ಬೆಂಗಳೂರು: ಮುಡಾ ಹಗರಣದಲ್ಲಿ (Muda Scam) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪು ಅನ್ನು ಹೈಕೋರ್ಟ್ ಪ್ರಕಟಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಸುದೀರ್ಘ ವಾದ-ವಿವಾದ ಆಲಿಸಿ, ತೀರ್ಪು ಕಾಯ್ದಿರಿಸಲಾಗಿತ್ತು. ಸೆ.24ರಂದು ತೀರ್ಪು ಪ್ರಕಟಿಸಿದ್ದು, ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಈ ಮೂಲಕ ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ.
ಸಿದ್ದರಾಮಯ್ಯ ಪರ ವಕೀಲರಿಂದ ತಡೆಯಾಜ್ಞೆ ಕೊಡುವಂತೆ ಮನವಿ ಮಾಡಿದರು. ಈ ವೇಳೆ ಮನವಿ ಕೋರ್ಟ್ ತಿರಸ್ಕರಿಸಿದ ಕೋರ್ಟ್, ಮಧ್ಯಾಹ್ನ 2-30ಕ್ಕೆ ಆದೇಶ ಪ್ರತಿ ನಿಮ್ಮ ಕೈಗೆ ಸಿಗುತ್ತೆ. ನನ್ನ ಆದೇಶಕ್ಕೆ ನಾನು ತಡೆಯಾಜ್ಞೆ ಕೊಡಲ್ಲ ಎಂದು ನ್ಯಾಯಾಧೀಶರು ತಿಳಿಸಿದರು. ಇದೇ ವೇಳೆ ಹೈಕೋರ್ಟ್ ಏಕಸದಸ್ಯ ಪೀಠ ಕೆಳ ನ್ಯಾಯಾಲಯದ ತಡೆ ತೆರವು ಮಾಡಿದೆ. ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ಲೋಪಗಳಿಲ್ಲ. ವಿವೇಚನಾಧಿಕಾರ ಸರಿ ಇದೆ. 17a ಅನುಮತಿ ತೆಗೆದುಕೊಳ್ಳುವುದು ಇಂತಹ ಕೇಸ್‌ನಲ್ಲಿ ಕಡ್ಡಾಯ ಹೀಗಾಗಿ ದೂರುದಾರರು ಅದನ್ನು ಪಾಲಿಸಿದ್ದಾರೆ ಎಂದು ಹೈಕೋರ್ಟ್ ತಿಳಿಸಿದೆ.
ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ದೂರುದಾರ ಟಿಜೆ ಅಬ್ರಾಹಂ ಕೋರ್ಟ್‌ಗೆ ಆಗಮಿಸಿದ್ದರು. ಇನ್ನು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೂರುದಾರ ಸ್ನೇಹಮಯಿಕೃಷ್ಣ ಪರ ಹಿರಿಯ ವಕೀಲ ಮಣೀಂಧರ್ ಸಿಂಗ್, ಹಿರಿಯ ವಕೀಲ ರಾಘವನ್ ಹಾಗೂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ , ಪ್ರದೀಪ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.
ಇದನ್ನೂ ಓದಿ: CM Siddaramaiah : ಸಿದ್ದರಾಮಯ್ಯ ವಿಷ್ಯದಲ್ಲಿ ಆತುರದ ನಿರ್ಣಯ; ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರ- ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ
ಏನಿದು ಮುಡಾ ಪ್ರಕರಣ?
ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿತ್ತು. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದರು. ಸಿದ್ದರಾಮಯ್ಯಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರದ ಕುರಿತು ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷಪಾತ ತನಿಖೆ ಅಗತ್ಯ ಎಂದು ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪ್ರದೀಪ್ ಕುಮಾರ್ ಎಸ್.ಪಿ, ಟಿ.ಜೆ. ಅಬ್ರಹಾಂ ಮತ್ತು ಸ್ನೇಹಮಯಿ ಕೃಷ್ಣ ಅರ್ಜಿಗಳನ್ನು ಸಲ್ಲಿಸಿದ್ದರು.
ಮೈಸೂರಿನ ಸ್ನೇಹಮಯಿ ಕೃಷ್ಣ, ಸಿಎಂ ವಿರುದ್ಧ ಮತ್ತೂಂದು ದೂರು ಸಲ್ಲಿಸಿದ್ದರು. ಅಕ್ರಮ ಭೂ ಡಿನೋಟಿಫಿಕೇಶನ್‌ಗೆ ಸಿದ್ದರಾಮಯ್ಯ ಪ್ರಭಾವ ಬೀರಿದ್ದಾರೆಂದು ಆರೋಪಿಸಿದ್ದರು. ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, 1979ರಲ್ಲಿ ಮೈಸೂರು ತಾಲೂಕು ವರುಣದ ಉತ್ತನಹಳ್ಳಿಯಲ್ಲಿ ಆಶ್ರಯ ಮನೆಗಳಿಗಾಗಿ ಭೂಸ್ವಾಧೀನ ಮಾಡಿದ್ದ ಜಮೀನಿಗೆ 30 ವರ್ಷದ ಬಳಿಕ ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಮರಪ್ಪ ಎಂಬುವವರ ಹೆಸರಿಗೆ 1.39 ಎಕರೆ ಜಮೀನು ಡಿನೋಟಿಫೈ ಮಾಡುವಂತೆ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಮರಪ್ಪ ಎಂಬುವವರಿಗೆ ಸಂಬಂಧವೇ ಇರದಿದ್ದರೂ ನಕಲಿ ದಾಖಲೆ ಆಧರಿಸಿ ಮರಪ್ಪ ಹೆಸರಿಗೆ ಡಿನೋಟಿಫೈ ಮಾಡಲಾಗಿದೆ ಎಂದು ದೂರುದಾರ ಆರೋಪಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ