ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸರ್ಕಾರದ ನೇತೃತ್ವ, ನಾಯಕತ್ವದ ವಿಚಾರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಬಹುಮುಖ್ಯವಾದ ಸಂದೇಶವೊಂದನ್ನು ಬೆಂಗಳೂರಿನಲ್ಲಿ ನೀಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವಕ್ಕೆ ಅನೇಕ ಬಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದ ಬಳಿಯ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹದೇವಪುರ ಗ್ರಾಮದಲ್ಲಿ ಮಂಜುನಾಥೇಶ್ವರ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸಸ್‌ನ ʼಕ್ಷೇಮವನʼ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗಿಯ ಮಾತಿನ ಸಾರ ಹೀಗಿದೆ:
ಈ ಕಾರ್ಯಕ್ರಮಕ್ಕೆ ಆಹ್ವಾನ ನನಗೆ ದೊರೆತದ್ದು ಅದ್ಭುತ ಕ್ಷಣ. ಶ್ರೀ ಕ್ಷೇತ್ರ ಮಂಜುನಾಥ ಸಂಸ್ಥಾನಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವುದು ವಿಶೇಷ. ಕರ್ನಾಟಕದಲ್ಲಿ ಮಂಜುನಾಥ ಎನ್ನುವುದು ನಾಥ ಪರಂಪರೆಯನ್ನೇ ಮುಂದುವರಿಸುತ್ತದೆ. ಈ ಮೂಲಕ ಆಧ್ಯಾತ್ಮಿಕ ಭಾವದಿಂದ ಉತ್ತರ ಪ್ರದೇಶ ಹಾಗೂ ಕರ್ನಾಟಕವನ್ನು ಜೋಡಿಸುತ್ತದೆ.
ವೀರೇಂದ್ರ ಹೆಗ್ಗಡೆಯವರು ದಶಕಗಳ ಹಿಂದಿನಿಂದಲೂ ಯೋಗ ಹಾಗೂ ನ್ಯಾಚುರೋಪಥಿಯನ್ನು ಮುನ್ನಡೆಸುತ್ತಿದ್ದಾರೆ. ಬೆಂಗಳೂರಿನ ಬಳಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗಿರುವುದು ಕರ್ನಾಟಕ ಮಾತ್ರವಲ್ಲದೆ ದೇಶಕ್ಕೇ ಉಪಯೋಗವಾಗಲಿದೆ. ಕರ್ನಾಟಕದ ಮುಖ್ಯಮಂತ್ರಿಯವರೂ ಒಬ್ಬ ಯೋಗಿಯ ರೀತಿ ಕೆಲಸ ಮಾಡುತ್ತಿದ್ದಾರೆ. ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಹೆಚ್ಚಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆಗೆ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜದ ಎಲ್ಲರೂ ಪ್ರಯತ್ನಪಡಬೇಕು. ಇದಕ್ಕಾಗಿ ನಮ್ಮ ಕಾರ್ಯದಲ್ಲಿ ವೃತ್ತಿಪರತೆಯನ್ನು ಮೂಡಿಸಿಕೊಳ್ಳಬೇಕಿದೆ.
ಕರ್ನಾಟಕವನ್ನು ಎಂದಿಗೂ ಸಂಕಟದಲ್ಲಿನ ಸ್ನೇಹಿತ ಎಂದು ಕರೆಯಲಾಗುತ್ತದೆ. ಇದೇ ಕರ್ನಾಟಕದಲ್ಲಿ ಶ್ರೀರಾಮನ ಸಹಾಯಕ್ಕೆ ಹನುಮಂತ ಸಹಾಯಕ್ಕೆ ಬಂದಿದ್ದ. ಹನುಮಂತನ ಸಹಾಯದಿಂದಲೇ ಸೇತುಬಂಧ ನಿರ್ಮಾಣವಾಗಿ ಭಾರತದಲ್ಲಿ ರಾಮರಾಜ್ಯ ಸ್ಥಾಪನೆಯ ಆಧಾರವಾಯಿತು.
ಈ ಹಿಂದೆ ಯೋಗದ ಕುರಿತು ವಿವಿಧ ಮಾತುಗಳಿದ್ದವು. ಆದರೆ ಇಂದು ಭಾರತದಲ್ಲಿ ಮಾತ್ರವಲ್ಲ, ದೇಶದ ನೂರಾರು ದೇಶಗಳು ಯೋಗ ಪರಂಪರೆಯೊಂದಿಗೆ ಜೋಡಿಸಿಕೊಂಡಿದ್ದಾರೆ. ಈ ದೇಹದ ಮೂಲಕವೇ ನಮ್ಮ ಎಲ್ಲ ಕಾರ್ಯವನ್ನೂ ನಡೆಸಬೇಕು ಎಂಬುದನ್ನು ಯೋಗ ತಿಳಿಸಿದೆ. ಕೋವಿಡ್-19 ಸಂದರ್ಭದಲ್ಲಿಯಂತೂ ಯೋಗದ ಕುರಿತು ಜನರಿಗೆ ಅರಿವಾಗಿದೆ. ದೇಹದ ರೋಗನಿರೋಧಕತೆಯನ್ನು ಹೆಚ್ಚಿಸಿಕೊಳ್ಳಲು ಆಯುರ್ವೇದ, ಯೋಗ, ಸಿದ್ಧ ಮುಂತಾದ ವ್ಯವಸ್ಥೆಗಳ ಕೊಡುಗೆ ಇದೆ.
ಅಮೆರಿಕದ ಜನಸಂಖ್ಯೆ ಭಾರತದ ಕಾಲುಭಾಗವಷ್ಟೆ ಇದೆ. ಆದರೆ ಕೋವಿಡ್‌ನಿಂದಾಗಿ ಅಮೆರಿಕದ ಎರಡು ಪಟ್ಟು ಜನರು ಮೃತಪಟ್ಟಿದ್ದಾರೆ. ಅಂದರೆ, ಭಾರತದಲ್ಲಿ ಪರಂಪರಾಗತ ಪದ್ಧತಿಗಳ ಕೊಡುಗೆ ಬಹುದೊಡ್ಡದು. ಭಾರತದ ಸಾಂಪ್ರದಾಯಿಕ ಚಿಕಿತ್ಸಾ ವ್ಯವಸ್ಥೆಯನ್ನು ಮುನ್ನಡೆಸಲು ಧರ್ಮಸ್ಥಳ ಕ್ಷೇತ್ರದಿಂದ ನೀಡಿದ ಮಹಾ ಪ್ರಸಾದವಾಗಿದೆ ಎಂದು ಯೋಗಿ ಹೇಳಿದರು.
ಭಾಷಣದ ನಡುವೆ ಒಮ್ಮೆ ಯೋಗಿಗಳ ಕುರಿತು ಮಾತನಾಡಿದ ಆದಿತ್ಯನಾಥ, “”ಈ ವೇದಿಕೆಯಲ್ಲಿ ನಾನೊಬ್ಬ ಯೋಗಿ, ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರೂ ಒಬ್ಬ ಯೋಗಿಯಿದ್ದಾರೆ. ನಮ್ಮ ಜತೆಗೆ ಜನಪ್ರಿಯ ಮುಖ್ಯಮಂತ್ರಿಯಾಗಿರುವ ಸಿಎಂ ಬೊಮ್ಮಾಯಿ ಅವರೂ ಒಬ್ಬ ಯೋಗಿಯಂತೆಯೇ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಅವರು ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆʼʼ ಎಂದು ಶ್ಲಾಘಿಸಿದರು.
ಭಾಷಣದ ನಡುವೆ ಮತ್ತೊಮ್ಮೆ ಸಿಎಂ ಬೊಮ್ಮಾಯಿ ಅವರನ್ನು ಹೆಸರಿಸಿದ ಯೋಗಿ ಆದಿತ್ಯನಾಥ, ಕರ್ನಾಟಕವನ್ನು ಅಭಿವೃದ್ಧಿಪಥದಲ್ಲಿ ಬೊಮ್ಮಾಯಿ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಕರ್ನಾಟಕ ರೂಪುಗೊಳ್ಳಲಿದೆ. ಈ ಕಾರ್ಯದಲ್ಲಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ. ಅದರಲ್ಲೂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಆರೋಗ್ಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಇಂಬು ಸಿಗಲಿದೆ ಎಂದು ಆಶಿಸುವುದಾಗಿ ತಿಳಿಸಿದರು.
ಮಾನವನ ಮನಸ್ಸು ಒಂದುಗೂಡಲಿ
ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೋವಿಡ್-19ರ ಸಂಕಷ್ಟಗಳನ್ನು ಎಲ್ಲರೂ ನೋಡಿದ್ದೇವೆ. ಇದೇ ಕೋವಿಡ್ ಸಮಯದಲ್ಲಿ ಕಾಮಗಾರಿ ನಡೆದು ಕ್ಷೇಮವನ ಇಂದು ಲೋಕಾರ್ಪಣೆಯಾಗಿದೆ. ಸೃಷ್ಟಿಯಲ್ಲಿ ಎಲ್ಲ ಜೀವಜಂತುಗಳೂ ಇವೆ, ಆದರೆ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಆದರೆ ಮಾನವನು ಹೃದಯಗಳನ್ನು ಬೆಸೆಯುವುದಕ್ಕಿಂತಲೂ ಮುಂಚೆಯೇ ಅಣುವನ್ನು ವಿಘಟನೆ ಮಾಡುವುದನ್ನು ರೂಡಿಸಿಕೊಂಡಿದ್ದಾನೆ ಎಂದು ಅಲ್ಬರ್ಟ್ ಐನ್‌ಸ್ಟಿನ್ ಹೇಳಿದ್ದಾರೆ. ಇತರರ ಕ್ಷೇಮವನ್ನು ಬಯಸದವರ ಕೈಗೆ ಶಕ್ತಿ ಸಿಕ್ಕರೆ ಅದರಿಂದ ಸಮಾಜ ಒಡೆಯುತ್ತದೆ. ಚಿತ್ತ ವೃತ್ತಿಯನ್ನು ನಿಯಂತ್ರಿಸಿಕೊಂಡಿರುವವರಿಂದಲೇ ಸಮಾಜದ ಬೆಳವಣಿಗೆ ಆಗುತ್ತದೆ. ಅಂತಹ ಕಾರ್ಯ ಈ ಕೇಂದ್ರದ ಮೂಲಕ ನಡೆಯುತ್ತದೆ ಎಂದು ಆಶಿಸಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಪ್ರದೇಶದ ಜನರ ಸ್ವಾವಲಂಬಿಯಾಗಲೂ ಪ್ರಯತ್ನಿಸುತ್ತಿರುವುದನ್ನು ಶ್ಲಾಘಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಜನರನ್ನು ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನಾಗಿ ಮಾಡದೆ, ಪಾಲುದಾರರನ್ನಾಗಿ ಮಾಡಿದ್ದಾರೆ. ಅನೇಕ ಸ್ತ್ರೀಯರಿಗೆ ಸ್ವಸಹಾಯ ಸಂಘಗಳ ಮೂಲಕ ಸ್ವಾಭಿಮಾನದ ಬದುಕು ನೀಡಿದ್ದಾರೆ. ಉಜಿರೆ, ಧಾರವಾಡ ಸೇರಿ ವಿವಿಧೆಡೆ ಅತ್ಯುತ್ತಮ ಆರೋಗ್ಯ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಇದೀಗ ಕ್ಷೇಮವನದ ಮೂಲಕ ಕ್ಷೇಮ ಕ್ಷೇತ್ರದಲ್ಲಿ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದರು.
ಕ್ಷೇಮವನದಲ್ಲಿ ಔಷಧವೇ ಇಲ್ಲ!
ದೇವರು ಮತ್ತು ಗುರುಗಳಲ್ಲಿ ಏನು ವ್ಯತ್ಯಾಸ ಎಂದು ನೋಡಿದಾಗ, ಗುರು ಎಂದರೆ ಆತ್ಮಸಾಕ್ಷಾತ್ಕಾರ ಆದ ಮನುಷ್ಯರು. ಸಂತರು ಸಾಮಾನ್ಯರಂತೆಯೇ ಇರುತ್ತಾರೆಯಾದರೂ ಅವರ ದೇಹ, ಬರೆಯುವ ಸ್ಲೇಟ್ ಇದ್ದಂತೆ. ನಮ್ಮಲ್ಲಿರುವ ಕಷ್ಟವನ್ನು ಗುರುವಿನಲ್ಲಿ ನಿವೇದನೆ ಮಾಡಿಕೊಂಡರೆ ಅದು ನೇರವಾಗಿ ದೇವರಿಗೆ ಸಲ್ಲುತ್ತದೆ. ಜನರು ಸನ್ಮಾರ್ಗದಿಂದ ವಿಚಲಿತರಾಗದಂತೆ ನೋಡಿಕೊಳ್ಳುವುದು ಗುರುಗಳ ಕೆಲಸ. ರಾಜಕೀಯದಲ್ಲಿ ಧರ್ಮ ಇರಬೇಕು, ಆದರೆ ಧರ್ಮದಲ್ಲಿ ರಾಜಕೀಯ ಇರಬಾರದು ಎನ್ನುವಂತೆ ಯೋಗಿ ಆದಿತ್ಯನಾಥರಿದ್ದಾರೆ. ಮೊದಲ ಆಯುಷ್ ವಿವಿ ಸ್ಥಾಪನೆ ಮಾಡಿದ್ದಾರೆ, ಇದು ಕರ್ನಾಟಕಕ್ಕೂ ಮಾದರಿ ಆಗಲಿ ಎಂದು ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು.
ಕ್ಷೇಮವನದಲ್ಲಿ ಯಾವುದೇ ಔಷಧ ಇಲ್ಲದೆ ಆರೋಗ್ಯವನ್ನು ವೃದ್ಧಿಸಲಾಗುತ್ತದೆ ಎಂದು ತಿಳಿಸಿದ ವೀರೇಂದ್ರ ಹೆಗ್ಗಡೆಯವರು, ಜನರ ಒತ್ತಾಸೆ ಮೇರೆಗೆ ಇದನ್ನು ಸ್ಥಾಪಿಸಲಾಗಿದೆ ಎಂದರು.
ಇದನ್ನೂ ಓದಿ | ಯೋಗಿ ಆದಿತ್ಯನಾಥ ಬೆಂಗಳೂರಿನಲ್ಲಿ ಉದ್ಘಾಟಿಸಿದ ʼಕ್ಷೇಮವನʼ ಹೇಗಿದೆ? ಅದರ ವಿಶೇಷತೆಯೇನು? ಇಲ್ಲಿದೆ ವಿವರ