Site icon Vistara News

Russia Ukraine war | ಧಾನ್ಯ ಸಾಗಣೆಗೆ ಬಂದರು ಮುಕ್ತ: ರಷ್ಯಾ ಮತ್ತು ಉಕ್ರೇನ್‌ ಒಪ್ಪಂದ

ports

ಇಸ್ತಾಂಬುಲ್‌: ರಷ್ಯಾ ಹಾಗೂ ಉಕ್ರೇನ್‌ಗಳು ಧಾನ್ಯ ಸಾಗಣೆಗಾಗಿ ಬಂದರುಗಳನ್ನು ಮುಕ್ತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಇದರೊಂದಿಗೆ, ಹಲವಾರು ತಿಂಗಳುಗಳಿಂದ ಮುನ್ನಡೆಯುತ್ತಿರುವ ರಷ್ಯಾ- ಉಕ್ರೇನ್‌ ಸಮರದ ಕರಾಳತೆಯ ನಡುವೆ ಭರವಸೆಯ ಕಿರಣವೊಂದು ಗೋಚರಿಸಿದೆ.

ಉಕ್ರೇನ್‌ ಮೇಲಿನ ರಷ್ಯಾದ ದಾಳಿಯಿಂದಾಗಿ ಇಡೀ ಜಗತ್ತಿನ ಧಾನ್ಯ ಸರಬರಾಜಿನಲ್ಲಿಯೇ ಸಮಸ್ಯೆ ಉಂಟಾಗಿತ್ತು. ರಷ್ಯಾ ಹಾಗೂ ಉಕ್ರೇನ್‌ಗಳೆರಡೂ ಜಗತ್ತಿನ ಧಾನ್ಯ ಪೂರೈಕೆದಾರ ರಾಷ್ಟ್ರಗಳಾಗಿವೆ. ಯುದ್ಧದ ಕಾರಣದಿಂದ ಕಪ್ಪು ಸಮುದ್ರದಲ್ಲಿರುವ ಉಕ್ರೇನ್‌ನ ಬಂದರುಗಳನ್ನು ರಷ್ಯಾ ದಿಗ್ಬಂಧನಕ್ಕೆ ಈಡುಮಾಡಿತ್ತು. ಇದೀಗ ಒಪ್ಪಂದದ ಪ್ರಕಾರ ಈ ದಿಗ್ಬಂಧವನ್ನು ರಷ್ಯಾ ತೆರವು ಮಾಡಲಿದೆ.

ಬಿಕ್ಕಟ್ಟನ್ನು ಬಗೆಹರಿಸಲು ವಿಶ್ವಸಂಸ್ಥೆ ಕಳೆದೆರಡು ತಿಂಗಳಿನಿಂದ ನಡೆಸಿದ ಮಾತುಕತೆಯ ಫಲ ಇದಾಗಿದೆ. ಬಂದರುಗಳ ತೆರವಿನಿಂದ ಉಕ್ರೇನಿನ ಧಾನ್ಯ, ರಷ್ಯಾದ ಧಾನ್ಯ ಹಾಗೂ ರಸಗೊಬ್ಬರಗಳ ಸಾಗಣೆ ಮುಕ್ತವಾಗಲಿವೆ. ರಷ್ಯಾದ ದಿಗ್ಬಂಧನದಿಂದ ಉಕ್ರೇನ್‌ನಲ್ಲಿ ಸಾವಿರಾರು ಜನರು ಹಸಸಿವಿನಿಂದಲೇ ಸಾಯುವ ಪರಿಸ್ಥಿತಿ ಉಂಟಾಗಲಿದೆ ಎಂದು ಯುರೋಪ್‌ ಒಕ್ಕೂಟ ಎಚ್ಚರಿಕೆ ನೀಡಿತ್ತು. ಉಕ್ರೇನ್‌ನಲ್ಲಿ ಮಾತ್ರವಲ್ಲದೆ, ಯುರೋಪ್‌ ಸುತ್ತಮುತ್ತಲಿನ ಹತ್ತಾರು ಬಡ ದೇಶಗಳಿಗೂ ಗೋಧಿ ಇತ್ಯಾದಿ ಧಾನ್ಯಗಳ ಪೂರೈಕೆ ನಿಂತುಹೋಗಿ ಹಾಹಾಕಾರ ಉಂಟಾಗಿದೆ.

ಈ ಒಪ್ಪಂದ ನಡೆದಿದ್ದರೂ ಉಕ್ರೇನ್‌ನಲ್ಲಿ ದಾಳಿಯನ್ನು ರಷ್ಯಾ ಮುಂದುವರಿಸಿದೆ. ಒಪ್ಪಂದದ ಮಾತುಕತೆಯ ಸಂದರ್ಭದಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಅಕ್ಕಪಕ್ಕದಲ್ಲಿ ಕೂರಲೂ ನಿರಾಕರಿಸಿದ್ದು, ಎರಡು ದೇಶಗಳ ಧ್ವಜಗಳನ್ನೂ ದೂರದೂರದಲ್ಲಿ ಇಡಲಾಗಿತ್ತು. ಈ ಒಪ್ಪಂದ 120 ದಿನ ಜಾರಿಯಲ್ಲಿರಲಿದೆ. ಉಕ್ರೇನ್‌ಗೆ ಮರಳುವ ಹಡಗುಗಳು ಶಸ್ತ್ರಾಸ್ತ್ರ ತರಬಹುದು ಎಂಬ ರಷ್ಯಾದ ಆತಂಕ ನಿವಾರಣೆಗಾಗಿ ಅವುಗಳ ಪರೀಕ್ಷೆಗೂ ಒಪ್ಪಲಾಗಿದೆ.

ಇದನ್ನೂ ಓದಿ: ಉಕ್ರೇನ್‌ ಪರಿಸ್ಥಿತಿ ಬಗ್ಗೆ ಮತ್ತೊಮ್ಮೆ ಭಾರತ ಕಳವಳ, ಮಾತುಕತೆಗೆ ಒತ್ತಾಯ

Exit mobile version