Site icon Vistara News

UK Election: ಇಂಗ್ಲೆಂಡ್‌ನಲ್ಲಿ ಅಧಿಕಾರಕ್ಕೆ ಬಂದ ಲೇಬರ್‌ ಪಕ್ಷ; ಭಾರತದ ಮೇಲೇನು ಪರಿಣಾಮ?

UK Election

UK Election

ಲಂಡನ್‌: ಜಗತ್ತಿನ ಗಮನ ಸೆಳೆದಿದ್ದ ಇಂಗ್ಲೆಂಡ್‌ನ ಸಾರ್ವತ್ರಿಕ ಚುನಾವಣೆ(UK Election)ಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷೆಯಂತೆಯೇ ಈ ಬಾರಿ ಕನ್ಸರ್ವೇಟಿವ್‌ ಪಕ್ಷದ, ಭಾರತದ ಮೂಲದ ರಿಷಿ ಸುನಕ್‌ (Rishi Sunak) ಅವರಿಗೆ ಭಾರೀ ಹಿನ್ನಡೆಯಾಗಿದ್ದು, ಲೇಬರ್‌ ಪಕ್ಷ (Labour Party) ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಲೇಬರ್‌ ಪಕ್ಷದ ವರಿಷ್ಠ ಕೀರ್‌ ಸ್ಟಾರ್ಮರ್‌ (Keir Starmer) ಅವರು ಬ್ರಿಟನ್‌ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದಾರೆ. ಇದೀಗ ಕೀರ್‌ ಸ್ಟಾರ್ಮರ್‌ ಅವರ ಆಯ್ಕೆ ಭಾರತದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ.

ಲೇಬರ್ ಪಕ್ಷವು ಎಡಪಂಥೀಯ ನಿಲುವು ಹೊಂದಿದ್ದು ಸಹಜವಾಗಿಯೇ ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಸುಮಾರು 14 ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷವು ಭಾರತದ ಜತೆ ಬ್ರಿಟನ್‌ನ ಸಂಬಂಧ ವೃದ್ಧಿಸುವತ್ತ ಪ್ರಯತ್ನ ನಡೆಸಿತ್ತು.

ಕೀರ್‌ ಸ್ಟಾರ್ಮರ್‌ ನಿಲುವೇನು?

ಬ್ರೆಕ್ಸಿಟ್ ಅನ್ನು ಕಾರ್ಯರೂಪಕ್ಕೆ ತರುವುದಾಗಿ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಮಹತ್ವಾಕಾಂಕ್ಷೆಯ ಭದ್ರತಾ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಈಗಾಗಲೇ ಪಕ್ಷ ತಿಳಿಸಿದೆ. ಸ್ಟಾರ್ಮರ್‌ ಅವರ ವಿದೇಶಾಂಗ ನೀತಿಯ ಮತ್ತೊಂದು ಪ್ರಮುಖ ಅಂಶವೆಂದರೆ ಇಂಗ್ಲೆಂಡ್‌-ಭಾರತ ಸಂಬಂಧಗಳನ್ನು ಬಲಪಡಿಸುವುದು. ಸ್ಟಾರ್ಮರ್ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಲು ಮುಂದಾಗಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದ (FTA), ತಂತ್ರಜ್ಞಾನ, ಭದ್ರತೆ, ಶಿಕ್ಷಣ ಮತ್ತು ಹವಾಮಾನ ಬದಲಾವಣೆ ಮುಂತಾದ ಅಂಶಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಅವರು ಆಸಕ್ತಿ ಹೊಂದಿದ್ದಾರೆ.

ಲೇಬರ್‌ ಪಕ್ಷದ ಪ್ರಣಾಳಿಕೆಯು ವ್ಯಾಪಾರ ಒಪ್ಪಂದಕ್ಕೆ ಒತ್ತು ನೀಡುವ ಮೂಲಕ ಭಾರತದೊಂದಿಗೆ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸುವ ವಿಚಾರವನ್ನು ಒಳಗೊಂಡಿತ್ತು. ಇಂಗ್ಲೆಂಡ್‌ನಲ್ಲಿರುವ ಭಾರತೀಯ ವಲಸಿಗರೊಂದಿಗಿನ ಹದಗೆಟ್ಟ ಸಂಬಂಧಗಳನ್ನು ಸರಿಪಡಿಸುವ ಪ್ರಯತ್ನದ ಭಾಗವಾಗಿ ಸ್ಟಾರ್ಮರ್ ಪ್ರಚಾರದ ಸಮಯದಲ್ಲಿ ಹಿಂದೂಫೋಬಿಯಾವನ್ನು ಖಂಡಿಸಿದ್ದರು. ಜತೆಗೆ ದೀಪಾವಳಿ ಮತ್ತು ಹೋಳಿಯಂತಹ ಹಬ್ಬಗಳನ್ನು ಆಚರಿಸುವ ಮೂಲಕ ಭಾರತೀಯ ಮನವೊಲಿಕೆಗೆ ಮುಂದಾಗಿದ್ದರು.

ಆದಾಗ್ಯೂ ಸ್ಟಾರ್ಮರ್‌ ಅವರ ಮಹತ್ವಾಕಾಂಕ್ಷೆಯ ವಿದೇಶಾಂಗ ನೀತಿಯ ಗುರಿಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವು ಸವಾಲುಗಳಿವೆ. ವಿಶೇಷವಾಗಿ ವಲಸೆ ನೀತಿಗಳು ಮತ್ತು ವ್ಯಾಪಾರ ಒಪ್ಪಂದಗಳಿಗೆ ಸಂಬಂಧಿಸಿದಂತೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Keir Starmer: ಬ್ರಿಟನ್‌ ಪ್ರಧಾನಿಯಾಗಿ ಕೀರ್‌ ಸ್ಟಾರ್ಮರ್‌ ನೇಮಕ; ಅಭಿನಂದನೆ ಸಲ್ಲಿಸಿದ ಮೋದಿ

ಕಾಶ್ಮೀರದ ಬಗ್ಗೆ ನಿಲುವು

ಈ ಹಿಂದೆ ಜಮ್ಮು ಕಾಶ್ಮೀರ ವಿಚಾರದಲ್ಲಿ ಭಾರತದ ಪ್ರತಿಪಾದನೆಗೆ ವಿರುದ್ಧವಾದ ನಿಲುವನ್ನು ಲೇಬರ್ ಪಕ್ಷ ಹೊಂದಿತ್ತು. ಕಾಶ್ಮೀರ ವಿಷಯದಲ್ಲಿನ ಅದರ ಧೋರಣೆ ಭಾರತ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ 2020ರಲ್ಲಿ ಲೇಬರ್ ಪಕ್ಷದ ನಾಯಕತ್ವ ವಹಿಸಿದ ಸ್ಟಾರ್ಮರ್, ಭಾರತದ ವಿಚಾರದಲ್ಲಿ ತಮ್ಮ ಪಕ್ಷ ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದ್ದರು. ಭಾರತೀಯ ಸಮುದಾಯದ ಜತೆಗಿನ ಸಭೆಗಳಲ್ಲಿ ಹಾಗೂ ಸಾರ್ವಜನಿಕ ಭಾಷಣಗಳಲ್ಲಿ ಸ್ಟಾರ್ಮರ್ ಅವರು ‘ಕಾಶ್ಮೀರವು ಒಂದು ಆಂತರಿಕ ವಿಚಾರ’ ಮತ್ತು ಭಾರತ ಹಾಗೂ ಪಾಕಿಸ್ತಾನಗಳು ಅದನ್ನು ಬಗೆಹರಿಸಿಕೊಳ್ಳಲಿವೆ ಎಂದು ಹೇಳಿ ತೇಪೆ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದರು. ಸುಮಾರು ಒಂದೂವರೆ ದಶಕಗಳ ಕನ್ಸರ್ವೇಟಿವ್‌ ಪಕ್ಷದ ಅಧಿಕಾರ ಕೊನೆಗೊಳಿಸಿ ಲೇಬರ್‌ ಪಕ್ಷ ಸರ್ಕಾರ ರಚಿಸಿದ್ದು, ಮುಂದಿನ ದಿನಗಳಲ್ಲಿ ಭಾರತದೊಂದಿಗೆ ಯಾವ ರೀತಿ ಸಂಬಂಭ ಕಾಯ್ದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Exit mobile version