ ಭಾರತದ ಬಗ್ಗೆ ಜ್ಞಾನೋದಯವಾದಂತಿದೆ. ಭಾರತದ ವಿರುದ್ಧ ನಡೆದ ಮೂರು ಯುದ್ಧಗಳಿಂದ ಪಾಕಿಸ್ತಾನ ಪಾಠ ಕಲಿತಿರುವುದಾಗಿ ಪಾಕ್ ಪ್ರಧಾನಿ ಶೆಹಬಾಜ್‌ ಶರೀಫ್‌ ಒಪ್ಪಿಕೊಂಡಿದ್ದಾರೆ. ಈ ಯುದ್ಧಗಳಿಂದ ಯಾತನೆ, ಬಡತನ ಹಾಗೂ ನಿರುದ್ಯೋಗಗಳೇ ನಮ್ಮ ದೇಶಕ್ಕೆ ದೊರೆತಿವೆ. ಇನ್ನೊಂದು ಕಡೆ ಭಾರತ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಶಾಂತಿ ಮಾತುಕತೆಯೇ ಲೇಸು, ಯುದ್ಧ ಬೇಡವೇ ಬೇಡ ಎಂದಿದ್ದಾರೆ. ಇದು ಪಾಕ್‌ ಆಡಳಿತಗಾರರಲ್ಲಿ ಅಪರೂಪವೇ ಆಗಿರುವ ವಾಸ್ತವ ಜಗತ್ತಿನ ಪ್ರಜ್ಞೆ ಎಂಬಂತೆ ಕಾಣಿಸುತ್ತದೆ. ಅವರ ಮಾತಿನಲ್ಲಿ ದಯನೀಯತೆ ಇದೆ. ಮುಕ್ತ ಮನಸ್ಸಿನಿಂದ ಮಾತುಕತೆಗೆ ಬಂದರೆ ಪಾಕಿಸ್ತಾನವನ್ನು ತಿರಸ್ಕರಿಸಬೇಕಿಲ್ಲ. ಆದರೆ ಪಾಕಿಸ್ತಾನ ನಮಗೆ ಉಂಟುಮಾಡಿರುವ ಗಾಯಗಳನ್ನು ಅಷ್ಟು ಸುಲಭವಾಗಿ ಪೂರ್ತಿಯಾಗಿ ಮರೆಯಲು ಸಾಧ್ಯವಿಲ್ಲ. ಇಷ್ಟಕ್ಕೂ ಪಾಕ್‌ ಆಡಳಿತದಲ್ಲಿ ಇಂಥ ಮನಸ್ಥಿತಿ ಮೂಡಲು ಕಾರಣವೇನು ಎಂಬುದನ್ನು ವಿವೇಚಿಸಬೇಕು.

ನಿಜಕ್ಕೂ ಪಾಕಿಸ್ತಾನ ತನ್ನ ದಶಕಗಳ ದುಷ್ಟತನಕ್ಕೆ ಇವತ್ತು ಬೆಲೆ ತೆರುತ್ತಿದೆ. ಇಡೀ ದೇಶ ದಿವಾಳಿ ಎದ್ದು ಹೋಗಿದೆ. ಜನ ಅಕ್ಷರಶಃ ಭಿಕಾರಿಗಳಂತಾಗಿದ್ದಾರೆ. ದಿನಸಿ ವಸ್ತುಗಳು ಸಾಮಾನ್ಯ ಜನರಿಗೆ ದುರ್ಲಭವಾಗಿವೆ. ಇಲ್ಲಿನ ಅತಿ ಪ್ರಮುಖ ಆಹಾರಧಾನ್ಯವಾದ ಗೋಧಿಗೆ ತೀವ್ರ ತತ್ವಾರ ಎದ್ದಿದೆ. ಪೆಟ್ರೋಲ್‌ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನದ ಕೇಂದ್ರೀಯ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನ್‌ ದಿವಾಳಿಯಾಗಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹ ಕೇವಲ 4.5 ಶತಕೋಟಿ ಡಾಲರ್‌ಗಳಿಗೆ ಕುಸಿದಿದೆ. ಇದು ಕಳೆದ ಒಂದು ದಶಕದಲ್ಲೇ ಅತಿ ಕನಿಷ್ಠ. ಆರ್ಥಿಕ ಶಕ್ತಿಯ ಸುಧಾರಣೆಗೆ ಯಾವ ಮಾರ್ಗವೂ ಕಾಣುತ್ತಿಲ್ಲ. ಹಾಗಂತ, ವಿದೇಶಿ ನೆರವಿಗೆ ಕೈಚಾಚೋಣವೆಂದರೆ, ಈಗಾಗಲೇ ಮಾಡಿರುವ ಸಾಲವೇ ಬೆಟ್ಟದಷ್ಟಿದೆ. ಸಾಲದ್ದಕ್ಕೆ, ಭಯೋತ್ಪಾದಕ ಸಂಸ್ಥೆಗಳಿಗೆ ಸಹಾಯ ಮಾಡುತ್ತಿರುವ ಕಾರಣದಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನವನ್ನು ಬೂದಾ ಪಟ್ಟಿಯಲ್ಲಿಟ್ಟಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ ಇಲ್ಲಿನ ಆಡಳಿತಗಾರರ ದೂರದೃಷ್ಟಿಯ ಕೊರತೆ ಹಾಗೂ ಅವರನ್ನು ಆಟವಾಡಿಸುತ್ತಿರುವ ಮತಾಂಧರ ಕುತ್ಸಿತತೆ ಇದೆ. ಇಲ್ಲಿನ ಅಧ್ಯಕ್ಷರು ಹಾಗೂ ಪ್ರಧಾನಿಗಳು ಸದಾ ಅಲ್ಲಿನ ಮಿಲಿಟರಿಯ ಕೈಗೊಂಬೆಗಳಾಗಿ, ಬೇಹುಗಾರಿಕೆ ಸಂಸ್ಥೆ ಐಎಸ್‌ಐಯ ಸೂತ್ರದ ಗಾಳಿಪಟಗಳಾಗಿ ನಡೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾಯಿತಗೊಂಡ ಸರ್ಕಾರಗಳು ತನ್ನ ಮೂಗಿನ ನೇರಕ್ಕೆ ನಡೆಯದೇ ಇದಾಗ ಅಲ್ಲಿನ ಮಿಲಿಟರಿ ಮೂಗು ತೂರಿಸಿ ಆಡಳಿತ ನಡೆಸಿದೆ. ದೇಶಕ್ಕೆ ಹೊಸ ಬಗೆಯ ಆಡಳಿತ ಕೊಡಲು ಮುಂದಾದ ಕೆಲವರು ಇದೇ ಮತಾಂಧರಿಂದ ಹತ್ಯೆಗಳಿಗೆ ಒಳಗಾಗಿದ್ದಾರೆ. ಹೀಗಾಗಿ ಮುತ್ಸದ್ದಿತನದ ಕೊರತೆ ಹಾಗೂ ಮತಾಂಧತೆಯ ಜತೆಗೆ ಭಾರತದ್ವೇಷವೂ ಸೇರಿಕೊಂಡ ಪರಿಣಾಮ, ತನ್ನಿಂದ ಸಾಧ್ಯವಿಲ್ಲದೇ ಹೋದರೂ ಅದು ಅಣ್ವಸ್ತ್ರ ರೇಸ್‌ಗೆ ಬಿದ್ದಿತು. ಭಾರತಕ್ಕೆ ಅದೊಂದು ಸಹಜ ರಕ್ಷಣಾ ಬೆಳವಣಿಗೆಯಾಗಿದ್ದರೆ, ಪಾಕ್‌ಗೆ ಅದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತಾಯಿತು. ಅಲ್ಲಿ ಪ್ರಧಾನಿ ಮಾತಿಗೆ ಬೆಲೆಯೂ ಇಲ್ಲ. ಪ್ರಧಾನಿ ಒಂದು ಹೇಳಿದರೆ, ಅಲ್ಲಿಯ ಸೇನೆ ಮತ್ತೊಂದು ಮಾಡುತ್ತದೆ. ಪ್ರಧಾನಿ ಶಾಂತಿ ಎಂದರೆ, ಸೇನಾ ಮುಖ್ಯಸ್ಥರು ಯುದ್ಧಕ್ಕೆ ಹಪಹಪಿಸುತ್ತಾರೆ. ಇದಕ್ಕೆ ಕಾರ್ಗಿಲ್ ಆಕ್ರಮಣ ಉದಾಹರಣೆ.

ಭಾರತದ ಜೊತೆಗೆ ಸ್ನೇಹ, ಸೌಹಾರ್ದ ಭಾವ, ವ್ಯಾಪಾರ ವ್ಯವಹಾರಗಳನ್ನು ಕಾಪಾಡಿಕೊಂಡಿದ್ದರೆ ಪಾಕಿಸ್ತಾನಕ್ಕೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ತನ್ನ ಅಕ್ಕಪಕ್ಕದ ದೇಶಗಳನ್ನು ಸಂಕಷ್ಟದಲ್ಲಿ ಭಾರತ ಯಾವತ್ತೂ ಕೈಬಿಟ್ಟಿಲ್ಲ. ಸದ್ಯ ಪಾಕ್‌ ಪಿಎಂ ವ್ಯಕ್ತಪಡಿಸಿರುವ ನಿಲುವನ್ನು ಇಡೀ ಪಾಕಿಸ್ತಾನ ಪ್ರಾಮಾಣಿಕತೆಯಿಂದ ಒಪ್ಪಿಕೊಂಡು ಮುನ್ನಡೆದರೆ ಆ ದೇಶಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಕ್ಷೇಮ. ಭಾರತವನ್ನು ನೋಡಿ ನಾವು ಕಲಿಯಬೇಕಿದೆ ಎಂದು ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ಕೂಡ ಹೇಳಿದ್ದರು. ಪಾಕ್‌ನ ವಿದೇಶಾಂಗ ನೀತಿಜ್ಞರೂ ಇತ್ತೀಚೆಗೆ ಈ ಮಾತನ್ನು ಒಪ್ಪಿದ್ದಾರೆ. ಪಾಕಿಸ್ತಾನ ಇನ್ನಾದರೂ ಪಾಠ ಕಲಿಯದೇ ಹೋದರೆ ಅದಕ್ಕೆ ಮತ್ತಷ್ಟು ದುರ್ಗತಿ ಕಾದಿದೆ. ಇಷ್ಟಾದರೂ ಅದು ಪೂರ್ತಿ ಬುದ್ಧಿ ಕಲಿತಂತಿಲ್ಲ. ಯಾಕೆಂದರೆ ಅದು ಭಾರತವನ್ನು ಬಿಟ್ಟು ವಿಸ್ತರಣಶಾಹಿ ಚೀನಾದ ಸಂಗ ಬೆಳೆಸಿದೆ. ಜಗತ್ತಿನಾದ್ಯಂತ ಭೀಭತ್ಸ ಎಬ್ಬಿಸಿದ ಭಯೋತ್ಪಾದಕ ಸಂಘಟನೆಗಳಿಗೆ ತಾನು ನೀಡಿರುವ ಆಶ್ರಯವನ್ನು ಇನ್ನೂ ಮುಂದುವರಿಸಿದೆ. ಭಾರತದ ವಿರುದ್ಧದ ಚೀನಾದ ಷಡ್ಯಂತ್ರಗಳಿಗೆ ನೆಲೆ ನೀಡಿದೆ. ಹೀಗಾಗಿ, ಪಾಕ್ ಪ್ರಧಾನಿ ಶಾಂತಿ ಎಂದಾಕ್ಷಣ ಭಾರತ ಹಿಂದುಮುಂದು ನೋಡದೆ ಕೈ ಚಾಚಬೇಕಿಲ್ಲ. ಮಾನವೀಯ ನೆಲೆಯಲ್ಲಿ ಪಕ್ಕದ ದೇಶವನ್ನು ನೋಡುವ ಜತೆಯಲ್ಲೇ ನಮ್ಮ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಳ್ಳುವ ವಿವೇಕವನ್ನು ನಮ್ಮ ಆಡಳಿತ ತೋರಬೇಕಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಜಾಗತಿಕ ಚಿತ್ರಲೋಕದಲ್ಲಿ ದಕ್ಷಿಣದ ಖ್ಯಾತಿ ಹೆಮ್ಮೆಯ ಸಂಗತಿ

Exit mobile version