Site icon Vistara News

Theft Case : ಮನೆಗೆಲಸದವರ ಮಾತು ಕದ್ದು ಕೇಳಿಸಿಕೊಂಡ; ಕೆ.ಜಿ ಗಟ್ಟಲೆ ಚಿನ್ನ ದೋಚಿದ್ದು, 12 ಗಂಟೆಯಲ್ಲೇ ಸಿಕ್ಕಾಕೊಂಡ!

Thief arrested for stealing gold in Bengaluru

ಬೆಂಗಳೂರು: ಮನೆಕೆಲಸದವರ ಮಾತನ್ನು ಕದ್ದು (Theft Case) ಕೇಳಿ ಹೀಗೂ ಕಳ್ಳತನದ ಪ್ಲ್ಯಾನ್ ಮಾಡಬಹುದಾ? ಇಂತಹದೊಂದು ಘಟನೆಗೆ ಬೆಂಗಳೂರಿನಲ್ಲಿ ನಡೆದಿದೆ. ಮನೆ ಕೆಲಸದವರ ಮಾತನ್ನು ಕದ್ದು ಕೇಳಿಸಿಕೊಂಡ ಖದೀಮ ಕೆ.ಜಿ ಗಟ್ಟಲೆ ಚಿನ್ನ ದೋಚಿದವನು, ಕೃತ್ಯ ನಡೆದ 12 ಗಂಟೆಯಲ್ಲೇ ಸಿಕ್ಕಿಕೊಂಡಿದ್ದಾನೆ. ಸಿನಿಮಾ ಸ್ಟೈಲ್‌ನಲ್ಲೇ ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧಿಯಾಗಿದ್ದಾನೆ. ಸನ್ಯಾಸಿ ನಂದೀಶ್ ಬಂಧಿತ ಆರೋಪಿ.

ದೇವಸ್ಥಾನಕ್ಕೆ ಹೋಗುವವರ ಮನೆ ಟಾರ್ಗೆಟ್ ಮಾಡುತ್ತಿದ್ದವನು ದೇವಸ್ಥಾನವೊಂದರಲ್ಲೇ ಸಿಕ್ಕಿಬಿದ್ದಿದ್ದಾನೆ. ರಾಯರ ದರ್ಶನಕ್ಕೆ ಹೋದವರ ಮನೆ ಕಳ್ಳತನ ಮಾಡಿ, ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಲು ಹೊರಟಿದ್ದ. ಒಂದೂವರೆ ಕೆ.ಜಿ ಚಿನ್ನ ಕದ್ದಿದ್ದ ಖತರ್ನಾಕ್ ಕಳ್ಳನ ಗ್ಯಾಂಗ್‌ ಅನ್ನು ಸುಬ್ರಮಣ್ಯ ನಗರ ಪೊಲೀಸರು ಬಂಧಿಸಿದ್ದಾರೆ. ಮನೆಗೆಲಸದವರ ಮಾತನ್ನ ಕದ್ದು ಕೇಳಿಸಿಕೊಂಡವನು ಕಳ್ಳತನಕ್ಕೆ ಇಳಿದಿದ್ದ. ಖತರ್ನಾಕ್ ಪ್ಲ್ಯಾನ್ ಮಾಡಿಯೂ 12 ಗಂಟೆಯೊಳಗೆ ಪೊಲೀಸರ ಅತಿಥಿಯಾಗಿದ್ದಾನೆ. ಸನ್ಯಾಸಿ ನಂದೀಶ್, ನಂದೀಶ್ ಪ್ರತಾಪ್ ಬಂಧಿತ ಆರೋಪಿಗಳು. ಆರೋಪಿ ಹನುಮೇಗೌಡ ಎಂಬಾತ ಎಸ್ಕೇಪ್ ಅಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮನೆಯವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಎಂದು ಕೆಲಸದವರು ಮಾತಾಡಿದ್ದರು. ಇದನ್ನ ಪಕ್ಕದಲ್ಲೇ ನಿಂತು ಸನ್ಯಾಸಿ ಮಠ ನಂದೀಶ ಕೇಳಿಕೊಂಡಿದ್ದ. ಈ ವಿಚಾರವನ್ನು ತನ್ನ ಸ್ನೇಹಿತರಿಗೆ ಹೇಳಿ ಕಳ್ಳತನಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದ. ಮನೆಯವರು ಮಂತ್ರಾಲಯಕ್ಕೆ ಹೊರಡುತ್ತಿದ್ದಂತೆ ಮನೆ ಬಳಿ ಕಾದು ಕುಳಿತಿದ್ದ ಈ ಕಿಡಿಗೇಡಿಗಳು, ಮನೆಯ ಹಿಂಬದಿ ಕಿಟಕಿಯನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಮನೆಗೆ ಎಂಟ್ರಿ ಕೊಟ್ಟಿದ್ದರು.

ಮನೆಯಲ್ಲಿದ್ದ 1ಕೆ.ಜಿ 800 ಗ್ರಾಂ ಚಿನ್ನ ಎಗರಿಸಿ ಕಾಲ್ಕಿತ್ತಿದ್ದರು. ಕದ್ದ ಎಲ್ಲ ಚಿನ್ನವನ್ನು ಕೂಡ ರೂಮಿನಲ್ಲೇ ಸನ್ಯಾಸಿ ಮಠ ನಂದೀಶ ಇಟ್ಟಿದ್ದ . ಇತ್ತ ಮನೆ ಮಾಲೀಕರು ಮಂತ್ರಾಲಯದಿಂದ ವಾಪಸು ಬಂದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸಿಸಿಟಿವಿ ಆಧಾರಿಸಿ ಆರೋಪಿಗಳ ಜಾಡು ಹಿಡಿದಿದ್ದ ಪೊಲೀಸರು, ಧರ್ಮಸ್ಥಳ ದರ್ಶನ ಮುಗಿಸಿ ವಾಪಸ್‌ ಬರುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1ಕೆಜಿ 800 ಗ್ರಾಂ ಚಿನ್ನ ಸೇರಿ 18 ಸಾವಿರ ನಗದು ವಶಕ್ಕೆ ಪಡೆದು, ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ.

ಜಂಗ್ಲಿ ಗ್ಯಾಂಗ್‌ ಅರೆಸ್ಟ್‌

ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಕಿಕೊಂಡು ಬಂದು ಕ್ಷಣಾರ್ಧದಲ್ಲಿ ಬೀಗ ಹೊಡೆದು ಸಿಕ್ಕ ಸಿಕ್ಕ ವಸ್ತುಗಳನ್ನ ಕದ್ದು ಮನೆಗಳವು ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ ಬೆಂಗಳೂರಿನ ಕುಖ್ಯಾತ ಮನೆಗಳ್ಳ ಜಂಗ್ಲಿ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ಬೆಂಗಳೂರಿನ ಆರ್.ಆರ್. ನಗರ ಪೊಲೀಸರು ಜೈದೀಪು ಅಲಿಯಾಸ್ ಜಂಗ್ಲಿ, ಚಂದನ್ @ ಗುಂಡ, ಸತೀಶ್ @ಬುಡ್ಡ, ದೀಪಕ್ @ದೀಪು ಮತ್ತು ಮಿಥುನ್ @ ಮಿಲ್ಕಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 10.18 ಲಕ್ಷ ರೂ. ಮೌಲ್ಯದ 103 ಗ್ರಾಂ ಚಿನ್ನ, 2 ಕೆ.ಜಿ.ಗೂ ಅಧಿಕ ಬೆಳ್ಳಿ, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಮನೆಗಳವು ಮಾಡಲಿಕ್ಕೆಂದೆ ಬೈಕ್ ಕಳ್ಳತನ ಮಾಡುತ್ತಿದ್ದರು. ಕದ್ದ ಬೈಕ್‌ಗಳಲ್ಲಿ ರೌಂಡ್ಸ್ ಹಾಕಿ ಒಂಟಿ ಮನೆಗಳನ್ನು ಗುರುತಿಸಿ ಕೈಚಳಕ ತೋರಿಸುತ್ತಿದ್ದರು. ಅದರಂತೆ ಕಳೆದ ಸೆಪ್ಟೆಂಬರ್ 17ರಂದು ಆರ್.ಆರ್.ನಗರದ ಗಟ್ಟಿಗೇರೆ ನಿವಾಸದಲ್ಲಿ ಚಂದ್ರಶೇಖರ ಎಂಬುವರ ಮನೆಗೆ ಕನ್ನಹಾಕಿದ್ದರು. ಆರೋಪಿಗಳ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಬೆಂಗಳೂರಿನ ಕುಖ್ಯಾತ ಕಳ್ಳ ಎಸ್ಕೇಪ್ ಕಾರ್ತಿಕ್‌ನ ಶಿಷ್ಯನೇ ಈ ಜೈದೀಪು. ಇದೀಗ ಈ ಜಂಗ್ಲಿ ಗ್ಯಾಂಗ್‌ ಅರೆಸ್ಟ್‌ ಆಗಿದೆ.

ಇದನ್ನೂ ಓದಿ: Accident Case : ದಾವಣಗೆರೆಯಲ್ಲಿ ದುರಂತ; ಬಿಸಿ ನೀರು ಹಾಗೂ ಬಿಸಿ ಸಾಂಬಾರ್‌ ಬಿದ್ದು ಪ್ರತ್ಯೇಕ ಕಡೆ ಇಬ್ಬರು ಮಕ್ಕಳು ಸಾವು

ಚಿನ್ನ ಕದ್ದು ಸ್ನೇಹಿತರಿಗೆ ಮಾರಾಟ

ಚಿನ್ನಾಭರಣ ಕದ್ದು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದ ಕಳ್ಳರ ಬಂಧನವಾಗಿದೆ. ವಿಲ್ಲಾಗಳನ್ನೇ ಟಾರ್ಗೆಟ್‌ ಮಾಡುತ್ತಿದ್ದ ಖದೀಮರು ಹಿಂದಿನ ಬಾಗಿಲಿನಿಂದ ಎಂಟ್ರಿ ಕೊಟ್ಟು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದರು. ರಾಮ್ ಕುಮಾರ್(23), ಇಸೈರಾಜ್ (27) ಬಂಧಿತ ಆರೋಪಿಗಳು. ಎಲ್ಲಾ ಮನೆಯಲ್ಲಿ ಮಲಗಿರುವ ಸಮಯದಲ್ಲೇ ಖದೀಮರು ಕನ್ನ ಹಾಕುತ್ತಿದ್ದರು. ಬೆಂಗಳೂರಿನ ಬಾಗಲೂರು ವ್ಯಾಪ್ತಿಯ ಕಣ್ಣೂರುಹಳ್ಳಿಯ ವಿಲ್ಲಾದಲ್ಲಿ ಕಳ್ಳರು ಕೈಚಳಕ ತೋರಿದ್ದರು.

ವಿಲ್ಲಾ ಮಾಲೀಕ ರಮೇಶ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದ ಬಾಗಲೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ 252 ಗ್ರಾಂ ಚಿನ್ನಾಭರಣ ಕದ್ದು ಒಂದು ತಿಂಗಳ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದರು. ಸಿಸಿಟಿವಿ, ಟವರ್ ಲೊಕೇಶನ್ ಟ್ರ್ಯಾಕ್ ಮಾಡಿ ಬಂಧಿಸಲಾಗಿದೆ. ಬಂಧನದ ಬಳಿಕ ಈ ಹಿಂದೆ ಕಳ್ಳತನ ಮಾಡಿದ್ದ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಇದೇ ಮಾದರಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ ಒಟ್ಟು 30 ಲಕ್ಷ ಮೌಲ್ಯದ 437 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಉಂಡ ಮನೆಗೆ ಕನ್ನ ಹಾಕಿದ್ದ ಖದೀಮ ಬಂಧನ

ಬೆಂಗಳೂರಿನಲ್ಲಿ ಉಂಡ ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಖದೀಮನ ಬಂಧನವಾಗಿದೆ. ಸಿದ್ದಾಪುರ ಪೊಲೀಸರಿಂದ ಚಿಕ್ಕಬಳ್ಳಾಪುರ ಮೂಲದ ನಾರಾಯಣಸ್ವಾಮಿ (33) ಎಂಬ ಆರೋಪಿ ಬಂಧನವಾಗಿದೆ. ಸಿದ್ದಾಪುರ ಠಾಣಾ ವ್ಯಾಪ್ತಿಯ ಯರ್ರಿಸ್ವಾಮಿ ಎಂಬ ಚಾಟೆಡ್ ಅಕೌಂಟ್ ಕಚೇರಿ ಹಣ ಕಳವು ಮಾಡಿದ್ದ. ಯರ್ರಿಸ್ವಾಮಿ ಬಳಿ ಕಾರ್ ಡ್ರೈವರ್ ಕಮ್ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ. ಅದೇ ಕಚೇರಿಯಲ್ಲಿ ನಾರಾಯಣಸ್ವಾಮಿ ಹೆಂಡತಿ ಸಹ ಕೆಲಸ ಮಾಡುತ್ತಿದ್ದಳು. ಯರ್ರಿಸ್ವಾಮಿ ಹಣ ಇಟ್ಟಿದ್ದ ಬಗ್ಗೆ ತಿಳಿದು ಸುಮಾರು 10.95 ಲಕ್ಷ ಹಣ ಎಗರಿಸಿದ್ದ. ಹಣ ಕದ್ದು ಕಾರ್ ಖರೀದಿ ಮಾಡಿ ಟ್ರಿಪ್ ಹೊಡೆಯುತ್ತಿದ್ದ.

ಕದ್ದ ಹಣದಲ್ಲಿ ವಿವೊ ಮೊಬೈಲ್ , ಚಿನ್ನದ ಸರ ಹಾಗೂ ಬ್ರಾಸ್ಲೆಟ್ , ಫಾಸ್ಟ್ರಾಕ್ ವಾಚ್ ಹಾಗೂ ಕಾರು ಖರೀದಿ ಮಾಡಿದ್ದ. ಕದ್ದ ಹಣದಲ್ಲೇ ಒಳ ಉಡುಪಿನಿಂದ ಹಿಡಿದು ಅಡಿಯಿಂದ ಮುಡಿವರೆಗೂ ಎಲ್ಲವನ್ನೂ ಖರೀದಿ ಮಾಡಿದ್ದ. ಈ ಕುರಿತು ಯರ್ರಿಸ್ವಾಮಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ಪರಿಶೀಲನೆ ವೇಳೆ ನಾರಾಯಣಸ್ವಾಮಿ ಡಸ್ಟ್ ಬಿನ್ ಕವರ್‌ನಲ್ಲಿ ಹಣ ಕದ್ದು ಹೋಗುವುದು ಗೊತ್ತಾಗಿತ್ತು. ಪ್ರಕರಣ ದಾಖಲಿಸಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಮಾಲೀಕ ಕೊಟ್ಟ ಮಾಹಿತಿ ಮೇರೆಗೆ ಆರೋಪಿ ಬಂಧನವಾಗಿದೆ. ಬಂಧಿತನಿಂದ ಚೈನ್ , ಬ್ರಾಸ್ಲೆಟ್ , ವಿವೊ ಮೊಬೈಲ್ , ಕಾರು, ಫಾಸ್ಟ್ರಾಕ್ ವಾಚ್ ಹಾಗೂ 3.5 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.

ಸಿನಿಮಾ ಸ್ಟೈಲ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

ಗ್ರಾಹಕರ ಆತ್ಮತೃಪ್ತಿಯೇ ಈ ಖತರ್ನಾಕ್ ಕಳ್ಳರು ಟಾರ್ಗೆಟ್ ಮಾಡುತ್ತಿದ್ದರು. ಕಸ್ಟಮರ್‌ಗಳಿಂದ ಆರ್ಡರ್ ಪಡೆದು ನಂತರ ಯಾವ ಬೈಕ್ ಬೇಕೋ ಅದೇ ಬೈಕ್ ಕಳ್ಳತನ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಖತರ್ನಾಕ್ ಬೈಕ್ ಕಳ್ಳ ಶಬಾಜ್ ಖಾನ್ ಹಾಗೂ ಓಂ ಇಬ್ಬರು ಬಂಧಿತ ಆರೋಪಿಗಳು. ಒಮ್ಮೆ ಬೈಕ್ ಕದ್ದು ಆನ್‌ಲೈನ್ ನಲ್ಲಿ ಮಾರಾಟ ಮಾಡಿದ್ದರು. ನಂತರ ಆನ್‌ಲೈನ್‌ನಲ್ಲಿ ಕಸ್ಟಮರ್‌ಗಳು ಒಬ್ಬರ ಮೂಲಕ ಮತ್ತೊಬ್ಬರ ಪರಿಚಯವಾಗಿತ್ತು.

15 ರಿಂದ 20 ಸಾವಿರಕ್ಕೆ ಬೈಕ್ ಮಾರಾಟ ಮಾಡುತ್ತಿದ್ದರು. ಮಾರಾಟದ ವೇಳೆ ಯಾರಿಗಾದರೂ ಕಡಿಮೆ ಬೆಲೆಗೆ ಯಾವ ಬೈಕ್ ಬೇಕಾದರೂ ಕೊಡುತ್ತಿವಿ ಎಂದು ಹೇಳುತ್ತಿದ್ದರು. ಕಸ್ಟಮರ್ ಸಿಕ್ಕಾಗ ನಿಮಗೆ ಯಾವ ಮಾದರಿಯ, ಯಾವ ಮಾಡೆಲ್‌ನ ಯಾವ ಕಂಪನಿಯ ಬೈಕ್ ಬೇಕೆಂದು ಮಾಹಿತಿ ಪಡೆಯುತ್ತಿದ್ದರು. ಬೈಕ್ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಕದ್ದ ಹಣದಿಂದ ವಿಲಾಸಿ ಜೀವನ ನಡೆಸುತ್ತಿದ್ದರು. ಬಂಧಿತರಿಂದ ಒಟ್ಟು 12.5 ಲಕ್ಷ ಮೌಲ್ಯದ 13 ಬೈಕ್ ವಶಕ್ಕೆ ಪಡೆಯಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version