Site icon Vistara News

Renukaswamy Case : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A11, A12 ಆರೋಪಿಗಳ ಜಾಮೀನು ಅರ್ಜಿಯೂ ನಾಳೆಗೆ ಮುಂದೂಡಿಕೆ

Actor Darshan

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದ ಎ11 ಹಾಗೂ ಎ12 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯು ಮಂಗಳವಾರ ನಡೆಯಿತು. ಲಕ್ಷ್ಮಣ್ ಹಾಗೂ ನಾಗರಾಜು ಸಲ್ಲಿದ್ದ ಜಾಮೀನು ಅರ್ಜಿ ವಿಚಾರಣೆ 57ನೇ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ನಾಗರಾಜು ನಟ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಲಕ್ಷ್ಮಣ್ ದರ್ಶನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಕ್ತಾಯವಾಗಿದ್ದು, ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಬೇರೆ ಯಾವುದೇ ಕ್ರೈಂಗಳಲ್ಲಿ ಭಾಗಿಯಾಗಿಲ್ಲ. ಜಾಮೀನು ನೀಡಿದರೆ ತಲೆಮರೆಸಿಕೊಳ್ಳುವ ಹುನ್ನಾರವಿಲ್ಲ. ಹೀಗಾಗಿ ಜಾಮೀನು ನೀಡಬೇಕೆಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲರು ವಾದ ಮಂಡಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೆಲೆಬ್ರಿಟಿಗಳು ಇರುವುದರಿಂದ ಸೆನ್ಷೇಷನಲ್ ಆಗಿದೆ. ಜಾಮೀನು ನೀಡುವಾಗ ಆರೋಪಿಗಳು ಪೂರ್ವಗ್ರಹ ಪೀಡಿತ ರಾಗಬಾರದು. ಆರೋಪಿಗಳ ವಿರುದ್ಧ ಕೊಲೆ, ಒಳಸಂಚು ಸಾಮಾನ್ಯ ಉದ್ದೇಶದ ಆರೋಪವಿದೆ. ಜೊತೆಗೆ ಸಾಕ್ಷಿ ನಾಶದ ಆರೋಪವೂ ಇದೆ. ಆರೋಪ ಸಾಬೀತಾಗುವರೆಗೂ ಆರೋಪಿಗಳನ್ನು ಮುಗ್ಧರಾಗಿ ಪರಿಗಣಿಸಬೇಕು.

ಆರೋಪಿಗಳು ಈಗಾಗಲೇ ನಾಲ್ಕು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಕ್ಷ್ಮಣ್ ಹಾಗೂ ನಾಗರಾಜ್ ವಿರುದ್ಧ ಅಪರಾಧ ಹಿನ್ನೆಲೆ ಇಲ್ಲ. ಆರೋಪಿಗಳು ಜಾಮೀನು ಪಡೆಯಲು ಟ್ರೈಪಾರ್ಟ್ ಟೆಸ್ಟ್ ಮುಖ್ಯ ಎಂದು ಲಕ್ಷ್ಮಣ್ ಹಾಗೂ ನಾಗರಾಜ್ ಪರ ವಕೀಲ ಸಂದೇಶ್ ಚೌಟ ವಾದಿಸಿದರು. ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಿದ ವಿಚಾರವಾಗಿಯೂ ಉಲ್ಲೇಖ‌ ಮಾಡಿದ ಸಂದೇಶ್ ಚೌಟ, ಈ ಫೋಟೊಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲು ಮಾಡಲಾಗಿದೆ. ನಂತರ ನಮ್ಮ ಕಕ್ಷಿದಾರರನ್ನು ಬೇರೆ ಬೇರೆ ಜೈಲುಗಳಿಗೆ ರವಾನೆ ಮಾಡಲಾಯಿತು. ಅಲ್ಲಿ ನಮ್ಮ ಕಕ್ಷಿದಾರರು ಸಫರ್ ಆಗುತ್ತಿದ್ದಾರೆ.

ಜೈಲಿನಲ್ಲಿ ಸಿಗರೇಟ್ ಸೇದುವುದು ಅಪರಾಧ ಅಲ್ಲ. ಅಲ್ಲಿ ಧೂಮಪಾನಕ್ಕೆ ಪ್ರತ್ಯೇಕ ಜಾಗ ನೀಡಲು ಜೈಲು ಮ್ಯಾನ್ಯುಲ್ ಸೂಚಿಸುತ್ತದೆ. ಆದರೆ ಇದನ್ನೇ ಮಹಾ ಅಪರಾಧ ಎಂಬಂತೆ ಬಿಂಬಿಸಲಾಗಿದೆ. ಈ ಪ್ರಕರಣದ ಮೂವರು ಆರೋಪಿಗಳ ವಿರುದ್ಧ 201 ಅಡಿಯಲ್ಲಿ ಚಾರ್ಜಸ್ ಮಾಡಲಾಗಿತ್ತು. ಅವರನ್ನು ಇವರೆ ಬಿಡುಗಡೆ ಮಾಡಬಹುದಿತ್ತು. ಆದರೆ ಯಾಕೆ ಜಾಮೀನು ನೀಡಬಹುದಾದ ಪ್ರಕರಣದಲ್ಲಿ, ಮೂರು ತಿಂಗಳಿಗೂ ಅಧಿಕ ಕಾಲ ಯಾಕೆ ಕಂಬಿ ಹಿಂದೆ ಇಡಲಾಗಿತ್ತು. ಜಾಮೀನು ಎಂಬುದು ಎಲ್ಲರ ಹಕ್ಕು. ಇದು ಭಯೋತ್ಪಾದನೆ ಅಲ್ಲ, ದೇಶದ ಭದ್ರತೆಗೆ ಧಕ್ಕೆ ಅಲ್ಲ, ಕ್ರೂರಾತಿ ಕ್ರೂರ ಕ್ರಿಮಿನಲ್ ಹಿನ್ನೆಲೆ ಉಳ್ಳವರು ಅಲ್ಲ. ಹೀಗಾಗಿ ಇವರಿಗೆ ಜಾಮೀನು ನೀಡಬೇಕು. ಜಾಮೀನು ಪರಿಗಣನೆಗೆ ಕೋರ್ಟ್ ಎಂಟು ಅಂಶಗಳನ್ನು ಪರಿಗಣಿಸುತ್ತೆ, ಆ ಎಂಟು ಅಂಶಗಳು ಇವೆ. ಹೀಗಾಗಿ ನಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು.

ಅರ್ಜಿದಾರರ ಸುದೀರ್ಘ ವಾದ ಆಲಿಸಿದ್ದ ನ್ಯಾಯಾಧೀಶರು ಬಳಿಕ ಮಧ್ಯಾಹ್ನ 2.45ಕ್ಕೆ ಮುಂದೂಡಿದ್ದರು. ಮಧ್ಯಾಹ್ನದ ನಂತರ ಲಕ್ಷ್ಮಣ್ ಹಾಗೂ ನಾಗರಾಜ್ ಪರ ಸಂದೇಶ್ ಚೌಟ ವಾದ ಮುಂದುವರಿಸಿದರು. ಪೊಲೀಸರು ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಎಲ್ಲಾ ವಿಚಾರಗಳು ಉಲ್ಲೇಖ ಮಾಡಬೇಕಿತ್ತು. ಆದರೆ ಯಾವುದನ್ನೂ ಸರಿಯಾಗಿ ಉಲ್ಲೇಖ ಮಾಡಿಲ್ಲ. ಕೋಕಾ, ಎನ್‌ಐಎ, ಯುಎಪಿಎ ಕಾಯ್ದೆ ಅಡಿಯಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು.

ಆದರೆ ಇವರು ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳನ್ನು ಉಲ್ಲೇಖ ಮಾಡಿಲ್ಲ. ಆದರೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು, ಆದರೆ ಇದ್ಯಾವುದೂ ಆಗಿಲ್ಲ. ಕೋಕಾ ಎನ್‌ಐಎ ಯುಎಪಿಎ ಪ್ರಕರಣಗಳಲ್ಲಿ ಸಾಕ್ಷಿಗಳನ್ನು ಮರೆಮಾಚಬಹುದು. ಆದರೆ ಇವರು ಎಲ್ಲಿಯೂ ಯಾವ ರಿಮ್ಯಾಂಡ್ ಅರ್ಜಿಯಲ್ಲೂ ಸಾಕ್ಷಿಗಳ ಬಗ್ಗೆ ಉಲ್ಲೇಖ ಮಾಡಿಲ್ಲ. ಒಂದು ವೇಳೆ ಸಾಕ್ಷಿಗಳ ಹೆಸರನ್ನು ಮುಚ್ಚಿಟ್ಟಾಗ ಸರಿಯಾದ ಕಾರಣ ತಿಳಿಸಬೇಕು. ಅದನ್ನು ಕೋರ್ಟ್ ಪರಿಗಣನೆಗೆ ತೆಗೆದುಕೊಳ್ಳಬೇಕು. ಪಟ್ಟಣಗೆರೆ ಶೆಡ್‌ನ ಸೆಕ್ಯೂರಿಟಿ‌ ಗಾರ್ಡ್ ಈ ಪ್ರಕರಣದ ಐ ವಿಟ್ನೆಸ್ ಆಗಿದ್ದು, ಎಲ್ಲೂ ಸಹ ಆರೋಪಿ‌ ಲಕ್ಷ್ಮಣ್ ಬಗ್ಗೆ ಹೇಳಿಕೆ ನೀಡಿಲ್ಲ. ಅದು 161 ಹೇಳಿಕೆ ಇರಲಿ ಅಥವಾ 164 ಹೇಳಿಕೆ ಇರಲಿ. ಎಲ್ಲಿಯೂ ಆರೋಪಿ ಲಕ್ಷ್ಮಣ್ ಬಗ್ಗ ಹೇಳಿಕೆ ನೀಡಿಲ್ಲ.

ಸಾಕ್ಷಿಗಳ ಹೇಳಿಕೆ ದಾಖಲು‌ ಮಾಡುವಲ್ಲಿಯೂ ಸಾಕಷ್ಟೂ ತಡ ಆಗಿದೆ. ಪ್ರತ್ಯಕ್ಷದರ್ಶಿಗಳಾದ ಕಿರಣ್, ಮಲ್ಲಿಕಾರ್ಜುನ, ವಿಜಯ್ ಕುಮಾರ್ ಜೂನ್ 15 ಕ್ಕೆ ಪಡೆದಿದ್ದಾರೆ. ನಂತರ ಮಧುಸೂಧನ್, ಪುನೀತ್ ಹೇಳಿಕೆ ದಾಖಲಾಗಿದೆ. ಪುನೀತ್‌ ಸ್ಟಾರ್ ವಿಟ್ನೇಸ್ ಆಗಿದ್ದು, ಘಟನಾ ಸ್ಥಳದಲ್ಲಿ ಇದ್ದ ಎಂಬ ಮಾಹಿತಿ ಇದ್ದರೂ ತಡವಾಗಿ ಹೇಳಿಕೆ ದಾಖಲಿಸಿದ್ಯಾಕೆ.? ಎಂದು ಪ್ರಶ್ನಿಸಿದ್ದರು. ಕೃತ್ಯದಲ್ಲಿ ಯಾವುದೇ ಆರೋಪಿ ಡೆಡ್ಲಿ ವೆಪನ್ ಬಳಸಿಲ್ಲ. ಅಲ್ಲದೇ ಸಂಚು ಮಾಡಿ ಯಾವುದೇ ವೆಪನ್ ತಂದಿಲ್ಲ. ನೈಲಾನ್ ಹಗ್ಗ, ಲಾಠಿ & ವಾಟರ್ ಬಾಟೆಲ್ ಅಷ್ಟೇ. ಈ ಪ್ರಕರಣದಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ನೇರವಾದ ಯಾವುದೇ ಸಾಕ್ಷಿಗಳಿಲ್ಲ. ಹೀಗಾಗಿ ಜಾಮೀನು ನೀಡಬೇಕು ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿ ಸಂದೇಶ್ ಚೌಟ ವಾದಿಸಿದರು.

ಸಾಕ್ಷಿ ಸೃಷ್ಟಿ, ಇರುವ ಸಾಕ್ಷಿ ನಾಶ, ಸಾಕ್ಷಿಗಳ ತತ್ವಿರುದ್ದ ಮಾಹಿತಿ ನೀಡಲಾಗಿದೆ. ಕೇಸ್ ದಾಖಲಿಸುವುದು ತಡ ಆಗಿದೆ. ಮೃತನ ಸಾವಿನ ಸಮಯ ತಿಳಿದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರೆಳಿಲ್ಲ. ಕೇಸ್ ಡೈರಿ ಉಲ್ಲೇಖಿಸದೇ ಇರೋದು, ಪೊಲೀಸರಿಗೆ ಮಾಹಿತಿ ಇದ್ದರೂ ತನಿಖೆ ತಡ, ಕೊಲೆಗೆ ಬಳಕೆ ಮಾಡಿದ್ದರೆ ಎನ್ನಲಾದ ವಸ್ತುಗಳಲ್ಲಿ ರಕ್ತ ಮಾದರಿ ಇಲ್ಲ. ಬಂಧನಕ್ಕೆ ಪೊಲೀಸರು ಕಾರಣ ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ತಪ್ಪುಗಳಿವೆ. ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ಸಾಕ್ಷಿ ಇದೆ. ಹೀಗಾಗಿ ನಾಗರಾಜ್ ಹಾಗೂ ಲಕ್ಷ್ಮಣ್ ಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಸುದೀರ್ಘ ವಾದ ಆಲಿಸಿದ ನ್ಯಾಯಾಲಯ ನಾಳೆ ಬುಧವಾರಕ್ಕೆ ಲಕ್ಷ್ಮಣ್ ಹಾಗೂ ನಾಗರಾಜ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿತು.

Exit mobile version