ಬೆಂಗಳೂರು: ಇನ್ನೇನು ಸಂಪುಟ ವಿಸ್ತರಣೆ ಆಗಿಯೇಬಿಡುತ್ತದೆ, ರಾಜಭವನದ ಗಾಜಿನ ಮನೆಯಲ್ಲಿ ʼಈ ಹೆಸರಿನವನಾದ ನಾನುʼ ಎಂದು ಪ್ರಮಾಣವಚನ ಸ್ವೀಕರಿಸುವ ಕನಸು ಕಾಣುತ್ತಿದ್ದವರಿಗೆ ಬಿಜೆಪಿ ತಣ್ಣೀರೆರೆಚಿದೆ. ನವ ದೆಹಲಿಗೆ ಹೋದ ಸಿಎಂ ಬಸವರಾಜ ಬೊಮ್ಮಾಯಿ ಇನ್ನೇನು ಸಚಿವರ ಪಟ್ಟಿಯೊಂದಿಗೆ ಬರುತ್ತಾರೆ ಎಂದು ಕಾದು ಕುಳಿತಿದ್ದವರಿಗೆ ನಿರಾಸೆಯಾಗಿದೆ.
ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಕಳೆದ ವಾರ ಪ್ರವಾಸ ಮಾಡಿದ್ದರು. ಈ ಸಮಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಾವುದೇ ನಕಾರಾತ್ಮಕತೆ ಇಲ್ಲದಂತೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ವಹಿಸಿದ್ದರು. ಸ್ವತಃ ನಡ್ಡಾ ಹಾಗೂ ಮೋದಿ ಅವರಿಂದ ವೇದಿಕೆ ಮೇಲಿಂದಲೇ ಶಹಬ್ಬಾಸ್‌ಗಿರಿ ಪಡೆದಿದ್ದರು.
ಇದನ್ನೂ ಓದಿ | ಸಂಪುಟದ ಕುರಿತು ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಸುನಿಲ್‌ಕುಮಾರ್
ಇದೆಲ್ಲದರ ನಂತರ CM ಬಸವರಾಜ ಬೊಮ್ಮಾಯಿಗುರುವಾರ ನವ ದೆಹಲಿಗೆ ಪ್ರಯಾಣ ಮಾಡುತ್ತಾರೆ ಎಂಬ ವಿಚಾರ ಬಹಿರಂಗವಾದಾಗಿನಿಂದ ಪಕ್ಷದಲ್ಲಿ ಡಿಮ್ಯಾಂಡ್ ಹೆಚ್ಚಾಗಿತ್ತು. ತಮಗೂ ಸಚಿವ ಸ್ಥಾನ ಕೊಡಿಸಿ ಎನ್ನುತ್ತ ಹಿರಿಯರು, ಮಾಜಿ ಸಚಿವರುಗಳೆಲ್ಲ ದುಂಬಾಲು ಬಿದ್ದಿದ್ದರು.
ಗುರುವಾರ ಬೆಳಗ್ಗೆ ಬೊಮ್ಮಾಯಿ ಅವರ ಆರ್.ಟಿ. ನಗರದ ನಿವಾಸಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದರು. ಮತ್ತೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸಿಎಂಗೆ ಮನವಿ ಮಾಡಿದ್ದರು. ಈಶ್ವರಪ್ಪ ನಂತರ ಮಾಜಿ ಸಚಿವ ಲಕ್ಷ್ಮಣ ಸವದಿ ಸಹ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಸಚಿವ ಸ್ಥಾನಕ್ಕೆ ತಮ್ಮ ಹೆಸರನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು.
ಮುಖತಃ ಇಬ್ಬರು ಭೇಟಿ ಮಾಡಿದ್ದಾರಾದರೂ ಅನೇಕರು ದೂರವಾಣಿ ಮೂಲಕ ಒತ್ತಡ ಹೇರುತ್ತಿದ್ದರು. ಕೆಲವರು ನೇರವಾಗಿ ಒತ್ತಡ ಹೇರಿದರೆ ಕೆಲವರು ವಿವಿಧ ಮಠಾಧೀಶರು, ಗಣ್ಯ ವ್ಯಕ್ತಿಗಳ ಮೂಲಕ ಸಚಿವ ಸ್ಥಾನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು.
ನಾನು ಹೇಳೋವರೆಗೂ ಇಲ್ಲ ಎಂದರು
ಗುರುವಾರ ನವದೆಹಲಿಗೆ ತೆರಳೀದ ಸಿಎಂ ಬಸವರಾಜ ಬೊಮ್ಮಾಯಿ, ಶುಕ್ರವಾರ ಮದ್ಯಾಹ್ನ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದರು. ಸ್ವತಃ ಸೂಚಕರಾಗಿಯೂ ಸಹಿ ಮಾಡಿದರು. ಈ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರತಿ ಬಾರಿ ನಾನು ದೆಹಲಿಗೆ ಬಂದಾಗಲೆಲ್ಲ ಸಚಿವ ಸಂಪುಟ ವಿಸ್ತರಣೆ ವಿಚಾರ ಚರ್ಚೆ ಆಗುತ್ತದೆ. ಆದರೆ ನಾನಾಗಿಯೇ ಸಂಪುಟದ ಕುರಿತು ಹೇಳುವವರೆಗೂ ಅಂತಹ ಯಾವುದೇ ವಿಚಾರ ಇರುವುದಿಲ್ಲ ಎಂದರು.
ಆದರೂ ಸಿಎಂ ಅದೇಕೋ ಯಾವುದೋ ವಿಚಾರವನ್ನು ಮುಚ್ಚಿಡುತ್ತಿದ್ದಾರೆ ಎಂದೇ ಕರ್ನಾಟಕದಲ್ಲಿ ಸಚಿವಾಕಾಂಕ್ಷಿಗಳು ನಿರೀಕ್ಷಿಸುತ್ತಿದ್ದರು. ಏಕೆಂದರೆ, ಶುಕ್ರವಾರ ಮದ್ಯಾಹ್ನ ನವ ದೆಹಲಿಯಿಂದ ವಿಮಾನ ಹತ್ತಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಯಾಣವನ್ನು 4.30ಕ್ಕೆ ಮುಂದೂಡಿದ್ದರು. ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ನಡೆಯಬೇಕಿದ್ದ ಅಂಜನಾದ್ರಿ ಬೆಟ್ಟದ ಕುರಿತ ಮಹತ್ವದ ಸಭೆಯನ್ನು ಮುಂದೂಡಿದ್ದರು. ಹೀಗಾಗಿ ಸಿಎಂ ಯಾವುದೋ ಪ್ರಮುಖ ವಿಚಾರದಲ್ಲಿ ಚರ್ಚಿಸಲಿದ್ದಾರೆ ಎಂದೇ ಭಾವಿಸಲಾಗಿತ್ತು.
ವರಿಷ್ಠರ ಮೇಲೆ ಹೊರೆ
ಶುಕ್ರವಾರ ನವ ದೆಹಲಿಯಿಂದ ಆಗಮಿಸಿದ ನಂತರವಾಗಲಿ, ಶನಿವಾರ ಇಡೀದಿನವಾಗಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ವಿಚಾರದಲ್ಲಿ ಚಕಾರ ಎತ್ತಿಲ್ಲ. ಬೆಳಗ್ಗೆಯಿಂದ ವಿವಿಧ ಸಭೆಗಳಲ್ಲಿ ಭಾಗವಹಿಸುತ್ತಲೇ ಇದ್ದು, ಸಭೆ ಕುರಿತು ಮಾತ್ರ ಮಾಹಿತಿ ನೀಡಿದ್ದಾರೆ. ಸಿಎಂ ನವ ದೆಹಲಿಯಲ್ಲಿ ವರಿಷ್ಠರ ಜತೆಗೆ ಸಂಪುಟ ವಿಚಾರ ಚರ್ಚೆ ಮಾಡಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಯನ್ನೂ ಪಕ್ಷದೊಳಗೆ ಬಿಟ್ಟುಕೊಟ್ಟಿಲ್ಲ.
ಈ ಕುರಿತು ಪ್ರಶ್ನಿಸಿದ ಆಕಾಂಕ್ಷಿಗಳಿಗೆ, ವರಿಷ್ಠರ ಮಟ್ಟದಲ್ಲಿ ಸಂಪುಟ ವಿಸ್ತರಣೆ ಯೋಚನೆ ಇಲ್ಲ. ವರಿಷ್ಠರು ರಾಷ್ಟ್ರಪತಿ ಚುನಾವಣೆ ಬಳಿಕ ಗುಜರಾತ್ ಚುನಾವಣೆಯಲ್ಲಿ ಬ್ಯುಸಿ ಆಗುತ್ತಾರೆ. ರಾಜ್ಯ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಚಿಂತೆ ಬಿಟ್ಟು ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ. ಕ್ಷೇತ್ರದಲ್ಲಿಯೇ ಟೀಕಾಣಿ ಹೂಡಿ, ಯಾವುದೇ ಡಿಸ್ಟರ್ಬ್ ಇಲ್ಲದೇ ಸರ್ಕಾರ ನಡೆಸಲು ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಚರ್ಚೆ ಕೈಬಿಡಲಾಗಿದೆ ಎಂದು, ವರಿಷ್ಠರ ಮೇಲೆ ಭಾರ ಹೊರಿಸಿ ಕೈತೊಳೆದುಕೊಂಡಿದ್ದಾರೆ.
ನವ ದೆಹಲಿಗೆ ತೆರಳುವಾಗ ಸಿಎಂ ಸಹ ಸಚಿವ ಸಂಪುಟ ವಿಸ್ತರಣೆ ಕುರಿತು ಆಸಕ್ತಿ ಹೊಂದಿದ್ದರು. ಆದಷ್ಟು ಬೇಗನೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿದರೆ ಸರ್ಕಾರದಲ್ಲಿ ಹೊಸ ಹುಮ್ಮಸ್ಸು ಮೂಡಿ ಚುನಾವಣಾ ವರ್ಷದಲ್ಲಿ ಸಹಾಯವಾಗುತ್ತದೆ ಎಂದು ಭಾವಿಸಿದ್ದರು. ಹಾಗೂ, ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿದರು ಎಂದರೆ, ತಮ್ಮ ಸ್ಥಾನ ಭದ್ರವಾಗುತ್ತದೆ ಎಂಬ ದೂರಾಲೋಚನೆಯೂ ಇತ್ತು. ಆದರೆ ಅದೇಕೊ ಹಸಿರು ನಿಶಾನೆ ಸಿಕ್ಕಂತೆ ಕಾಣುತ್ತಿಲ್ಲ. ಸದ್ಯದಲ್ಲೆ ಈ ಕುರಿತು ಸ್ಪಷ್ಟತೆ ಸಿಗಬಹುದು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ | ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕದಲ್ಲೆ ತೀರ್ಮಾನ: CM ಬೊಮ್ಮಾಯಿಗೆ ತಿಳಿಸಿದ ವರಿಷ್ಠರು