ಬೆಂಗಳೂರು: ಮಧ್ಯಾಹ್ನದ ಹೊತ್ತು ನಿದ್ರೆ ಮಾಡುವ ಅವಕಾಶ ನೀಡಿದರೆ ಯಾರಿಗೆ ತಾನೇ ಸಂತಸವಾಗುವುದಿಲ್ಲ? ಈಗ ಇದೇ ಕಾರಣಕ್ಕೆ ʼವೇಕ್‌ಫಿಟ್ ಸೊಲ್ಯಷನ್ಸ್ʼ ಎಂಬ ಬೆಂಗಳೂರಿನ ಸ್ಟಾರ್ಟ್‌ಅಪ್ ಸಂಸ್ಥೆಯ ಊದ್ಯೋಗಿಗಳು ಸಂತಸಪಡುವಂತಾಗಿದೆ. ಈ ಸ್ಟಾರ್ಟ್‌ಅಪ್ ಸಂಸ್ಥೆಯಲ್ಲಿ ಉದ್ಯೋಗಿಗಳು ಮಧ್ಯಾಹ್ನ ಅರ್ಧಗಂಟೆಗಳ ಕಾಲ ನಿದ್ರಿಸಲು ಅವಕಾಶ ಮಾಡಿಕೊಟ್ಟಿದೆ. ಮಧ್ಯಾಹ್ನ 2 ರಿಂದ 2:30ರವರೆಗೆ ಮಲಗಿ ಅರ್ಧಗಂಟೆ ನಿದ್ರಿಸಬಹುದು.
ʼವೇಕ್‌ಫಿಟ್ ಸೊಲ್ಯಷನ್ಸ್ʼನ ಮುಖ್ಯಸ್ಥರು ಈ ಅವಕಾಶ ಕಲ್ಪಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ʼರೈಟ್ ಟು ನ್ಯಾಪ್ʼ ಎಂಬ ಹೆಸರಿನಡಿಯಲ್ಲಿ ಈ ವಿಭಿನ್ನ ಸೌಲಭ್ಯ ಕಲ್ಪಿಸಿದೆ. ಈ ಬಗ್ಗೆ ಸಂಸ್ಥೆಯ ಉದ್ಯಮಿಗಳಿಗೆ ನೀಡಿದ ಸೂಚನೆಯಲ್ಲಿ ʼಕಳೆದ ಆರು ವರುಷಗಳಿಂದ ನಮ್ಮದು ಹಾಸಿಗೆ ತಯಾರಿಕ ಸಂಸ್ಥೆಯಾಗಿದೆ. ನಿದ್ರೆಗೆ ಸಂಬಂಧಿಸಿದ ಈ ಕಂಪನಿ, ಇಲ್ಲಿನ ಉದ್ಯೋಗಿಗಳ ನಿದ್ರೆಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಮುಂದಾಗಿದೆ. ಎಲ್ಲಾ ಕೆಲಸಗಾರರಿಗೂ ಮಧ್ಯಾಹ್ನದ ವೇಳೆ ವಿಶ್ರಾಂತಿ ಮಾಡಲು ಸಣ್ಣ ನಿದ್ರೆ ಪಡೆಯಲು ಸಮಯ ನಿಗದಿಪಡಿಸಿದೆʼ ಎಂದು ತಿಳಿಸಲಾಗಿದೆ.
ನಿದ್ರೆ ಎಷ್ಟು ಮುಖ್ಯ?
ಇತ್ತೀಚೆಗೆ ಕೊರೋನಾ ಸಂದರ್ಭದಿಂದಲೂ ಎಲ್ಲಾ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಿ ಅಭ್ಯಾಸವಾಗಿದೆ. ಈಗ ಕೊರೋನಾ ಪ್ರಕರಣ ಕಡಿಮೆಯಾಗಿತ್ತಿರುವ ಕಾರಣದಿಂದ ಮತ್ತೆ ಆಫೀಸಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.
ಮನೆಯಿಂದಲೇ ಕೆಲಸ ಮಾಡುತ್ತಿದ್ದಾಗ ಸ್ವತಾಂತ್ರ್ಯ ಜಾಸ್ತಿಯಿತ್ತು. ಮಧ್ಯಾಹ್ನ ಬಿಸಿ ಬಿಸಿ ಊಟ ಮಾಡಿ, ಒಂದು ಅರ್ಧ ಗಂಟೆ ಹಾಯಾಗಿ ಮಲಗಬಹುದಾದ ವಾತಾವರಣ ಮನೆಯಲ್ಲಿತ್ತು. ಆದರೆ ಈಗ ಅವೆಲ್ಲಾ ಕಡಿಮೆಯಾಗುತ್ತಿದೆ. ಈ ನಡುವೆ ಸ್ಟಾರ್ಟ್‌ಅಪ್ ಕಂಪನಿಗಳು ಈ ರೀತಿಯ ಆಫೀಸ್ ಅವಧಿಯಲ್ಲಿ ನಿದ್ರಿಸುವ ಅವಕಾಶ ನೀಡಿದ್ದು ಉದ್ಯೋಗಿಗಳಿಗೆ ಸಂತಸ ಉಂಟುಮಾಡಿದೆ.
ಅನೇಕರು ಮಧ್ಯಾಹ್ಣದ ವಿಶ್ರಾಂತಿಯನ್ನು ಅಲಕ್ಷ್ಯ ಮಾಡುತ್ತಾರೆ. ಆದರೆ, ಇತ್ತೀಚೆಗೆ ನಾಸಾ ನಡೆಸಿದ ಒಂದು ಅಧ್ಯಯನದ ಪ್ರಕಾರ 26 ನಿಮಿಷದ ಒಂದು ಅಲ್ಪಾವಧಿ ನಿದ್ರೆ ತುಂಬಾ ಮುಖ್ಯ ಎಂದು ವರದಿ ಮಾಡಿದೆ. ಈ ಅಲ್ಪಾವಧಿ ನಿದ್ರೆಯನ್ನು ಬೆಕ್ಕಿನ ನಿದ್ರೆಯೆಂದೂ ಕರೆಯಲಾಗಿದೆ. ಅಲ್ಲದೆ, ಈ ನಿದ್ರೆ ಕೆಲಸವನ್ನು ಮಾಡುವ ಸಾಮರ್ಥ್ಯವನ್ನು 33%ರಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದೆ.
ಕಂಪನಿಯ ಈ ನಿರ್ಧಾರದ ಬಗ್ಗೆ ಅನೇಕರು ʼಇದು ಒಳ್ಳೆಯ ತೀರ್ಮಾನʼ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಹೆಚ್ಚೆಚ್ಚು ಸ್ತ್ರೀಯರನ್ನು ಕೊಲ್ಲುತ್ತಿದೆ ಹಾರ್ಟ್‌ಫೇಲ್, ಈಗಲೇ ಎಚ್ಚೆತ್ತುಕೊಳ್ಳಿ