ಇಸ್ಲಾಮಾಬಾದ್: ಆರ್ಥಿಕ ದುಃಸ್ಥಿತಿಯಲ್ಲಿ ಮುಳುಗುತ್ತಿರುವ ಪಾಕಿಸ್ತಾನಕ್ಕೆ ಹೊಸದಾಗಿ ಹಣಕಾಸು ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಿರಾಕರಿಸಿದೆ. ʼʼಮೊದಲು ನಿಮ್ಮ ಖರ್ಚುವೆಚ್ಚ, ತೆರಿಗೆ ವ್ಯವಸ್ಥೆ ಸರಿ ಮಾಡಿಕೊಳ್ಳಿ, ನಂತರ ನೋಡೋಣʼʼ ಎಂದಿದೆ. ಹಲವು ಹೊಸ ಷರತ್ತುಗಳನ್ನು ವಿಧಿಸಿದೆ.
ಐಎಂಎಫ್ ತಂಡ ಮಂಗಳವಾರ ಪಾಕಿಸ್ತಾನ ನಿಯೋಗದ ಜತೆ ನಡೆಸಿದ ಮಾತುಕತೆಗಳಲ್ಲಿ ʼʼಆರ್ಥಿಕ ಶಿಸ್ತಿನ ಕಟ್ಟುನಿಟ್ಟಾದ ಅನುಸರಣೆ”ಯನ್ನು ಒತ್ತಿಹೇಳಿದೆ. ನಾಥನ್ ಪೋರ್ಟರ್ ನೇತೃತ್ವದ IMFನ ಪರಾಮರ್ಶೆ ಸಮಿತಿ, ಪಾಕ್‌ನ ಬಜೆಟ್ ಕೊರತೆ ಮತ್ತು ಸೋರಿಕೆಗಳನ್ನು ಗುರುತಿಸಿತು. ತನ್ನ ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಪುನರುಚ್ಚರಿಸಿತು.
ರೂಪಾಯಿ ಕುಸಿತ, ಹಣದುಬ್ಬರ ಏರಿಕೆ ಮತ್ತು ಇಂಧನ ಕೊರತೆಯಿಂದಾಗಿ ಪಾಕಿಸ್ತಾನ ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರ ಸರ್ಕಾರ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಅದು ಮತದಾರರಿಗೆ ಅಂಜಿದ್ದು, IMFನ ಬೇಡಿಕೆಯಂತೆ ತೆರಿಗೆ ಹೆಚ್ಚಳ ಮತ್ತು ಸಬ್ಸಿಡಿ ಕಡಿತವನ್ನು ಈ ಮೊದಲು ವಿರೋಧಿಸಿತ್ತು. ಆದರೆ, ಷರತ್ತು ಪಾಲಿಸದೆ ಗತ್ಯಂತರವೂ ಅದಕ್ಕಿಲ್ಲ. ಹೀಗಾಗಿ, ದೇಶದ ದಿವಾಳಿತನ ತಡೆಗಟ್ಟಲು ಇಸ್ಲಾಮಾಬಾದ್ ಈ ಕಹಿ ಗುಳಿಗೆಗಳನ್ನು ನುಂಗಲು ಒಪ್ಪಿಕೊಂಡಿದೆ.
7 ಶತಕೋಟಿ ಡಾಲರ್‌ಗಳ ವಿಸ್ತರಿತ ಹಣಕಾಸು ಸಹಾಯ (EFF) ದ ನಿರೀಕ್ಷೆ ಪಾಕಿಸ್ತಾನದ್ದಾಗಿದೆ. ಇದನ್ನು ನೀಡಬೇಕಿದ್ದರೆ ಐಎಂಎಫ್ ಪರಿಶೀಲನೆಗಳ ಮೇಲೆ ಪರಿಶೀಲನೆಗಳನ್ನು ನಡೆಸುತ್ತಿದ್ದು, ಅಂಥ ಒಂಬತ್ತನೇ ಪರಿಶೀಲನೆ ಇದಾಗಿದೆ. ಐಎಂಎಫ್ ತಂಡದ ಜತೆಗೆ ಪಾಕ್ ಹಣಕಾಸು ಮತ್ತು ಕಂದಾಯ ಸಚಿವ ಇಶಾಕ್ ದಾರ್ ಮಾತನಾಡುತ್ತಿದ್ದಾರೆ. ವಿಶೇಷ ಸಾಲ ಸೌಲಭ್ಯ ನೀಡಬೇಕಿದ್ದರೆ, ನಿಗದಿಪಡಿಸಿದ ಷರತ್ತುಗಳಲ್ಲಿ ಯಾವುದೇ ವಿನಾಯಿತಿ ನೀಡಲು ಐಎಂಎಫ್ ನಿರಾಕರಿಸಿದೆ.
ಎಷ್ಟಿದೆ ಬಾಕಿ?
ಸದ್ಯ ಐಎಂಎಫ್ ಕಡೆ ಪಾಕಿಸ್ತಾನದ ಬಾಕಿ 572.2 ಕೋಟಿ SDRಗಳಷ್ಟಿದೆ. ಎಸ್‌ಡಿಆರ್ ಎಂಬುದು ಐಎಂಎಫ್ ಸೃಷ್ಟಿಮಾಡಿರುವ ಹಣದ ಒಂದು ಅಳತೆ. ಸದ್ಯ ಒಂದು ಎಸ್‌ಡಿಆರ್ ಎಂದರೆ 110 ಭಾರತೀಯ ರೂಪಾಯಿಗಳಾಗುತ್ತವೆ. ಅಂದರೆ ಪಾಕಿಸ್ತಾನದ ಬಾಕಿ 62,942 ಕೋಟಿ ರೂಪಾಯಿಗಳಾಗುತ್ತದೆ.
ಪಾಕಿಸ್ತಾನ ಏನು ಮಾಡಿದೆ?
ಸದ್ಯ ಐಎಂಎಫ್‌ನ ಕಠಿಣ ಶರತ್ತುಗಳಿಂದ ಪಾರಾಗಲು ತನ್ನ ಪ್ರಜೆಗಳ ಮೇಲೆ ಹೊಸ ತೆರಿಗೆಗಳನ್ನು ವಿಧಿಸಲು ಮುಂದಾಗಿದೆ. ಈ ಹೊಸ ತೆರಿಗೆ ಹೇರಿಕೆಗಳಿಂದ ಬರಬಹುದಾದ ಹಣಕಾಸಿನ ನಿರೀಕ್ಷೆ 200 ಶತಕೋಟಿ ರೂಪಾಯಿ. ಇದಕ್ಕಾಗಿ ಪಾಕ್ ಎರಡು ಕರಡು ಸುಗ್ರೀವಾಜ್ಞೆಗಳನ್ನು ಸಿದ್ಧಪಡಿಸಿದೆ.
ಎರಡು ಕರಡು ಸುಗ್ರೀವಾಜ್ಞೆಗಳು ಕ್ರಮವಾಗಿ 100 ಶತಕೋಟಿ ತೆರಿಗೆ ಹಾಗೂ ಪ್ರವಾಹ ಲೆವಿಗಳನ್ನು ಜಾರಿ ಮಾಡುತ್ತಿವೆ. ವಿದ್ಯುತ್ ಸಬ್ಸಿಡಿಗಳನ್ನು ಸ್ಥಗಿತಗೊಳಿಸುವುದು, ರಫ್ತು ಕಚ್ಚಾ ವಸ್ತುಗಳ ಮೇಲೆ ಮಾರಾಟ ತೆರಿಗೆ ವಿಧಿಸುವಿಕೆ, ಅನಿಲ ಸುಂಕ ವಿಧಿಸಲು ಮುಂದಾಗಿದೆ. ಐಷಾರಾಮಿ ವಸ್ತುಗಳ ಮೇಲಿನ ತೆರಿಗೆ ದರಗಳು ಮತ್ತು ನಿಯಂತ್ರಕ ಸುಂಕದಲ್ಲಿ ಹೆಚ್ಚಳವಾಗಲಿದೆ. ರೂಪಾಯಿಯ ಭಾರೀ ಅಪಮೌಲ್ಯದಿಂದಾಗಿ ಫೆಡರಲ್ ಬೋರ್ಡ್ ಆಫ್ ರೆವಿನ್ಯೂ (ಎಫ್‌ಬಿಆರ್)ಗೆ ಹೆಚ್ಚುವರಿ ಆದಾಯ ಗಳಿಸುವ ನಿರೀಕ್ಷೆಯಿದೆ.
ಐಎಂಎಫ್ ತಂಡ ಪಾಕಿಸ್ತಾನದ ಪರಿಸ್ಥಿತಿಯನ್ನು ಅವಲೋಕಿಸಲು ದೇಶಕ್ಕೆ ಭೇಟಿ ನೀಡಿದ್ದು, ಸರ್ಕಾರದ ನಿಯೋಗದ ಜತೆ ಸಮಾಲೋಚನೆ ನಡೆಸಿದೆ. ಈ ಸಂದರ್ಭದಲ್ಲಿ ಹಣಕಾಸಿನ ಪೂರೈಕೆಗೆ ಹಲವಾರು ಕಠಿಣ ಷರತ್ತುಗಳನ್ನು ವಿಧಿಸಿದೆ. ಐಎಂಎಫ್ ವಿಧಿಸುವ ಯಾವುದೇ ಷರತ್ತನ್ನು ತಾವು ಪಾಲಿಸುವುದಾಗಿ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ಕಡಿಮೆ ಆದಾಯದ, ಸೌಲಭ್ಯವಂಚಿತರಿಗೆ ನೀಡುವ ಸಬ್ಸಿಡಿಗಳಿಗೆ ಕತ್ತರಿ ಹಾಕಲು ಐಎಂಎಫ್ ಒತ್ತಾಯಿಸಿಲ್ಲ. ಹೆಚ್ಚುತ್ತಿರುವ ಹಣದುಬ್ಬರದ ಪರಿಣಾಮ ಹಾಗೂ ಪ್ರವಾಹ ದುರಂತದಿಂದಾಗಿ ಸುಮಾರು 3.3 ಕೋಟಿ ಜನರು ತತ್ತರಿಸುತ್ತಿದ್ದಾರೆ. ಬೆನಜೀರ್ ಆದಾಯ ಬೆಂಬಲ ಕಾರ್ಯಕ್ರಮದ ಅಡಿಯಲ್ಲಿ ನೀಡುವ ಪರಿಹಾರ ಮುಂದುವರಿಸಲು ಐಎಂಎಫ್ ಒಪ್ಪಿಕೊಂಡಿದೆ.
2022-23ರ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಈ ಕೆಳಗಿನ ಷರತ್ತುಗಳನ್ನು ಈಡೇರಿಸಲು ಪಾಕಿಸ್ತಾನವನ್ನು ಫಂಡ್ ಒತ್ತಾಯಿಸಿದೆ. ಈ ಎಲ್ಲಾ ಷರತ್ತುಗಳನ್ನು ಪೂರೈಸುವುದಾಗಿ ಪಾಕಿಸ್ತಾನವು ನಿಧಿಗೆ ಭರವಸೆ ನೀಡಿದೆ. ಅವುಗಳೆಂದರೆ:
- ಬಜೆಟ್ ಕೊರತೆಯನ್ನು 4.9%ನಲ್ಲಿ ನಿರ್ವಹಿಸಬೇಕು.
- ಪ್ರಾಥಮಿಕ ಕೊರತೆಯು GDPಯ 0.2%ರಷ್ಟಿರಬೇಕು.
- ರಫ್ತು ವಲಯಕ್ಕೆ 1,100 ಶತಕೋಟಿ ರೂ. ಸಬ್ಸಿಡಿ ವಿನಾಯಿತಿ ತೆಗೆದುಹಾಕಬೇಕು.
- FBRನ 7,470 ಶತಕೋಟಿ ರೂ. ತೆರಿಗೆ ಸಂಗ್ರಹ ಗುರಿಯನ್ನು ಪೂರೈಸಬೇಕು.
- ಸುತ್ತೋಲೆ ಸಾಲವನ್ನು ಗಣನೀಯವಾಗಿ ಕಡಿಮೆ ಮಾಡಬೇಕು.
- ಪೆಟ್ರೋಲಿಯಂ ಲೆವಿಯಿಂದ 855 ಶತಕೋಟಿ ರೂ. ಸಂಗ್ರಹ ಗುರಿಯನ್ನು ತಲುಪಬೇಕು.
- ಸರ್ಕಾರಿ ಸ್ವಾಮ್ಯದ ಘಟಕಗಳ ನಷ್ಟ ಕಡಿಮೆ ಮಾಡಲು ಅವುಗಳ ಕಾರ್ಯಕ್ಷಮತೆ ಸುಧಾರಿಸಬೇಕು.
- ಖಾಸಗೀಕರಣ ಕಾರ್ಯಕ್ರಮ ಜಾರಿಗೊಳಿಸಬೇಕು.
- ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 7.50 ರೂ.ಗಳಿಂದ ಪ್ರತಿ ಯೂನಿಟ್ಗೆ 12.50 ರೂ.ಗೆ ಹೆಚ್ಚಿಸುವಂತೆ IMF ಒತ್ತಾಯಿಸಿತು.
ಹೇಗಿದೆ ಪಾಕ್ ಪರಿಸ್ಥಿತಿ?
ದೇಶದ ವಿದೇಶಿ ವಿನಿಮಯ ಸಂಗ್ರಹ ಕಳೆದ ಒಂದು ದಶಕದಲ್ಲೇ ಅತಿ ಕನಿಷ್ಠಕ್ಕೆ ಇಳಿದಿದೆ. 3.68 ಶತಕೋಟಿ ಡಾಲರ್‌ಗೆ ಕುಸಿದಿದೆ. ಇದು ಬರಿಯ ಮೂರು ವಾರಗಳ ಆಮದು ಸರಿದೂಗಿಸಲು ಸಹ ಸಾಕಾಗದಷ್ಟು ಇದೆ. ಆಮದು ರಫ್ತುಗಳನ್ನು ಸರಾಗವಾಗಿ ನೆರವೇರಿಸಿಕೊಂಡು ಹೋಗಲು ನಿರ್ದಿಷ್ಟ ಮೊತ್ತದ ವಿದೇಶಿ ವಿನಿಮಯ ಬೇಕೇ ಬೇಕು. ಇಲ್ಲವಾದರೆ ಯಾವುದೇ ದೇಶ ದಿವಾಳಿಯೆನಿಸಿದ ಇನ್ನೊಂದು ದೇಶದೊಂದಿಗೆ ವ್ಯವಹಾರ ನಡೆಸಲು ನಿರಾಕರಿಸುತ್ತದೆ.
ಇದನ್ನೂ ಓದಿ: ವಿಸ್ತಾರ Explainer | Pakistan economic crisis | ಪಾಪ! ಪಾಕಿಸ್ತಾನ ಪಾಪರ್!
ಡಾಲರ್ ವಿನಿಮಯದ ಬ್ಲ್ಯಾಕ್ ಮಾರ್ಕೆಟ್ ನಿಯಂತ್ರಿಸಲು ಸರ್ಕಾರ ರೂಪಾಯಿ ಮೇಲಿನ ನಿಯಂತ್ರಣ ಸಡಿಲಗೊಳಿಸಿತು. ಇದು ಕರೆನ್ಸಿಯ ದಾಖಲೆ ಕುಸಿತಕ್ಕೆ ಕಾರಣವಾಯಿತು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಹಠಾತ್ ಏರಿಕೆ ಕೂಡ IMF ಷರತ್ತುಗಳ ಪರಿಣಾಮವಾಗಿತ್ತು. ಕಳೆದ ವಾರವಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಹೆಚ್ಚಿಸಲಾಗಿತ್ತು. ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್‌ಗೆ 249.80 ರೂ. ಹಾಗೂ ಡೀಸೆಲ್ ಬೆಲೆ 262.80 ರೂ ಇದೆ. ಈಗ ಅದನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ಮುಂದಾಗಬಹುದು.
ಶುಕ್ರವಾರದ ಅಂತ್ಯಕ್ಕೆ ಪಾಕಿಸ್ತಾನದ ರೂಪಾಯಿಯು ಮುಕ್ತ ಮಾರುಕಟ್ಟೆಯಲ್ಲಿ 265 ರೂ.ಗೆ ಹಾಗೂ ಇಂಟರ್‌ಬ್ಯಾಂಕ್‌ನಲ್ಲಿ 266 ರೂ.ಗೆ ಕುಸಿದಿದೆ. ಒಂದೇ ದಿನ ರೂಪಾಯಿ ಮೌಲ್ಯವು 7.17 ರೂ. ಕುಸಿದಿದೆ. ಕೇವಲ ಎರಡು ದಿನದಲ್ಲಿ 34 ರೂಪಾಯಿ ಅಪಮೌಲ್ಯವಾಗಿದೆ. ಇದು 1999ರ ಬಳಿಕ ಉಂಟಾದ ಭಾರಿ ಅಪಮೌಲ್ಯ ಎಂದು ಹೇಳಲಾಗುತ್ತಿದೆ.
ವರದಿಗಳ ಪ್ರಕಾರ ದೇಶದಲ್ಲಿ ಇನ್ನು ಹದಿನೈದು ದಿನಗಳಿಗೆ ಬೇಕಾಗುವ ವಿದ್ಯುತ್ ತಯಾರಿಸುವುದಕ್ಕೆ ಕಚ್ಚಾ ತೈಲವಿದೆ. ಅದರ ನಂತರ ದೇಶದಲ್ಲಿ ಕತ್ತಲು ಆವರಿಸುವ ಸಾಧ್ಯತೆಯಿದೆ. ಕಳೆದ ವಾರದಲ್ಲಿ ಹಲವು ಪ್ರಮುಖ ನಗರಗಳಲ್ಲಿ ವಿದ್ಯುತ್ ಕೊರತೆ ಎದುರಾಗಿ ಗಂಟೆಗಟ್ಟಲೆ ಕಾಲ ಜನರು ಕತ್ತಲಿನಲ್ಲಿ ಕಾಲ ಕಳೆಯುವಂತಾಗಿತ್ತು.