ಬೆಂಗಳೂರು: ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ (Chamarajpet Ground) ಗಣೇಶೋತ್ಸವ ಆಚರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಮೈದಾನದ ಸುತ್ತಲೂ ಖಾಕಿ ಕಾವಲು ಮುಂದುವರಿದಿದೆ. ಮಂಗಳವಾರ ಸಂಜೆಯಿಂದಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಮೂರು ಕೆಎಸ್‌ಆರ್‌ಪಿ, ಒಂದು ಸ್ವಾಟ್ ಪಡೆ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.
ಗುಂಪು ಗುಂಪು ಓಡಾಟಕ್ಕೆ ಬ್ರೇಕ್
ಈಗಾಗಲೇ ಮೈದಾನದ ಸುತ್ತಮುತ್ತ ಗುಂಪು ಗುಂಪಾಗಿ ಓಡಾಡುವುದು, ನಿಲ್ಲುವುದನ್ನು ನಿಷೇಧಿಸಲಾಗಿದೆ. ಜತೆಗೆ ಅನಾವಶ್ಯಕ ಸಂಚರಿಸುವವರ ಮೇಲೆ ಪೊಲೀಸ್ ಸಿಬ್ಬಂದಿ ನಿಗಾವಹಿಸಲಿದ್ದಾರೆ. ಮೈದಾನದ ಒಳಗೆ ಬರಲು ಯಾರಿಗೂ ಅವಕಾಶವಿಲ್ಲ. ಮೈದಾನದ ನಾಲ್ಕು ದಿಕ್ಕುಗಳಲ್ಲಿ ಭಧ್ರತೆಗೆ ಮುಂದಾಗಿದ್ದು, ಮೂರು ವ್ಯಾನ್‌ಗಳಲ್ಲಿ ಆರ್‌ಎಎಫ್ ಪಡೆ ಆಗಮಿಸಿದೆ. ಒಂಭತ್ತು ಗಂಟೆ ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಬುಧವಾರ ಹಾಗೂ ಗುರುವಾರ ಮೈದಾನದ ಸುತ್ತ ಖಾಕಿ ಕಾವಲು ಇರಲಿದೆ.
ಏನಿದು ವಿವಾದ?
ಚಾಮರಾಜಪೇಟೆ ಮೈದಾನವನ್ನು ಬಿಬಿಎಂಪಿ ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಣೆ ಮಾಡಿದ ಬಳಿಕ ಬಿಬಿಎಂಪಿ ಆದೇಶವನ್ನು ಪ್ರಶ್ನಿಸಿ ವಕ್ಫ್ ಬೋರ್ಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಮಧ್ಯೆ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದ ಸ್ವಾತಂತ್ರ್ಯ ದಿನಾಚರಣೆ ನೆರವೇರಿಸಲಾಗಿತ್ತು. ಬಳಿಕ ಅದ್ಧೂರಿ ಗಣೇಶೋತ್ಸವ ನಡೆಸಲು ಚಾಮರಾಜಪೇಟೆ ನಾಗರಿಕರ ವೇದಿಕೆ ಒಕ್ಕೂಟ ಹಾಗೂ ವಿವಿಧ ಹಿಂದುಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ಸರ್ವರಿಗೂ ಸೇರಿದ ಮೈದಾನವನ್ನು ಬಳಸಿಕೊಳ್ಳಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದವು.
ಕೇವಲ ರಂಜಾನ್ ಹಾಗೂ ನಮಾಜ್ ಮಾಡಲು ಸರ್ಕಾರ ಅವಕಾಶ ನೀಡುತ್ತದೆ. ಆದರೆ ಕನ್ನಡ ರಾಜ್ಯೋತ್ಸವ, ಗಣೇಶೋತ್ಸವ ಅಥವಾ ಹಿಂದುಗಳ ಇನ್ನಿತರ ಹಬ್ಬಗಳನ್ನು ಆಚರಿಸಲು ಅನುಮತಿ ನೀಡುತ್ತಿಲ್ಲ. ಇದು ಹಿಂದುಗಳ ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಇದು ಸಾರ್ವಜನಿಕ ಆಸ್ತಿಯಾಗಿರುವುದರಿಂದ ಎಲ್ಲರಿಗೂ ಮುಕ್ತ ಅವಕಾಶ ಕೊಡಬೇಕೆಂದು ಕಿಡಿಕಾರಿದರು.
ಚಾಮರಾಜಪೇಟೆ ಮೈದಾನದ ಮಾಲೀಕತ್ವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಬಿಬಿಎಂಪಿ ಜಂಟಿ ಆಯುಕ್ತರಿಗೆ ಇಲ್ಲ. ಇದುವರೆಗೂ ಈದ್ಗಾ ಮೈದಾನ ವಕ್ಫ್ ಬೋರ್ಡ್ ಅಧೀನದಲ್ಲಿತ್ತು. ಹೀಗಾಗಿ ಜಂಟಿ ಆಯುಕ್ತರ ಆದೇಶ ರದ್ದು ಮಾಡಬೇಕು ಎನ್ನುವ ವಾದವನ್ನು ಮುಂದಿಟ್ಟುಕೊಂಡು ವಕ್ಫ್ ಬೋರ್ಡ್ ಕೋರ್ಟ್ ಮೆಟ್ಟಿಲೇರಿತ್ತು. ಈ ಮಧ್ಯೆ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಿದೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನ| ತೀರ್ಪು ಪಾಲಿಸುತ್ತೇವೆ ಎಂದ ಸಚಿವ ಅಶೋಕ್, ಮಾಹಿತಿ ಪಡೆದ ಸಿಎಂ