Site icon Vistara News

Karnataka Election: ಶ್ರೀನಿವಾಸಪುರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತನಿಗೆ ಚಾಕು ಇರಿತ; ಗಂಭೀರ ಗಾಯ

Congress worker stabbed in Srinivaspur

Congress worker stabbed in Srinivaspur

ಕೋಲಾರ: ಕ್ಷುಲ್ಲಕ ಕಾರಣಗಳಿಗೆ ರಾಜ್ಯದ ವಿವಿಧೆಡೆ ಮತದಾನೋತ್ತರ ಹಿಂಸಾಚಾರ ಪ್ರಕರಣಗಳು ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್‌ ಕಾರ್ಯಕರ್ತನಿಗೆ ಜೆಡಿಎಸ್ ಕಾರ್ಯಕರ್ತರು ಚಾಕು ಇರಿದಿರುವ ಘಟನೆ (Karnataka Election) ಜಿಲ್ಲೆಯ ಶ್ರೀನಿವಾಸಪುರದಲ್ಲಿ ಗುರುವಾರ ನಡೆದಿದೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಜಮುಲ್ ಗಾಯಗೊಂಡ ಕಾಂಗ್ರೆಸ್‌ ಕಾರ್ಯಕರ್ತ. ಜೆಡಿಎಸ್ ಮುಖಂಡ ಸಾಧಿಕ್, ಆರೀಫ್ ಸೇರಿ ನಾಲ್ವರ ವಿರುದ್ಧ ಚಾಕು ಇರಿತ ಆರೋಪ ಕೇಳಿಬಂದಿದೆ. ವಿಷಯ ತಿಳಿದು ಕಾಂಗ್ರೆಸ್‌ ಪಕ್ಷದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಆಸ್ಪತ್ರೆ ಎದುರು ಜಮಾಯಿಸಿದ್ದಾರೆ.

ಆಸ್ಪತ್ರೆಗೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಕೆ.ಆರ್‌. ರಮೇಶ್ ಕುಮಾರ್ ಹಾಗೂ ಕೋಲಾರ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸುವ ಸಾಧ್ಯತೆ ಇದೆ. ಆಸ್ಪತ್ರೆ ಬಳಿ ಮುನ್ನೆಚ್ಚರಿಕೆಯಿಂದ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ಇದನ್ನೂ ಓದಿ | Road Accident: ಭೀಕರ ಅಪಘಾತ; ಮೊಮ್ಮಕ್ಕಳ ಜತೆ ಹೋಗುತ್ತಿದ್ದ ವೃದ್ಧೆ, ಬೈಕ್‌ ಸವಾರರ ದುರ್ಮರಣ

ಮತಗಟ್ಟೆಯಲ್ಲಿ ಪೊಲೀಸ್ ಪೇದೆ ಮೇಲೆ ಮಚ್ಚಿನಿಂದ ಹಲ್ಲೆ

ರಾಮನಗರ: ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ರಾಮನಗರ ವಿಧಾನಸಭಾ ಕ್ಷೇತ್ರದ (ಹಾರೋಹಳ್ಳಿ ತಾಲೂಕು) ಗೋದೂರು ಗ್ರಾಮದಲ್ಲಿ ನಡೆದಿದೆ. ಮತದಾನ ದಿನವಾದ ಬುಧವಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಜಯ್ (23) ಆರೋಪಿ. ಬೆಂಗಳೂರು ಸಿಟಿ ಪೊಲೀಸ್ ಆದರ್ಶ್ ಹಲ್ಲೆಗೊಳಗಾದವರು. ಮತದಾನದ ವೇಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದರಿಂದ ಪೊಲೀಸ್‌ ಪೇದೆ ಆದರ್ಶ್ ಕೆನ್ನೆ ಹಾಗೂ ಕೈ ಬೆರಳುಗಳಿಗೆ ಗಾಯಗಳಾಗಿವೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ.

ಬಿಜೆಪಿ ಕಾರ್ಯತಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ನದೀಮ್ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ. ನದೀಮ್ ಅಂಗಡಿಗೆ ನುಗ್ಗಿ ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಬಿಲಾಲ್ ಸಹೋದರನ ಮಕ್ಕಳಾದ ಆಸೀಫ್ ಹಾನಗಲ್, ಯಾಸೀನ್ ಹಾನಗಲ್, ಮೊಮೀನ್ ಹಾನಗಲ್, ಸಲ್ಮಾನ್ ಹಾನಗಲ್ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಾಳು ನದೀಮ್‌ನನ್ನು ಶಿರಾಳಕೊಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version