Site icon Vistara News

MLA Muniratna: ಶಾಸಕ ಮುನಿರತ್ನಗೆ ಬೇಲ್ ಸಿಗುತ್ತಾ ಅಥವಾ ಜೈಲೇ ಗಟ್ಟಿಯಾಗುತ್ತಾ? ನಾಳೆಗೆ ಜಾಮೀನು ಅರ್ಜಿ ವಿಚಾರಣೆ

Court sends Mla Munirathna to judicial custody

ಬೆಂಗಳೂರು: ಜಾತಿನಿಂದನೆ ಹಾಗೂ ಜೀವ ಬೆದರಿಕೆ ಆರೋಪದಲ್ಲಿ ಸಿಲುಕಿರುವ ಮಾಜಿ ಸಚಿವ ಕಂ ಶಾಸಕ ಮುನಿರತ್ನ (MLA Muniratna) ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ. ಮಂಗಳವಾರ ಮುನಿರತ್ನ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಧೀಶ ಸಂತೋಷ್ ಗಜಾನನ ಭಟ್‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜುಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪದಡಿ ಬಂಧಿತನಾಗಿದ್ದ ಮಾಜಿ ಸಚಿವ ಮುನಿರತ್ನ ಈಗ ಜೈಲು ಪಾಲಾಗಿದ್ದಾರೆ. ಶಾಸಕ ಮುನಿರತ್ನ ವಿರುದ್ಧ ಜಾತಿನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು.‌ ಪ್ರಕರಣ ಸಂಬಂಧ ಕಳೆದ ಎರಡು ದಿನಗಳಿಂದ ಮುನಿರತ್ನ ಅವರನ್ನು ವಿಚಾರಣೆ ನಡೆಸಿದ್ದ ಪೊಲೀಸರು ಮಂಗಳವಾರ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಹಾಜರು ಪಡಿಸಿದ್ದರು.

ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮುನಿರತ್ನ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು. ಮುನಿರತ್ನ ಪರ ವಕೀಲರು ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಮಧ್ಯಾಹ್ನ ಮೂರು ಗಂಟೆಗೆ ಕೋರ್ಟ್ ಅರ್ಜಿ ವಿಚಾರಣೆಯನ್ನು ನಡೆಸಿತು. ಈ ವೇಳೆ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಹಾಜರಾಗಿ ವಾದ ಮಂಡಿಸಿದರು.

ಶಾಸಕ ಮುನಿರತ್ನ ಶನಿವಾರ ತಿರುಪತಿಗೆ ಹೊರಟಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಕೂಡಲೇ ತರಾತುರಿಯಲ್ಲಿ ಬಂಧನ ಮಾಡಲಾಗಿದೆ. ಆರೋಪಿಗೆ 41ಎ ಅಡಿಯಲ್ಲಿ ನೋಟಿಸ್ ನೀಡಬೇಕಿತ್ತು. ಆದರೆ ಪ್ರಕರಣ ದಾಖಲಾದ ನಂತರ ನೋಟಿಸ್ ಕೂಡ ನೀಡದೆ ಬಂಧನ ಮಾಡಲಾಗಿದೆ. ಆದ್ದರಿಂದ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು.

ಇದನ್ನೂ ಓದಿ: Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬುಧವಾರ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ

ಬಳಿಕ ಸರ್ಕಾರದ ಪರ ವಕೀಲ ಪ್ರದೀಪ್ ಅವರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದರು. ಎರಡು ಕಡೆ ವಾದ- ಪ್ರತಿವಾದ ಆಲಿಸಿದ ಕೋರ್ಟ್ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು. ಕೋರ್ಟ್ ಆದೇಶ ಪಡೆದ ಪೊಲೀಸರು ಮುನಿರತ್ನರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು‌. ಇದಕ್ಕೂ ಮೊದಲು ಶಾಸಕ ಮುನಿರತ್ನರನ್ನು ಪೊಲೀಸರು ಕೋರ್ಟ್‌ನಿಂದ ನೇರವಾಗಿ ಬೌರಿಂಗ್ ಆಸ್ಪತ್ರೆಗೆ ಕರೆತಂದರು. ಜನರಲ್ ಚೆಕಪ್ ಮಾಡಿಸಲು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಂದ ಪರಪ್ಪನ ಅಗ್ರಹಾರಕ್ಕೆ ಕರೆದುಕೊಂಡು ಹೋದರು. ಜಾತಿ ನಿಂದನೆ ಮತ್ತು ಬೆದರಿಕೆ ಆಡಿಯೋದಿಂದ ಶಾಸಕ ಮುನಿರತ್ನ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ಸದ್ಯ ನಾಳೆ ಬುಧವಾರ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಬೇಲ್ ಸಿಗುತ್ತಾ, ಅಥವಾ ಜೈಲೇ ಗಟ್ಟಿ ಆಗುತ್ತಾ ಕಾದು ನೋಡಬೇಕಿದೆ.

ಕೇಳದೆ ನೋಡದೆ ಕಾಮೆಂಟ್‌ ಮಾಡಲ್ಲ- ಸುಮಲತಾ

ಮುನಿರತ್ನ ಆಡಿಯೋ ವಿಚಾರವಾಗಿ ನಟಿ ಸುಮಲತಾ ಪ್ರತಿಕ್ರಿಯಿಸಿದರು. ನಾನು ಕೇಳದೆ, ನೋಡದೆ ಇರುವುದರ ಬಗ್ಗೆ ಕಾಮೆಂಟ್‌ ಮಾಡುವುದು ಸರಿಯಲ್ಲ.‌ ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಮಾತಾಡುತ್ತೇನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version