ಬೆಂಗಳೂರು: ಶಾಸಕ ಮುನಿರತ್ನ (MLA Muniratna) ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಮುಂದುವರಿದಿದೆ. ಸುದೀರ್ಘವಾಗಿ ಸಂತ್ರಸ್ತೆಯಿಂದ ಹೇಳಿಕೆ ದಾಖಲಿಸಿದ್ದು, ಈಗಾಗಲೇ ಮೊಬೈಲ್ ಸೀಜ್ ಮಾಡಿ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ಅಧಿಕಾರಿಗಳಿಗೆ ಕೆಲ ವಿಡಿಯೊಗಳು ಮತ್ತು ಕೆಲ ದಾಖಲೆಗಳನ್ನು ಸಂತ್ರಸ್ತೆ ನೀಡಿದ್ದಾರೆ.
ಈ ಹಿಂದೆ ಅತ್ಯಾಚಾರ ಆರೋಪದ ಬೆನ್ನಲ್ಲೇ ಕಗ್ಗಲೀಪುರ ಪೊಲೀಸರು ಈ ಹಿಂದೆಯೇ ಸಂತ್ರಸ್ತೆಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಇದೀಗ ಗುರುವಾರ ಜೆಪಿ ಪಾರ್ಕ್‌ನ ಗೋಡೌನ್, ರಾಮಯ್ಯ ಸಮಾಧಿ ಬಳಿ ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರ್ ಮಾಡಿದರು. ಹನಿಟ್ರ್ಯಾಪ್ ಮಾಡಿದ್ದ ಜೆಪಿ ಪಾರ್ಕ್ ಬಳಿಯ ಬಾಡಿಗೆ ಮನೆಯೊಂದರಲ್ಲಿ ಸಂತ್ರಸ್ತೆ ಕರೆತಂದು ಮಹಜರ್ ನಡೆಸಿದರು.
ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ಮುನಿರತ್ನ ಸಂಬಂಧಿತ ಕೆಲ ದಾಖಲೆಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಜತೆಗೆ ಮುನಿರತ್ನ ಆಪ್ತ ಸಹಾಯಕನ ವಿಚಾರಣೆ ನಡೆಸಲಾಗಿದ್ದು, ಸಂತ್ರಸ್ತೆ ಪರಿಚಿತೆ ಈ ರೀತಿ ಯಾಕೆ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಆರು ಮಂದಿ ನಾಪತ್ತೆ
ಶಾಸಕ ಮುನಿರತ್ನ ನಾಯ್ಡು ವಿರುದ್ಧ ಕಳೆದ ಸೆಪ್ಟೆಂಬರ್ 18ರಂದು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಒಟ್ಟು ಏಳು ಜನರ ಆರೋಪಿಗಳ ಹೆಸರು ದಾಖಲಾಗಿದೆ. ಸದ್ಯ ಮುನಿರತ್ನರನ್ನು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಎಸ್‌ಐಟಿ ಮುಂದೆ ಮುನಿರತ್ನ ನಂಗೇನು ಗೊತ್ತಿಲ್ಲ ಎಂದಿದ್ದಾರೆ. ಇನ್ನು ಇದುವರೆಗೂ ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಾಗಿ 15 ದಿನ ಕಳೆದರೂ ಆರು ಜನ ಆರೋಪಿಗಳು ಪತ್ತೆಯಾಗಿದ್ದಾರೆ. ಮುನಿರತ್ನ ನಾಯ್ಡು ಸೇರಿದಂತೆ ವಿಜಯ್ ಕುಮಾರ್, ಸುಧಾಕರ, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಮತ್ತು ಲೋಕಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ನಾಪತ್ತೆಯಾಗಿರುವ ಆರು ಜನ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮುನಿರತ್ನರಿಗೆ ಡಿಎನ್‌ಎ ಟೆಸ್ಟ್
ಎಸ್‌ಐಟಿ ಅಧಿಕಾರಿಗಳು ಗುರುವಾರ 42ನೇ ಎಸಿಎಂಎಂ ಕೋರ್ಟ್‌ಗೆ ಶಾಸಕ ಮುನಿರತ್ನರನ್ನು ಹಾಜರು ಪಡಿಸಿದರು. ಇದೆ ವೇಳೆ ಎಸ್‌ಐಟಿ ಅಧಿಕಾರಿಗಳು ಡಿಎನ್‌ಎ ಟೆಸ್ಟ್ ಮಾಡಿಸಲು ಅನುಮತಿ ಕೇಳಿದರು. ಈ ವೇಳೆ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿ ನ್ಯಾಯಾಧೀಶರು ಆದೇಶಿಸಿದರು. ಇದಕ್ಕೂ ಮೊದಲು ಪೊಲೀಸರಿಂದ ಏನಾದರೂ ಸಮಸ್ಯೆ ಆಯಿತಾ ಎಂದು ಮುನಿರತ್ನರನ್ನು ನ್ಯಾಯಾಧೀಶರು ಕೇಳಿದರು. ಯಾವುದೇ ಸಮಸ್ಯೆ ಇಲ್ಲ, ಆದರೆ ಇದೊಂದು ಪಿತೂರಿ ಎಂದು ಅಳಲು ತೋಡಿಕೊಂಡರು.
ವೈದ್ಯರೊಂದಿಗೆ ಹಾಜರಾಗಿದ್ದ ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಮುನಿರತ್ನರ ರಕ್ತದ ಮಾದರಿ ಸಂಗ್ರಹ ಮಾಡಲು ಮುಂದಾದರು. ಈ ವೇಳೆ ಮುನಿರತ್ನ ತಮ್ಮ ವಕೀಲರು ಬರಬೇಕು. ಅವರ ಮುಂದೆ ಸ್ಯಾಂಪಲ್ಸ್ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ಮನವಿಯನ್ನ ಪುರಸ್ಕರಿಸಿ ವಕೀಲರು ಬಂದ ಮೇಲೆ ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಕ್ತದ ಮಾದರಿ ಸಂಗ್ರಹಿಸುವ ಸಂಬಂಧ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. ರಾಜ್ಯದಲ್ಲಿ ಕೆಲವೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ರಕ್ತದ ಮಾದರಿ ಸಂಗ್ರಹಿಸಲು ನಮ್ಮದು ಅಭ್ಯಂತರ ಇಲ್ಲ. ಆದರೆ ಯಾವ ಕಾರಣಕ್ಕಾಗಿ ಬ್ಲಡ್ ಸ್ಯಾಂಪಲ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಕಾರಣ ಬೇಕು. ಘಟನೆ ನಡೆದು ವರ್ಷಗಳೆ ಕಳೆದಿದೆ. ಎಫ್ಎಸ್‌ಎಲ್‌ಗೆ ರವಾನೆ ಮಾಡಲು ಬ್ಲಡ್ ಸ್ಯಾಂಪಲ್ಸ್ ತೆಗೆದುಕೊಳ್ಳಲಿ. ಸ್ಟೇಟ್ ಏಜೆನ್ಸಿ ಹೊರತು ಪಡಿಸಿ ಸೆಂಟ್ರಲ್ ಏಜೆನ್ಸಿಗೆ ಪರೀಕ್ಷೆ ನಡೆಸಲು ರವಾನಿಸಬೇಕು. ಬ್ಲಡ್ ಸ್ಯಾಂಪಲ್ಸ್ ತೆಗೆದುಕೊಳ್ಳುವ ಮುನ್ನ ನಮ್ಮ ಗಮನಕ್ಕೆ ತರಬೇಕಿತ್ತು ಎಂದು ವಾದಿಸಿದರು.
ಪ್ರಕರಣ ತನಿಖಾ ಹಂತದಲ್ಲಿದೆ. ಅದರಲ್ಲೂ ಆರೋಪಿ ತನಿಖಾ ತಂಡದ ಕಸ್ಟಡಿಯಲ್ಲಿದ್ದಾರೆ. ಆ ಸಂದರ್ಭದಲ್ಲಿ ತನಿಖಾಧಿಕಾರಿಗಳ ಮನವಿಗೆ ಸ್ಪಂದಿಸಿ, ಆದೇಶ ಮಾಡಲಾಗಿದೆ. ನೀವು ಆಕ್ಷೇಪಣೆ ಸಲ್ಲಿಸುವುದಾದರೆ ಸಲ್ಲಿಕೆ ಮಾಡಿ ಎಂದು ಬ್ಲಡ್ ಸ್ಯಾಂಪಲ್ಸ್ ಸಂಗ್ರಹಿಸುವ ಪ್ರಕ್ರಿಯೆಯನ್ನು ನಾಳೆ ಶುಕ್ರವಾರ ಬೆಳಗ್ಗೆಗೆ ಮುಂದೂಡಿ 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ಮಧ್ಯಾಹ್ನದ ನಂತರ ರಕ್ತದ ಮಾದರಿ ಸಂಗ್ರಹಿಸಲು ವೈದ್ಯರಿಗೆ ಸೂಚನೆ ನೀಡಿದರು.
ಜಾಮೀನು ಅರ್ಜಿ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆ
ಶಾಸಕ ಮುನಿರತ್ನ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯು 82ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಗುರುವಾರ ನಡೆಯಿತು. ಕೋರ್ಟ್ ಜಾಮೀನು ಅರ್ಜಿ ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಗುರುವಾರ (ಅ.3) ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಮತ್ತೊಂದು ಸುತ್ತಿನ ವಾದ ಮಂಡಿಸಿದರು. ಎಸ್‌ಐಟಿ ಪರ ಎಸ್‌ಪಿಪಿ ಪ್ರದೀಪ್ ಹಾಜರಾಗಿದ್ದರು. ಸೆಕ್ಷನ್ 376(2)n ಸಂಬಂಧಿಸಿದಂತೆ ಹಲವು ಕೋರ್ಟ್ ಆದೇಶಗಳ ಉಲ್ಲೇಖಿಸಿ ಅಶೋಕ್ ಹಾರನಹಳ್ಳಿ ವಾದ ಮಾಡಿದರು. ಎಸ್‌ಪಿಪಿ ವಾದ ಮಂಡಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ 82ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಾಳೆ ಶುಕ್ರವಾರ 2:45ಕ್ಕೆ ವಿಚಾರಣೆ ಮುಂದೂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ