ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಘೋಷಣೆ ಮಾಡಲಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳು ಚುನಾವಣೆ ಗಿಮಿಕ್ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvarayaswamy) ಅವರು ಹೇಳಿರುವ ವಿಡಿಯೊವೊಂದು ವೈರಲ್ (Video Viral) ಆಗಿದೆ. ಚುನಾವಣೆ ವೇಳೆ ಅಧಿಕಾರವನ್ನು ಹಿಡಿಯುವುದೇ ಬಹುಮುಖ್ಯ ಆಗಿದ್ದರಿಂದ ನಮಗೆ ಇಷ್ಟ ಇದೆಯೋ ಇಲ್ಲವೋ, ಸಿದ್ದರಾಮಯ್ಯ (CM Siddaramaiah) ಅವರಿಗೆ ಇಷ್ಟ ಆಗುತ್ತದೆಯೋ ಇಲ್ಲವೋ ಇಂಥ ಚೀಪ್ ಗಿಮಿಕ್‌ಗಳನ್ನು ಮಾಡಬೇಕಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಇವರ ಈ ಹೇಳಿಕೆಯು ಸರ್ಕಾರಕ್ಕೆ ಮುಜುಗರವನ್ನು ತಂದಿದೆ.
ವಿಡಿಯೊದಲ್ಲಿ ಏನಿದೆ?
ಈ ಹಿಂದೆಯೂ ಸಹ ಹಲವಾರು ಉಚಿತ ಯೋಜನೆಗಳನ್ನು ನಾವೇ ವಿರೋಧ ಮಾಡಿಕೊಂಡು ಬಂದಿದ್ದೇವೆ. ಇದು ದೇಶದಲ್ಲಿಯೇ ಚರ್ಚೆ ಆಗಿರುವ ವಿಚಾರವಾಗಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಮುಂದೆ ಫ್ರೀ.. ಫ್ರೀ.. ಎಂದು ಹೋದರೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ನಾವೂ ಚರ್ಚೆ ಮಾಡಿದ್ದೇವೆ. ಈಗ ನಾವುಗಳೂ ಅದೇ ಲೈನ್‌ನಲ್ಲಿ ಹೊರಟಿದ್ದೇವೆ. ಎಲ್ಲೋ ಒಂದು ಕಡೆ ಚುನಾವಣೆ, ರಿಸಲ್ಟ್ ಎಲ್ಲವೂ ಮುಖ್ಯವಾಗುತ್ತದೆ. ಸರ್ಕಾರ ಬಂದರೆ ತಾನೇ ನಾವೂ ಏನಾದರೂ ಮಾಡುವುದಕ್ಕೆ ಸಾಧ್ಯವಾಗುವುದು? ಅಧಿಕಾರ ಸಿಕ್ಕಿದರೆ ತಾನೇ ಕೆಲಸ ಮಾಡುವುದಕ್ಕೆ ಆಗುವುದು ಎನ್ನುವ ದೃಷ್ಟಿ ಬಂದಾಗ ಅಂದು ಫಲಿತಾಂಶವೇ ಅನಿವಾರ್ಯ ಆಗುತ್ತದೆ. ಹಾಗಾಗಿ ರಿಸಲ್ಟ್ ಬರಬೇಕು ಎಂದಾಗ ಈ ರೀತಿಯ (ಗ್ಯಾರಂಟಿ) ಚೀಪ್ ಪಾಪ್ಯುಲಾರಿಟಿ, ಇಲ್ಲದ್ದು ಪಲ್ಲದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ, ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ?
ಇಲ್ಲಿ ಚಲುವರಾಯಸ್ವಾಮಿ ಅವರು ನೀಡಿರುವ ಹೇಳಿಕೆಯಲ್ಲಿ, “ನಮ್ಮ ಮನಸ್ಸು ಒಪ್ಪುತ್ತದೆಯೋ ಇಲ್ಲವೋ? ನಮಗೆ, ಸಿದ್ದರಾಮಯ್ಯ ಅವರಿಗೆ ಇಷ್ಟವಾಗುತ್ತದೆಯೋ ಇಲ್ಲವೋ? ಕೆಲವನ್ನು ಮಾಡಿಕೊಂಡು ಹೋಗಬೇಕಾಗುತ್ತದೆ, ಕೆಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ” ಎಂದು ಹೇಳಿರುವುದು ಸಹ ಈಗ ಚರ್ಚೆಯ ಭಾಗವಾಗಿದೆ. ಅಂದರೆ, ಈ ರೀತಿಯ ಉಚಿತ ಗ್ಯಾರಂಟಿ ಘೋಷಣೆಯು ಸಿದ್ದರಾಮಯ್ಯ ಅವರಿಗೂ ಇಷ್ಟ ಇರಲಿಲ್ಲವೇ? ಚುನಾವಣೆ ಗೆಲ್ಲುವುದಕ್ಕೋಸ್ಕರ ಅನಿವಾರ್ಯವಾಗಿ ಘೋಷಣೆ ಮಾಡಿದರೇ? ಅಥವಾ ಹೈಕಮಾಂಡ್ ನಿರ್ಧಾರಕ್ಕೆ ಅವರು ತಲೆ ಬಾಗಬೇಕಾಯಿತೇ? ಎಂಬ ಬಗ್ಗೆಯೂ ಈಗ ಚರ್ಚೆಗಳು ಹುಟ್ಟಿಕೊಂಡಿವೆ.
ಚೀಪ್ ಗಿಮಿಕ್ ಬಗ್ಗೆ ಚಲುವರಾಯಸ್ವಾಮಿ ನೀಡಿರುವ ಹೇಳಿಕೆಯ ವಿಡಿಯೊ ಇಲ್ಲಿದೆ
ಇದನ್ನೂ ಓದಿ: Text Book: ಹೊಸ ಪಠ್ಯಕ್ರಮ ರಚನೆಗೆ ಸಮಿತಿ; ಬಿಜೆಪಿ ಅವಧಿಯ ಅಧ್ಯಾಯಗಳಿಗೆ ಕೊಕ್?
ಚುನಾವಣಾ ಪೂರ್ವ ಹೇಳಿಕೆ?
ಇದು ಚುನಾವಣೆ ನಡೆಯುವುದಕ್ಕಿಂತ ಮೊದಲು ಮಾಡಿದ ವಿಡಿಯೊ ಇರಬಹುದು ಎಂದೂ ಹೇಳಲಾಗುತ್ತಿದ್ದು, ಈ ಬಗ್ಗೆ ಈಗಿನ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.