ಬೆಂಗಳೂರು: ಸುಂಕದಕಟ್ಟೆ ಕಾಮಾಕ್ಷಿ ಪಾಳ್ಯದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆದು 16 ದಿನಗಳ ಬಳಿಕ ಕಾಮಾಕ್ಷಿಪಾಳ್ಯ ಪಾಳ್ಯ ಪೊಲೀಸರಿಗೆ ಆ್ಯಸಿಡ್ ನಾಗೇಶ್ ಸಿಕ್ಕಿಬಿದ್ದಿದ್ದಾನೆ. ಏಪ್ರಿಲ್ 28ರಂದು ಯುವತಿಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಆ ಗಾಯಗಳನ್ನೆ ತೋರಿಸಿ ನ್ಯಾಯಾಲಯದ ಬಳಿ ವಕೀಲರನ್ನು ಭೇಟಿಯಾಗಿದ್ದ. ಯಾರೂ ಕೇಸ್ ತೆಗೆದುಕೊಳ್ಳದೇ ನಿರಾಕರಿಸಿದ್ದರಿಂದ ಅಲ್ಲಿಂದ ಪರಾರಿಯಾಗಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳುವ ಜತೆಗೆ ಮಾಡಿದ ಪಾಪವನ್ನು ತೊಳೆದುಕೊಳ್ಳಲು ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ರಮಣಶ್ರೀ ಆಶ್ರಮದಲ್ಲಿ ಸನ್ಯಾಸಿಯಂತೆ ನಟಿಸುತ್ತಿದ್ದ ನಾಗೇಶನನ್ನು ಪೊಲೀಸರು ಶುಕ್ರವಾರ ಸಂಜೆ ಸೆರೆ ಹಿಡಿದಿದ್ದಾರೆ.
ಯುವತಿಯ ಮೇಲೆ ಆ್ಯಸಿಡ್ ಎರಚಿದಾಗ ಅವನ ಬಲಗೈ ಮೇಲೆಯೂ ಆ್ಯಸಿಡ್ ಬಿದ್ದು ಗಾಯವಾಗಿತ್ತು. ತಿರುವಣ್ಣಾಮಲೈಯಲ್ಲಿ ಮಳ್ಳಿಯಂತೆ ಸದಾ ಧ್ಯಾನದಲ್ಲಿರುತ್ತಿದ್ದ ನಾಗನ ಮೇಲೆ ಯಾರಿಗೂ ಅನುಮಾನವೇ ಬಂದಿರಲಿಲ್ಲ. ಪೊಲೀಸರು ಹತ್ತಿರ ಹೋಗುತ್ತಿದ್ದಂತೆಯೇ ಭೀತಿಯಿಂದ ಅಲ್ಲಿಂದ ಪರಾರಿಯಾಗಲು ಯತ್ನಿಸಿದವನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಆರೋಪಿ ನಾಗೇಶ ಹೇಗೆ ಪತ್ತೆಯಾದ ಎನ್ನುವುದೇ ರೋಚಕ ಸಿನಿಮಾ ಕಥೆಯಂತಿದೆ.
ಇದನ್ನೂ ಓದಿ :ಆ್ಯಸಿಡ್ ದಾಳಿಗೆ ತುತ್ತಾದ ಯುವತಿಗೆ ಇಂದು ಮೊದಲ ಶಸ್ತ್ರ ಚಿಕಿತ್ಸೆ
ಆರೋಪಿ ಪತ್ತೆಯಾಗಿದ್ದೇ ರೋಚಕ
ರಾಜ್ಯದ ವಿವಿಧೆಡೆ ಸುತ್ತಾಡಿ ಸಾಕಾದ ಪೊಲೀಸರು ವಿವಿಧ ರಾಜ್ಯಗಳ ಪೊಲೀಸರಿಗೂ ನಾಗನ ಫೋಟೊ ಕಳಿಸಿದ್ದರು. ಸಾರ್ವಜನಿಕವಾಗಿ Wanted ಪೋಸ್ಟರ್ ಹಾಕುವುದರ ಜತೆಗೆ ಬಾತ್ಮೀದಾರರಿಗೂ ತಿಳಿಸಿ ಬಲೆ ಬೀಸಿದ್ದರು. ಬೆಂಗಳೂರಿನಿಂದ ಪ್ರಯಾಣಿಸುವಾಗ ಬಳಸಿದ್ದ ವಾಹನದ ಚಾಲನಕನಿಂದಲೂ ಇದೇ ಪ್ರದೇಶದಲ್ಲಿರಬಹುದು ಎಂಬ ಅನುಮಾನ ಮೂಡಿತ್ತು. ಕೆಲ ಬಾತ್ಮೀದಾರರು ತಿರುವಣ್ಣಾಮಲೈಯಲ್ಲಿ ಇದೇ ಮುಖವನ್ನು ಹೋಲುವ ವ್ಯಕ್ತಿ ಇದ್ದಾನೆ ಎನ್ನುವ ಸುಳಿವು ಸಿಕ್ಕಿತ್ತು. ಕೂಡಲೆ ಕಾಮಾಕ್ಷಿಪಾಳ್ಯ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ಕಾರ್ಯಪ್ರವೃತ್ತರಾಗಿ ತಮ್ಮ ತಂಡವನ್ನು ಅಲ್ಲಿಗೆ ಕಳಿಸಿದ್ದರು. ಪೊಲೀಸರು ಸ್ಥಳಕ್ಕೆ ತೆರಳಿದರಾದರೂ ತಕ್ಷಣಕ್ಕೆ ಆತನೇ ನಾಗ ಎಂದು ಗುರುತಿಸಲು ಸಾಧ್ಯವಾಗಿಲ್ಲ. ಈಷ್ಟು ದಿನಗಳಲ್ಲಿ ಸ್ವಲ್ಪ ದಾಡಿಯೂ ಬೆಳೆದಿತ್ತು. ಸ್ವಲ್ಪ ಹೊತ್ತು ನೋಡಿದ ಪೊಲೀಸರು ಹತ್ತಿರ ತೆರಳಿದ್ದಾರೆ. ಆತನ ಚಹರೆ ಹಾಗೂ ಕೈ ಮೇಲಾಗಿದ್ದ ಗಾಯಗಳನ್ನ ಕಂಡು ಶಂಕೆ ಮೂಡಿದೆ. ಹತ್ತಿರ ಹೋಗುತ್ತಿದ್ದಂತೆಯೇ ಅಲ್ಲಿಂದ ತಪ್ಪಿಸಿಕೊಳ್ಳಲು ನಾಗ ಯತ್ನಿಸಿದ್ದಾನೆ. ತಕ್ಷಣವೇ ಲಾಕ್ ಮಾಡಿದ್ದಾರೆ.
ದೇವಸ್ಥಾನದ ಸಿಬ್ಬಂದಿ ದಂಗು
ಆ್ಯಸಿಡ್ ನಾಗೇಶ್ ಹೊಸೂರು ಭಾಗದವನಾಗಿದ್ದರಿಂದ ತಮಿಳು ಚೆನ್ನಾಗಿ ಮಾತನಾಡುತ್ತಿದ್ದ. ಈ ಹಿನ್ನೆಲೆ ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನದಲ್ಲಿ ಸೇರಿದ್ದ. ಮಾಡಿದ ಪಾಪವನ್ನು ಈ ಮೂಲಕ ಕಳೆದುಕೊಳ್ಳುವುದು ಆತನ ಉದ್ದೇಶವಾಗಿತ್ತು. ಅಲ್ಲಿ ಯಾರೇ ಮಾತನಾಡಿಸಿದರೂ ತಮಿಳಿನಲ್ಲೆ ಮಾತನಾಡುತ್ತಿದ್ದ. ಅಲ್ಲೆ ದೇವರ ಜಪತಪ ಮಾಡುವ ಹಾಗೆ ನಟಿಸಿಕೊಂಡಿದ್ದ. ಅನುಮಾನ ಬಾರದಂತೆ ಖಾವಿ ಧರಿಸಿದ್ದ. ಮೊಬೈಲ್ ಕೂಡ ಬಳಸದೆ ಇದ್ದ ಕಾರಣ 16 ದಿನಗಳ ಕಾಲ ನಾಪತ್ತೆಯಾಗಿದ್ದ. ಪೊಲೀಸರು ಬಂಧಿಸಲು ತೆರಳಿದಾಗ ದೇವಸ್ಥಾನದ ಸಿಬ್ಬಂದಿ ಏನೆಂದು ಪ್ರಶ್ನಿಸಿದ್ದಾರೆ. ಆತ ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ. ಇವನು ಅಮಾಯಕ ಅಲ್ಲ, ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿ ಇಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಯ್ಯೋ ಇಷ್ಟು ದಿನ ದೈವ ಭಕ್ತ ಎಂದುಕೊಂಡ ವ್ಯಕ್ತಿ ಕಿರಾತಕನಾ ಎಂದುಕೊಂಡು ದೇವಸ್ಥಾನದ ಸಿಬ್ಬಂದಿಯೇ ದಂಗಾಗಿದ್ದಾರೆ.
ಆ್ಯಸಿಡ್ ನಾಗೇಶ್ ಕಾಲಿಗೆ ಗುಂಡು :
ತಿರುವಣ್ಣಾಮಲೈಯಿಂದ ಬಂಧಿಸಿ ಕರೆತರುವಾಗಲೂ ಆ್ಯಸಿಡ್ ನಾಗ ಕಿತಾಪತಿ ಮಾಡಿದ್ದಾನೆ. ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆ ನಿಲ್ಲಿಸಿ ಎಂದು ಕೇಳಿದ್ದಾನೆ. ನೈಸ್ ರೋಡ್‌ನಲ್ಲಿ ಆಗಮಿಸುವಾಗ ನಾಗೇಶ ಕೇಳಿದ್ದರಿಂದ, ಅಲ್ಲಿ ವಾಹನ ನಿಲ್ಲಿಸುವಂತಿಲ್ಲ ಎಂದು ಪೊಲೀಸರು ಮಾತು ಕೇಳಿಲ್ಲ. ಬಳಿಕ ಬೆಂಗಳೂರು ಸಿಟಿಯ ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆ್ಯಸಿಡ್ ನಾಗೇಶನನ್ನು ಹಿಡಿಯಲು ಕಾನ್‌ಸ್ಟೇಬಲ್ ಮಹಾದೇವಯ್ಯ ಪ್ರಯತ್ನಿಸಿದ್ದಾರೆ. ತಪ್ಪಿಸಿಕೊಳ್ಳಲು ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆರೋಪಿಯನ್ನು ಹಿಡಿಯಲು ಗಾಳಿಯಲ್ಲಿ ಒಮ್ಮೆ ಗುಂಡು ಹಾರಿಸಿದ ಇನ್‌ಸ್ಪೆಕ್ಟರ್ ಪ್ರಶಾಂತ್ ಎಚ್ಚರಿಕೆ ನೀಡಿದ್ದಾರೆ.
ಇನ್ಸ್ಪೆಕ್ಟರ್ ಎಚ್ಚರಿಕೆಗೂ ಬಗ್ಗದೆ ತಪ್ಪಿಸಿಕೊಳ್ಳಲು ಮುಂದಾದ ಆರೋಪಿ ಆ್ಯಸಿಡ್ ನಾಗೇಶ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಗುಂಡೇಟು ತಿಂದ ಆ್ಯಸಿಡ್ ನಾಗೇಶ್ ಪ್ರಾಥಮಿಕ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಹೆಚ್ಚಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ನನ್ನ ಟ್ರಿಪ್ ವಿವರವನ್ನು ಟಿವಿ, ಪೇಪರ್‌ನಲ್ಲಿ ನೋಡಿ ಎಂದಿದ್ದ ಆರೋಪಿ ನಾಗೇಶ