ಬೆಳಗಾವಿ: ವರ್ಷಾಂತ್ಯಕ್ಕೆ ವಿವಿಧ ಸಂಭ್ರಮಾಚರಣೆಗೆ ಸಿದ್ಧವಾಗುತ್ತಿರುವ ನಾಗರಿಕರಿಗೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದ್ದು, ಕೋವಿಡ್ (Coronavirus) ನಿಯಂತ್ರಣ ಸಲುವಾಗಿ ಎಲ್ಲ ಕಡೆಗಳಲ್ಲೂ ಮಾಸ್ಕ್ ಧರಿಸಿಯೇ ಇರಬೇಕು ಎಂದು ತಿಳಿಸಿದೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದ ನಡುವೆಯೇ ಕಂದಾಯ ಸಚಿವ ಆರ್. ಅಶೊಕ್ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಜ್ಞರೊಂದಿಗೆ ಸಭೆ ನಡೆಸಲಾಯಿತು.
ಸಭೆಯ ನಂತರ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಚೀನಾ ಸೇರಿ ವಿದೇಶಗಳಲ್ಲಿ ಕೋವಿಡ್ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರತ್ತ ಹೆಚ್ಚಿನ ಗಮನ ಕೊಡಲು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸಲಹೆ ನೀಡಿದ್ದಾರೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿದೇಶದಿಂದ ಪ್ರಯಾಣಿಸಕರಿಗೆ ಪ್ರತ್ಯೇಕವಾಗಿ ಆಸ್ಪತ್ರೆ ಮೀಸಲು ಮಾಡಲಾಗುತ್ತದೆ. ಥಿಯೇಟರ್‌ನಲ್ಲಿ ಮಾಸ್ಕ್ ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಶಾಲಾ ಕಾಲೇಜು ಕ್ಲಾಸ್ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳು ಸ್ಯಾನಿಟೈಸರ್ ಹಾಕಬೇಕು. ತರಗತಿಯಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯ ಎಂದರು.
ಹೊಸ ವರ್ಷಚಾರಣೆಗೆ ಸಂಬಂಧಿಸಿದಂತೆ ಮಾತನಾಡಿದ ಅಶೋಕ್, ಪಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಡಬಲ್ ಡೋಸ್ ಲಸಿಕೆ ಹಾಕಿಸಿರಬೇಕು. ಎಷ್ಟು ಟೇಬಲ್ ಇರುತ್ತದೆಯೋ ಅಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು. ಹೆಚ್ಚುವರಿ ಜನರಿಗೆ ಪಬ್, ಬಾರ್, ರೆಸ್ಟೋರೆಂಟ್‌ನಲ್ಲಿ ಅವಕಾಶವಿಲ್ಲ. ಬೆಂಗಳೂರಿನ ಎಂ.ಜಿ. ರಸ್ತೆ ಸೇರಿದಂತೆ ರಸ್ತೆಗಳಲ್ಲಿ ಸಂಭ್ರಮಚಾರಣೆಗೂ ಕೂಡ ಮಾಸ್ಕ್ ಕಡ್ಡಾಯವಿದ್ದು, ಮಧ್ಯರಾತ್ರಿ 1 ಗಂಟೆಗೆ ಎಲ್ಲವನ್ನೂ ಬಂದ್ ಮಾಡಬೇಕು ಎಮದು ಹೇಳಿದರು.
ಜಿಲ್ಲೆಗಳಲ್ಲಿ ಮಾರ್ಗಸೂಚಿ ಪಾಲನೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳ ಆಸ್ಪತ್ರೆ ಸ್ಥಿತಿಗತಿ ಪರಿಶೀಲನೆ ಮಾಡಬೇಕಾಗುತ್ತದೆ. ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುವ ಕುರಿತು ಯಾವುದೇ ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರ‍್ಯಾಂಡಮ್ ಟೆಸ್ಟ್ ಮಾಡಲಾಗುವುದು. ರೋಗದ ಲಕ್ಷಣ ಕಂಡುಬಂದರೆ ಕ್ವಾರಂಟೈನ್ ನಡೆಸಿ ಚಿಕಿತ್ಸೆ ನೀಡಲಾಗುವುದು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಮತ್ತು ಮಂಗಳೂರಿನ ಒಂದು ಆಸ್ಪತ್ರೆ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಬೂಸ್ಟರ್ ಡೋಸ್ ಹೆಚ್ಚಾಗಿ ಕೊಡುವ ಕೆಲಸವಾಗಬೇಕಿದೆ. 20% ಆಗಿರುವ ಬೂಸ್ಡರ್ ಡೋಸ್ ಅನ್ನು 50% ಆಗುವ ನಿಟ್ಡಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ತಾಲ್ಲೂಕು ಮಟ್ಡದಿಂದ ಜಿಲ್ಲಾ ಮಟ್ಟದವರೆಗೂ ಲಸಿಕಾ ಕ್ಯಾಂಪ್ ತೆರೆಯುತ್ತೇವೆ. ಹಿರಿಯ ನಾಗರಿಕರು, ರೋಗದ ಲಕ್ಷಣವಿದ್ದವರು, ಗರ್ಭಿಣಿಯರು, ಮಕ್ಕಳು ಹೊಸವರ್ಚಚಾರಣೆಯ ಸಮಾರಂಭದಲ್ಲಿ ಭಾಗಿಯಾಗದೆ ಇದ್ದರೆ ಒಳ್ಳೆಯದು. ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. BF.7 ವೈರಸ್ ಬಗ್ಗೆ ಯಾವುದೇ ಆತಂಕವಿಲ್ಲ. ಎರಡು ಡೋಸ್ ವ್ಯಾಕ್ಸಿನೇಷನ್ ಆಗಿದೆ. ಆತಂಕ್ಕೆ ಆಗುವ ಅವಶ್ಯಕತೆ ಇಲ್ಲ. ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಿದೆ. ಯಾರು ಕೂಡ ಅನ್ಯಥಾ ಭಾವಿಸಬಾರದು. ಬೂಸ್ಟರ್ ಡೋಸ್ ಕಡ್ಡಾಯ ಎಂದು ಹೇಳುವುದಕ್ಕೆ ಆಗುವುದಿಲ್ಲ. ಬೂಸ್ಡರ್ ಡೋಸ್ ತೆಗೆದುಕೊಳ್ಳಬೇಕು. ಮೊದಲು ಮತ್ತು ಎರಡನೇ ಡೋಸ್ ಪ್ರಧಾನಿ ಮೋದಿಯವರ ಜಾಗೃತಿಯಿಂದ ಜನ ಸ್ವಯಂಪ್ರೇರಣೆಯಿಂದ ಪಡೆದುಕೊಂಡಿದ್ದಾರೆ. ಅದೇ ರೀತಿ ಬೂಸ್ಡರ್ ಡೋಸ್ ಸ್ವಯಂಪ್ರೇರಿತರಾಗಿ ಪಡೆದುಕೊಳ್ಳಬೇಕು ಎಂದರು.
ಚೀನಾದಿಂದ ಬಂದ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿನೋಮಿಕ್ ಸೀಕ್ವೆನ್ಸ್ ಗೆ ಕಳುಸಿಲಾಗಿದೆ. ವರದಿ ಬಂದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದರು. ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಕಾರ್ಯಕ್ರಮಕ್ಕೂ ನಾವು ನಿರ್ಬಂಧ ಹೇರಿಲ್ಲ. ಮಾಸ್ಕ್ ಧರಿಸಿ ಎಂದು ಮಾತ್ರ ಸಲಹೆ ನೀಡಿದ್ದೇವೆ. ಜೆಡಿಎಸ್ ಪಂಚರತ್ನ ರಥ ಯಾತ್ರೆನಾದ್ರೂ ಮಾಡಲಿ, ಕಾಂಗ್ರೆಸ್ ಬಸ್ ಯಾತ್ರೆನಾದ್ರೂ ಮಾಡಲಿ. ನಮ್ಮ ಮಾರ್ಗಸೂಚಿ ಪಾಲಿಸಲಿ ಎನ್ನುವುದಷ್ಟೇ ನಮ್ಮ ಕಾಳಜಿ ಎಂದು ಹೇಳಿದರು.
ಇದಕ್ಕೂ ಮುನ್ನ ಸಂಪುಟ ಸಭೆಯಲ್ಲಿ ಕೋವಿಡ್ ಕುರಿತು ಚರ್ಚೆ ನಡೆಸಲಾಗಿತ್ತು. ನಂತರ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವಸಂಪುಟದಲ್ಲಿ ಈ ಬರ್ಗೆ ಚರ್ಚಿಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದು, ಬೂಸ್ಟರ್ ಡೋಸ್ ಹೆಚ್ಚಿಸುವುದು,ಐಎಲ್ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು, ಮಾಸ್ಕ್ ಗಳ ಧಾರಣೆ, ಒಳಾಂಗಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಗಳ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ, ಹಂತಹಂತವಾಗಿ ನಿಯಮಗಳನ್ನು ಜಾರಿ ತರಲಾಗುವುದು.
ಹೊಸ ವರ್ಷಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಬಗ್ಗೆ ಉತ್ತರಿಸಿ, ಪ್ರತಿ ಬಾರಿಯಂತೆ ಈ ವರ್ಷವೂ ನಿಯಮಗಳಿದ್ದು, ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಸೇರಿಸಲಾಗುವುದು. ಜನಸಾಮಾನ್ಯರ ದೈನಂದಿನ ಚಟುವಟಿಕೆ, ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು ಎಂದಿದ್ದರು.
ಇದನ್ನೂ ಓದಿ | BF.7 Variant | ಉತ್ತರ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಕೇಸ್ ಪತ್ತೆ; ದುಬೈಗೆ ಹೊರಟಿದ್ದವನಿಗೆ ಕೋವಿಡ್ ಪಾಸಿಟಿವ್