ಬೆಂಗಳೂರು: ಆ ಯುವಕರಿಗೆ ಒಂದು ಕ್ಷಣ ಹೋದ ಜೀವ ವಾಪಸ್ ಬಂದಿತ್ತು. ಒಂದು ಸಣ್ಣ ಯಡವಟ್ಟಿನಿಂದ ಇಡೀ ರಾತ್ರಿ ಯುವಕರ ತಲೆ ಕೆಟ್ಟು ಹೋಗಿತ್ತು. ಯಾಕೆಂದರೆ ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಯ ಜೋಶ್‌ನಲ್ಲಿ ಯುವಕರು ಯಡವಟ್ಟು ಮಾಡಿಕೊಂಡಿದ್ದರು. ಗಣೇಶನಿಗಾಗಿ ಸುಮಾರು 65 ಗ್ರಾಂ ಚಿನ್ನದ ಸರ ಹಾಕಿ ಪೂಜೆ ಮಾಡಿದ್ದರು. ಸಂಜೆ ವಿರ್ಸಜನೆ ವೇಳೆ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ಬೆಂಗಳೂರಿನ ಮಾಗಡಿರೋಡ್‌ನ ದಾಸರಹಳ್ಳಿಯ ಬಿ.ಆರ್.ಐ ಕಾಲೋನಿಯಲ್ಲಿ ಘಟನೆ ನಡೆದಿದೆ.
ಏರಿಯಾದಲ್ಲಿ ಮನೆಯಲ್ಲಿಟ್ಟ ಗಣೇಶ ವಿಸರ್ಜನೆಗಾಗಿ ಬಿಬಿಎಂಪಿಯಿಂದ ಟ್ರಕ್ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೋಗಿ ಚಿನ್ನದ ಸರದ ಸಮೇತ ಗಣೇಶ ಮೂರ್ತಿ ವಿಸರ್ಜನೆ ಮಾಡಿದ್ದಾರೆ. ರಾತ್ರಿ ಹತ್ತು ಗಂಟೆಯ ಸುಮಾರಿಗೆ ಚಿನ್ನದ ಸರದ ನೆನಪಾಗಿದೆ. ಎದ್ದನೋ ಬಿದ್ದನೋ ಓಡಿದ ಯುವಕರು ತಕ್ಷಣ ಟ್ರಕ್‌ನ ಚಾಲಕ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.
ಈ ವೇಳೆ ಟ್ರಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ, ಗಣೇಶ ಮೂರ್ತಿ ಕರಗಿದ್ದ ಮಣ್ಣಲ್ಲಿ ಚಿನ್ನದ ಸರಕ್ಕೆ ಹುಡುಕಾಟ ನಡೆಸಿದ್ದಾರೆ. ರಾತ್ರಿಯೆಲ್ಲ ಹುಡುಕಾಡಿದ ಬಳಿಕ ಬೆಳಗಿನ ಜಾವ 65 ಗ್ರಾಂ ಚಿನ್ನದ ಸರ ಸಿಕ್ಕಿದೆ. ಚಿನ್ನದ ಸರ ಕಂಡು ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ