Site icon Vistara News

ವಿಸ್ತಾರ Explainer | Srilanka crisis: ಶ್ರೀಲಂಕೆಗೆ ಈಗ ಭಾರತ ಒಂದೇ ಆಸರೆಯಾ?

sri lanka

ಪಕ್ಕದ ದ್ವೀಪದೇಶ ಶ್ರೀಲಂಕೆ ಆರ್ಥಿಕ ಕುಸಿತದಿಂದ ತತ್ತರಿಸುತ್ತಿದೆ. ಹಿಂದಿನ ಅಧ್ಯಕ್ಷ, ಪ್ರಧಾನಿಗಳು ಮಾಡಿದ ಕರ್ಮಕಾಂಡಗಳು, ಭ್ರಷ್ಟಾಚಾರಗಳ ಪರಿಣಾಮ ಈಗ ಅಲ್ಲಿನ ಜನತೆಯ ಮೇಲೆ ಆಗಿದೆ. ಅಲ್ಲಿನ ರೂಪಾಯಿ ಮಹಾ ಕುಸಿತ ಕಂಡಿದೆ. ಬಂಕ್‌ಗಳ ಮುಂದೆ ದಿನಗಟ್ಟಲೆ ಕ್ಯೂ ನಿಂತರೂ ಪೆಟ್ರೋಲ್‌ ಸಿಗುತ್ತಿಲ್ಲ. ದಿನವಹಿ ಕೆಲಸಕ್ಕೆ ಬೇಕಾದ ವಿದ್ಯುತ್‌ ದೊರೆಯುತ್ತಿಲ್ಲ. ಕೈಗಾರಿಕೆ ನಿಂತೇಹೋಗಿದೆ. ಪ್ರವಾಸೋದ್ಯಮದಲ್ಲಿ ಚೈತನ್ಯವೇ ಇಲ್ಲ. ಬ್ರೆಡ್‌ ಪೀಸ್‌ಗಳಿಗಾಗಿ ಅಂಗಲಾಚುತ್ತಿದೆ. ಹೊಸದಾಗಿ ಚುನಾಯಿತರಾದ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರು ದೇಶವನ್ನು ಪಾರು ಮಾಡಲು ದಾರಿಗಳನ್ನು ಹುಡುಕುತ್ತಿದ್ದಾರೆ.

ರನಿಲ್‌ ವಿಕ್ರಮಸಿಂಘೆ

ಲಂಕೆಗೆ ಯಾಕೆ ಇಂಥ ಗತಿ ಬಂತು ಎಂದು ಹಲವು ಸಲ ನೋಡಲಾಗಿದೆ. ಈಗ ನೆರೆಮನೆಗೆ ಸಹಾಯ ಮಾಡುವ ಸಮಯ. ಹೌದೇ? ಲಂಕೆಗೆ ನಾವು ಸಹಾಯ ಮಾಡಬೇಕೆ? ಯಾಕೆ ಮಾಡಬೇಕು? ಪಕ್ಕದಲ್ಲಿರುವ ನಮ್ಮನ್ನು ಬಿಟ್ಟು ಚೀನಾದ ತಾಳಕ್ಕೆ ತಕ್ಕಂತೆ ಕುಣಿದ, ಅಲ್ಲಿಂದ ಕೋಟಿಗಟ್ಟಲೆ ಡಾಲರ್‌ ಪಡೆದುಕೊಂಡು ಬಂದರು ಸೇರಿದಂತೆ ಮೂಲಸೌಕರ್ಯಗಳನ್ನೆಲ್ಲ ಶತಮಾನಗಳ ಲೆಕ್ಕದಲ್ಲಿ ಮಾರಿದ, ಚೀನಾಗೆ ಸೇನಾ ನೆಲೆಯನ್ನೂ ಸೃಷ್ಟಿಸಿಕೊಳ್ಳಲು ನೆರವಾದ ಲಂಕೆಗೆ ನಾವು ಯಾಕೆ ಸಹಾಯ ಮಾಡಬೇಕು? ಈ ಪ್ರಶ್ನೆ ಎದ್ದರೆ ಅದು ಸಹಜವೇ.

ಆದರೆ ಚೀನಾದ ಜೊತೆ ಕೈ ಜೋಡಿಸಿದವರು ಶ್ರೀಲಂಕೆಯ ಸಾಮಾನ್ಯ ಜನರಲ್ಲ. ರಾಜಪಕ್ಸ ಕುಟುಂಬ. ಈ ಕುಟುಂಬದ ಬಲವಾದ ಹಿಡಿತದಲ್ಲಿರುವ, ಶ್ರೀಲಂಕಾ ಪೊದುಜನ ಪೆರಮುನ ಎಂಬ ಹೆಸರಿನ ರಾಜಕೀಯ ಪಕ್ಷ ಈಗ ಆಡಳಿತದಲ್ಲಿದೆ. ರಾಜಪಕ್ಸ ಕುಟುಂಬ ಮೊದಲಿನಿಂದಲೂ ಭಾರತದ ಬಗ್ಗೆ ಅಷ್ಟೇನೂ ಒಲವನ್ನು ಇಟ್ಟುಕೊಂಡಿಲ್ಲ. ಶ್ರೀಲಂಕಾ ತಮಿಳರು ಸ್ವಾತಂತ್ರ್ಯಕ್ಕಾಗಿ ಉಗ್ರವಾದ ಹೋರಾಟ ನಡೆಸಿದಾಗ, ಅದನ್ನು ನಿರ್ದಾಕ್ಷಿಣ್ಯವಾಗಿ ಅದುಮಿಹಾಕಿದವರು ಇದೇ ರಾಜಪಕ್ಸ ಕುಟುಂಬ. ರಾಜಪಕ್ಸ ರಾಜಕಾರಣಿಗಳ ಪ್ರಕಾರ ಎಲ್‌ಟಿಟಿಇ ಹೋರಾಟದ ಹಿಂದೆ ಭಾರತದ ಪ್ರೇರಣೆಯೂ ಇದೆ. ಇಂಥ ಭಾರತದತ್ತ ಕೈ ಚಾಚುವುದು ಸರಿಯಲ್ಲ ಎಂಬುದು ರಾಜಪಕ್ಸ ಕುಟುಂಬದ ದುರಭಿಮಾನ. ಆದರೆ ಈ ದುರಭಿಮಾನಕ್ಕೆ ಅಲ್ಲಿನ ಸ್ಥಿತಿಗತಿಯೇ ಅಂತ್ಯ ಹಾಡಿದೆ. ಇಂಥ ಸನ್ನಿವೇಶದಲ್ಲಿ ಚೀನಾ ಕೂಡ ಅದಕ್ಕೆ ನೆರವಾಗಿಲ್ಲ. ಭಾರತವೇ ಬರಬೇಕಿದೆ.

ʻʻಶ್ರೀಲಂಕಾದ ದುರ್ಭರ ಸನ್ನಿವೇಶ ಪಕ್ಕದಲ್ಲಿರುವ ನಮಗೂ ಅಪಾಯಕಾರಿʼʼ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿದ್ದಾರೆ. ʻʻನಾವು ಲಂಕೆಗೆ ಸಾಧ್ಯವಾದ ರೀತಿಯಲ್ಲೆಲ್ಲಾ ನೆರವಾಗುತ್ತಿದ್ದೇವೆʼʼ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಭಾರತ ಲಂಕೆಗೆ ಹೇಗೆ ನೆರವಾಗುತ್ತಿದೆ? ಈ ಹಿಂದೆ ನೆರವಾದ ಉದಾಹರಣೆಗಳು ಇವೆಯೇ? ನೋಡೋಣ.

ನೆರವು ನೀಡಿ ಬಲಿಯಾದ ರಾಜೀವ್‌ ಗಾಂಧಿ

ಶ್ರೀಲಂಕೆಗೆ ಈ ಹಿಂದೆ ನೆರವು ನೀಡಲು ಹೋಗಿ ಭಾರತ ತನ್ನ ಒಬ್ಬ ಪ್ರಧಾನಿಯನ್ನೇ ಕಳೆದುಕೊಂಡಿದೆ. 90ರ ದಶಕದಲ್ಲಿ ಶ್ರೀಲಂಕೆಯಲ್ಲಿ ತಮಿಳು ಪ್ರತ್ಯೇಕತಾವಾದ ಭಯೋತ್ಪಾದನೆ ಎಲ್‌ಟಿಟಿಇ ಸಂಘಟನೆಯ ಮೂಲಕ ಜಾರಿಯಲ್ಲಿತ್ತು. ಈ ಸಂದರ್ಭದಲ್ಲಿ ಶ್ರೀಲಂಕೆಯ ಜತೆ ಮಾಡಿಕೊಂಡ ಒಪ್ಪಂದದಂತೆ ಪ್ರಧಾನಿ ರಾಜೀವ್‌ ಗಾಂಧಿ ಅವರು ನಮ್ಮ ಶಾಂತಿಪಾಲನಾ ಪಡೆಯನ್ನು ಅಲ್ಲಿಗೆ ಕಳಿಸಿದರು. ಇದು ತಮಿಳು ಉಗ್ರರಲ್ಲಿ ರಾಜೀವ್‌ ವಿರುದ್ಧ ದ್ವೇಷವನ್ನು ತುಂಬಿತು. ಮುಂದೇ ಇದೇ ಎಲ್‌ಟಿಟಿಇ ಉಗ್ರರು ಆತ್ಮಹತ್ಯಾ ದಾಳಿ ಮೂಲಕ ರಾಜೀವ್‌ ಅವರನ್ನು ಬಲಿ ಪಡೆದರು. ಇದೊಂದು ಕರಾಳ ನೆನಪು. ಪ್ರಸ್ತುತ ಸನ್ನಿವೇಶಕ್ಕೂ ಆಗಿನ ಸಂದರ್ಭಕ್ಕೂ ಹೋಲಿಕೆಯಿಲ್ಲ. ಆದರೆ ಭಾರತ ಈ ದಿಸೆಯಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡುವುದೂ ಅಗತ್ಯ.

ಭಾರತವೇ ನೆರವಿನ ಮೂಲ

ಭಾರತ ಈ ವರ್ಷ ಶ್ರೀಲಂಕಾಕ್ಕೆ ನೆರವಾದ ಪ್ರಮುಖ ವಿದೇಶಿ ಸಹಾಯ ಮೂಲ. ನಗದು ಮತ್ತು ವಸ್ತು ಎರಡೂ ರೂಪದಲ್ಲಿ. ಶ್ರೀಲಂಕಾದ ಆರ್ಥಿಕ ಸುಳಿಯಿಂದ ಹೊರಬರಲು ಸಹಾಯ ಮಾಡುವಲ್ಲಿ ಭಾರತ ಇತರರಿಗಿಂತ ಮುಂದಿದೆ. ಈ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಶ್ರೀಲಂಕಾ ಸ್ವೀಕರಿಸಿದ ವಿದೇಶಿ ನೆರವಿನ ಪ್ರಮಾಣ $ 968.8 ದಶಲಕ್ಷ, ಅದರಲ್ಲಿ ಭಾರತದ ಪಾಲು ಶ್ರೀಲಂಕಾದ ಹಣಕಾಸು ಸಚಿವಾಲಯದ ಪ್ರಕಾರವೇ $ 376.9 ದಶಲಕ್ಷ (₹ 3016 ಕೋಟಿ) ಇದು ಸುಮಾರು 39%. ಮತ್ತೊಂದೆಡೆ ಚೀನಾ ನೀಡಿದ್ದು ಕೇವಲ $67.9 ದಶಲಕ್ಷ ಅಥವಾ ಸಾಲದ ಕೇವಲ 7%.

ಭಾರತ ನೀಡಿದ ಹಣಕಾಸು ನೆರವು ಕೂಡ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಗಿಂತಲೂ ಹೆಚ್ಚು. ಭಾರತ ನೀಡಿದ್ದು $ 359.6 ದಶಲಕ್ಷ (₹ 2878 ಕೋಟಿ) ಹಾಗೂ ವಿಶ್ವ ಬ್ಯಾಂಕ್‌ ನೀಡಿರುವುದು $ 67.3 ದಶಲಕ್ಷ. ಲಂಕೆಗೆ ನೆರವು ನೀಡುವುದರಲ್ಲಿ ವಿಶ್ವ ಬ್ಯಾಂಕ್‌ಗಿಂತಲೂ ಭಾರತವೇ ಮುಂದಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ $ 3-4 ದಶಲಕ್ಷ ಬೇಲೌಟ್‌ ಪ್ಯಾಕೇಜ್‌ಗಾಗಿ ಶ್ರೀಲಂಕಾ ನಿರೀಕ್ಷಿಸುತ್ತಿದೆ. ದೇಶದ 2.2 ಕೋಟಿ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಮುಂದಿನ ಆರು ತಿಂಗಳಲ್ಲಿ ಸುಮಾರು $ 5 ಶತಕೋಟಿ (₹ 40,000 ಕೋಟಿ) ಅಗತ್ಯವಿದೆ ಎನ್ನಲಾಗಿದೆ.

ಅಗತ್ಯ ವಸ್ತುಗಳು, ಪೆಟ್ರೋಲ್‌

ಶ್ರೀಲಂಕೆಗೆ ಅಗತ್ಯ ಬಿದ್ದಾಗಲೆಲ್ಲ ಭಾರತ ಹಣಕಾಸು, ಸಾಲದ ನೆರವು ನೀಡುತ್ತ ಬಂದಿದೆ. ಬಡ್ಡಿಯಲ್ಲಿ ವಿನಾಯಿತಿ ನೀಡಿದೆ. ಬಡ್ಡಿಯೇ ಇಲ್ಲದೆಯೂ ಕೊಟ್ಟಿದೆ. ಈ ವರ್ಷ ಭಾರತದಿಂದ ಅಗತ್ಯ ಆಮದು, ಪೆಟ್ರೋಲ್‌ ಆಮದುಗಳಿಗಾಗಿ ನೂರು ಕೋಟಿ ಡಾಲರ್‌ (₹ 800 ಕೋಟಿ) ಪಡೆದಿದೆ. ಭಾರತವೊಂದೇ ಶ್ರೀಲಂಕೆಯ ಈ ದುಃಸ್ಥಿತಿಯ ಸನ್ನಿವೇಶದಲ್ಲೂ ನೆರವಿಗೆ ನಿಂತಿರುವ ದೇಶ ಎಂದು ಅಲ್ಲಿನ ಇಂಧನ, ವಿದ್ಯುತ್‌ ಸಚಿವ ಕಾಂಚನ ವಿಜೆಸೇಕರ ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಅಗತ್ಯ ವಸ್ತುಗಳನ್ನು ಲಂಕೆಗೆ ಒದಗಿಸಿಕೊಡುವುದರಲ್ಲಿ ಭಾರತ ಎಂದೂ ಹಿಂದೆ ಬಿದ್ದಿಲ್ಲ. ₹ 260 ದಶಲಕ್ಷd ಕಚ್ಚಾ ವಸ್ತುಗಳು, ₹ 200 ದಶಲಕ್ಷದ ವೈದ್ಯಕೀಯ ಸಾಮಗ್ರಿಗಳು, ₹ 180 ದಶಲಕ್ಷದ ದಿನವಹಿ ವಸ್ತುಗಳು, ₹200 ದಶಲಕ್ಷದ ಇಂಧನ, ₹ 160 ದಶಲಕ್ಷ ಮೌಲ್ಯದ ಎಲ್‌ಪಿಜಿ ಒದಗಿಸಿದೆ.

ಜನವರಿಯಲ್ಲಿ ಏಷ್ಯನ್‌ ಕ್ಲಿಯರಿಂಗ್‌ ಯೂನಿಯನ್‌ಗೆ ನೀಡಬೇಕಿದ್ದ 500 ದಶಲಕ್ಷ ಡಾಲರ್‌ಗಳನ್ನು ಕೊಡಲಾಗದು ಎಂದಾಗ ಭಾರತ ಅದನ್ನು ಅಂಗೀಕರಿಸಿತ್ತು. ಏಷ್ಯನ್‌ ಕ್ಲಿಯರಿಂಗ್‌ ಯೂನಿಯನ್‌ ಎಂಬುದು ಬಾಂಗ್ಲಾ, ಭೂತಾನ್‌, ಲಂಕಾ, ಭಾರತ, ಮ್ಯಾನ್ಮಾರ್‌, ಇರಾನ್‌, ಮಾಲ್ದೀವ್ಸ್‌, ನೇಪಾಳ, ಪಾಕಿಸ್ತಾನಗಳ ಸೆಂಟ್ರಲ್‌ ಬ್ಯಾಂಕ್‌ಗಳನ್ನು ಒಳಗೊಂಡ ಹಣಕಾಸು ಪ್ರಾಧಿಕಾರ. 2022ರಲ್ಲಿ ಲಂಕೆ ಒಟ್ಟಾರೆಯಾಗಿ 700 ಶತಕೋಟಿ ಡಾಲರ್‌ ಹಣವನ್ನು ಮರುಪಾವತಿಸಬೇಕಿದೆ. ವಿದೇಶಾಂಗ ವಿನಿಮಯ ನಿಧಿಯಲ್ಲಿ ಹಣವೇ ಇಲ್ಲ.

ಏಪ್ರಿಲ್‌ನಲ್ಲಿ ʻಕರೆನ್ಸಿ ಬದಲಿಸಿಕೊಳ್ಳುವ ವ್ಯವಸ್ಥೆʼಯನ್ನು ಲಂಕೆಗೆ ಭಾರತ ನೀಡಿತು. ಇದು ಡಾಲರ್‌ನ ಎದುರು ಸಂಪೂರ್ಣ ಮಂಡಿಯೂರಿರುವ ಶ್ರೀಲಂಕಾದ ಹಣವನ್ನು ಭಾರತದ ಹಣದೊಂದಿಗೆ ಬದಲಿಸಿಕೊಳ್ಳುವ ವ್ಯವಸ್ಥೆ. ಇದರ ಮೂಲಕ ಲಂಕೆಯ ಸೆಂಟರಲ್‌ ಬ್ಯಾಂಕ್‌ 400 ದಶಲಕ್ಷ ಡಾಲರ್‌ ಮೌಲ್ಯದ ಡಾಲರ್‌, ಯೂರೋ, ಭಾರತೀಯ ರೂಪಾಯಿ ಪಡೆಯಬಹುದು.

ಇದನ್ನೂ ಓದಿ: Lanka on fire: ಸಂಕಷ್ಟದಲ್ಲಿರುವ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

ಫೆಬ್ರವರಿಯಲ್ಲಿ ಲಂಕೆಗೆ ಭಾರತ ಪೆಟ್ರೋಲ್‌ನ ಸಹಾಯವನ್ನು ಒದಗಿಸಿತು. ಇಂಡಿಯನ್‌ ಆಯಿಲ್‌ ಕಂಪನಿಯ ಮೂಲಕ 500 ದಶಲಕ್ಷ ಡಾಲರ್‌ನ ಪೆಟ್ರೋಲಿಯಂ ಉತ್ಪನ್ನಗಳನ್ನು ಒದಗಿಸುವ ಒಪ್ಪಂದ ಮಾಡಿಕೊಂಡಿತು. ಏಪ್ರಿಲ್‌ನಲ್ಲಿ ಅದನ್ನು ಇನ್ನೂ 200 ದಶಲಕ್ಷ ಡಾಲರ್‌ಗಳಷ್ಟು ಹೆಚ್ಚಿಸಲಾಯಿತು. ಮಾರ್ಚ್‌ ಹಾಗೂ ಜೂನ್‌ ನಡುವೆ ಇಂಡಿಯನ್‌ ಆಯಿಲ್‌ ಲಂಕೆಗೆ 4.5 ಲಕ್ಷ ಟನ್‌ ಪೆಟ್ರೋಲ್‌, ಡೀಸೆಲ್ ಸರಬರಾಜು ಮಾಡಿತು. ಮೇ ತಿಂಗಳಲ್ಲಿ, ಜಾಫ್ನಾ ನಗರದಲ್ಲಿರುವ ಮೀನುಗಾರ ಕುಟುಂಬಗಳಿಗೆ ನೆರವಾಗಲು 15,000 ಲೀಟರ್‌ಗಳಷ್ಟು ಸೀಮೆಎಣ್ಣೆಯನ್ನು ರವಾನಿಸಿತು.

ಭತ್ತ ಬೆಳೆಯಲು ರಸಗೊಬ್ಬರ

ಈ ಬಾರಿ ಸಾವಯವ ಕೃಷಿಯ ಹಿಂದೆ ಬಿದ್ದು, ರಸಗೊಬ್ಬರವನ್ನು ಸಂಪೂರ್ಣ ತ್ಯಜಿಸಿದ್ದ ಶ್ರೀಲಂಕೆ ಎರಡು ಹೊತ್ತಿನ ಊಟಕ್ಕೆ ಅಕ್ಕಿಯಿಲ್ಲದೆ ತತ್ತರಿಸುವಂತಾಗಿತ್ತು. ಈ ಸನ್ನಿವೇಶ ಮರುಕಳಿಸದಂತಿರಲು ಭಾರತ ಈ ತಿಂಗಳಲ್ಲಿ 44,000 ಟನ್‌ಗಳಷ್ಟು ಯೂರಿಯಾ ರಸಗೊಬ್ಬರವನ್ನು ಅಲ್ಲಿಗೆ ಕಳಿಸಿದೆ. ಇದು ಅಲ್ಲಿನ ಯಾಲ ಹಂಗಾಮದ ಭತ್ತ ಕೃಷಿಗೆ ನೆರವಾಗಲಿದೆ. ಭಾರತ ಸರ್ಕಾರ ಹಾಗೂ ಜನತೆ ಅಲ್ಲಿಗೆ 25 ಟನ್‌ನಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಮಾನವೀಯ ನೆಲೆಯಲ್ಲಿ ದಾನ ನೀಡಿದೆ. ಮೇ ತಿಂಗಳ ಆರಂಭದಲ್ಲಿ ಭಾರತೀಯ ಅಧಿಕಾರಿಗಳು ಅಲ್ಲಿನ ಬಡ ಕುಟುಂಬಗಳಿಗೆ ಈದ್‌ ಹಬ್ಬದ ಅಂಗವಾಗಿ ಒಣ ಆಹಾರದ ಪೊಟ್ಟಣಗಳನ್ನು ವಿತರಿಸಿದರು.

ವಲಸಿಗರಿಗೆ ಆಶ್ರಯ

ನೂರಕ್ಕೂ ಹೆಚ್ಚು ಮಂದಿ ಶ್ರೀಲಂಕಾ ಪ್ರಜೆಗಳು ದ್ವೀಪರಾಷ್ಟ್ರ ತೊರೆದು ಭಾರತಕ್ಕೆ ಓಡಿಬಂದಿದ್ದಾರೆ. ಅವರಿಗೆ ಭಾರತ ಆಶ್ರಯ ಕೊಟ್ಟಿದೆ. ಇವರ ಬಳಿ ವಲಸೆಗೆ ಯಾವುದೇ ದಾಖಲೆಗಳಿಲ್ಲ. ಇಂಥವರನ್ನು ಸಾಮಾನ್ಯವಾಗಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಆದರೆ ತಮಿಳುನಾಡು ಸರ್ಕಾರ ಇವರಿಗೆ ರಾಮೇಶ್ವರದ ನಿರಾಶ್ರಿತ ಶಿಬಿರಗಳಲ್ಲಿ ನೆಲೆ ನೀಡಿದೆ. 90ರ ದಶಕದಲ್ಲಿ ಶ್ರೀಲಂಕಾ ಸರ್ಕಾರ ತಮಿಳು ಉಗ್ರರನ್ನೂ ಉಗ್ರವಾಗಿ ದಮನಿಸಿ, ತಮಿಳು ಪ್ರಜೆಗಳ ಮೇಲೆ ದೌರ್ಜನ್ಯ ಎಸಗಿದಾಗ ಅಲ್ಲಿಂದ ಓಡಿಬಂದ ತಮಿಳರು ಕೂಡ ಇಲ್ಲಿಯೇ ಆಶ್ರಯ ಪಡೆದಿದ್ದಾರೆ.

ಭಾರತ ಇನ್ನೂ ಶ್ರೀಲಂಕೆಗೆ ನೆರವಾಗಬಹುದು. ಅದು ಕೇವಲ ಹಣದ ರೂಪದಲ್ಲಲ್ಲ. ಲಂಕೆಯನ್ನು ಈಗಿನ ದುಃಸ್ಥಿತಿಯಿಂದ ಮೇಲೆತ್ತಲು ಇನ್ನಷ್ಟು ಹಣಕಾಸು ಬೇಕು, ಅದೆಲ್ಲವನ್ನೂ ಒದಗಿಸಲು ಭಾರತದಿಂದಷ್ಟೇ ಸಾಧ್ಯವಾಗದು. ಆದರೆ ಭಾರತ ಮುಂದಾಳುತ್ವ ವಹಿಸಿ ಇತರ ದೇಶಗಳನ್ನೂ ಈ ನೆಲೆಯಲ್ಲಿ ತೊಡಗಿಸಿಕೊಂಡರೆ ಇದು ಸಾಧ್ಯವಾಗಲಿದೆ. ಇದರಿಂದ ಏಷ್ಯಾದಲ್ಲಿ ಭಾರತದ ಸ್ಥಾನಮಾನವೂ ಹೆಚ್ಚಲಿದೆ. “ನೇಬರ್‌ಹುಡ್‌ ಫಸ್ಟ್‌ʼ ಎಂಬ ಭಾರತದ ವಿದೇಶಾಂಗ ಪಾಲಿಸಿಗೆ ಇನ್ನಷ್ಟು ಬಲ ಬರಲಿದೆ.

ಇದನ್ನೂ ಓದಿ: ವಿಸ್ತಾರ Explainer | ಶ್ರೀಲಂಕಾ ಮಾತ್ರವಲ್ಲ, ದಿವಾಳಿಯಂಚಿಗೆ ಡಜನ್‌ಗಟ್ಟಲೆ ರಾಷ್ಟ್ರಗಳ ಪತನ

Exit mobile version