ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಟ ದರ್ಶನ್ (Actor Darshan) ಇದ್ದ ವೇಳೆ ಸಿಕ್ಕ ರಾಜಾತಿಥ್ಯದ ತನಿಖೆ ಕೊನೆಗೂ ಮುಕ್ತಾಯದ ಹಂತ ತಲುಪಿದೆ. ವಿಶೇಷ ಸವಲತ್ತುಗಳ ಜಾಡು ಹಿಡಿದ ಖಾಕಿಗೆ ರಾಜಾತಿಥ್ಯದ ಪಿನ್ ಟು ಪಿನ್ ಸಾಕ್ಷಿ ದೊರೆತಿದ್ದು, ಇದರ ಹೊರತಾಗಿ ಜೈಲಿನಲ್ಲಿ ಸಿಗುವ ಮದ್ಯದ ಬಾಟೆಲ್‌ಗಳ ಮತ್ತೊಂದು ಕಹಾನಿ ಬೆಳಕಿಗೆ ಬಂದಿದೆ.
ಜೈಲಿನೊಳಗೆ ದರ್ಶನ್‌ಗೆ ಸಿಕ್ಕ ರಾಜಾತಿಥ್ಯದ ಸಂಬಂಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳ ತನಿಖೆ ಬಹುತೇಕ ಪೂರ್ಣಗೊಂಡಿದೆ. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ನಡೆಸಿದ ತನಿಖೆ ವೇಳೆ ರಾಜಾತಿಥ್ಯದ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ. ಜತೆಗೆ ಇದಕ್ಕೆ ಕಾರಾಗೃಹದ ಸಿಬ್ಬಂದಿ ಸಹಕರಿಸಿರುವ ಸಂಗತಿ ಸಹ ಬಯಲಾಗಿದೆ. ಸದ್ಯ ಈ ಎಲ್ಲಾ ಮಾಹಿತಿಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಿರುವ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸುವ ತಯಾರಿಯಲ್ಲಿದ್ದಾರೆ.
ಜೈಲಿನ ಒಳಗಡೆ ದರ್ಶನ್ ರೌಂಡ್ ಟೇಬಲ್‌ನಲ್ಲಿ ಟೀ ಪಾರ್ಟಿ ಮಾಡಿದ್ದು, ಜೈಲಿನೊಳಗೆ ಹೊರಗಿನ ವ್ಯಕ್ತಿ ಜತೆ ವಿಡಿಯೊ ಕಾಲ್ ಸಂಭಾಷಣೆ ನಡೆಸಿದ್ದ ಈ ಎರಡು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ವಿಸ್ತೃತ ಆರೋಪ ಪಟ್ಟಿ ತಯಾರಿಸಿದ್ದಾರೆ. ಸದ್ಯ ಈ ಆರೋಪ ಪಟ್ಟಿ ಅಂತಿಮ ಹಂತದ ತಯಾರಿಯಲ್ಲಿದ್ದು, ಪೊಲೀಸರು ಅಂತಿಮ ಪರಾಮರ್ಶೆಗೆಂದು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಈ ಮೂಲಕ ಕಾನೂನು ತಜ್ಞರ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.
ಜೈಲಿನಲ್ಲಿರುವ ರೌಡಿಗಳಿಗೆ ಸಪ್ಲೈ ಆಗುತ್ತಿದೆಯಾ ಕಾಸ್ಟ್ಲಿ ಡ್ರಿಂಕ್ಸ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಸಿಕ್ಕಿದ್ದ ರಾಜಾತಿಥ್ಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಈಗ ಹೊಸದಂದು ಸಂಗತಿ ಕೇಳಿ ಬಂದಿದೆ. ಜೈಲಿನಲ್ಲಿರುವ ಕೆಲ ರೌಡಿಗಳಿಗೆ ಕಾಸ್ಟ್ಲಿ ಡ್ರಿಂಕ್ಸ್ ಸರಬರಾಜು ಆಗುತ್ತಿದೆ ಎನ್ನಲಾಗಿದೆ. ಅದು ಮೂರು ಹಂತಗಳಲ್ಲಿ ಹೊರಗಿನಿಂದ ಜೈಲಿನೊಳಗೆ ಮದ್ಯ ತಲುಪುತ್ತಿದೆ ಎನ್ನಲಾಗಿದೆ. ಇನ್ನು ಮದ್ಯದ ಬಾಟಲ್‌ನ ಅಸಲಿ ಬೆಲೆ 2 ಸಾವಿರ ಇದ್ದರೆ ಅದನ್ನು ಜೈಲಿನೊಳಗೆ ಕೊಡಲು 25 ಸಾವಿರ ನೀಡಲಾಗುತ್ತಿದೆ ಎನ್ನಲಾಗಿದೆ.
ಬಾಟಲ್‌ನ ಓರ್ವ ಹೊರಗಡೆಯಿಂದ ತಂದರೆ, ಅದನ್ನು ಜೈಲಿನ ಒಳಗೆ ತೆಗೆದುಕೊಂಡು ಹೋಗುವವನು ಮತ್ತೊಬ್ಬನಂತೆ.. ಬಳಿಕ ಅದನ್ನು ರೌಡಿಗೆ ತಲುಪಿಸುವವನು ಮತ್ತೋಬ್ಬ.. ಇನ್ನು ಈ ಸರಬರಾಜು ಪ್ರಕ್ರಿಯೆಯಲ್ಲಿ ಜೈಲಿನ ಕೆಲ ಸಿಬ್ಬಂದಿ ಹಾಗೂ ಕೆಲ ಸಜಾ ಬಂಧಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೀಗೆ ಒಳಗೆ ಸಪ್ಲೈ ಮಾಡಿ ಎಣ್ಣೆಗೆ ಹಣ ಹೊರಗಡೆಯೇ ಪಡೆಯಲಾಗುತ್ತಿದೆ. ಯಾರ್ಯಾರು ಎಣ್ಣೆ ತಂದು ಕೊಡುತ್ತಿದ್ದರು ಎಂಬ ಬಗ್ಗೆ ತನಿಖೆ ಆರಂಭಿಸಿರುವ ಆಗ್ನೇಯ ವಿಭಾಗದ ಪೊಲೀಸರು ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.
ಇದೆಲ್ಲದರ ನಡುವೆ ನಗರ ಪೊಲೀಸ್ ಆಯುಕ್ತರು ಜೈಲಿನ ರಾಜಾತಿಥ್ಯದ ಬಗ್ಗೆ ವರದಿ ನೀಡುವಂತೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾರಿಮಾಗೆ ಸೂಚಿಸಿದ್ದರು. ಅದರಂತೆ ತನಿಖೆ ವೇಳೆ ಕಂಡು ಬಂದ ಅಂಶಗಳ ಸಹಿತ ರಾಜಾತಿಥ್ಯದ ವರದಿ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ. ಸದ್ಯ ರಾಜಾತಿಥ್ಯದ ತನಿಖೆ ಕೈಗೊಂಡಿದ್ದ ಪೊಲೀಸರು ಬಹುತೇಕ ತನಿಖೆ ಮುಕ್ತಾಯಗೊಳಿಸಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಆ ಬಳಿಕ ಜೈಲಿನ ಅಕ್ರಮ ಚಟುವಟಿಕೆಗಳ ಮತ್ತಷ್ಟು ಸಂಗತಿ ಬಯಲಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ