Site icon Vistara News

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

karnataka Rain Effected

ಬೆಂಗಗಳೂರು/ಬೆಳಗಾವಿ: ತಡರಾತ್ರಿ ಸುರಿದ ಮಳೆಯು (Karnataka Rain) ಅವಾಂತರವನ್ನೇ ಸೃಷ್ಟಿಸಿ ಮಾಡಿದೆ. ಬೆಂಗಳೂರಿನಲ್ಲಿ ರಾತ್ರಿ ಪೂರ್ತಿ ಅಬ್ಬರಿಸಿದ ಮಳೆಗೆ (Rain News) ಮರಗಳು ಧರೆಗುರುಳಿದ್ದವು. ನೃಪತುಂಗದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎದುರಿಗೆ ಮರದ ಕೊಂಬೆ ನೆಲಕ್ಕೆ ಉರುಳಿದ ಪರಿಣಾಮ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಬುಕ್‌ಫೀಲ್ಡ್‌ನಲ್ಲಿ ಮರ ಬಿದ್ದು ಕಾರೊಂದು ಜಖಂಗೊಂಡಿತ್ತು. ಚಾಮರಾಜಪೇಟೆಯ ಗುಡ್ಡದಹಳ್ಳಿಯಲ್ಲಿ ಮನೆಗಳಿಗೆ ಕೆಸರುಮಯ ನೀರು ನುಗ್ಗಿದ್ದರಿಂದ ಹೊರಹಾಕಲು ಜನರು ತೊಂದರೆ ಅನುಭವಿಸಿದರು.

ಮೈಸೂರಿನಲ್ಲಿ ಕುಸಿದು ಬಿದ್ದ ಮನೆ

ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಮೈಸೂರಿನ ಹುಣಸೂರು ತಾಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ಭಾಗ್ಯಮ್ಮ ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಮನೆ ಕುಸಿದು ಬಿದ್ದಿದ್ದು, ವಾಸ ಮಾಡಲು ಮನೆ ಇಲ್ಲದೆ ಭಾಗ್ಯಮ್ಮ ಕಣ್ಣೀರು ಹಾಕಿದರು. ಮನೆಯಲ್ಲಿ ಸುಮಾರು 6 ತಿಂಗಳು ಸಣ್ಣ ಮಗುವಿದ್ದು ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ ಮನೆ ಕುಸಿದು ಬಿದ್ದು ಕುಟುಂಬವು ಕಂಗಲಾಗಿದೆ. ಮನೆಯಲ್ಲಿದ್ದ ಸಾಮಾನುಗಳು ನಾಶವಾಗಿವೆ. ನಮಗೆ ಆದಷ್ಟು ಬೇಗ ಸರ್ಕಾರ ಪರಿಹಾರ ಮಾಡಿಕೊಡಬೇಕು ಎಂದು ಭಾಗ್ಯಮ್ಮ ಮನವಿ ಮಾಡಿದರು.

ವಿಜಯನಗರದಲ್ಲಿ ಮಳೆಗೆ ಬೆಳೆ ಹಾನಿ

ಕಳೆದ ರಾತ್ರಿ ಮಳೆ ಜೆತಗೆ ಬಿರುಗಾಳಿ ಬೀಸಿದ ಹಿನ್ನೆಲೆಯಲ್ಲಿ ಬಾಳೆ, ಭತ್ತ, ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ. ವಿಜಯನಗರದ ಹುರುಳಿಹಾಳ ಗ್ರಾಮದಲ್ಲಿ ಗಾಳಿ ಪ್ರಮಾಣ ಹೆಚ್ಚಿದರಿಂದ ವೀಳ್ಯದೆಲೆ ತೋಟಕ್ಕೆ ಹಾನಿಯಾಗಿದೆ. ಕಾನಾಹೊಸಹಳ್ಳಿ ಹೋಬಳಿಯ ಎಕ್ಕೆಗೊಂದಿ ಗ್ರಾಮದಲ್ಲಿ ರೇಷ್ಮೆ ಸಾಗಾಣೆ ಮನೆಗೆ ಹಾನಿಯಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿ ಗುಡುಗು, ಮಿಂಚು ಸಿಡಿಲಿನ ಆರ್ಭಟ ಮಧ್ಯೆ ಸಾಧಾರಣ ಮಳೆ ವರದಿಯಾಗಿದೆ.

ಧರೆಗುರುಳಿದ ಮರಗಳು

ಚಿಕ್ಕೋಡಿ ಗಡಿ ತಾಲೂಕು ನಿಪ್ಪಾಣಿಯಲ್ಲಿ ರಣ ಗಾಳಿ-ಮಳೆಗೆ ಸಿಕ್ಕಿ ನಲುಗಿದೆ. ನಿಪ್ಪಾಣಿ ನಗರದ ವಿವಿಧೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ. ನಿಪ್ಪಾಣಿಯ ಭೀಮನಗರ,ವಿದ್ಯಾನಗರ,ಅಂಬೇಡ್ಕರ್ ನಗರದ ಹತ್ತಿರ ಮರಗಳು ಬಿದ್ದಿವೆ. ಮುನ್ಸಿಪಲ್ ಹೈಸ್ಕೂಲ್,ಅಬಕಾರಿ ಫೀಸ್ ಸೇರಿದಂತೆ ವಿವಿಧೆಡೆ ಹಾನಿಯಾಗಿದೆ. ಭಾರಿ ಗಾಳಿಗೆ ವಿದ್ಯುತ್ ಕಂಬಗಳು ವಾಲಿದರೆ, ಮನೆಯ ಚಾವಣೆ ಹಾರಿ ಹೋಗಿವೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ನಿಪ್ಪಾಣಿ ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸ್ ವಾಹನ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಹಾನಿಯಾದ ಪ್ರದೇಶಗಳಿಗೆ ಜಗದೀಶ ಹುಲಗೆಜ್ಜಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ನಿಪ್ಪಾಣಿ ನಗರ ತತ್ತರಿಸಿದೆ. ಭಾರಿ ಮಳೆಗೆ 20 ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ ಹೋಗಿದೆ. ಪತ್ರಾಸ್ ಶೇಡ್ ಹಾಗೂ ಹಂಚಿನ ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಭಾರಿ ಮಳೆ ಗಾಳಿಗೆ 30 ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಮರಗಳ ಜತೆಗೆ ನಗರದಲ್ಲಿ 50 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದು ಹಾನಿಯಾಗಿವೆ. ಮರಗಳು ಬಿದ್ದು 10 ಕ್ಕೂ ಹೆಚ್ಚು ವಾಹನಗಳು ಸಹ ಜಖಂಗೊಂಡಿವೆ. ಕಳೆದ ರಾತ್ರಿಯಿಂದ ನಿಪ್ಪಾಣಿ ನಗರದಲ್ಲಿ ವಿದ್ಯುತ್ ಕಟ್ ಆಗಿದೆ. ನಿಪ್ಪಾಣಿ ನಗರಸಭೆಯಿಂದ ಮರಗಳ ತೆರುವು ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿಪ್ಪಾಣಿ ನಗರಸಭೆ ಅಧಿಕಾರಿಗಳು ಹಾನಿಯಾದ ಮನೆಗಳ ಸರ್ವೆಗೆ ಮುಂದಾಗಿದ್ದಾರೆ. ನಿಪ್ಪಾಣಿ ಪಟ್ಟಣದ ಅಂಬೇಡ್ಕರ್ ಗಲ್ಲಿಗೆ ಭೀಮ ನಗರ ಪ್ರದೇಶದಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; 6ನೇ ಆರೋಪಿಯ ಬಂಧನ

ಆನೇಕಲ್‌ನಲ್ಲಿ ಮನೆಗೆ ನುಗ್ಗಿದ ಚರಂಡಿ ನೀರು

ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಮನೆಗಳಿಗೆ ಹಾಗೂ ಬಡಾವಣೆಗಳಿಗೆ ಕೊಳಚೆ ನೀರು ನುಗ್ಗಿದೆ. ಚರಂಡಿ-ರಾಜಕಾಲುವೆ ವ್ಯವಸ್ಥೆ ಸರಿ ಇಲ್ಲದೆ ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ನೀರಿನಲ್ಲಿ ನಿವಾಸಿಗಳು ಕಾಲ ಕಳೆದಿದ್ದಾರೆ. ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತದೆ. ಮನೆಯೊಳಗೆ ನುಗ್ಗಿದ ಕೊಳಚೆ ನೀರನ್ನು ಸ್ವಚ್ಛ ಮಾಡುವುದರಲ್ಲಿ ದಿನದೂಡುತ್ತಿದ್ದಾರೆ.

ವಿಜಯನಗರದಲ್ಲಿ ವರುಣನ ಕೃಪೆಗಾಗಿ ಜಪ – ತಪ

ಜಪ – ತಪ ಮಾಡಿದ ಕೇವಲ ಎಂಟು ದಿನದಲ್ಲಿ ವರುಣನ ಆಗಮನವಾಗಿದೆ. ಕಳೆದ ಒಂದು ವಾರದಲ್ಲಿ ಎರಡು ಬಾರಿ ವಿಜಯನಗರದ ಹೊಸಪೇಟೆ ತಾಲೂಕಿನಲ್ಲಿ ಮಳೆ ಸುರಿದಿದೆ. ಭೀಕರ ಬರಗಾಲ, ಬಿಸಿಲಿನ ಧಗೆಯಿಂದ ಜನರು ಆಂಜನೇಯನ ಮೊರೆ ಹೋಗಿದ್ದರು. ಮಳೆಗಾಗಿ ನೂರಾರು ವರ್ಷ ಹಳೆಯದಾದ ಐತಿಹಾಸಿಕ ಹಿನ್ನೆಲೆವೊಳ್ಳ ಆಂಜನೇಯನಿಗೆ ಮಳೆಗಾಗಿ ನಿತ್ಯ ಪೂಜೆ, ಭಜನೆ ಮಾಡುತ್ತಿದ್ದರು. ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರೋ ಐತಿಹಾಸಿಕ ಆಂಜನೇಯ ದೇಗುಲವನ್ನು ವಿಜಯನಗರ ಅರಸರ ಕಾಲದಿಂದಲೂ ವಿಶೇಷ ಸಲ್ಲಿಕೆ ಮಾಡುತ್ತಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಿಂತ ನೀರು

ಧಾರಾಕಾರ ಮಳೆಗೆ ಹಳೇ ಮೈ-ಬೆಂ ಹೆದ್ದಾರಿಯಲ್ಲಿ ಜಲಾವೃತಗೊಂಡಿತ್ತು. ಶ್ರೀರಂಗಪಟ್ಟಣದ ಅಗ್ನಿಶಾಮಕ ದಳದ ಎದುರಿನ ಮೈ- ಬೆಂ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಮೂರು ಅಡಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ಹೆದ್ದಾರಿಯಲ್ಲಿ ತೆರಳಲಾಗದೆ ಬೈಕ್ ಸವಾರರು ಬದಲಿ ರಸ್ತೆಯಲ್ಲಿ ಸಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version