Site icon Vistara News

US Chemical Weapons: ಎಲ್ಲ ರಾಸಾಯನಿಕ ಶಸ್ತ್ರಾಸ್ತ್ರ ನಾಶಪಡಿಸಿದ ಅಮೆರಿಕ; ಮೊದಲ ಮಹಾಯುದ್ಧದ ದುಃಸ್ವಪ್ನ ಅಂತ್ಯ

US Destroys All Chemical Weapons

US destroys last of its declared chemical weapons

ವಾಷಿಂಗ್ಟನ್‌: ಜಾಗತಿಕ ಶಾಂತಿ, ರಾಸಾಯನಿಕ ಶಸ್ತ್ರಾಸ್ತ್ರ ಮುಕ್ತ ಸಮಾಜದ ನಿರ್ಮಾಣದ ದಿಸೆಯಲ್ಲಿ ಅಮೆರಿಕ ಐತಿಹಾಸಿಕ ಹೆಜ್ಜೆ ಇರಿಸಿದೆ. ಅಮೆರಿಕವು ತಾನು ಅಧಿಕೃತವಾಗಿ ಘೋಷಿಸಿಕೊಂಡಿದ್ದ ಎಲ್ಲ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು (US Chemical Weapons) ನಾಶಪಡಿಸಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಮೊದಲ ಮಹಾಯುದ್ಧದ ಕರಾಳ ನೆನಪಿಗೂ ಅಮೆರಿಕ ಅಂತ್ಯ ಹಾಡಿದೆ.

ಕೊಲಾರಾಡೊ, ಕೆಂಟಕಿ, ಪುಯೆಬ್ಲೊ ಸೇರಿ ದೇಶದ ಹಲವೆಡೆ ದಾಸ್ತಾನು ಮಾಡಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅಮೆರಿಕ ನಾಶಪಡಿಸಿದೆ. ರಾಸಾಯನಿಕ ಯುಕ್ತ, 30,610 ಟನ್‌ ತೂಕದ ಸುಮಾರು 80 ಸಾವಿರ ಶಸ್ತ್ರಾಸ್ತ್ರಗಳನ್ನು ಆರ್ಮಿ ಪುಯೆಬ್ಲೊ ಕೆಮಿಕಲ್‌ ಡಿಪೋದ ಕಾರ್ಮಿಕರು, ಅಧಿಕಾರಿಗಳು ನಾಶಪಡಿಸಿದ್ದಾರೆ. ಆ ಮೂಲಕ ಮನುಕುಲಕ್ಕೆ ಅಪಾಯಕಾರಿಯಾಗಿರುವ ಶಸ್ತ್ರಾಸ್ತ್ರಗಳನ್ನು, ಅವುಗಳ ಭೀತಿಯನ್ನು ಅಮೆರಿಕ ನಿರ್ನಾಮ ಮಾಡಿದೆ.

1950ರಿಂದಲೂ ಅಮೆರಿಕವು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಸಂಗ್ರಹ ಮಾಡುತ್ತಿತ್ತು. ಅಧಿಕೃತವಾಗಿ ರಾಸಾಯನಿಕ ಶಸ್ತ್ರಾಸ್ತ್ರಗಳ ಸಂಗ್ರಹಣೆ ಕುರಿತು ಘೋಷಣೆಯನ್ನೂ ಮಾಡಿಕೊಂಡಿತ್ತು. ರಾಸಾಯನಿಕಯುಕ್ತ ಬಂಕರ್‌ಗಳು, ರಾಕೆಟ್‌ಗಳು ಅಮೆರಿಕ ದಾಸ್ತಾನಿನಲ್ಲಿ ಇದ್ದವು. 1997ರಲ್ಲಿ ನಡೆದ ಜಾಗತಿಕ ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದಂತೆ ಅಮೆರಿಕವು ರಾಸಾಯನಿಕ ಶಸ್ತ್ರಾಸ್ತ್ರಗಳ ನಿರ್ಮೂಲನೆಗೆ ಸೆಪ್ಟೆಂಬರ್‌ 30ರ ಗಡುವು ಪಡೆದಿತ್ತು. ನಿಗದಿತ ಅವಧಿಗಿಂತ ಮೊದಲೇ ನಾಶಪಡಿಸಿದೆ.

“ರಾಸಾಯನಿಕ ಶಸ್ತ್ರಾಸ್ತ್ರಗಳ ದಾಸ್ತಾನನ್ನು ನಾಶಪಡಿಸಲು ಅಮೆರಿಕವು 30 ವರ್ಷದಿಂದ ಅವಿರತವಾಗಿ ಶ್ರಮ ವಹಿಸಿದೆ. ಈಗ ಅಮೆರಿಕವು ಎಲ್ಲ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದಾರೆ.

ಇದನ್ನೂ ಓದಿ: Hindi in American schools : ಅಮೆರಿಕದ ಶಾಲೆಗಳಲ್ಲಿ ಎರಡನೇ ಭಾಷೆಯಾಗಿ ಹಿಂದಿ ಕಲಿಕೆಗೆ ಅವಕಾಶ

ಮೊದಲ ಮಹಾಯುದ್ಧದ ಕರಾಳ ನೆನಪು

ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವ ಮೂಲಕ ಮೊದಲ ಮಹಾಯುದ್ಧದ ಕರಾಳ ಅಧ್ಯಾಯಕ್ಕೆ ಅಮೆರಿಕ ಅಂತ್ಯ ಹಾಡಿದೆ. ಮೊದಲ ಮಹಾಯುದ್ಧ ನಡೆದ ವೇಳೆ ಅಮೆರಿಕವು ಮೊದಲ ಬಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಪ್ರಯೋಗ ಮಾಡಿತ್ತು. ಇದರಿಂದ ಸುಮಾರು 1 ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದರು.

Exit mobile version