Site icon Vistara News

Bike Wheeling: ರಾಜ್ಯದಲ್ಲಿ ಬೈಕ್ ವೀಲಿಂಗ್‌ ಹುಚ್ಚಾಟ; ವಾಹನ ಸವಾರರಿಗೆ ಸಂಚಾರ ಸಂಕಟ

Bike wheeling problem

ಅಭಿಷೇಕ್‌ ಜೈಶಂಕರ್‌, ಬೆಂಗಳೂರು
ರಾಜ್ಯ ರಾಜಧಾನಿಯಲ್ಲಿ ಸಂಚಾರ ದಟ್ಟಣೆಯೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ಇದರ ನಿಯಂತ್ರಣಕ್ಕೆ ಹರಸಾಹಸ ಪಡಬೇಕಿರುವ ಸಂದರ್ಭದಲ್ಲಿ ಬೈಕ್ ವೀಲಿಂಗ್‌ ಮತ್ತೊಂದು ಸಮಸ್ಯೆಯಾಗಿದ್ದು, ಜನರ ಜೀವಕ್ಕೂ ಸಂಚಕಾರವನ್ನು ತಂದೊಡ್ಡುವಂತಿದೆ. ಇದು ಕೇವಲ ಬೆಂಗಳೂರಿನ ಸಮಸ್ಯೆ ಮಾತ್ರವಲ್ಲದೆ, ರಾಜ್ಯದ ಹಲವು ಕಡೆ ನಡೆಯುತ್ತಿದೆ. ಇದರ ನಿಯಂತ್ರಣಕ್ಕಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಂಡಿದ್ದರೂ ಪ್ರಮುಖ ರಸ್ತೆಗಳ ಅಲ್ಲಲ್ಲಿ ವೀಲಿಂಗ್‌ ಪ್ರಕರಣಗಳು ಕಂಡುಬರುತ್ತಲೇ ಇವೆ.

ಕಳೆದ ವಾರವಷ್ಟೇ ಓಲ್ಡ್‌ ಏರ್‌ಪೋರ್ಟ್ ರಸ್ತೆಯಲ್ಲಿ ಮೂವರು ಯುವಕರು ಮೂರು ದ್ವಿಚಕ್ರ ವಾಹನದಲ್ಲಿ ವೀಲಿಂಗ್‌ ಮಾಡುವ ಮೂಲಕ ಹುಂಬುತನವನ್ನು ಪ್ರದರ್ಶಿಸಿದ್ದರು. ಇದರಿಂದಾಗಿ ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿತ್ತು. ಚಿತ್ರದುರ್ಗದ ಗೋನೂರು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಿಯುತ್ತಿರುವ ಮಳೆಯಲ್ಲಿಯೇ ಯುವಕರ ತಂಡವು ಬೈಕ್ ವೀಲಿಂಗ್‌ ಮಾಡಿ ದುಸ್ಸಾಹಸವನ್ನು ಮೆರೆದಿದ್ದವು. ೨೦೨೨ರ ಮೇ ತಿಂಗಳಿನಲ್ಲಿ ಈ ಪ್ರಕರಣ ನಡೆದಿದ್ದು, ವಿಡಿಯೋ ಸಾಕಷ್ಟು ವೈರಲ್‌ ಆಗಿತ್ತು. ಇದೇ ರೀತಿ ಹಲವಾರು ಪ್ರಕರಣಗಳು ಆಗಿಂದಾಗ ನಡೆಯುತ್ತಲೇ ಇದ್ದು, ಸಂಚಾರಿ ಕಾನೂನನ್ನು ಗಾಳಿಗೆ ತೂರಲಾಗುತ್ತಿದೆ.

ಯುವಕರೇ ಹೆಚ್ಚು – ಇದೊಂಥರ ಹುಚ್ಚು
ಈ ವೀಲಿಂಗ್‌ ಪ್ರವೃತ್ತಿಯು ಯುವ ಸಮೂಹದಲ್ಲಿ ಅತಿ ಹೆಚ್ಚು ಕಾಣುತ್ತಿದ್ದು, ಕುಡಿ ಮೀಸೆ ಮುಖದಲ್ಲಿ ಕಾಣುತ್ತಿದ್ದಂತೆ ಹೀರೋಯಿಸಂ ತೋರಿಸುತ್ತಿದ್ದೇವೆಂಬ ಹುಂಬುತನದಲ್ಲಿ ಇಂತಹ ಪುಂಡಾಟಗಳನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಹೀಗೆ ಬೈಕ್ ವೀಲಿಂಗ್‌ ಮಾಡುವ ಯುವಕರ ವಯಸ್ಸನ್ನು ಗಮನಿಸುವುದಾದರೆ ೧೮ರಿಂದ ೨೨ ವರ್ಷದ ವಯೋಮಿತಿಯೊಳಗಿನವರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇವರ ಈ ಹುಚ್ಚಾಟವು ಕೆಲವರ ಪ್ರಾಣಕ್ಕೆ ಕುತ್ತು ತಂದಿದ್ದೂ ಇವೆ.

ಆರ್‌ಎಕ್ಸ್‌ ೧೦೦/ಡಿಯೋ ಹೆಚ್ಚು
ಯುವಕರ ಈ ವೀಲಿಂಗ್‌ ಹುಚ್ಚಾಟ ಎಷ್ಟರಮಟ್ಟಿಗೆ ಇದೆ ಎಂದರೆ ಅವರು ಇದಕ್ಕಾಗಿ ಹಗುರ ಭಾರ ಇರುವ ಬೈಕ್‌ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಇವರಿಗೆ ೨ ಸ್ಟ್ರೋಕ್‌ ಬೈಕ್‌ ಆದ ಯಮಹಾ ಆರ್‌ಎಕ್ಸ್‌ ೧೦೦ ಹಾಟ್‌ ಫೇವರಿಟ್‌. ಆರ್‌ಎಕ್ಸ್‌ ೧೦೦ ಉತ್ಪಾದನೆ ನಿಂತಿದ್ದರೂ ಸಹ ಅದರ ಸೆಕೆಂಡ್‌ ಹ್ಯಾಂಡ್‌ ವ್ಯಾಪಾರ ಭರ್ಜರಿಯಾಗಿಯೇ ಇದೆ. ಇದಕ್ಕೆ ಹೆಚ್ಚಿನ ಬೆಲೆ ಕೊಟ್ಟು ಖರೀದಿ ಮಾಡುವವರೂ ಇದ್ದಾರೆ. ಇದರ ಜೊತೆಗೆ ಹೋಂಡಾ ಡಿಯೋವನ್ನು ಸಹ ಬಳಸುತ್ತಾರೆ.

ಇದನ್ನೂ ಓದಿ | Bangalore Traffic | ಟ್ರಾಫಿಕ್‌ ದಟ್ಟಣೆ ನಿಭಾಯಿಸಲು ಸಿಎಂ ಸಮಾಲೋಚನೆ

ಆಲ್ಟ್ರೇಷನ್‌ ಕ್ರೇಜ್
ಕೆಲವರು ವೀಲಿಂಗ್‌ ಕಾರಣಕ್ಕಾಗಿಯೇ ತಮ್ಮ ಬೈಕ್‌ ಅನ್ನು ಆಲ್ಟ್ರೇಷನ್‌ ಮಾಡಿಸಿಕೊಂಡಿರುತ್ತಾರೆ. ಅದನ್ನು ತಮಗೆ ಬೇಕಾದಂತೆ ಹಲವಾರು ರೀತಿಯ ಮಾರ್ಪಾಡುಗಳನ್ನು ಮಾಡಿಸಿಕೊಂಡಿರುತ್ತಾರೆ. ಹ್ಯಾಂಡಲ್‌ಗಳ ಬದಲಾವಣೆ, ದೊಡ್ಡ ಗಾತ್ರದ ವೀಲ್‌ಗಳು, ಸ್ಟಿಕ್ಕರ್‌ಗಳು, ಲೈಟಿಂಗ್‌ ಸಿಸ್ಟಮ್‌, ಮಡ್‌ಗಾರ್ಡ್‌ ತೆಗೆದುಹಾಕುವುದು, ಸೈಲೆನ್ಸರ್‌ಗಳ ಮಾರ್ಪಾಡು ಸೇರಿದಂತೆ ಇನ್ನಿತರ ಆಲ್ಟ್ರೇಷನ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಸ್ನೇಹಿತ ವರ್ಗದಲ್ಲಿ ಹೆಚ್ಚುಗಾರಿಕೆಯ ಪ್ರದರ್ಶನಗಳನ್ನು ಮಾಡಿಕೊಂಡು ವೀಲಿಂಗ್‌ ಮಾಡಲು ರಸ್ತೆಗಿಳಿಯುತ್ತಿದ್ದಾರೆ. ಇಂತಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಪೊಲೀಸರು ಜೂನ್‌ ೨೭ರಂದು ೫ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು. ಬಳಿಕ ಸೈಲೆನ್ಸರ್‌ಗಳ ಮೇಲೆ ಬುಲ್ಡೋಜರ್‌ ಹತ್ತಿಸಿ ನಾಶಪಡಿಸಿದ್ದಾರೆ. ಜತೆಗೆ ಹಾಫ್‌ ಹೆಲ್ಮೆಟ್‌ಗಳನ್ನೂ ಪುಡಿಗಟ್ಟಿದ್ದಾರೆ.

ಬೆಂಗಳೂರಿನ ಎಲ್ಲೆಲ್ಲಿ ವೀಲಿಂಗ್‌ ಹೆಚ್ಚು?
ಸಾಮಾನ್ಯವಾಗಿ ಯುವಕರು ನೇರ, ಗುಂಡಿಗಳಿಲ್ಲದ ಹಾಗೂ ಉಬ್ಬುತಗ್ಗುಗಳಿಲ್ಲದ ರಸ್ತೆಗಳನ್ನು ವೀಲಿಂಗ್‌ಗಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರೊಟ್ಟಿಗೆ ಫಾಸ್ಟ್ ಮೂವಿಂಗ್‌ ಇರುವ ರಸ್ತೆಗಳನ್ನು ಇವರು ಹೆಚ್ಚೆಚ್ಚು ಬಳಕೆ ಮಾಡಿಕೊಳ್ಳುತ್ತಿದ್ದು, ಬೆಂಗಳೂರಿನ ಮೇಖ್ರಿ ಸರ್ಕಲ್ ಅಂಡರ್ ಪಾಸ್ ರಸ್ತೆ, ಚಿಕ್ಕಜಾಲ ಏರ್‌ಪೋರ್ಟ್ ರಸ್ತೆ, ತುಮಕೂರು ರಸ್ತೆ, ಬಿಇಎಲ್ ಸರ್ಕಲ್ ಅಂಡರ್ ಪಾಸ್ ರಸ್ತೆ, ಸಿಟಿ ಮಾರ್ಕೆಟ್ ಫ್ಲೈ ಓವರ್, ಸುಮನಹಳ್ಳಿ ರಿಂಗ್ ರೋಡ್, ನೈಸ್ ರಸ್ತೆ, ಔಟರ್ ರಿಂಗ್ ರೋಡ್, ನಾಗವಾರ ಮಾನ್ಯತಾ ಟೆಕ್ ಪಾರ್ಕ್ ರಸ್ತೆಗಳು ವೀಲಿಂಗ್ ಮಾಡುವವರಿಗೆ ಹಾಟ್ ಸ್ಪಾಟ್ ಆಗಿದೆ. ಅದರಲ್ಲೂ ಏರ್‌ಪೋರ್ಟ್ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳು ಸಹ ಬೈಕ್‌ ಸ್ಟಂಟ್‌ ಮಾಡುವವರ ಹುಚ್ಚಾಟಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರಿನ ಎಲ್ಲಿ ಆಲ್ಟ್ರೇಷನ್?‌
ಬೆಂಗಳೂರಿನಲ್ಲಿ ಹಲವಾರು ಕಡೆ ಗ್ಯಾರೇಜ್‌ಗಳಲ್ಲಿ‌ ವೀಲಿಂಗ್‌ಗೋಸ್ಕರವೇ ಬೈಕ್ ಆಲ್ಟ್ರೇಷನ್‌ ಮಾಡಿಕೊಡಲಾಗುತ್ತಿದ್ದು, ಮುಖ್ಯವಾಗಿ ಶಿವಾಜಿನಗರದ ಗಲ್ಲಿಗಳಲ್ಲಿ, ಪುಲಿಕೇಶಿನಗರದ ಕೆಲವು ಆಯ್ದ ಗ್ಯಾರೇಜ್‌ಗಳಲ್ಲಿ ಬೈಕ್‌ ಮಾರ್ಪಾಡನ್ನು ಹೆಚ್ಚಾಗಿ ಮಾಡಿಕೊಡಲಾಗುತ್ತಿದೆ ಎಂಬ ಗುಮಾನಿ ಇದೆ. ಇಲ್ಲಿ ಡಿಫಾಲ್ಟ್ ಸೈಲೆನ್ಸರ್‌ಗಳನ್ನು ಮಾಡಿಕೊಡಲಾಗುತ್ತಿದ್ದು, ವೀಲಿಂಗ್‌ ಸಮಯದಲ್ಲಿ ಬ್ಯಾಲೆನ್ಸ್‌ಗೆ ಬೇಕಾದ ರೀತಿಯಲ್ಲಿ ಆಲ್ಟ್ರೇಷನ್ ಮಾಡಿಕೊಡಲಾಗುತ್ತದೆ ಎಂಬ ದೂರುಗಳು ಇವೆ. ಇದು ಕಾನೂನು ಬಾಹಿರ ಕೃತ್ಯವಾದರೂ ತೆರೆಮರೆಯಲ್ಲಿ ಎಲ್ಲವೂ ನಡೆಯುತ್ತದೆ ಎನ್ನಲಾಗಿದೆ.‌

ಇದನ್ನೂ ಓದಿ | ಬೈಕ್ ವೀಲಿಂಗ್ ಶೋಕಿ ಮಾಡಿದವರಿಗೆ ಪೊಲೀಸರ ‘ಬುಲ್ಡೋಜರ್’ ಟ್ರೀಟ್ಮೆಂಟ್

ಬೈಕ್‌ ವೀಲಿಂಗ್‌ ವಿರುದ್ಧ ಕಾನೂನು‌ ಕ್ರಮವೇನು..?
ವೀಲಿಂಗ್‌ ಪ್ರಕರಣವು ಶಿಕ್ಷಾರ್ಹ ಹಾಗೂ ದಂಡಾರ್ಹ ಅಪರಾಧವಾಗಿದೆ. ಈ ಮೊದಲು ವೀಲಿಂಗ್ ಮಾಡಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಅವರಿಗೆ ದಂಡ ವಿಧಿಸುವ ಜೊತೆಗೆ ವಾಹನವನ್ನೂ ಸಹ ಜಪ್ತಿ ಮಾಡಲಾಗುತ್ತಿತ್ತು. ಇನ್ನು ಸವಾರರು ಅಪ್ರಾಪ್ತರಾಗಿದ್ದರೆ ಅವರ ಪೋಷಕರ ಮೇಲೂ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇರುತ್ತದೆ.

ಈ ವೀಲಿಂಗ್ ಪ್ರಕರಣಗಳು ಹೆಚ್ಚುತ್ತಾ ಹೋದಂತೆ ಕಠಿಣ ‌ಕಾನೂನುಗಳನ್ನು ರೂಪಿಸಿದ ಕರ್ನಾಟಕ ಪೊಲೀಸ್‌ ಇಲಾಖೆಯು ವೀಲಿಂಗ್‌ ಮಾಡುವವರ ಜೊತೆಗೆ ಆ ವಾಹನವನ್ನು ಮಾರ್ಪಾಡು ಮಾಡುತ್ತಿದ್ದ ಗ್ಯಾರೇಜ್ ಮೆಕಾನಿಕ್ ಮೇಲೆಯೂ ಕ್ರಮ ಕೈಗೊಳ್ಳುತ್ತಿದೆ. ಆಲ್ಟ್ರೇಷನ್‌ ಮಾಡುವ ಗ್ಯಾರೇಜ್ ಮಾಲೀಕನ ಮೇಲೆ ವಾಹನ ಕಾಯ್ದೆ ಅಡಿ ಕ್ರಮ ಕೈಗೊಂಡು ಗ್ಯಾರೇಜ್ ಪರವಾನಗಿಯನ್ನು ಸಹ ರದ್ದು ಮಾಡಲು ಶಿಫಾರಸು ಮಾಡಲಾಗುತ್ತದೆ.

ಎಚ್ಚೆತ್ತುಕೊಳ್ಳಬೇಕಿದೆ ಪೋಷಕರು
ಯುವಕರ ಈ ವೀಲಿಂಗ್‌ ಪ್ರಹಸನಗಳು ನಿಲ್ಲಬೇಕೆಂದರೆ ಪೋಷಕರ ಪಾತ್ರ ಬಹಳ ದೊಡ್ಡದಿರುತ್ತದೆ. ಮಕ್ಕಳು ಕೇಳಿದ್ದನ್ನೆಲ್ಲ ಕೊಡುವ ಮೊದಲು ಅದರ ಅವಶ್ಯಕತೆಯನ್ನು ಮೊದಲು ತಿಳಿದುಕೊಳ್ಳುವ ಕೆಲಸ ಆಗಬೇಕು. ಇನ್ನು ಮಕ್ಕಳಿಗೆ ವಾಹನಗಳನ್ನು ಕೊಡಿಸಿದ ಮೇಲೆ ಅವರ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂಬ ಮನವಿ ಸಹಿತ ಎಚ್ಚರಿಕೆಯನ್ನು ಪೊಲೀಸರು ಆಗಾಗ ಮಾಡುತ್ತಲೇ ಇದ್ದಾರೆ. ಹೀಗಾಗಿ ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ.

ಬೈಕ್‌ ವೀಲಿಂಗ್‌ ಮೇಲೆ ಸೆಕ್ಷನ್‌ ಹಾಗೂ ದಂಡ
ಬೈಕ್ ಸ್ಟಂಟ್ ಮಾಡಿದವರ ಮೇಲೆ ಐಪಿಸಿ ಸೆಕ್ಷನ್ 279ರ ಅಡಿಯಲ್ಲಿ 1000 ರೂಪಾಯಿ ದಂಡ ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವೀಲಿಂಗ್ ಮಾಡಿದವರನ್ನು ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಬಿಟ್ಟುಕಳಿಸಲಾಗುತ್ತದೆ.‌

ಇದನ್ನೂ ಓದಿ | ದಂಡ ಹಾಕಿದ ಪೊಲೀಸ್‌ಗೆ ʼಪವರ್‌ʼ ಇಲ್ಲದಂತೆ ಮಾಡಿದ ಬೈಕ್‌ ಸವಾರ; ಇಂಥವರೂ ಇರ್ತಾರಾ?

ರೀಲ್ಸ್‌ ಮೇಲೆ ಪೊಲೀಸರ ಕಣ್ಣು
ಯುವಕರು ಈ ಹುಚ್ಚಾಟವನ್ನು ನಡುರಸ್ತೆಯಲ್ಲಿ ಮಾಡುವುದಲ್ಲದೆ ಅದನ್ನು ವಿಡಿಯೋ ಮಾಡಿಕೊಂಡು ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಟ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ಭ್ರಮೆಯಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆಯ ಟೆಕ್ನಿಕಲ್ ಸೆಲ್ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

Exit mobile version