ಕೊಪ್ಪಳ/ರಾಮನಗರ/ಮೈಸೂರು/ಕೋಲಾರ/ಬೆಂಗಳೂರು: ರಾಜ್ಯದ ವಿವಿಧ ಕಡೆ ಮಂಗಳವಾರ (ನ. ೮) ಹಲವು ದುರಂತ ಘಟನೆಗಳು ನಡೆದಿವೆ. ಶಾಲೆಯಲ್ಲಿ ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮೂರು ತಿಂಗಳಿನಿಂದ ಗ್ರಾಮ ತೊರೆದಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವವೊಂದು ಪತ್ತೆ (Crime News) ಆಗಿದೆ. ನಾಗರಾಜ ಹನುಮಂತಪ್ಪ (25) ಮೃತ ಯುವಕ. ಹುಲಿಹೈದರ್ ಪ್ರದೇಶದಲ್ಲಿ ನಡೆದ ಗಲಾಟೆಯಲ್ಲಿ ಈತನ ಅಣ್ಣನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಕಳೆದ 3 ತಿಂಗಳಿನಿಂದ ಮೃತನ ಅಣ್ಣ ಗೋಸಲಪ್ಪ ಜೈಲಿನಲ್ಲಿದ್ದಾನೆ. ಹುಲಿಹೈದರ್ ಗಲಾಟೆ ಬಳಿಕ ಈತ ಕಳೆದ 3 ತಿಂಗಳಿನಿಂದ ಗ್ರಾಮ ತೊರೆದಿದ್ದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಅತ್ತೆಯ ಕೊಲೆ ಮಾಡಿದ ಅಳಿಯ
ರಾಮನಗರದ ಕನಕಪುರದ ಬೆಟ್ಟೇಗೌಡನ ದೊಡ್ಡಿ ಬಸ್ ನಿಲ್ದಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಅಳಿಯನಿಂದಲೇ ಅತ್ತೆ ಕೊಲೆಯಾಗಿರುವ ಘಟನೆ ನಡೆದಿದೆ. ಚಲುವರಾಜು ಎಂಬಾತ ತನ್ನ ಅತ್ತೆ ರತ್ನಮ್ಮಳನ್ನು (45) ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚಲುವರಾಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಪಾಳು ಭವನದಲ್ಲಿ ಮಹಿಳೆ ಶವ ಪತ್ತೆ!
ಮೈಸೂರಿನ ಪಾಳು ಭವನದ ಲ್ಯಾನ್ಸ್ ಡೌನ್ ಬಿಲ್ಡಿಂಗ್ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಪಾಳು ಬಿದ್ದ ವಾಣಿಜ್ಯ ಸಂಕೀರ್ಣದ ಕೊಠಡಿಯೊಂದರಲ್ಲಿ ಸುಮಾರು 40-45 ವರ್ಷದ ಮಹಿಳೆ ಶವ ಪತ್ತೆಯಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ದೇವರಾಜ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಡಾಗ್ ಸ್ಕ್ವಾಡ್, ಬೆರಳಚ್ಚು ತಜ್ಞರು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.
ಕೆರೆಯಲ್ಲಿ ತೇಲಿ ಬಂತು ತಲೆಯಿಲ್ಲದ ದೇಹ
ಇತ್ತ ಕೋಲಾರ ಅಮ್ಮೇರಹಳ್ಳಿ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಕೆರೆಗೆ ಬಿದ್ದು ಹತ್ತು ದಿನಗಳಾಗಿರಬುದೆಂದು ಅಂದಾಜಿಸಲಾಗಿದ್ದು, ಕೊಳೆತ ರೀತಿಯಲ್ಲಿ ಶವ ಪತ್ತೆಯಾಗಿದೆ. ತಲೆಯಿಲ್ಲದ ಶವ ಪತ್ತೆಯಾಗಿದ್ದು, ಕೆರೆಯಲ್ಲಿ ಶವ ತೆಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪರಿಚಿತ ಶವದ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹತ್ತನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರಿನ ನಾಗವಾರ ಬಳಿಯ ಆರ್‌ಆರ್ ಸಿಗ್ನೇಚರ್ ಅಪಾರ್ಟ್ಮೆಂಟ್‌ನ ಹತ್ತನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೋಹಿನ್ ಮೃತಪಟ್ಟ ವಿದ್ಯಾರ್ಥಿ. ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಮೋಹಿನ್, ಶಾಲೆಯಲ್ಲಿ ಪರೀಕ್ಷೆ ವೇಳೆ ನಕಲು ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ ಶಿಕ್ಷಕರು ಮೋಹಿನ್‌ಗೆ ಬೈದು ಕಳಿಸಿದ್ದರು ಎನ್ನಲಾಗಿದೆ. ಇದರಿಂದ ಶಾಲೆಯಿಂದ ಹೊರಬಂದವನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಅಂಬೇಡ್ಕರ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Helmet Awareness | ಮೂರು ತಲೆ ಹೆಲ್ಮೆಟ್ ಹಾಕಿ ಜಾಗೃತಿ ಮೂಡಿಸುತ್ತಿರುವ 72 ವರ್ಷದ ವಯೋವೃದ್ಧ