ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ (High Court) ಗುರುವಾರ (ಆ.29) ನಡೆದಿದೆ. ಸುದೀರ್ಘ ಎರಡೂವರೆ ಗಂಟೆ ಕಾಲ ಸಿಎಂ ಪರ ವಕೀಲ ವಾದ ಮಂಡಿಸಿದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಾದ ಆಲಿಸಿದ ಬಳಿಕ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆಯನ್ನು ಆ.31 ಶನಿವಾರ ಬೆಳಗ್ಗೆ 11:30ಕ್ಕೆ ಮುಂದೂಡಿದರು. ಜತೆಗೆ ಶನಿವಾರದವರೆಗೂ ಕೆಳ ನ್ಯಾಯಾಲಯ ವಿಚಾರಣೆಗೂ ತಡೆನೀಡಿದ್ದರು.
ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ವಾದ ಮಂಡಿಸಿದರು. ಇನ್ನು ರಾಜ್ಯಪಾಲರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಬೇಕಿತ್ತು. ಆದರೆ ಅವರು ಗೈರಾಗಿದ್ದರು.
ಸಿಎಂ ಪರ ಅಭಿಷೇಕ್ ಸಿಂಘ್ವಿ ಮಾತಿನ ಚಾಟಿ ಹೇಗಿತ್ತು?
ರಾಜ್ಯಪಾಲರು ಮೊದಲು ದೂರುದಾರನಿಗೆ ದಂಡ ಹಾಕಬೇಕು. ದೂರುದಾರ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಮೊದಲೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹೋಗಿದ್ದಾರೆ. ಲೋಕಾಯುಕ್ತ ಪೊಲೀಸರಿಗೂ ದೂರು ಕೊಟ್ಟಿದ್ದಾರೆ. ಸಮಯ ವ್ಯರ್ಥ ಮಾಡಿರುವ ದೂರದಾರನಿಗೆ ಮೊದಲು ದಂಡ ಹಾಕಬೇಕಾಗಿತ್ತು. ನಾನು ಲೋಕಾಯುಕ್ತ ಹಾಗೂ ರಾಜ್ಯಪಾಲರನ್ನು ದೋಷಣೆ ಮಾಡಲ್ಲ. ದೂರು ಕೊಟ್ಟಿದ್ದು ಇವರು, ಪ್ರಾಸಿಕ್ಯೂಷನ್ ಅನುಮತಿ ಕೇಳಿದ್ದರು. ಆ ಅರ್ಜಿ ರಾಜ್ಯಪಾಲರ ಬಳಿ ಇರಬೇಕಾದರೆ ಕೆಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ರಾಜ್ಯಪಾಲರಿಗೆ ದಂಡ ಹಾಕುವ ಅಧಿಕಾರ ಇಲ್ಲ, ಮಾನ್ಯ ನ್ಯಾಯಮೂರ್ತಿಗಳು ದಂಡ ಹಾಕಬೇಕು ಎಂದರು.
ಎರಡು ಕಡೆ ಹೇಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರುದಾರರನ್ನು ಪರಿಶೀಲನೆ ಮಾಡಬೇಕು. ಸೀರಿಯಸ್‌ನೆಸ್ ಇಲ್ಲದಿದ್ದರೆ ದಾರಿಹೋಕರು ಕೂಡ ಅರ್ಜಿ ಕೊಡುತ್ತಾರೆ. ಅದಕ್ಕೆ ರಾಜ್ಯಪಾಲರು ಸೀರಿಯಸ್ ಆಗಿ ಇರಬೇಕೆಂದು ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಮಾತಿನ ಚಾಟಿ ಬೀಸಿದರು. ಈ ವೇಳೆ ದೂರುದಾರರ ಪರ ವಕೀಲ ಅಬ್ರಹಾಂ ಮಧ್ಯೆ ಪ್ರವೇಶಿಸಿ ಪ್ರಾಸಿಕ್ಯೂಷನ್‌ಗೆ ಮೊದಲು ಅರ್ಜಿ ಹಾಕಿದ್ದು ಎಂದು ಸಮರ್ಥನೆ ಕೊಟ್ಟರು. ಆಗ ಅಭಿಷೇಕ್ ಸಿಂಘ್ವಿ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ (Prosecution) ಅರ್ಜಿ ಸಲ್ಲಿಸಿದ್ದು ಒಬ್ಬರು, ಆದರೆ ಮೂವರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದರು.
ಬಳಿಕ ಅಭಿಷೇಕ್ ಸಿಂಘ್ವಿ, ಸಾಯಿಕೃಷ್ಣ ಕನ್ನಡದಲ್ಲಿ ಬರೆದ ದೂರನ್ನು ನನ್ನ ಸ್ನೇಹಿತ ರವಿ ವರ್ಮಕುಮಾರ್ ಓದುತ್ತಾರೆ. ನನಗೆ ಕನ್ನಡ ಓದಲು ಬರುವುದಿಲ್ಲ ಎಂದರು. ಆನಂತರ ಕನ್ನಡದಲ್ಲಿ ಬರೆದ ಅರ್ಜಿಯನ್ನು ರವಿ ಓದಿದರು. ಪ್ರಾಸಿಕ್ಯೂಷನ್ ಕೊಡುವಾಗ ರಾಜ್ಯಪಾಲರು ಅರ್ಜಿ ಪರಿಶೀಲನೆ ಮಾಡಿಲ್ಲ. ಅದರ ಮೇಲೆ ಶೋಕಾಸ್ ಮಾಡಿಲ್ಲ, ಇದು ರಾಜ್ಯಪಾಲರಿಗೆ ಅಪ್ಲಿಕೇಷನ್ ಆಫ್ ಮೈಂಡ್ ಇಲ್ಲ ಅನ್ನೋದನ್ನು ತೋರಿಸುತ್ತೆ. 31 ಜುಲೈ ದೂರು ಮಾತ್ರ ನಮ್ಮ ಗಮನಕ್ಕೆ ಬಂತು, ಅದಕ್ಕೂ ಮೊದಲು ಬಂದ ದೂರುಗಳು ಯಾಕೆ ನಮ್ಮ ಗಮನಕ್ಕೆ ಬರಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗುತ್ತೆ ಎಂದರು.
ಮಧ್ಯೆ ಪ್ರವೇಶಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ 17-A ಅನುಮತಿ ಕೊಡುವಾಗ ಪ್ರೊಸಿಜರ್ ಫಾಲೋ ಮಾಡಬೇಕಾ ಎಂದು ಪ್ರಶ್ನಿಸಿದರು. ಆಗ ಪ್ರತ್ಯುತ್ತರ ನೀಡಿದ ಅಭಿಷೇಕ್ ಸಿಂಘ್ವಿ ಖಂಡಿತವಾಗಿಬೇಕು. ಇದು ನ್ಯಾಚುರಲ್ ಜೆಸ್ಟಿಸ್ ನಿಯಮವಾಗಿದೆ. ಆರ್ಟಿಕಲ್ 14 ಅಡಿಯಲ್ಲಿ ಅವಕಾಶ ಕೊಡಬೇಕು. ಆಡಳಿತದ ಅತಿ ಉನ್ನತ ಸ್ಥಾನದಲ್ಲಿ ಇರುವವರ ಬಗ್ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಆಗ ನ್ಯಾಚುರಲ್ ಜೆಸ್ಟಿಸ್ ನಿಯಮ ಪಾಲನೆ ಮಾಡಬೇಕು. ಧರ್ಮಪಾಲ್, ಸತ್ಯಪಾಪ್ ಕೇಸ್‌ನಲ್ಲಿ ನೈಸರ್ಗಿಕ ಕಾನೂನು ಪಾಲನೆ ಕಡ್ಡಾಯ ಎಂದು ಹೇಳಿದ್ದಾರೆ. ಮೆನಕಾಗಾಂಧಿ ಕೇಸ್‌ನಲ್ಲೂ ನೈಸರ್ಗಿಕ ಕಾನೂನು ಪಾಲನೆ ಕಡ್ಡಾಯ ಎಂದು ಹೇಳಿದ್ದಾರೆ ಎಂದು ಹಲವು ತೀರ್ಪುಗಳ ನಿದರ್ಶನ ನೀಡಿದರು. ಹೀಗಾಗಿ ಇದನ್ನೂ ನಾವು ಪಾಲನೆ ಮಾಡಬೇಕೆಂದರು.
ಮುಂದುವರಿದು, ಪಿಸಿಆರ್ ಸಲ್ಲಿಕೆ ಬಗ್ಗೆ ಎಲ್ಲೂ ದೂರುದಾರರು ಹೇಳಿಲ್ಲ. ಆಕ್ಷೇಪಣೆ ಪತ್ರದಲ್ಲೂ ಇದನ್ನೂ ಹೇಳಿಲ್ಲ. ಆಗಸ್ಟ್ 8ಕ್ಕೆ ಪಿಸಿಆರ್ ಸಲ್ಲಿಕೆ ಮಾಡಿದ್ದರು, ಜುಲೈ 31ಕ್ಕೆ ಪ್ರಾಸಿಕ್ಯೂಷನ್ ಕೇಳಿದ ಬಗ್ಗೆ ಎಲ್ಲೂ ಹೇಳಿಲ್ಲ. ರಾಜ್ಯಪಾಲರು ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಎಚ್ ಡಿ ಕುಮಾರಸ್ವಾಮಿ, ನಿರಾಣಿ ವಿರುದ್ಧ ತನಿಖೆ ಮುಗಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದರೂ ಕೊಡುತ್ತಿಲ್ಲ. ಆದರೆ ಆದರೆ ಇಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದು ಅಭಿಷೇಕ್ ಸಿಂಘ್ವಿ ಕೌಂಟರ್ ಕೊಟ್ಟರು.
ಈ ಪ್ರಕರಣದಲ್ಲಿ ಒಂದೇ ಒಂದು ಪಾಯಿಂಟ್ ಬಗ್ಗೆ ಸಹ ಕಾನೂನಿನ ಸೂಕ್ಷ್ಮತೆ ಅರಿತಿಲ್ಲ. ಕ್ಯಾಬಿನೆಟ್ ನಿರ್ಣಯ ಪಾಲಿಸಿಲ್ಲ ಎಂದರು. ಈ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡುವಾಗ ಪರಮಾಧಿಕಾರ ಇರುತ್ತೆ ಅಲ್ಲವೇ? ಸ್ವಂತ ನಿರ್ಧಾರ ತೆಗೆದುಕೊಳ್ಳಬಹುದಾಲ್ಲವೇ, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದಲ್ಲವೇ ಎಂದರು. ಇದಕ್ಕೆ ಉತ್ತರಿಸಿದ ಅಭಿಷೇಕ್ ಸಿಂಘ್ವಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಾಗ ಮೆರಿಟ್ಸ್, ದಾಖಲೆ ನೋಡಬೇಕು. ಮನ್ಸೂಕ್ ಲಾಲ್ ವಿಠಲ್ ದಾಸ ಕೇಸ್‌ನಲ್ಲಿ ಇದನ್ನೂ ಹೇಳಿದ್ದಾರೆ ಎಂದು ನಿರ್ದಶನ ನೀಡಿದರು. ಸಂವಿಧಾನ ಪೀಠ ಕೊಟ್ಟ ತೀರ್ಪುಗಳನ್ನು ಇದೇ ವೇಳೆ ಉಲ್ಲೇಖ ಮಾಡಿದರು. ರಾಜ್ಯಪಾಲರು ಕೊಟ್ಟ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬಹುದು ಎಂದರು.
ಅಲ್ಲದೆ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಕೇಸ್ ಅನ್ನು ಪ್ರಸ್ತಾಪ ಮಾಡಿದರು. ಜನಪ್ರತಿನಿಧಿಗಳಿಂದ ಆಯ್ಕೆ ಆದ ಸರ್ಕಾರದ ನಾಯಕನ ವಿರುದ್ಧ ಪ್ರಾಸಿಕ್ಯೂಷನ್ ಕೊಡುವಾಗ ನಿಯಮ ಪಾಲನೆ ಮಾಡಬೇಕು. ಕೊಟ್ಟ ಉತ್ತರವನ್ನು ಟೇಬಲ್ ಕೆಳಗೆ ಹಾಕಿದರೆ ಅದು ನೈಸರ್ಗಿಕ ಕಾನೂನು ಪಾಲನೆ ಆಗಲ್ಲ. ರಾಜ್ಯಪಾಲರ ವಿರುದ್ಧ ಸಹ ಸರ್ಕಾರ ನಿರ್ಣಯ ಮಾಡಬಹುದು. ರಾಜ್ಯಪಾಲರನ್ನು ವಾಪಸ್ ಕಳುಹಿಸಬಹುದು. ಆದರೆ ಅದು ನಮ್ಮ ಆಚರಣೆ ಹಾಗೂ ಕಾನೂನಿಗೆ ಮಾರಕವಾಗಲಿದೆ. ಹೀಗಾಗಿ ಸಂಸ್ಥೆಗಳು ಕೆಲಸ ಮಾಡುವಾಗ ಕಾರ್ಯವ್ಯಾಪ್ತಿ ಬಗ್ಗೆ ಸ್ಪಷ್ಟತೆ ಇರಬೇಕು. ಅದರೊಳಗೆ ಕೆಲಸ ಮಾಡಬೇಕು ಎಂದರು. ಪ್ರತಿ ಒಬ್ಬರಿಗೂ ಆರ್ಟಿಕಲ್ 14, 21 ಕೊಡಲೇಬೇಕು. ಅವರ ಮೇಲೆ ಆರೋಪ ಬಂದಾಗ ಅವರ ನಿಲುವು ಹೇಳಲು ಅವಕಾಶ ಕೊಡಬೇಕು. ಎರಡು ಬಾರಿ ಸಿಎಂ ಕಡೆಯಿಂದ ಉತ್ತರ ಬಂದರೂ ಪರಿಗಣಿಸಲಿಲ್ಲ. 218 ಹಾಗೂ 17- A ಕೆಳಗಡೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲು ಸ್ಪಷ್ಟ ದಾಖಲೆಗಳು ಇರಬೇಕು ಎಂದರು. 55 ಕೋಟಿ ರೂ. ಹಣ ಪಡೆದಿದ್ದಾರೆ ಅಷ್ಟು ನಷ್ಟವಾಗಿದೆ ಎಂದು ಹೇಳಿದ್ದರಲ್ಲ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ, ಅದು ಆಸ್ತಿ ಮೌಲ್ಯದ ಬಗ್ಗೆ ಹೇಳಿರಬೇಕು, ದೂರಿನಲ್ಲಿ ಎಲ್ಲೂ 17A ಬಗ್ಗೆ ಹೇಳಿಲ್ಲ ಎಂದು ಸಿಎಂ ಪರ ವಕೀಲ ಸಿಂಗ್ವಿ ಉತ್ತರಿಸಿದರು.
ಬಳಿಕ ಸಿಂಗ್ವಿ ಹಾಗೂ ಮೆಹ್ತಾ ಶನಿವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಮತ್ತೊಬ್ಬ ಅರ್ಜಿದಾರ ಹೊಸದಾಗಿ ಸೇರ್ಪಡೆ ಆಗಿದ್ದೇನೆ, ಸಿಎಂ ಕೇಸ್‌ನಲ್ಲಿ ನನ್ನನ್ನು ಪರಿಗಣಿಸಿ ಎಂದು ಮನವಿ ಮಾಡಿದರು. ನ್ಯಾಯಮೂರ್ತಿಗಳು ನೀವು ಯಾರು ಎಂದು ಪ್ರಶ್ನಿಸಿದರು. ಆಗ ಕೆಲವರ ಹಕ್ಕಿಗಾಗಿ ಸಮಸ್ಯೆ ಆಗುತ್ತಿದೆ. ಹೀಗಾಗಿ ನಾನು ಸಹ ಅರ್ಜಿದಾರನಾಗಿ ಸೇರ್ಪೆಯಾಗುತ್ತೇನೆ ಎಂದಾಗ ಜಡ್ಜ್ ನಿರಾಕರಿಸಿದರು.
ಅರ್ಧ ಗಂಟೆ ಮೊದಲೆ ಬಂದು ಕುಳಿತಿದ್ದ ಕಾಂಗ್ರೆಸ್ ನಾಯಕರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಸಂಬಂಧ ವಿಚಾರಣೆ ಹಿನ್ನೆಲೆಯಲ್ಲಿ ಸಲೀಂ ಅಹಮದ್ ಸೇರಿ ಕೆಲ ಕಾಂಗ್ರೆಸ್ ನಾಯಕರು ಕೋರ್ಟ್ ಹಾಲ್‌ಗೆ ಅರ್ಧ ಗಂಟೆ ಮೊದಲೆ ಬಂದು ಕುಳಿತಿದ್ದರು. ಅರ್ಜಿದಾರ ಸ್ನೇಹಮಯಿಕೃಷ್ಣ ಹಾಗೂ ಅರ್ಜಿದಾರರ ಪರವಾಗಿ ಲಕ್ಷ್ಮಿಅಯ್ಯಂಗಾರ್, ಪ್ರಭುಲಿಂಗ ನಾವದಗಿ, ರಂಗನಾಥ್ ರೆಡ್ಡಿ ಹಾಜರಾಗಿದ್ದರು. ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಕಾನೂನು ಸಲಹೆಗಾರ ಪೊನ್ನಣ್ಣ ಸಹ ಹಾಜರಿದ್ದರು.
ಕೋರ್ಟ್ ಕಲಾಪ ವೀಕ್ಷಣೆ ಮಾಡಿದ ಸಿಎಂ ಸಿದ್ದರಾಮಯ್ಯ
ಕಾವೇರಿ ನಿವಾಸದಿಂದಲೇ ಕೋರ್ಟ್ ಕಲಾಪವನ್ನು ಯೂಟ್ಯೂಬ್ ಮೂಲಕ ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದರು. ಸಿಂಘ್ವಿ ವಾದವನ್ನು ಆಲಿಸಿದರು. ಸಿಎಂಗೆ ಸಚಿವ ಜಮೀರ್ ಅಹ್ಮದ್ ಖಾನ್ ಸಾಥ್ ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ