ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಿರಾಸಕ್ತಿ ಮುಂದುವರಿದಿದ್ದು, ಜಮೀನು ವ್ಯಾಜ್ಯ ವಿಚಾರದಲ್ಲಿ ಲಂಚ ಪಡೆಯುತ್ತಿದ್ದಾಗ ಆಪ್ತ ಸಹಾಯಕ ಸಿಕ್ಕಿಬಿದ್ದ ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ಗೆ ಡೀಫಾಲ್ಟ್ ಜಾಮೀನು ಸಿಕ್ಕಿ ಹೊರಬಂದಿದ್ದಾರೆ.
ಬೆಂಗಳೂರಿನ ಬೇಗೂರಿನ ನಿವಾಸಿ ಅಂಜುಮ್ ಪಾಷಾ ಎಂಬವರು ತಮ್ಮ ಜಮೀನು ವ್ಯಾಜ್ಯವನ್ನು ಬಗೆಹರಿಸಿಕೊಡುವಂತೆ 2020-21ರಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದರು. ಈ ಸಮಸ್ಯೆ ಪರಿಹಾರಕ್ಕಾಗಿ 15 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು. ನಂತರ 5 ಲಕ್ಷ ರೂ. ಲಂಚ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಜಿಲ್ಲಾಧಿಕಾರಿ ಕಚೇರಿಯ ಮಹೇಶ್ ಎಂಬಾತನನ್ನು ಮೇ 21ರಂದು ಬಂಧಿಸಿದ್ದರು.
ಜಿಲ್ಲಾಧಿಕಾರಿಯವರ ಆಪ್ತ ಸಹಾಯಕನಾಗಿದ್ದ ಮಹೇಶ್ ಹಾಗೂ ಚೇತನ್ ಕುಮಾರ್ ಅಲಿಯಾಸ್ ಚಂದು ಎಂಬಾತನನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಅಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ಸಮಯದಲ್ಲಿ, ಆಗಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರೇ ಇಬ್ಬರು ಆರೋಪಿಗಳ ಜತೆ ಶಾಮೀಲಾಗಿ ಪರೋಕ್ಷವಾಗಿ ಲಂಚ ಸ್ವೀಕರಿಸುತ್ತಿದ್ದರು ಎಂದು ಎಸಿಬಿ ಅಧಿಕಾರಿಗಳಿಗೆ ತಿಳಿದುಬಂದಿತ್ತು.
ಪ್ರರಕಣದಲ್ಲಿ ಮಂಜುನಾಥ್ ಹೆಸರು ಕೇಳಿಬಂದಿದ್ದರೂ ವಿಚಾರಣೆ ನಡೆದಿರಲಿಲ್ಲ. ಈ ಕುರಿತು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿತ್ತು. ನಂತರ ಮೂರು ಬಾರಿ ವಿಚಾರಣೆ ನಡೆಸಿದ್ದ ಎಸಿಬಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದರು. ಎಸಿಬಿ ವಿಚಾರಣೆ ನಡೆಸುತ್ತಿದ್ದಂತೆಯೇ ಮಂಜುನಾಥ್ ಅವರನ್ನು ಇಂಟ್ರಿಗೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಿತ್ತು.
ಮಂಜುನಾಥ್ ಪಾತ್ರ ಇದೆ ಎಂಬುದು ತಿಳಿದಿದ್ದರೂ ಹಿರಿಯ ಐಪಿಎಸ್ ಅಧಿಕಾರಿಗಳ ಕೃಪಾಕಟಾಕ್ಷದಿಂದಾಗಿ ಮಂಜುನಾಥ್ ಬಚಾವಾಗಿದ್ದಾರೆ ಎನ್ನಲಾಗುತ್ತಿತ್ತು. ಕೊನೆಗೆ ನ್ಯಾಯಾಲಯ ಚಾಟಿ ಬೀಸಿದ್ದರಿಂದಾಗಿ ಬೇರೆ ವಿಧಿಯಿಲ್ಲದೆ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ ಜುಲೈ 4 ರಂದು ಬಂಧಿಸಲಾಗಿತ್ತು. ಬಂಧನದ ನಂತರದಲ್ಲಿ ಮಂಜುನಾಥ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿತ್ತು.
ಅರವತ್ತು ದಿನವಾದರೂ ಆರೋಪಪಟ್ಟಿ ಸಲ್ಲಿಸಿಲ್ಲ
ಪ್ರಕರಣದಲ್ಲಿ ಮಂಜುನಾಥ್ ಅವರನ್ನು ಮೂರನೇ ಆರೋಪಿಯ್ನನಾಗಿಸಲಾಗಿತ್ತು. ಕಾಯ್ದೆಯನ್ವಯ, ಆರೋಪಿಯನ್ನು ಬಂಧಿಸಿದ ಅರವತ್ತು ದಿನಗಳೊಳಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಬೇಕು. ನಂತರವಷ್ಟೇ ಆರೋಪಿಯನ್ನು ವಶದಲ್ಲಿರಿಸಿಕೊಂಡು ವಿಚಾರಣೆ ನಡೆಸಲು ಅವಕಾಶವಿರುತ್ತದೆ.
ಆದರೆ ಆರಂಭದ ದಿನಗಳಲ್ಲಿ ಎಸಿಬಿ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಈ ಹಿಂದಿನಿಂದಲೂ ಪ್ರಕರಣದಲ್ಲಿ ಆಲಸ್ಯವನ್ನು ಪ್ರದರ್ಶಿಸಿದ್ದ ಎಸಿಬಿ, ನ್ಯಾಯಾಲಯದ ಚಾಟಿ ನಂತರವಷ್ಟೇ ಚುರುಕುಗೊಂಡಿತ್ತು. ಬಂಧನದ ನಂತರವೂ ಸುಮಾರು ಒಂದು ತಿಂಗಳು ಯಾವುದೇ ಕ್ರಮವಿಲ್ಲದೆ ಇದ್ದ ಎಸಿಬಿಯನ್ನು ಆಗಸ್ಟ್ 11ರಂದು ಹೈಕೋರ್ಟ್ ರದ್ದುಪಡಿಸಿತು.
ಎಸಿಬಿ ರದ್ದುಪಡಿಸಿದ ನಂತರ ಎಲ್ಲ ಪ್ರಕರಣವನ್ನೂ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ ರಾಜ್ಯ ಸರ್ಕಾರ ಈವರೆಗೂ ಅಧಿಕೃತ ಆದೇಶ ಹೊರಡಿಸಿ ಎಸಿಬಿ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿಲ್ಲ. ಇದರಿಂದಾಗಿ ಜಿಲ್ಲಾಧಿಕಾರಿ ಕಚೇರಿ ಲಂಚ ಪ್ರಕರಣದಲ್ಲೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ.
ಡೀಫಾಲ್ಟ್ ಬೇಲ್ ಮಂಜೂರು
ಪ್ರಕರಣದಲ್ಲಿ ಆರೋಪಿಯಾಗಿರುವ ತಮಗೆ ಜಾಮೀನು ನೀಡಬೇಕು ಎಂದು ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ಆದರೆ ಈ ಹಿಂದೆ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದೀಗ ಶನಿವಾರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಅರವತ್ತು ದಿನವಾದರೂ ಎಸಿಬಿ ಆರೋಪಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಸ್ವಯಂಚಾಲಿತವಾಗಿ (ಡೀಫಾಲ್ಟ್) ಷರತ್ತುಬದ್ಧ ಜಾಮೀನು ನೀಡಿದೆ. ಇದರಿಂದಾಗಿ, ಯಾವುದೇ ಆರೋಪಪಟ್ಟಿಯೇ ಇಲ್ಲದೆ, ಅಮಾನತಾಗಿರುವ ಐಎಎಸ್ ಅಧಿಕಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ | ಭ್ರಷ್ಟಾಚಾರ ಪ್ರಕರಣದ ಆರೋಪಿಗಳಾದ ಐಪಿಎಸ್ ಅಮೃತ್ ಪಾಲ್ – ಐಎಎಸ್ ಜೆ. ಮಂಜುನಾಥ್ ಸಸ್ಪೆಂಡ್