ಬೆಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ನಡೆಯುತ್ತಿದ್ದ ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆ (Protest) ಸಂದರ್ಭದಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರರಕಣಕ್ಕೆ ಸಂಬಂಧಿಸಿ ಐವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ.
ಜುಲೈ 21ರಂದು ಕಾಂಗ್ರೆಸ್ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲಿ ಕೆಲವು ಉದ್ರಿಕ್ತ ಪ್ರತಿಭಟನಾಕಾರರು (Protest) ಗುಜರಿ ಕಾರನ್ನು ತಂದು ಶಾಂತಿನಗರದ ಇಡಿ ಕಚೇರಿ ಎದುರು ಬೆಂಕಿ ಹಚ್ಚಿದ್ದರು. ಬೆಂಕಿ ಹಚ್ಚಿದ ಘಟನೆ ತಿಳಿದ ಪೊಲೀಸರು ಕೂಡಲೇ ಅಗ್ನಿಶಾಮಕ ದಳ ಕರೆಸಿ ಬೆಂಕಿಯನ್ನು ನಂದಿಸಿದ್ದರು. ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿ ಐವರು ವಶಕ್ಕೆ ಪಡೆದಿದ್ದರು. ತನಿಖೆಯ ಹೊಣೆಯನ್ನು ಕೇಂದ್ರ ವಿಭಾಗ ಡಿಸಿಪಿಗೆ ವಹಿಸಲಾಗಿತ್ತು. ಹೀಗಾಗಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಆರನೇ ಎಸಿಎಂಎಂ ಕೋರ್ಟ್‌ಗೆ ಶುಕ್ರವಾರ ಹಾಜರುಪಡಿಸಿದರು. A1 ಆರೋಪಿ ಮಂಜುನಾಥ್ ಮಣಿಚಟ್ಟಿ, A2 ಕುಶ್ವಂತ್, A3 ಆಗಸ್ಟೀನ್, A4 ದಕ್ಷಿಣಮೂರ್ತಿ, A5 ರಿಯಾನಾ ರಾಜು ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಯಿತು.
ಇದನ್ನೂ ಓದಿ | ಸಿಎಂ ಮನೆ ಎದುರು ಕಾರು ಸುಡುವ ಪ್ಲ್ಯಾನ್ ಇತ್ತು: ಕಾಂಗ್ರೆಸ್ ಪ್ರತಿಭಟನೆ ತನಿಖೆ ಚುರುಕು