Site icon Vistara News

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಗಾಯಾಳುಗಳು ಸೇಫ್‌, ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

Rameswaram Cafe Blast One by one the injured were discharged from the hospital

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟದಿಂದ (rameshwaram cafe blast) ಗ್ರಾಹಕರು, ಕೆಫೆ ಸಿಬ್ಬಂದಿ ಸೇರಿ ಒಟ್ಟು 9 ಮಂದಿ (Blast In Bengaluru) ಗಾಯಗೊಂಡಿದ್ದರು. ಸಣ್ಣ-ಪುಟ್ಟ ಗಾಯಗೊಂಡವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಮಾಡಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟದಿಂದ ಗಾಯಗೊಂಡ ಗಾಯಾಳುಗಳ ಆರೋಗ್ಯವನ್ನು ಸಿಎಂ ಸಿದ್ದರಾಮಯ್ಯ ವಿಚಾರಿಸಿದರು. ಬ್ರೂಕ್‌ ಫೀಲ್ಡ್‌ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಕೆಫೆಯ ಸಿಬ್ಬಂದಿ ಹಾಗೂ ಗ್ರಾಹಕಿ ಸುರ್ಣಾಂಬ ಅವರಿಗೆ ಧೈರ್ಯವನ್ನು ತುಂಬಿದ್ದರು. ಜತೆಗೆ ಗಾಯಾಳುಗಳ ಬಳಿ ಘಟನೆ ಕುರಿತು ಮಾಹಿತಿಯನ್ನು ಪಡೆದರು. ನಂತರ ಗಾಯಾಳುಗಳ ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ತಿಳಿಸಿದ್ದಾರೆ.

ಸ್ವರ್ಣಾಂಬ ಎಂಬವರು ಬಾಂಬ್‌ ಸ್ಫೋಟಗೊಂಡ ಜಾಗದಲ್ಲೇ ಕುಳಿತಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಬ್ರುಕ್ ಫೀಲ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಾಂಬ್‌ ಸ್ಫೋಟಗೊಂಡ ರಭಸಕ್ಕೆ ಅಲ್ಲಿದ್ದ ಗಾಜು ಪುಡಿ ಪುಡಿಯಾಗಿ ಸ್ವರ್ಣಾಂಬರ ಕೆನ್ನೆಯೊಳಗೆ ಗ್ಲಾಸ್‌ ಹೊಕ್ಕಿತ್ತು. ಕೈ-ಕಾಲಿಗೆ ಶೇ. 35ರಷ್ಟು ಗಾಯವಾಗಿದ್ದು, ಎದೆ ಬಳಿಯೂ ಒಂದು ಸರ್ಜರಿ ಮಾಡಲಾಗಿದೆ. ನಾಲ್ವರು ನುರಿತ ವೈದ್ಯರು ಸತತ ನಾಲ್ಕು ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವೈದ್ಯ ಪ್ರದೀಪ್‌ ಮಾಹಿತಿ ನೀಡಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು

ಇದನ್ನೂ ಓದಿ:Rameshwaram Cafe : ರಾಮೇಶ್ವರಂ ಕೆಫೆ ಮಾಲಕಿ ದಿವ್ಯಾ ರಾಘವೇಂದ್ರ ರಾವ್‌ ಯಾರು? ಅರ್ಚಕರ ಮಗಳ ಅಡ್ವೆಂಚರ್‌!

ಪ್ರಾಣಾಪಾಯದಿಂದ ಪಾರಾಗಿರುವ ಸ್ವರ್ಣಾಂಬರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಯಲಿದೆ. ಆರೋಗ್ಯ ಸ್ಥಿರವಾಗಿದ್ದರೆ, ನಾರ್ಮಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗುವುದು. ನಿನ್ನೆ ಬಿಪಿ ಲೋ ಆಗಿತ್ತು. ಈಗ ಎಲ್ಲ ನಾಮರ್ಲ್‌ ಆಗಿದೆ. ಕಿವಿ ಭಾಗ ಕೂಡಾ ಗುಣವಾಗಿದೆ. ಕಿವಿ ಕೆಳಗಿನ ಭಾಗದಲ್ಲಿ ಗ್ಲಾಸ್ ಪೀಸ್ ಪತ್ತೆಯಾಗಿದೆ. ರೋಗಿಗೆ ಡಯಾಬಿಟೀಸ್‌ ಇರುವುದರಿಂದ ಗಾಯವು ಶೀಘ್ರ ಗುಣವಾಗುವುದು ತಡವಾಗಬಹುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇನ್ನೂ ಕೆಫೆಯಲ್ಲಿ ಸಪ್ಲೈ ಕೆಲಸ ಮಾಡುತ್ತಿದ್ದ ಫಾರೂಕ್‌ನನ್ನು ಮೂರು ದಿನದ ನಂತರ ಡಿಸ್ಚಾರ್ಜ್ ಮಾಡುತ್ತೇವೆ. ಗಾಯಾಳು ದೀಪಾಂಶೂನನ್ನು ಶನಿವಾರವೇ ಡಿಸ್ಚಾರ್ಜ್ ಮಾಡುತ್ತೇವೆ. ಘಟನೆಯಿಂದ ಆತ ಮಾನಸಿಕವಾಗಿ ಕುಗ್ಗಿದ್ದರಿಂದ ಚಿಕಿತ್ಸೆ ನೀಡಲಾಗಿದೆ ಎಂದು ಪ್ರದೀಪ್‌ ಮಾಹಿತಿ ನೀಡಿದ್ದಾರೆ. ಇನ್ನೂ ಗಾಯಾಳುಗಳ ಆಸ್ಪತ್ರೆಯ ವೆಚ್ಚದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮೊದಲಿಗೆ ಚಿಕಿತ್ಸೆಯೇ ಮುಖ್ಯ. ಸರ್ಕಾರದಿಂದ ಹಾಗೂ ರಾಮೇಶ್ವರಂ ಕೆಫೆಯಿಂದ ಎಲ್ಲ ಬೆಂಬಲವು ಸಿಕ್ಕಿದೆ ಎಂದು ತಿಳಿಸಿದರು.

ಗಾಯಾಳುಗಳ ಬಟ್ಟೆ ಪಡೆದ ಎಫ್‌ಎಸ್‌ಐ ತಜ್ಞರು

ತನಿಖೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಎಫ್‌ಎಸ್‌ಐ ತಜ್ಞರು ಗಾಯಾಳುಗಳ ಬಟ್ಟೆಯನ್ನು ತೆಗೆದುಕೊಂಡು ಹೋಗಿದ್ದಾರೆ.

ಇನ್ನೂ ವೈದೇಹಿ ಆಸ್ಪತ್ರೆಯಲ್ಲೂ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ. ಬಾಂಬ್ ಸ್ಫೋಟದಿಂದ ಗಾಯಗೊಂಡಿದ್ದ ನಾಲ್ವರು ಗ್ರಾಹಕರಿಗೆ ಚಿಕಿತ್ಸೆ ನಿಡಲಾಗುತ್ತಿದೆ. ಶುಕ್ರವಾರ ರಾತ್ರಿಯೇ ಶ್ರೀನಿವಾಸ್‌ ಹಾಗೂ ಮೋವಿ ಎಂಬುವವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಮಾಡಲಾಗಿದೆ. ಮತ್ತಿಬ್ಬರು ಯುವಕರಿಗೆ ಸಾಧಾರಣ ಗಾಯವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಕಿವುಡುತನ ಕಾಡುವ ಭೀತಿ

ಗಾಯಾಳುಗಳಿಗೆ ಕಿವುಡುತನ ಕಾಡುವ ಭೀತಿ ಇದೆ ಎಂದು ವೈದೇಹಿ ಆಸ್ಪತ್ರೆಯ ವೈದ್ಯೆ ಸೀಮಾ ಮಾಹಿತಿ ನೀಡಿದ್ದಾರೆ. ಘಟನಾ ದಿನದಂದು ಗಾಯಗೊಂಡಿದ್ದ ಆರು ಮಂದಿ ದಾಖಲಾಗಿದ್ದರು. ಈಗಾಗಲೇ ಇಬ್ಬರು ಡಿಸ್ಟಾರ್ಜ್‌ ಆಗಿದ್ದು, ಸಂಜೆ ಮೋಹನ್ (41), ನವ್ಯ (25) ಇವರಿಬ್ಬರನ್ನು ಡಿಸ್ಟಾರ್ಜ್‌ ಮಾಡಲಾಗುವುದು. ಮೋಹನ್ (41), ನವ್ಯ (25) ಇವರಿಬ್ಬರು ಮೈಕ್ರೋ ಚಿಪ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ದಿನದಂದು ರಾಮೇಶ್ವರಂ ಕೆಫೆಯಲ್ಲಿ ಮಧ್ಯಾಹ್ನ ಊಟಕ್ಕೆಂದು ತೆರಳಿದ್ದರು. ಊಟ ಮಾಡುತ್ತಿದ್ದಾಗಲೇ ಬಾಂಬ್ ಸ್ಫೋಟಗೊಂಡಿತ್ತು. ಸ್ಫೋಟದಿಂದ ಮೋಹನ್‌ಗೆ ಎಡಗಡೆ ತೋಳಿಗೆ ಗಾಯವಾಗಿದ್ದರೆ, ನವ್ಯಾಗೆ ಬಲ ಕಿವಿಗೆ ಗಾಯವಾಗಿತ್ತು. ನಾಲ್ವರಲ್ಲಿ ಇಬ್ಬರಿಗೆ ಕಿವಿಗೆ ಪೆಟ್ಟಾಗಿದೆ. ಕಿವಿಯ ಒಳಭಾಗದಲ್ಲೂ ಹೆಚ್ಚಿನ ಗಾಯವಾಗಿದೆ. ಇಬ್ಬರಿಗೂ ಇನ್ನೆರಡು ದಿನಗಳಲ್ಲಿ ಆಪರೇಷನ್ ಮಾಡುವ ಅಗತ್ಯವಿದೆ. ಇಎನ್‌ಟಿ ವೈದ್ಯರು ಈ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version