ಬೆಂಗಳೂರು: ಚುನಾವಣೆ ಬಂತೆದರೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತವೆ. ರಾಜಕೀಯ ನಾಯಕರು ಮತ್ತಷ್ಟು ಸಕ್ರಿಯಗೊಳ್ಳುತ್ತಾರೆ. ಸದ್ಯದಲ್ಲೇ ಬಿಬಿಎಂಪಿ ಚುನಾವಣೆ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ, ಮುಂದಿನ ವರ್ಷ ವಿಧಾನಸಭಾ ಚುನಾವಣೆ, ಬಳಿಕ ಲೋಕಸಭಾ ಚುನಾವಣೆ ಇರುವುದರಿಂದ ಈಗಾಗಲೇ ರಾಜ್ಯದಲ್ಲಿ ಎಲೆಕ್ಷನ್ ಫಿವರ್ ಶುರುವಾದಂತಿದೆ. ಎಲ್ಲ ಪಕ್ಷಗಳ ಮುಖಂಡರೂ ಆಕ್ಟಿವ್ ಆಗಿದ್ದಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಕಾಂಗ್ರೆಸ್ ಪಕ್ಷದ ನಾಯರು ಪೂರ್ಣ ಪ್ರಮಾಣದಲ್ಲಿ ಆಲರ್ಟ್ ಆಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದೆ.
ಇದನ್ನೂ ಓದಿ | ಇ.ಡಿ. ವಿಚಾರಣೆ ಖಂಡಿಸಿ ಕಾಂಗ್ರೆಸ್‌ನಿಂದ ರಾಜಭವನ ಮುತ್ತಿಗೆ: ಡಿಕೆಶಿ, ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ
ಭಾನುವಾರ ಬೆಂಗಳೂರು ಶಾಸಕರ ಸಭೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ನಗರದಲ್ಲಿ ಎಲೆಕ್ಷನ್ ಮೂಡ್ ಕ್ರಿಯೆಟ್ ಮಾಡಲು ಮುಂದಾಗಿರುವ ಬಿಜೆಪಿ ತಂತ್ರಗಾರಿಕೆ ಬಗ್ಗೆ ಕೈ ನಾಯಕರು ಚರ್ಚೆ ನಡೆಸಿದ್ದಾರೆ.
ಈ ಮಧ್ಯೆ ಮೋದಿ ಆಗಮನಕ್ಕೆ ನಗರದ ಕೆಲ ರಸ್ತೆಗಳಿಗೆ ಡಾಂಬರೀಕರಣ ಮಾಡಿರುವುದನ್ನು ಪ್ರಚಾರದ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಖಂಡರು ನಿರ್ಧರಿಸಿದ್ದಾರೆ. ಏಕೆಂದರೆ ಮಹಾನಗರದ ಬಹಳಷ್ಟು ರಸ್ತೆಗಳು ಹದಗೆಟ್ಟಿದ್ದು ಗುಂಡಿಗಳ ನಗರ ಎಂಬ ಹಣೆಪಟ್ಟಿಯೇ ಲಭಿಸಿರುವುದು ಕಾಂಗ್ರೆಸ್‌ಗೆ ಅಸ್ತ್ರವಾಗಲಿದೆ. ಇದಲ್ಲದೆ ಕಾಂಗ್ರೆಸ್ ಪ್ರತಿಭಟನೆ ಮಾಡಿದಾಗ ಕೊರೊನಾ ಹರಡುತ್ತೆ ಎಂದು ಹೇಳಿದ್ದ ಆರೋಗ್ಯ ಸಚಿವ ಸುಧಾಕರ್‌ಗೂ ತಿರುಗೇಟು ಕೊಡಲು ಕಾಂಗ್ರೆಸ್ ಸಜ್ಜಾಗುತ್ತಿದೆ. ಏಕೆಂದರೆ ಇದೀಗ ಕೊಮಘಟ್ಟ ಮತ್ತು ಅಂಬೇಡ್ಕರ್ ಕಾಲೇಜು ಬಳಿ ಪ್ರಧಾನಿ ಪಾಲ್ಗೋಳ್ಳುವ ಕಾರ್ಯಕ್ರಮದಲ್ಲಿ ಸಾವಿರಾರು ಜನ ಸೇರಲಿದ್ದಾರೆ. ಹೀಗಾಗಿ ಈ ಎಲ್ಲ ಅಂಶಗಳನ್ನ ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಯಾವ ರೀತಿಯ ಹೋರಾಟ ಮಾಡಬೇಕೆಂದು ಚರ್ಚೆ ನಡೆಸಿರುವುದಾಗಿ ತಿಳಿದು ಬಂದಿದೆ.
ಸಭೆಯಲ್ಲಿ ಯಾರೆಲ್ಲ ಭಾಗಿ!?
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ರಾಮಲಿಂಗರೆಡ್ಡಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಸೌಮ್ಯ ರೆಡ್ಡಿ, ಸಂಸದ ಡಿ.ಕೆ. ಸುರೇಶ್ ಮತ್ತಿತರರು ಭಾಗಿಯಾಗಿದ್ದರು.
ದೆಹಲಿಯಲ್ಲಿಯು ಚುರುಕು ಪಡೆದ ಅಧ್ಯಕ್ಷರ ಸಭೆ
ನಾಳೆ ರಾಜ್ಯ ಕಾಂಗ್ರೆಸ್ ಘಟಕಗಳ ಅಧ್ಯಕ್ಷರ ಸಭೆಯನ್ನು ರಾಷ್ಟ್ರೀಯ ನಾಯಕರಾದ ರಣ್‌ದೀಪ್ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್ ಕರೆದಿದ್ದಾರೆ. ದೆಹಲಿಯಲ್ಲಿ ಅಧ್ಯಕ್ಷರ ಸಭೆ ನಡೆಯಲಿದ್ದು, ಇಂದು ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮುಖಂಡ ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ನಡೆಸುತ್ತಿರುವುದು ಹಾಗೂ ಕೇಂದ್ರ ಸರ್ಕಾರ ಜಾರಿ ಮಾಡಿರುವ ಅಗ್ನಿಫಥ್ ಯೋಜನೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ರೂಪಿಸಬೇಕಾದ ತಂತ್ರಗಾರಿಕೆ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಎಲ್ಲ ರಾಜ್ಯಗಳ ಪಿಸಿಸಿ ಅಧ್ಯಕ್ಷರ ಸಭೆ ಕರೆದಿದ್ದಾರೆ.
ಇದನ್ನೂ ಓದಿ | ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ. ಕಿರುಕುಳ ವಿರೋಧಿಸಿ ಪ್ರತಿಭಟನೆ: ಡಿ ಕೆ ಶಿವಕುಮಾರ್