ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪಿಎಫ್‌ಐ ಕಾರ್ಯಕರ್ತ ತುಫೈಲ್‌ನನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ನಡೆದ ರೋಚಕ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಹತ್ಯೆ ಪ್ರಕರಣದ ಮೂವರು ಆರೋಪಿಗಳು ಇನ್ನೂ ತಲಾಶೆಯಾಗಬೇಕಿದೆ.
ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ತುಫೈಲ್ ಸೇರಿದಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗೆ ಎನ್‌ಐಎ ಬಹುಮಾನ ಘೋಷಿಸಿತ್ತು. ತುಫೈಲ್ ಪತ್ತೆಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಮಹಮ್ಹದ್ ಮುಸ್ತಾಫ, ಉಮ್ಮರ್ ಫಾರೂಖ್, ಅಬೂಬಕರ್ ಸಿದ್ದಿಕ್ ತಲೆಮರೆಸಿಕೊಂಡಿರುವ ಇನ್ನು ಮೂವರು ಆರೋಪಿಗಳಾಗಿದ್ದಾರೆ. ಇವರ ಮೇಲೂ ತಲೆಗೂ ಬಹುಮಾನ ಘೋಷಿಸಲಾಗಿದೆ.
ಮಡಿಕೇರಿ ಮೂಲದ ತುಫೈಲ್ ಅಮೃತಹಳ್ಳಿಯ ದಾಸರಹಳ್ಳಿಯ ಭುವನೇಶ್ವರಿ ನಗರದಲ್ಲಿ ವಾಸವಿದ್ದ. ಸ್ಥಳೀಯರ ಮಾಹಿತಿ ಪ್ರಕಾರ ಕಳೆದೆರಡು ತಿಂಗಳಿನಿಂದ ಈತ ಇಲ್ಲಿ ವಾಸವಾಗಿದ್ದ. ಅಪಾರ್ಟ್‌ಮೆಂಟಿನ ಮೊದಲ ಮಹಡಿಯಲ್ಲಿ ವಾಸವಿದ್ದ. ಅಕ್ಕಪಕ್ಕದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ತುಫೈಲ್ ಅಪರೂಪಕ್ಕೆ ಮಾತ್ರ ಮನೆಯಿಂದ ಹೊರಗೆ ಬರುತ್ತಿದ್ದ. ಅಕ್ಕಪಕ್ಕದಲ್ಲಿ ಯಾರಿಗೂ ಅನುಮಾನ ಬಾರದಂತೆ ಗೌಪ್ಯ ಕಾಪಾಡಿಕೊಂಡಿದ್ದ. ನಂಜುಂಡಪ್ಪ ಎಂಬುವವರಿಗೆ ಸೇರಿದ ಅಪಾರ್ಟ್‌ಮೆಂಟ್ ಇದಾಗಿದ್ದು, ಮಹಮ್ಮದ್ ಶಫಿ ಎಂಬವನಿಗೆ ಮನೆ ಬಾಡಿಗೆ ನೀಡಲಾಗಿತ್ತು. ಸೋಮವಾರಪೇಟೆ ನಿವಾಸಿಯಾದ ಮಹಮದ್ ಶಫಿ ಇಲ್ಲಿ ಎರಡೂವರೆ ವರ್ಷದಿಂದ ತಂಗಿದ್ದಾನೆ.
ಈತನನ್ನು ಬಂಧಿಸಲು ಬಂದಿದ್ದ ಎನ್‌ಐಎ ಅಧಿಕಾರಿಗಳು ಪ್ಲಂಬರ್‌ಗಳಂತೆ ಆಟೋದಲ್ಲಿ ಬಂದಿದ್ದರು. ಮೊದಲಿಗೆ ಇಬ್ಬರು ಅಧಿಕಾರಿಗಳು ಪೈಪ್ ರಿಂಚ್ ತೆಗೆದುಕೊಂಡು ತುಫೈಲ್ ಕೊಠಡಿ ಪ್ರವೇಶಿದ್ದರು. ಈ ವೇಳೆ ಮನೆಯಲ್ಲಿ ಮಟನ್ ಕಟ್ ಮಾಡುತ್ತಿದ್ದ ತುಫೈಲ್ ಅಧಿಕಾರಿಗಳನ್ನು ನೋಡಿ ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ. ತಕ್ಷಣ ಎಂಟ್ರಿಯಾದ ಎನ್‌ಐಎ ಪೂರ್ತಿ ತಂಡ, ಆರೋಪಿಯನ್ನು ಹೆಡೆಮುರಿ ಕಟ್ಟಿತ್ತು. ಸುಮಾರು ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಇದನ್ನೂ ಓದಿ: Praveen Nettaru murder: ತಲೆ ಮರೆಸಿಕೊಂಡಿದ್ದ ಪಿಎಫ್‌ಐ ಮುಖಂಡ, ಪ್ರವೀಣ್ ಕೊಲೆ ಆರೋಪಿ ಬೆಂಗಳೂರಿನಲ್ಲಿ ಬಂಧನ
ಇದೀಗ ತುಫೈಲ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇನ್ನುಳಿದ ಮೂವರಿಗಾಗಿ ಶೋಧ ಮುಂದುವರಿಸಲಾಗಿದೆ. ಮಹಮ್ಮದ್ ಮುಸ್ತಾಫನ ಪತ್ತೆಗಾಗಿ 5 ಲಕ್ಷ, ಉಮ್ಮರ್ ಫಾರೂಖ್‌ಗೆ 2 ಲಕ್ಷ, ಅಬೂಬಕರ್ ಸಿದ್ದಿಕ್‌ಗೆ 2 ಲಕ್ಷ ಘೋಷಣೆ ಮಾಡಲಾಗಿದೆ. ನಾಲ್ವರೂ ನಿಷೇಧಿತ ಸಂಘಟನೆ ಪಿಎಫ್‌ಐನ ಸಕ್ರಿಯ ಕಾರ್ಯಕರ್ತರಾಗಿದ್ದಾರೆ.
ಇದನ್ನೂ ಓದಿ: Praveen Nettaru: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; 20 ಆರೋಪಿಗಳ ವಿರುದ್ಧ ಎನ್‌ಐಎ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಏನಿದೆ?