ಚಿಕ್ಕೋಡಿ: ಬಾಲಕಿಯ ಮೇಲೆ ಎರಗಿ ತನ್ನ ಕಾಮದಾಸೆಯನ್ನು (Physical Abuse) ತೀರಿಸಿಕೊಂಡು ಕೊಂದು (murder case) ಹಾಕಿದ್ದ ಕಾಮುಕನಿಗೆ ಗಲ್ಲುಶಿಕ್ಷೆ ಪ್ರಕಟವಾಗಿದೆ. ಬೆಳಗಾವಿಯ ಪೋಕ್ಸೊ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಆದೇಶ ಹೊರಡಿಸಿದೆ. ಆರೋಪಿ ಉದ್ದಪ್ಪ ರಾಮಪ್ಪ ಗಾಣಿಗೇರ(32) ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
2017ರಲ್ಲಿ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪ್ರಾಪ್ತೆ ಮೇಲೆ ತನ್ನ ಕಾಮದ ಕಣ್ಣಿಟ್ಟಿದ್ದ ಕಾಮುಕ ಉದ್ದಪ್ಪ ರಾಮಪ್ಪ , ಯಾರು ಇಲ್ಲದೆ ಇರುವಾಗ ಬಾಲಕಿಗೆ ಚಾಕೋಲೇಟ್ ಆಸೆ ತೋರಿಸಿದ್ದ. ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಚಾಕೋಲೇಟ್ ಕೊಡಿಸಿ ಪುಸಲಾಯಿಸಿದ್ದ ಕೀಚಕ ಬಳಿಕ ಕಬ್ಬಿನ ಗದ್ದೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. ತನ್ನ ಕೃತ್ಯ ಎಲ್ಲಿ ಹೊರಬರುತ್ತೋ ಎಂದು ನಂತರ ಮಗುವಿನ ಕಣ್ಣು, ಮೂಗಿಗೆ ಮಣ್ಣು ಹಾಕಿ ಕೊಲೆ ಮಾಡಿದ್ದ.
ಪ್ರಕರಣದ ಕೂಲಂಕುಷ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಅಪರಾಧಿಗೆ ಗಲ್ಲು ಶಿಕ್ಷೆ ಮತ್ತು 45 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಬಾಲಕಿ ಪೋಷಕರಿಗೆ 3 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಹಾರೂಗೇರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ.
ರಾಯಚೂರಿನಲ್ಲಿ ಮನೆ ಮಾಲೀಕಿಯನ್ನು ಕೊಂದ ಬಾಡಿಗೆದಾರ
ರಾಯಚೂರಿನಲ್ಲಿ ಬಾಡಿಗೆದಾರನಿಂದ ಮಹಿಳೆಯೊಬ್ಬರ ಕೊಲೆ ಆಗಿದೆ. ರಾಯಚೂರು ನಗರದ ಉದಯ್ ನಗರದಲ್ಲಿ ಘಟನೆ ನಡೆದಿದೆ. ಶೋಭಾ ಪಾಟೀಲ್(60) ಕೊಲೆಯಾದವರು. ಇದೇ ಸೆಪ್ಟೆಂಬರ್25 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಸ್ವ ಗ್ರಾಮದಲ್ಲಿ ಆರೋಪಿ ತಲೆಮರೆಸಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಆರೋಪಿ ಶಿವು ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ವೃದ್ಧೆ ಶೋಭಾ ಮನೆಯಲ್ಲಿ ಶಿವು ಬಾಡಿಗೆಗೆ ಇದ್ದ. ಬೆಂಗಳೂರಿನಲ್ಲಿ ಮಕ್ಕಳ ಜತೆ ಇದ್ದ ಶೋಭಾ ಇತ್ತೀಚೆಗೆ ರಾಯಚೂರಿಗೆ ಬಂದಿದ್ದರು. ಮನೆ ಖಾಲಿ ಮಾಡುವಂತೆ ಆರೋಪಿ ಶಿವುಗೆ ತಿಳಿಸಿದ್ದರು. ಘಟನಾ ದಿನ ಶೋಭಾರ ಮನೆಗೆ ಬಂದಿದ್ದ. ಮಲಗಿದ್ದ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಂದು, ಚಿನ್ನಾಭರಣ, ಫೋನ್ ಕದ್ದೊಯ್ದಿದ್ದ. ಬಳಿಕ ತಾನೇನು ಮಾಡಿಲ್ಲ ಎಂಬಂತೆ ಮೃತ ಮಹಿಳೆ ಕುಟುಂಬಸ್ಥರ ಜತೆಗೆ ಓಡಾಡಿಕೊಂಡಿದ್ದ. ಶೋಭಾ ಅಂತ್ಯಕ್ರಿಯೆ ಬಳಿಕ ಆಕೆ ಚಿನ್ನಾಭರಣ ಕಾಣದೇ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದರು. ಸಿಸಿಟಿವಿ ಒಂದರಲ್ಲಿ ಆತ ಓಡಾಡಿದ್ದ ದೃಶ್ಯ ಸೆರೆ ಆಗಿತ್ತು. ಅದರ ಆಧಾರದಲ್ಲಿ ಆರೋಪಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ