ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸಹೋದರನ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಪ್ರಲ್ಹಾದ ಜೋಶಿ ಸಹೋದರ ಗೋಪಾಲ್ ಜೋಶಿ ಎಂಬುವವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಬರೋಬ್ಬರಿ 2 ಕೋಟಿ ರೂ. ವಂಚಿಸಿರುವುದಾಗಿ (Fraud Case) ಎಫ್‌ಐಆರ್ ದಾಖಲಾಗಿದೆ. ಗೋಪಾಲ್ ಜೋಶಿ ಸೇರಿದಂತೆ ಸಹೋದರಿ ವಿಜಯಲಕ್ಷ್ಮಿ ಜೋಶಿ, ಪುತ್ರ ಅಜಯ್ ಜೋಶಿ ವಿರುದ್ಧವೂ ಕೇಸ್ ದಾಖಲಾಗಿದೆ.
ಮಾಜಿ ಶಾಸಕ ದೇವಾನಂದ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಎಂಬುವರಿಂದ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 2018ರಲ್ಲಿ ನಾಗಠಾಣಾ ಕ್ಷೇತ್ರದಿಂದ ಜೆಡಿಎಸ್ (JDS)ದೇವಾನಂದ್ ಚೌಹಾಣ್ ಶಾಸಕರಾಗಿದ್ದರು. 2023ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ದೇವಾನಂದ್ ಚೌಹಾಣ್ ಸೋತಿದ್ದರು. ಬಳಿಕ ಪರಿಚಯಸ್ಥ ಶೇಖರ್ ನಾಯಕ್ ಮೂಲಕ ಗೋಪಾಲ್ ಜೋಶಿ ಪರಿಚಯವಾಗಿದ್ದರು. ಮಾರ್ಚ್ ಮೊದಲ ವಾರ ಹುಬ್ಬಳ್ಳಿಯಲ್ಲಿ ಗೋಪಾಲ್ ಜೋಶಿ ಚೌಹಾಣ್ ದಂಪತಿಯನ್ನು ಭೇಟಿ ಮಾಡಿದ್ದರು. ಈ ವೇಳೆ 2024ರ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ನನ್ನ ತಮ್ಮನಿಗೆ ಕೇಂದ್ರ ಸರ್ಕಾರದಲ್ಲಿ ವರ್ಚಸ್ಸು ಚೆನ್ನಾಗಿದೆ. ಪ್ರಹ್ಲಾದ್ ಜೋಶಿ ಹೇಳಿದಂತೆ ಮೋದಿ, ಅಮಿತ್ ಶಾ ಕೇಳುತ್ತಾರೆ. ಹೀಗಾಗಿ ಬಿಜಾಪುರ ಕ್ಷೇತ್ರದಿಂದ ನಿಮಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿದ್ದರು.
ಗೋಪಾಲ್ ಜೋಶಿ ಟಿಕೆಟ್‌ಗೆ ಬರೋಬ್ಬರಿ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯಲ್ಲಿಯೇ ಡೀಲ್ ನಡೆದಿತ್ತು. ಆದರೆ 5 ಕೋಟಿ ರೂ.ಸಾಧ್ಯವಿಲ್ಲ ಎಂದು ಚೌಹಣ್ ದಂಪತಿ ಹೊರಟು ಹೋಗಿದ್ದರು ಎನ್ನಲಾಗಿದೆ. ಬಳಿಕ ಗೋಪಾಲ್ ಜೋಶಿ ಮತ್ತು ಶೇಖರ್ ಇಬ್ಬರು ಚೌಹಣ್ ದಂಪತಿ ಮನವೊಲಿಸಿದ್ದರು. ಸದ್ಯಕ್ಕೆ 25 ಲಕ್ಷ ರೂ. ಕೊಟ್ಟು ಉಳಿದ ಹಣಕ್ಕೆ ಚೆಕ್ ಕೊಡಿ ಎಂದಿದ್ದರಂತೆ. ಹೀಗಾಗಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಗೋಪಾಲ್ ಜೋಶಿ ಸಹೋದರಿ ವಿಜಯಲಕ್ಷ್ಮಿ ಮನೆಗೆ 25 ಲಕ್ಷ ರೂ. ಹಣವನ್ನು ತಂದು ಸುನೀತಾ ಚೌಹಣ್ ನೀಡಿದ್ದರು. ಆದರೆ ದೇವನಾಂದ್‌ಗೆ ಗೋಪಾಲ್ ಜೋಶಿ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡಿಸಲಿಲ್ಲ.
ಸುನೀತಾ ಚೌಹಾಣ್ ತಮ್ಮ 25 ಲಕ್ಷ ರೂ. ಹಣ ನೀಡುವಂತೆ ಕೇಳಿದ್ದಾರೆ. ಹಣ ಕೇಳಿದರೆ 200 ಕೋಟಿ ರೂ. ಪ್ರಾಜೆಕ್ಟ್ ಹಣ ಬರಬೇಕು ಕೊಡುವುದಾಗಿ ಸಬೂಬು ನೀಡಿದ್ದಾರೆ. ಅಷ್ಟಲ್ಲದೇ ಗೋಪಾಲ್ ಜೋಶಿ, ಸುನೀತಾ ಬಳಿ ಮತ್ತೆ 1.75 ಕೋಟಿ ರೂ. ಹಣ ಕೇಳಿದ್ದರು. ಮುಂದಿನ ಚುನಾವಣೆಗೆ ಸಹಾಯ ಮಾಡುವುದಾಗಿ ಹಣ ಕೇಳಿದ್ದರು. ಈ ಮಾತನ್ನು ನಂಬಿ ಮತ್ತೆ 1.75 ಕೋಟಿ ಹಣವನ್ನು ವಿಜಯಲಕ್ಷ್ಮಿಗೆ ಸುನೀತಾ ಚೌಹಣ್ ನೀಡಿದ್ದರು. ಆದರೆ ಹಣ ಕೇಳಿದಾಗ ಸಬೂಬು ಗೋಪಾಲ್, ವಿಜಯಲಕ್ಷ್ಮಿ ಹೇಳುತ್ತಿದ್ದರು.
ಈ ವೇಳೆ ಗೋಪಾಲ್ ಜೋಶಿ ಪುತ್ರ ಅಜಯ್ ಜೋಶಿ ಹಣ ನಾನು ವಾಪಸ್ ಕೊಡುವುದಾಗಿ ಹೇಳಿದ್ದರು. ಆದರೆ ಯಾರು ಕೂಡ ಸುನೀತಾಗೆ ಹಣ ವಾಪಸ್ ನೀಡಿರಲಿಲ್ಲ. ಕಳೆದ ಆ. 1ರಂದು ವಿಜಯಲಕ್ಷ್ಮಿ ಮನೆ ಬಳಿ ಬಂದಿದ್ದ ಸುನೀತಾ, ಹಣ ಕೇಳಿದಾಗ, ಹಲ್ಲೆ ಮಾಡಿ, ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಪೊಲೀಸರ ಮೊರೆ ಹೋಗಿರುವ ಸುನೀತಾ ಚೌಹಣ್ ಬಸವೇಶ್ವರ ನಗರ ಠಾಣೆಯಲ್ಲಿ ವಂಚನೆ, ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.