ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕೈದಿಗಳನ್ನು ಸಂಬಂಧಿಕರು ಭೇಟಿ ಮಾಡುವ ಮುನ್ನ ಲಂಚ ನೀಡಬೇಕಾಗುತ್ತಿದೆ ಎಂದು ಸ್ವತಃ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ, ಮನೆಗೆ ವಿಡಿಯೋ ಕಾಲ್ ಮಾಡಿಕೊಂಡು ಸುಖಜೀವನ ನಡೆಸುತ್ತಿದ್ದಾರೆ ಎಂಬ ವರದಿ ಇತ್ತೀಚೆಗೆ ಬಹಿರಂಗಗೊಂಡಿತ್ತು. ಹಿಂದು ಕಾರ್ಯಕರ್ತನನ್ನು ಹತ್ಯೆ ಮಾಡಿದವರನ್ನು ಬಿಜೆಪಿ ಸರ್ಕಾರವೇ ಈ ರೀತಿ ಮಜಾ ಮಾಡಲು ಬಿಟ್ಟಿದೆ ಎಂದು ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಹರ್ಷ ಸಹೋದರಿ ಈ ಕುರಿತು ಮನವಿ ಮಾಡಲು ಇತ್ತೀಚೆಗೆ ಗೃಹಸಚಿವರ ಬಳಿ ಆಗಮಿಸಿದ್ದರು. ನ್ಯಾಯ ಕೇಳಲು ಬಂದಾಗ ಗೃಹಸಚಿವರು ಜೋರು ಮಾಡಿ ಕಳಿಸಿದರು ಎಂದು ಆರೋಪಿಸಿದ್ದರು. ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು ಎಂದು ಹಿಂದು ಜಾಗರಣ ವೇದಿಕೆ ಒತ್ತಾಯ ಮಾಡಿತ್ತು. ಇದೆಲ್ಲದರ ನಂತರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಜೈಲಿನ ಕೋಣೆಗಳನ್ನು ವೀಕ್ಷಿಸಿದ ಆರಗ ಜ್ಞಾನೇಂದ್ರ, ವಿವಿಧ ವಿಭಾಗಗಳ ಮಾಹಿತಿ ಪಡೆದುಕೊಂಡರು. ಇತ್ತೀಚೆಗೆ ಕುಟುಂಬದವರನ್ನು ನೋಡಲು ಒಬ್ಬರು ಆಗಮಿಸಿದ್ದಾರೆ. ಅವರು ಗೇಟಿನಿಂದ ಒಳಗೆ ಬರುವ ವೇಳೆಗೆ ಬೇರೆ ಬೇರೆ ಹಂತಗಳಲ್ಲಿ ಲಂಚ ನೀಡುತ್ತ ಒಟ್ಟು 1,600 ರೂ. ಖರ್ಚು ಮಾಡಿದ್ದಾರೆ. ತಮ್ಮ ಕುಟುಂಬದವರನ್ನು ಭೇಟಿ ಮಾಡಿ ಹೊರ ಹೋದಾಗ ಅವರ ಜೇಬು ಸಂಪೂರ್ಣ ಖಾಲಿಯಾಗಿದೆ.
ಕೊನೆಗೆ ಯಾರಿಂದಲೋ ಫೋನ್ ಪಡೆದುಕೊಂಡು ಮನೆಯವರಿಗೆ ಕರೆ ಮಾಡಿ ಬಸ್ ಟಿಕೆಟ್‌ಗೆ ಹಣ ಹೊಂದಿಸಿಕೊಂಡು ತೆರಳಿದ್ದಾರೆ. ಇಂತಹ ಸ್ಥಿತಿ ಜೈಲಿನಲ್ಲಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಜತೆಗಿದ್ದ ಗೃಹ ಇಲಾಖೆ ಅಧಿಕಾರಿ, ಕೂಡಲೆ ಸಿಸಿಟಿವಿ ಪರಿಶೀಲನೆ ನಡೆಸಬೇಕು ಎಂದು ಜೈಲು ಅಧಿಕಾರಿಗಳಿಗೆ ತಿಳಿಸಿದರು. ಎಲ್ಲ ಸಿಬ್ಬಂದಿಗೂ ಬಾಡಿ ವೋರ್ನ್ ಕ್ಯಾಮೆರಾ ನೀಡಿ. ಪ್ರತಿದಿನವೂ ಅಲ್ಲಿನ ಸಿಬ್ಬಂದಿಯನ್ನು ಬದಲಾಯಿಸಿ. ಯಾವುದೇ ಸಿಬ್ಬಂದಿ ಲಂಚ ಪಡೆಯುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದರೆ ಅದೆಷ್ಟೇ ಜನರಿದ್ದರೂ ಎಲ್ಲರನ್ನೂ ಅಮಾನತು ಮಾಡಿ ಎಂದು ತಾಕೀತು ಮಾಡಿದರು.
ಇದನ್ನೂ ಓದಿ | ಆರಗ ಜ್ಞಾನೇಂದ್ರ ರಾಜೀನಾಮೆಗೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಿಂದು ಜಾಗರಣಾ ವೇದಿಕೆಯಿಂದ ಪ್ರತಿಭಟನೆ