ಬೆಂಗಳೂರು: CM ಬಸವರಾಜ ಬೊಮ್ಮಾಯಿ ನವ ದೆಹಲಿಗೆ ಪ್ರಯಾಣ ಮಾಡುತ್ತಾರೆ ಎಂಬ ವಿಚಾರ ಬಹಿರಂಗವಾದಾಗಿನಿಂದ ಪಕ್ಷದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ತಮಗೂ ಸಚಿವ ಸ್ಥಾನ ಕೊಡಿಸಿ ಎನ್ನುತ್ತ ಹಿರಿಯರು, ಮಾಜಿ ಸಚಿವರುಗಳೆಲ್ಲ ದುಂಬಾಲು ಬಿದ್ದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಮದ್ಯಾಹ್ನ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜೂನ್ 20 ಹಾಗೂ 21 ರಂದು ಪ್ರಧಾನಿ ನರೇಂದ್ರ ಮೋದಿಯವರ ರಾಜ್ಯ ಪ್ರವಾಸವನ್ನು ಯಶಸ್ವಿಗೊಳಿಸಿದ ನಂತರ ಬೊಮ್ಮಾಯಿ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ. ತಕ್ಷಣವೇ ನವದೆಹಲಿ ಪ್ರವಾಸ ನಿಗದಿಪಡಿಸಿಕೊಂಡಿದ್ದಾರೆ.
ಗುರುವಾರ ಸಂಜೆ, ಕೇಂದ್ರ ಸಚಿವರುಗಳ ಭೇಟಿ, ಶುಕ್ರವಾರ ಬೆಳಗ್ಗೆ ಸಚಿವರುಗಳ ಭೇಟಿ ಮಾಡಿ ಶುಕ್ರವಾರ ಸಂಜೆ ವಾಪಸಾಗುತ್ತಾರೆ ಎಂದಷ್ಟೆ ಮುಖ್ಯಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಆದರೆ ಯಾವ ಸಚಿವರುಗಳನ್ನು ಭೇಟಿ ಮಾಡಲಿದ್ದಾರೆ, ಸಚಿವರ ಭೇಟಿ ಹೊರತಾಗಿ ಯಾರನ್ನು ಭೇಟಿ ಮಾಡುತ್ತಾರೆ ಎಂದು ತಿಳಿಸಿಲ್ಲ. ಆದರೆ, ಇದೇ ಸಮಯದಲ್ಲಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಸಿಎಂ ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ಗುರುವಾರ ಬೆಳಗ್ಗೆ ಬೊಮ್ಮಾಯಿ ಅವರ ಆರ್.ಟಿ. ನಗರದ ನಿವಾಸಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗೆಲ್ಲ ಸಚಿವರಾಗಿರುತ್ತಿದ್ದ ಈಶ್ವರಪ್ಪ ಇದೇ ಮೊದಲ ಬಾರಿಗೆ ಮಾಜಿ ಸಚಿವರಾಗಿದ್ದಾರೆ. ಸರ್ಕಾರದ ಗುತ್ತಿಗೆಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ನಂತರ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಇದೀಗ ಮತ್ತೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸಿಎಂಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ನಂತರ ಮಾಜಿ ಸಚಿವ ಲಕ್ಷ್ಮಣ ಸವದಿ ಸಹ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. 2018ರಲ್ಲಿ ಚುನಾವಣೆಯಲ್ಲಿ ಸೋಲುಂಡರೂ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಲಭಿಸಿರಲಿಲ್ಲ ಇತ್ತೀಚೆಗಷ್ಟೆ ನಡೆದ ಚುನಾವಣೆಯಲ್ಲಿ ಸವದಿ ಮತ್ತೊಮ್ಮೆ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನಕ್ಕೆ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಅವರನ್ನು ನೇರವಾಗಿ ಇಬ್ಬರು ಭೇಟಿ ಮಾಡಿದ್ದಾರಾದರೂ ಅನೇಕರು ದೂರವಾಣಿ ಮೂಲಕ ಒತ್ತಡ ಹೇರುತ್ತಿದ್ದಾರೆ. ಕೆಲವರು ನೇರವಾಗಿ ಒತ್ತಡ ಹೇರಿದರೆ ಕೆಲವರು ವಿವಿಧ ಮಠಾಧೀಶರು, ಗಣ್ಯ ವ್ಯಕ್ತಿಗಳ ಮೂಲಕ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಮೂಲಗಳೂ ತಿಳಿಸಿವೆ.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ: ಎರಡು ತಿಂಗಳು ಬೀಸೊ ದೊಣ್ಣೆಯಿಂದ ಬೊಮ್ಮಾಯಿ ಪಾರು
ಸಿಎಂ ಬದಲಾವಣೆ ಇಲ್ಲ
ತುಮಕೂರು: CM ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಮುಖ್ಯಮಂತ್ರಿ ಬದಲಾವಣೆ ಆಗುವುದೇ ಇಲ್ಲ. ನನ್ನ ಖಾತೆಯಲ್ಲಿ ತೃಪ್ತಿ ಹೊಂದಿದ್ದೇನೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ ಒಳ್ಳೆ ಕೆಲಸ ಮಾಡುತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಸಚಿವ ಸಂಪುಟದ ವಿಸ್ತರಣೆ ಕುರಿತು ನಿರ್ಧಾರ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಷ್ಟ್ರಪತಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಸಿಎಂ ದೆಹಲಿಗೆ ಭೇಟಿಕೊಟ್ಟಿದ್ದಾರೆ. ನಾನು ನನ್ನ ಖಾತೆಯಲ್ಲಿ ತೃಪ್ತಿ ಹೊಂದಿದ್ದೇನೆ. ಈ ಖಾತೆಯನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ದೆಹಲಿಗೆ ಹೊರಟ ಸಿಎಂ ಬಸವರಾಜ ಬೊಮ್ಮಾಯಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ