ಮಾಸ್ಕೋ: ರಷ್ಯಾದ ಮಿಲಿಟರಿಯ ವಿರುದ್ಧ ಬಂಡೆದ್ದಿರುವ ಬಾಡಿಗೆ ಹಂತಕರ ಸೈನ್ಯದ ಮುಖ್ಯಸ್ಥ ಯೆವ್ಗಿನಿ ಪ್ರಿಗೋಜಿನ್‌ನನ್ನು (Yevgeny Prigozhin) ಬಗ್ಗು ಬಡಿಯುವುದಾಗಿ ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಗುಡುಗಿದ್ದಾರೆ. ʼʼಇದು ದೇಶದ್ರೋಹ, ಬೆನ್ನಿಗೆ ಚೂರಿ ಹಾಕುವ ಕೃತ್ಯʼʼ ಎಂದು ಅವರು ಕೋಪದಿಂದ ಕಿಡಿ ಕಾರಿದ್ದಾರೆ.
ರಷ್ಯಾ ಸೈನ್ಯದ ವಿರುದ್ಧ ದಾಳಿ ಆರಂಭಿಸಿರುವ ಪ್ರಿಗೋಜಿನ್‌ನ ʼವ್ಯಾಗ್ನರ್ ಗ್ರೂಪ್ʼ ಸೇನಾಪಡೆ, ದಕ್ಷಿಣ ಮಿಲಿಟರಿ ಪ್ರಾಂತ್ಯವಾದ ರಾಸ್ತಾವಾನ್ ಡಾನ್ ಪಟ್ಟಣವನ್ನು ವಶಪಡಿಸಿಕೊಂಡಿದೆ. ಇದರಿಂದ ಕಿಡಿಕಿಡಿಯಾಗಿರುವ ಪುಟಿನ್, ʼʼಇದು ದೇಶದ್ರೋಹ. ದೇಶವನ್ನು ಯಾವುದೇ ಬೆದರಿಕೆಯಿಂದಲೂ ಮಣಿಸಲಾಗದು. ಇದಕ್ಕೆ ತಕ್ಕ ಶಿಕ್ಷೆ ವಿಧಿಸುತ್ತೇವೆʼʼ ಎಂದಿದ್ದಾರೆ.
ಒಂದು ಕಾಲದ ಪರಮಾಪ್ತ
ಹೀಗೆ ಪುಟಿನ್ ವಿರುದ್ಧ ಬಂಡೆದಿದ್ದರುವ ವ್ಯಾಗ್ನರ್ ಗ್ರೂಪ್‌ನ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್, ಪುಟಿನ್‌ಗೆ ದೂರದವನೇನೂ ಅಲ್ಲ. ಒಂದು ಕಾಲದ ನಿಕಟವರ್ತಿ, ಹಿಂಬಾಲಕ. ಉಕ್ರೇನ್ ಮೇಲೆ ರಷ್ಯಾ ಸೈನ್ಯ ಮಾಡಿದ ದಾಳಿಯ ಪ್ರಮುಖ ರೂವಾರಿ ಇವನೇ. ಕರುಣೆಯಿಲ್ಲದ ಭೀಕರ ದಾಳಿ ಮತ್ತು ಕ್ರೌರ್ಯದ ಯುದ್ಧಾಪರಾಧಗಳನ್ನು ಈತನ ಸೈನಿಕರ ಎಸಗಿದ್ದಾರೆ.
ಇವನ ಹಿನ್ನೆಲೆ ಆಸಕ್ತಿಕರವಾಗಿದೆ. ಪುಟಿನ್ ಆಡಳಿತದ ನೆರಳಿನಲ್ಲಿ ಬಡವರನ್ನು ಸುಲಿದು ಶ್ರೀಮಂತಿಕೆ ಮಾಡಿಕೊಂಡ ರಷ್ಯದ ಕುಬೇರರಲ್ಲಿ ಇವನೂ ಒಬ್ಬ. ಇವನ್ನು ʼಪುಟಿನ್‌ನ ಚೆಫ್ʼ ಎಂದೂ ಕರೆಯಲಾಗುತ್ತದೆ. ಕ್ರೆಮ್ಲಿನ್‌ನಲ್ಲಿ ಪುಟಿನ್ ನಿವಾಸಕ್ಕೆ ಕೇಟರಿಂಗ್ ಸರ್ವಿಸ್ ಒದಗಿಸಿಕೊಡುವ ಹಲವಾರು ರೆಸ್ಟೋರೆಂಟ್‌ಗಳನ್ನು ಹೊಂದಿರುವ ಕಾರಣ ಈ ಬಿರುದು.
ಸೋವಿಯತ್ ಯೂನಿಯನ್ ಕಾಲದಲ್ಲಿ ಇವನು ಹಲವು ಅಪರಾಧಗಳನ್ನು ಎಸಗಿದ ಪಾತಕಿಯಾಗಿ ಪೊಲೀಸರಿಗೆ ಬೇಕಾದವನಾಗಿದ್ದ. ದರೋಡೆ, ಕೊಲೆ, ವಂಚನೆ ಇತ್ಯಾದಿ ಅಪರಾಧಗಳಲ್ಲಿ ಶಿಕ್ಷೆಯಾಗಿ 9 ವರ್ಷ ಜೈಲಿನಲ್ಲಿದ್ದ. ಇಂದು ಹಲವು ಪ್ರಭಾವಿ ಕಂಪನಿಗಳ ಮಾಲಿಕ. ಮುಖ್ಯವಾಗಿ ದೇಶದ ಬಾಡಿಗೆ ಸೈನ್ಯ ವ್ಯಾಗ್ನರ್ ಗ್ರೂಪ್.
ಬಾಲಾಪರಾಧಿ, ಕೊಲೆಗಡುಕ
ಇಂದು ಸೇಂಟ್ ಪೀಟರ್‌ಬರ್ಗ್ ಎಂದು ಕರೆಸಿಕೊಳ್ಳುವ ಅಂದಿನ ಲೆನಿನ್‌ಗ್ರಾಡ್‌ನಲ್ಲಿ 1961ರಲ್ಲಿ ಜನಿಸಿದ ಈತ ಬಾಲ್ಯದಲ್ಲಿ ಹಿಂಸೆಯನ್ನೇ ಕಂಡುಂಡು, ಅದನ್ನೇ ಹಾಸಿ ಹೊದ್ದು, ಬಾಲಾಪರಾಧಿಗಳ ನಿಲಯದಲ್ಲಿ ಬೆಳೆದ. ಬಿಡುಗಡೆ ಹೊಂದಿದ ಬಳಿಕ ಪೀಟರ್ಸ್‌ಬರ್ಗ್‌ನಲ್ಲಿ ರೆಸ್ಟುರಾ ತೆರೆದ. 2000ರಲ್ಲಿ ಕಾಂಕಾರ್ಡ್ ಕ್ಯಾಟರಿಂಗ್ ಎಂಬ ಕಂಪನಿ ತೆರೆದು ಶಾಲಾ ಮಕ್ಕಳಿಗೆ ಹಾಗೂ ಸರ್ಕಾರಿ ನೌಕರರಿಗೆ ಆಹಾರ ಒದಗಿಸುವ ಸರ್ಕಾರಿ ಕಾಂಟ್ರಾಕ್ಟ್‌ಗಳನ್ನು ಪಡೆಯತೊಡಗಿದ. ಬಹುಬೇಗ ಪೀಟರ್ಸ್‌ಬರ್ಗ್‌ನ ಪ್ರಭಾವಿಗಳಲ್ಲಿ ಒಬ್ಬನಾಗಿ, ಅಲ್ಲಿನ ಮೇಯರ್ ಕೂಡ ಆದ. ಪುಟಿನ್‌ಗೆ ಹತ್ತಿರವಾದ.
2014ರಲ್ಲಿ ವ್ಯಾಗ್ನರ್ ಗ್ರೂಪ್ ಹುಟ್ಟುಹಾಕಿದ. ಇದು ಖಾಸಗಿ ಮಿಲಿಟರಿ ಕಂಪನಿ. ಇದರಲ್ಲಿ ಇಂದು 25,000ದಷ್ಟು ಬಾಡಿಗೆ ಸೈನಿಕರು ಅಥವಾ ಹಂತಕರು ಇದ್ದಾರೆ. ಇವರ ಕೆಲಸವೇ ಸರ್ಕಾರಿ ಸೈನಿಕರು ಮಾಡಲಾರದ ಭೀಕರ ಕೃತ್ಯಗಳನ್ನು ಎಸಗುವುದು. ಸಿರಿಯಾ, ಲಿಬಿಯಾ, ಉಕ್ರೇನ್ ಮುಂತಾದ ಯುದ್ಧಪೀಡಿತ ಪ್ರದೇಶಗಳಲ್ಲಿ ಇವನ ಸೈನಿಕರು ಕೊಂದ ವ್ಯಕ್ತಿಗಳ, ಅತ್ಯಾಚಾರ ಎಸಗಿದ ಹೆಣ್ಣುಮಕ್ಕಳ, ಚಿತ್ರಹಿಂಸೆ ನೀಡಿದವರ ಸಂಖ್ಯೆ ಬಹುಶಃ ಲೆಕ್ಕಕ್ಕೆ ಸಿಗದು. ಇವರ ಮಾನವ ಹಕ್ಕುಗಳ ಉಲ್ಲಂಘನೆಯಂತೂ ಅವ್ಯಾಹತ.
ಅಮೆರಿಕ ಚುನಾವಣೆಯಲ್ಲಿ ಟ್ರೋಲ್
ಇವನ ಇನ್ನೊಂದು ಕಂಪನಿ ಇಂಟರ್‌ನೆಟ್ ರಿಸರ್ಚ್ ಏಜೆನ್ಸಿ (IRA). ಇದರ ಹೆಸರು ಘನವಾದುದಾದರೂ, ಮಾಡುವ ಕೆಲಸ ಟ್ರೋಲಿಂಗ್. 2016ರಲ್ಲಿ ನಡೆದ ಅಮೆರಿಕ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಬಳಸಿ ಟ್ರಂಪ್ ಪರ ಅವ್ಯಾಹತ ಪ್ರಚಾರ, ಪ್ರೊಪಗಾಂಡ, ವಿರೋಧಿಗಳ ತೇಜೋವಧೆ ಮಾಡಿದ ಕುಖ್ಯಾತಿ ಇದರದು.
ಅಮೆರಿಕ ಹಾಗೂ ಯುರೋಪ್‌ಗಳು ಈತನ ಮೇಲೇ ಈಗಾಗಲೇ ನಿಷೇಧ ವಿಧಿಸಿವೆ. ಅಪರಾಧ ಕೃತ್ಯಗಳಿಗಾಗಿ ಅಮೆರಿಕದ ನ್ಯಾಯ ಇಲಾಖೆಯಿಂದ ವಿಚಾರಣೆ ನಡೆದಿದೆ. ಈತನ ವ್ಯಾಗ್ನರ್ ಗ್ರೂಪ್‌ನ ಸೈನಿಕರು ಬಾಡಿಗೆ ಹಂತಕರಾಗಿ, ಪ್ರಭಾವಿಗಳ ಬಾಡಗಾರ್ಡ್‌ಗಳಾಗಿ ಕೆಲಸ ಮಾಡುತ್ತಾರೆ. ಆಫ್ರಿಕಾದ ಕೆಲವು ರಾಜಕೀಯ ನಾಯಕರಿಗೂ ಇವನು ಭದ್ರತಾ ಸೇವೆ ಒದಗಿಸುತ್ತಾನೆ.
ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಈತನಿಗೂ ರಷ್ಯಾದ ಸೇನಾ ಮುಖ್ಯಸ್ಥರಿಗೂ ಚಕಮಕಿ ಶುರುವಾಗಿದೆ. ರಷ್ಯ ಸೇನೆಯ ಜನರಲ್‌ಗಳು ಈತನ ಸೈನ್ಯದ ಹಲವು ಸೈನಿಕರನ್ನು ಕೊಲ್ಲಿಸಿದ್ದಾರೆ ಎಂದು ಇವನಿಗೆ ಸಿಟ್ಟು ನೆತ್ತಿಗೇರಿದೆ. ಸದ್ಯ ನಡೆಯುತ್ತಿರುವ ಕಲಹದಲ್ಲಿ ರಷ್ಯ ಸೈನ್ಯದ ಕೆಲವು ಹೆಲಿಕಾಪ್ಟರ್‌ಗಳನ್ನು ಇವನ ಟ್ಯಾಂಕ್‌ಗಳು ಹೊಡೆದುರುಳಿಸಿವೆ. ಸದ್ಯ ರಷ್ಯದ ಸೈನ್ಯ ಉಕ್ರೇನ್‌ನ ಚಿಂತೆ ಬಿಟ್ಟು, ದೇಶದೊಳಗೇ ಇರುವ ಯೆವ್ಗೆನಿ ಪ್ರಿಗೋಜಿನ್‌ನನ್ನು ಹಣಿಯಲು ಮುಂದಾಗಿದೆ.
ಇದನ್ನೂ ಓದಿ: Russian Coup: ರಷ್ಯಾ ಸೇನೆಗೆ ತಿರುಗಿಬಿದ್ದ ಬಾಡಿಗೆ ಹಂತಕರ ಪಡೆ, ಪುಟಿನ್‌ಗೆ ಸೇನಾ ದಂಗೆ ಸವಾಲು