ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಜಿದ್ದಾಜಿದ್ದಿಯ ಕೇಂದ್ರವಾಗಿದ್ದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (Bengaluru-Mysuru Expressway) ಇದೀಗ ಮತ್ತೊಮ್ಮೆ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗುವ ಮುನ್ಸೂಚನೆಯಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಅಕ್ರಮದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಅನೇಕ ಅಪಘಾತಗಳು ನಡೆಯುತ್ತಿದ್ದು, ವಾಹನ ಚಾಲಕರು ಮೃತಪಡುತ್ತಿದ್ದಾರೆ. ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ, ಭೂಸ್ವಾಧೀನ , ಪರಿಹಾರ ವಿತರಣೆ, ಟೋಲ್ ಸಂಗ್ರಹಣೆ ಬಗ್ಗೆ ತನಿಖೆ ಮಾಡಿಸುತ್ತೇವೆ. ತಾಂತ್ರಿಕ ತಂಡ ರಚನೆಗೆ ಸಿಎಂ ಗಮನಕ್ಕೆ ತರುತ್ತೇವೆ. ಸಿಎಂ ಸೂಚಿಸಿದ ಬಳಿಕ ಅಂತಿಮ ನಿರ್ಧಾರ ಮಾಡುತ್ತೇವೆ.
ಮೈಸೂರು ಹೈವೆ ಯಾವುದೋ ಹಳ್ಳಿ ರಸ್ತೆಯಲ್ಲಿ ಮಾಡಿ ಬಿಟ್ಟಂಗಿದೆ. ಬೆಂಗಳೂರು ಮಂಗಳೂರು ಹೆದ್ದಾರಿಯೇ ಎಷ್ಟೋ ಇದಕ್ಕಿಂತ ಉತ್ತಮವಾಗಿದೆ. ಪಾಪ ಪ್ರತಾಪ್ ಸಿಂಹ ಅವರಿಗೆ ಇದೆಲ್ಲ ಗೊತ್ತಿಲ್ಲ. ಆಗ ರಾಜ್ಯದಲ್ಲೂ ಕೇಂದ್ರದಲ್ಲೂ ಅವರದೇ ಸರ್ಕಾರ ಇತ್ತು. ಗುತ್ತಿಗೆದಾರರು ಯಾರೋ ಅವರಿಗೂ ಬೇಕಾದವರು ಅಂತ ಹೇಳ್ತಾರಪ್ಪ. ಅದೆಲ್ಲ ನಮಗೆ ಸದ್ಯಕ್ಕೆ ಬೇಡ. ಆದರೆ ಇಡೀ ಹೆದ್ದಾರಿಯೇ ಬಹಳಷ್ಟು ಲ್ಯಾಪ್ಸ್ ಆಗಿದೆ ಎಂದರು.
ಇದನ್ನೂ ಓದಿ: Road Accident: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಾರುಗಳ ಡಿಕ್ಕಿ; ಮೂವರ ಸಾವು
ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಅಂತ ಈಗಲೇ ಹೇಳಲು ಆಗುವುದಿಲ್ಲ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ತನಿಖೆ ನಡೆಸುತ್ತೇವೆ. 40 ಅಪಘಾತಗಳಲ್ಲಿ 45 ಸಾವು ಸಂಭವಿಸಿದೆ. ಟೋಲ್‌ನಲ್ಲಿ ಆಂಬುಲೆನ್ಸ್ ಇಲ್ಲ, ಟೋಯಿಂಗ್ ವೆಹಿಕಲ್ ಇಲ್ಲ, ಸಿಗ್ನಲ್ ಇಲ್ಲ, ಪುಟ್‌ಪಾತ್ ಇಲ್ಲ. ಸಮಸ್ಯೆ ಬಗೆಹರಿಯುವವರೆಗೂ ಶ್ರೀರಂಗಪಟ್ಟಣ ಬಳಿ ಟೋಲ್ ಸಂಗ್ರಹ ಮಾಡದಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣದಲ್ಲಿ ಎಂಟ್ರಿ, ಎಕ್ಸಿಟ್ ಕೊಟ್ಟು ಪುಟ್ಪಾತ್ ನಿರ್ಮಿಸುವಂತೆ ಹೇಳಿದ್ದೇವೆ.
ಹೆದ್ದಾರಿ ಕಾಮಗಾರಿ ಅಕ್ರಮದ ಬಗ್ಗೆ ತನಿಖೆಗೆ ಮಂಡ್ಯ ಜಿಲ್ಲೆ ಶಾಸಕರು ಒತ್ತಾಯಿಸಿದ್ದಾರೆ. ಸಿಎಂ ಭೇಟಿಯಾಗಿ ಚರ್ಚೆ ಮಾಡಿ ತನಿಖೆ ಮಾಡಿಸುತ್ತೇವೆ. ಕಾಮಗಾರಿ ಅಗ್ರಿಮೆಂಟ್ ಅವೈಜ್ಞಾನಿಕವಾಗಿದೆ, ಹಿಂದಿನ ಸರ್ಕಾರ ಯಾವ ರೀತಿ ಒಪ್ಪಿದರೋ ಗೊತ್ತಿಲ್ಲ. ಮಂಡ್ಯ ದ ಬಳಿ ಐದು ಸ್ಕೈ ವಾಕ್ ಆಗ್ತಾಯಿದೆ. ಜತೆಗೆ ಬೇರೆ ಬೇರೆ ಕೂಡ ಸ್ಕೈವಾಕ್ ಮಾಡುತ್ತೇವೆ. ಹೈ ವೇಯಲ್ಲಿ ಕ್ಯಾಮರಾ ಇರಬೇಕು. ಐದು ಕಿಲೋಮೀಟರ್ ಗೆ ಒಂದು ಕ್ಯಾಮರಾ ಇರಬೇಕು ಅದು ಆಗಿಲ್ಲ ಎಂದು ಹೇಳಿದರು.