Site icon Vistara News

Modi in Mangalore | ರಾಜ್ಯದಲ್ಲಿ ಮೋದಿ ನಂತರ ಜನಪ್ರಿಯ ವ್ಯಕ್ತಿ ಯಡಿಯೂರಪ್ಪ !

BS yediyurappa appointed as observer for gujarat leslislative party leader selection

ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ವಿವಿಧ ರಾಜಕೀಯ ಸಂದೇಶಗಳನ್ನು ಜನರು ನೀಡುತ್ತಿದ್ದು, ಕರ್ನಾಟಕದ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿಯವರ ನಂತರ ಬಿಜೆಪಿಯಲ್ಲಿ ಅತಿ ಹೆಚ್ಚು ಜನಪ್ರಿಯ ವ್ಯಕ್ತಿ ಎಂದರೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಎಂಬುದನ್ನು ಕರಾವಳಿ ಜನರು ಸಾರಿದ್ದಾರೆ.

ಮಂಗಳೂರಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಆಯೋಜಿಸಿದ್ದ ಸುಮಾರು 3,800 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳ ಸಮಾವೇಶದಲ್ಲಿ ಈ ಕುರಿತು ಸಂಕೇತಗಳು ಲಭಿಸಿದವು.

ರಾಜ್ಯದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಇತ್ತೀಚೆಗಷ್ಟೇ ಮಹತ್ವದ ತೀರ್ಮಾನ ಮಾಡಿದ್ದ ರಾಷ್ಟ್ರೀಯ ಬಿಜೆಪಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಸಂಸದೀಯ ಮಂಡಳಿಗೆ ನೇಮಿಸಿತ್ತು. ಜತೆಗೆ ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯರೂ ಆಗಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ರಾಜಕೀಯ ಜೀವನ ಮುಗಿದೇಹೋಯಿತು ಎನ್ನಲಾಗುತ್ತಿತ್ತಾದರೂ ಹೊಸ ನೇಮಕದಿಂದ ಪಕ್ಷದಲ್ಲಿ ಉತ್ಸಾಹ ಹೆಚ್ಚಾಗಿತ್ತು. ನೇಮಕವಾದ ಸಂದರ್ಭದಲ್ಲೇ ರಾಜ್ಯದ ವಿವಿಧ ನಾಯಕರು ಭೇಟಿ ಮಾಡಿ ಶುಭಾಶಯ ಕೋರಿದ್ದರು. ಸ್ವತಃ ಯಡಿಯೂರಪ್ಪ ನವದೆಹಲಿಗೆ ತೆರಳಿ ಪ್ರಧಾನಿ ಮೋದಿ, ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿ ಮಾಡಿ ಬಂದಿದ್ದರು.

ಇದನ್ನೂ ಓದಿ | ನವದೆಹಲಿಯಲ್ಲಿ ಮೋದಿ ಭೇಟಿ ಮಾಡಿದ ಯಡಿಯೂರಪ್ಪ; ಪಕ್ಷದ ಸಂಘಟನೆ ಕುರಿತು ಚರ್ಚೆ

ಶುಕ್ರವಾರ ಮಂಗಳೂರಿನ ಕಾರ್ಯಕ್ರಮದ ವೇದಿಕೆಗೆ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆಯೇ ನಿರೂಪಕರು ಎಲ್ಲ ನಾಯಕರ ಹೆಸರುಗಳನ್ನೂ ಹೇಳತೊಡಗಿದರು. ಈ ಸಮಯದಲ್ಲಿ ಉಳಿದೆಲ್ಲ ಹೆಸರುಗಳನ್ನು ಹೇಳಿದಾಗಲೂ ಸುಮ್ಮನಿದ್ದ ಜನರು, ಯಡಿಯೂರಪ್ಪ ಹೆಸರು ಹೇಳುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನಾವಾಲಾ, ಬಿ.ಎಸ್‌. ಯಡಿಯೂರಪ್ಪ ಹೆಸರನ್ನು ಎರಡು ಬಾರಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ರಾಷ್ಟ್ರೀಯ ನಾಯಕರು, ಹಿರಿಯ ನಾಯಕರು ಎಂದು ಸಂಬೋಧಿಸಿದರು. ಪ್ರತಿ ಬಾರಿ ಯಡಿಯೂರಪ್ಪ ಹೆಸರನ್ನು ಉಲ್ಲೇಖಿಸಿದಾಗಲೂ ನೆರೆದಿದ್ದ ಜನರೆಲ್ಲ ಒಕ್ಕೊರಲ ಧ್ವನಿಯಲ್ಲಿ ಹರ್ಷ ವ್ಯಕ್ತಪಡಿಸಿದರು.

ನಂತರ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡುವಾಗಲೂ ಬಿ.ಎಸ್‌. ಯಡಿಯೂರಪ್ಪ ಹೆಸರನ್ನು ಉಲ್ಲೇಖಿಸಿದ ಕೂಡಲೆ ಜನರ ಹರ್ಷ ಹೆಚ್ಚಾಯಿತು. ಪ್ರಧಾನಿ ಮೋದಿ ಭಾಷಣದಲ್ಲಿ ರಾಜ್ಯಪಾಲ ಹಾಗೂ ಸಿಎಂ ಹೆಸರನ್ನು ಮಾತ್ರ ಉಲ್ಲೇಖಿಸಿ ಭಾಷಣ ಪ್ರಾರಂಭಿಸಿದರು.

ಯಡಿಯೂರಪ್ಪ ಅವರು ಹಳೆ ಮೈಸೂರು ಭಾಗದಲ್ಲಿ, ಮಧ್ಯ ಕರ್ನಾಟಕದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವುದು ಈ ಹಿಂದಿನ ಅನೇಕ ಕಾರ್ಯಕ್ರಮಗಳಲ್ಲಿ ವ್ಯಕ್ತವಾಗಿತ್ತು. ಕರಾವಳಿ ಜಿಲ್ಲೆಗಳಲ್ಲೂ ಯಡಿಯೂರಪ್ಪ ಅವರ ಜನಪ್ರಿಯತೆ ಹೆಚ್ಚಳವಾಗಿರುವುದು ಈ ಕಾರ್ಯಕ್ರಮದಿಂದ ತಿಳಿದುಬಂದಿದೆ ಎಂದು ಬಿಜೆಪಿ ವಲಯದಲ್ಲಿ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ | Modi in Mangalore | ವೀರತ್ವ + ವ್ಯಾಪಾರ = ಕರಾವಳಿ: ಪ್ರಧಾನಿ ಮೋದಿ ಬಣ್ಣನೆ

Exit mobile version