Site icon Vistara News

Prajwal Revanna Case: ಗನ್ನಿಕಡ ತೋಟದ ಮನೆ ರಹಸ್ಯ; 2ನೇ ಚಾರ್ಜ್‌ಶೀಟ್‌ನಲ್ಲಿ ಪ್ರಜ್ವಲ್‌ ರೇವಣ್ಣ ಪಾಪ ಕೃತ್ಯ ಬಯಲು

Another chargesheet filed against Prajwal Revanna in 42nd ACMM court

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಕಿಡ್ನ್ಯಾಪ್‌ ಆಗಿದ್ದ ಸಂತ್ರಸ್ತೆಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳಿಂದ 113 ಸಾಕ್ಷಿಗಳನ್ನೊಳಗೊಂಡ 1632 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಇನ್‌ಸ್ಪೆಕ್ಟರ್‌ ಶೋಭಾರಿಂದ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇನ್ನೂ ಪ್ರಜ್ವಲ್ ಪಾಪ ಕೃತ್ಯವನ್ನು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಹೊಳೆನರಸೀಪುರದ ಗನ್ನಿಕಡ ತೋಟದ ಮನೆಯಲ್ಲಿ ಏನೆಲ್ಲ ನಡೆಯಿತು ಎಂಬುದನ್ನು ಉಲ್ಲೇಖಿಸಲಾಗಿದೆ. ಸಂತ್ರಸ್ತೆ ತೋಟದ ಮನೆಯ 1ನೇ ಮಹಡಿಯಲ್ಲಿನ ರೂಮ್‌ ಅನ್ನು ಕ್ಲೀನ್‌ ಮಾಡುತ್ತಿದ್ದರು. ಈ ವೇಳೆ ರೂಮಿಗೆ ಬಂದ ಆರೋಪಿ ಪ್ರಜ್ವಲ್‌, ಸಂತ್ರಸ್ತೆ ಬಳಿ ಕುಡಿಯಲು ನೀರು ಕೇಳಿದ್ದ. ನೀರು ತೆಗೆದುಕೊಂಡು ಬಂದ ಕೂಡಲೇ ಸಂತ್ರಸ್ತೆಯನ್ನು ಎಳೆದುಕೊಂಡು, ಹೊರಗೆ ತಪ್ಪಿಸಿಕೊಂಡು ಹೋಗದಂತೆ ಏಕಾಏಕಿ ರೂಮಿನ ಡೋರ್‌ ಲಾಕ್‌ ಮಾಡಿದ್ದ. ಬಳಿಕ ಬಲವಂತವಾಗಿ ಎಳೆದಾಡಿ ಸಂತ್ರಸ್ತೆಯನ್ನು ವಿವಸ್ತ್ರಗೊಳಿಸಿದ್ದ. ಈ ವೇಳೆ ದಮ್ಮಯ್ಯ ಬೇಡ, ಬಾಗಿಲು ತೆಗಿಯಣ್ಣ ಭಯವಾಗುತ್ತೆ ಅಂದರು ಬಿಡದೆ, ಏನು ಆಗಲ್ಲ ಸುಮ್ನೆ ಇರು ಎಂದು ಬೆದರಿಸಿ ಲೈಂಗಿಕ ಕೃತ್ಯವನ್ನು ಎಸಗಿದ್ದ. ಇದೆಲ್ಲವನ್ನು ಮೊಬೈಲ್‌ ಫೋನ್‌ನಲ್ಲಿ ಸೆರೆಯಿಡಿದಿದ್ದ.

ಇದಾದ ಬಳಿಕ ಮತ್ತೊಮ್ಮೆ ಬಸವನಗುಡಿಯಲ್ಲಿರುವ ರೇವಣ್ಣ ನಿವಾಸದಲ್ಲೇ ಮತ್ತೊಮ್ಮೆ ಸಂತ್ರಸ್ತೆಯ ಮೇಲೆ ಎರಗಿ ಅತ್ಯಾಚಾರ ಎಸಗಿದ್ದ ಎಂದು ಉಲ್ಲೇಖಿಸಲಾಗಿದೆ. ಎರಡು ಬಾರಿ ಅತ್ಯಾಚಾರ ಎಸಗಿದಾಗಲು ಅದೆಲ್ಲವನ್ನೂ ಪ್ರಜ್ವಲ್‌ ರೆಕಾರ್ಡ್ ಮಾಡಿಕೊಂಡಿದ್ದ. ಅತ್ಯಾಚಾರದ ಸಂಗತಿ ಬಾಯಿಬಿಟ್ಟರೆ, ಈ ಎಲ್ಲ ವಿಡಿಯೊಗಳನ್ನು ನಿನ್ನ ಮಗನಿಗೆ ಕಳಿಸುವುದಾಗಿ ಬೆದರಿಸಿದ್ದ. ಹೀಗಾಗಿ ಮಾನ, ಮರ್ಯಾದೆಗೆ ಅಂಜಿ ದೂರು ನೀಡಲುಸಂತ್ರಸ್ತೆ ಹಿಂದೆಟ್ಟು ಹಾಕಿದ್ದರು. ಹೀಗೆ ಬೆದರಿಸಿ ಮಾಜಿ‌ ಸಂಸದ ಪ್ರಜ್ಬಲ್ ರೇವಣ್ಣ ಸಂತ್ರಸ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಎಂದು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Assault Case : ಹುಡುಗರನ್ನು ಬಿಟ್ಟು ಜಿಮ್‌ ಟ್ರೈನರ್‌ಗೆ ಹೊಡೆಸಿದ್ದಕ್ಕೆ ನಟ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ

ಪ್ರಜ್ವಲ್‌ ರೇವಣ್ಣ ವಿರುದ್ಧ 2144 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಹಾಗೂ ಎಚ್‌.ಡಿ.ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 137 ಸಾಕ್ಷಿಗಳ ಹೇಳಿಕೆ ಸೇರಿ 2144 ಪುಟಗಳ ದೋಷಾರೋಪ ಪಟ್ಟಿಯನ್ನು 42ನೇ ವಿಶೇಷ ಜನಪ್ರತಿನಿಗಳ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿತ್ತು.

ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಪೂರ್ಣಗೊಳಿಸಿರುವ ತನಿಖಾಧಿಕಾರಿ ಸುಮಾರಾಣಿ ಅವರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. 137 ಸಾಕ್ಷಿಗಳ ಹೇಳಿಕೆ ಸೇರಿದಂತೆ 2144 ಪುಟಗಳ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪ ಕುರಿತ ಎಫ್‌ಐಆರ್‌ ರದ್ದುಪಡಿಸಲು ಕೋರಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಹಾಗೂ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಆಗಸ್ಟ್ 29ಕ್ಕೆ ಇತ್ತೀಚೆಗೆ ಮುಂದೂಡಿತ್ತು.

ಇನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಜುಲೈ 24ರಂದು ವಜಾಗೊಂಡಿತ್ತು. ನಾಲ್ಕನೇ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದಕ್ಕೂ ಮೊದಲು ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಇದರಲ್ಲಿ ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ಸೇರಿತ್ತು. ಜುಲೈ 24ರಂದು ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿತ್ತು. ಇದರಿಂದ ನಾಲ್ಕನೇ ಕೇಸ್‌ನಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾಗಿತ್ತು. ಬಳಿಕ ಐದನೇ ಬಾರಿಯೂ ಪ್ರಜ್ವಲ್‌ಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಆಗಿತ್ತು.

ಏನಿದು ಪ್ರಕರಣ?

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್‌ ವಿರುದ್ಧ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್‌ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version