ಮೈಸೂರು: ಕಾರಿಗೆ ಡಿಕ್ಕಿ ಹೊಡೆದ ಬೈಕ್ ಚಾಲಕನನ್ನು ಭವಾನಿ ರೇವಣ್ಣ (Bhavani Revanna) ತರಾಟೆಗೆ ತೆಗೆದುಕೊಂಡ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಪಘಾತ ನಡೆದಾಗ ಬೈಕ್ ಸವಾರನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈದಿರುವ ಭವಾನಿ ರೇವಣ್ಣ, ಬೈಕ್ ಸುಟ್ಟು ಹಾಕಿ ಎಂದು ಆಕ್ರೋಶ ಹೊರಹಾಕಿರುವುದು ಕಂಡುಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ಅಪಘಾತ ನಡೆದಿದೆ. ಹಾಸನ – ಕೆ.ಆರ್.ನಗರ ರಸ್ತೆಯಲ್ಲಿ ಬರುತ್ತಿದ್ದಾಗ ಭವಾನಿ ರೇವಣ್ಣ ಕಾರಿಗೆ ಬೈಕ್ ಸವಾರರೊಬ್ಬರು ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಅಕ್ಕಾ ಕಾರು ಸೈಡಿಗೆ ಹಾಕಿ ಅಂದಿದ್ದಕ್ಕೆ ಕಿಡಿಕಾರಿರುವ ಭವಾನಿ ರೇವಣ್ಣ, ನನ್ನ ಕಾರಿಗೆ ಡ್ಯಾಮೇಜ್ ಆಗಿದೆ. ರಿಪೇರಿ ಮಾಡಿಸೋಕೆ 50 ಲಕ್ಷ ರೂ. ಹಣ ಬೇಕು. ಯಾರಾದರೂ ನ್ಯಾಯ ಮಾತನಾಡುವವರು ಐವತ್ತು ಲಕ್ಷ ಹಣ ಕೊಟ್ಟು ಮಾತನಾಡಿ. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು ಎಂದು ದರ್ಪ ತೋರಿದ್ದಾರೆ.
ಸಾಲಿಗ್ರಾಮ ಠಾಣೆಯ ಇನ್ಸ್‌ಪೆಕ್ಟರ್‌ನ ಕರೀರಿ, ತಗೊಂಡು ಹೋಗಿ ಇವನನ್ನು ಒಳಗೆ ಹಾಕಲಿ, ಸಾಯಂಗಿದ್ರೆ ಬಸ್ಸಿಗೆ ಸಿಕ್ಕಿ ಸಾಯಬೇಕಿತ್ತು. ಸಾಯೋಕೆ ನನ್ ಕಾರೇ ಬೇಕಿತ್ತಾ? ಅವನು ಸತ್ತೋಗ್ತಾನೆ ಅಂತ ಅವನ ಬಗ್ಗೆ ಯಾಕೆ ಯೋಚನೆ ಮಾಡ್ತೀಯಾ? ಒಂದೂವರೆ ಕೋಟಿ ರೂಪಾಯಿ ಕಾರು ಬಗ್ಗೆ ಯೋಚನೆ ಮಾಡು ಎಂದಿರುವ ಭವಾನಿ ರೇವಣ್ಣ, ಬೈಕ್ ಸವಾರನನ್ನು ನಿಲ್ಲಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಇದನ್ನೂ ಓದಿ | ಚಿಕ್ಕಮಗಳೂರು ಪೊಲೀಸ್-ವಕೀಲರ ಸಂಘರ್ಷ; ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ
ಅಪಘಾತದಲ್ಲಿ ಗಾಯಗೊಂಡವನನ್ನು ಸಂತೈಸುವುದು ಬಿಟ್ಟು ಹಿಗ್ಗಾಮುಗ್ಗಾ ಬೈಯುವ ಮೂಲಕ ಭವಾನಿ ರೇವಣ್ಣ ಮಾನವೀಯತೆ ಮರೆತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ