ಶ್ರೀಧರ್ ಮುಂಡರಗಿ, ಧಾರವಾಡ
ನವಲಗುಂದ ಕ್ಷೇತ್ರ ಜಿಲ್ಲೆಯ ವಿಭಿನ್ನ ಮತ್ತು ರೈತರ ಬಂಡಾಯದ ನಾಡು ಅಂತಲೇ ಗುರುತಿಸಿಕೊಂಡಿದೆ. ಮಹಾದಾಯಿ ಕಿಚ್ಚು ನವಲಗುಂದದ ಬಂಡಾಯದ ನೆಲದಿಂದಲೇ ಆರಂಭವಾಗಿದ್ದು, ಅದು ಇಡೀ ರಾಷ್ಟ್ರವ್ಯಾಪಿ ಹರಡಿ ರೈತರ ತಾಕತ್ತನ್ನು ತೋರಿಸಿದ ಕ್ಷೇತ್ರವಾಗಿದೆ. ಇಲ್ಲಿ ಒಂದು ಬಾರಿ ಗೆಲುವು ಪಡೆದಿರುವ ಅಭ್ಯರ್ಥಿಯನ್ನು ಮತ್ತೆ ಇಲ್ಲಿನ ಕ್ಷೇತ್ರದ ಜನ ಆಯ್ಕೆ ಮಾಡಿದ ಉದಾಹರಣೆಯೇ ಇಲ್ಲ. ಒಂದು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಮತ್ತೊಂದು ಬಾರಿ ಬಿಜೆಪಿಗೆ ಮತದಾರ ಪ್ರಭು ಜೈ ಅಂದಿದ್ದಾರೆ. ಮತ್ತೊಂದು ಬಾರಿ ಇವರೆಡನ್ನೂ ಧಿಕ್ಕರಿಸಿ ಜೆಡಿಎಸ್‌ಗೂ ಜಯದ ಮಾಲೆ ತೊಡಿಸಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಈ ನವಲಗುಂದ ಕ್ಷೇತ್ರ ಈ ಮೂರು ಪಕ್ಷಗಳು ಗೆಲುವಿಗೆ ಮತ್ತೆ ರಣತಂತ್ರ ಹೆಣೆಯುತ್ತಿವೆ.
2018ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿಯ ಅಭ್ಯರ್ಥಿ ಶಂಕರಪಾಟೀಲ್ ಮುನೇನಕೊಪ್ಪ ಶಾಸಕರಾಗಿ ಹಲವು ಕಾಮಗಾರಿಗಳನ್ನು ಪೂರ್ಣ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಯಾರು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಜೆಡಿಎಸ್ ಅಭ್ಯರ್ಥಿ ಆಯ್ಕೆಯೇ ದೊಡ್ಡ ಪ್ರಶ್ನೆ
2013 ರಲ್ಲಿ ಜೆಡಿಎಸ್ ನಿಂದ ಸ್ಪರ್ದಿಸಿ ಗೆಲುವು ಸಾಧಿಸಿದ್ದ ಎನ್. ಹೆಚ್. ಕೋನರೆಡ್ಡಿ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. 2018 ರಲ್ಲಿ ಸೋಲನ್ನು ಅನುಭವಿಸಿದ ಬಳಿಕ ಇತ್ತೀಚೆಗಷ್ಟೇ ತೆನೆ ಕೆಳಗಿಳಿಸಿ ಕೈ ಹಿಡಿದಿದ್ದು ಇದೀಗ ಮುಂದಿನ ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವುದೇ ಜೆಡಿಎಸ್ ನಾಯಕರ ಮುಂದಿರುವ ದೊಡ್ಡ ಸವಾಲು. ಇದನ್ನು ಹೊರತುಪಡಿಸಿದರೆ ಕಾಂಗ್ರೆಸ್‌ನಲ್ಲೂ ಈಗಾಗಲೇ ಸ್ಪರ್ದಿಸಿ ಸೋಲು ಅನುಭವಿಸಿರುವ ವಿನೋದ್ ಅಸೂಟಿ ಸಹ ಈ ಬಾರಿ ಚುನಾವಣೆಗೆ ಟಿಕೆಟ್‌ಗಾಗಿ ಎದುರು ನೋಡುತ್ತಿದ್ದಾರೆ .ಇದರ ಮಧ್ಯೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಎನ್ ಎಚ್ ಕೋನರೆಡ್ಡಿ ಸಹ ಕಾಂಗ್ರೆಸ್ ನಿಂದ ನವಲಗುಂದ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಅಂತಲೇ ಗುರುತಿಸಿಕೊಂಡಿರುವ ವಿನೋದ್ ಅಸೂಟಿಗೆ ಮತ್ತೆ ಟಿಕೆಟ್ ಸಿಗುತ್ತದೆಯೇ ಅಥವಾ ಕೋನರೆಡ್ಡಿಗೆ ಟಿಕೆಟ್ ನೀಡುತ್ತಾರೆಯೋ ಎನ್ನುವುದನ್ನು ಕಾದುನೋಡಬೇಕಿದೆ..
2023ರ ಮುಖಾಮುಖಿ
2023 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪ್ತ ಹಾಲಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಬಹುತೇಕ ಖಚಿತವಾಗಿದೆ. ಈ ಹಿಂದೆ ಮುನೇನಕೊಪ್ಪ ಅವರು ಸಚಿವ ಸ್ಥಾನವನ್ನು ಪಡೆದಿದ್ದರು. ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ನಲ್ಲಿ ಇಬ್ಬರಿದ್ದು ಅವರಲ್ಲಿ ಎನ್ ಎಚ್ ಕೋನರೆಡ್ಡಿ ಮತ್ತು ಕಾಂಗ್ರೆಸ್ ಯುವ ನಾಯಕ ವಿನೋದ್ ಅಸೂಟಿ ಈಗಾಗಲೇ ತಾ ಮುಂದು ನಾ ಮುಂದು ಎನ್ನುವ ರೀತಿಯಲ್ಲಿ ಟಿಕೆಟ್ ಫೈಟ್ ನಡೆಸಿದ್ದಾರೆ..
ಬಸವರಾಜ ಹೊರಟ್ಟಿ, ಕೋನರೆಡ್ಡಿ ಜೆಡಿಎಸ್ ಪಕ್ಷ ಬಿಟ್ಟಿದ್ದೇ ದೊಡ್ಡ ಹೊಡೆತ
ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳ ಫೈಟ್ ಒಂದು ಕಡೆಯಾದರೆ ಇತ್ತ ಈ ಫೈಟ್ ನಡುವೆ ಜೆಡಿಎಸ್ ಮಾತ್ರ ಇನ್ನೂ ಅಭ್ಯರ್ಥಿ ಹುಡುಕಾಟದಲ್ಲೇ ನಿರತರಾಗಿದ್ದಾರೆ. ಸಂಘಟನೆ ಮೂಲಕ ಹಾಗೂ ಹಿರಿಯ ಜೆಡಿಎಸ್ ನಾಯಕರಾಗಿದ್ದ ಬಸವರಾಜ ಹೊರಟ್ಟಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದು ಇದೀಗ ಜೆಡಿಎಸ್ ಪಕ್ಷಕ್ಕೆ ದೊಡ್ಡ ನಷ್ಟ ಅಂತಲೇ ಹೇಳಬಹುದು. ಇದರ ನಡುವೆ ಯಾರು ಮುಂದಿನ ಅಭ್ಯರ್ಥಿ ಎನ್ನುವ ಹುಡುಕಾಟ ಆರಂಭವಾಗಿದ್ದು, ಪ್ರಕಾಶ್ ಅಂಗಡಿ, ಶಿವಶಂಕರ್ ಕಲ್ಲೂರು, ಶ್ರೀಶೈಲ ಮೂಲಿಮನಿ ಪ್ರಯತ್ನದಲ್ಲಿದ್ದಾರೆ ಮುಂಚೂಣಿಯಲ್ಲಿದ್ದಾರೆ.
ಜಾತಿ ಲೆಕ್ಕಾಚಾರ
ನವಲಗುಂದ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತ ಮತಗಳಿವೆ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಮತಗಳು ನಿರ್ಧಾರಿತ ಮತಗಳಾಗಿವೆ. ಹಾಲಿ ಶಾಸಕ ಮುನೇನಕೊಪ್ಪ ಇದೇ ಸಮುದಾಯಕ್ಕೆ ಸೇರಿದವರು. ಇದನ್ನು ಹೊರತುಪಡಿಸಿದರೆ, ಕುರುಬ, ರೆಡ್ಡಿ ಸಮುದಾಯ, ಹಾಗೂ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ, ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. 2023 ರ ಸಂಭಾವ್ಯ ಅಭ್ಯರ್ಥಿಗಳು
ಇಸವಿ | ವಿಜೇತ ಅಭ್ಯರ್ಥಿ – ಮತ | ಪರಾಜಿತ ಅಭ್ಯರ್ಥಿ – ಮತ | ಅಂತರ |
2004 | ಡಾ.ಆರ್ ಬಿ ಶಿರಿಯಣ್ಣನವರ್ (ಬಿಜೆಪಿ) 30191 | ಕೆ ಎನ್ ಗಡ್ಡಿ (ಕಾಂಗ್ರೆಸ್) 26356 | 3839 |
2008 | ಶಂಕರ ಪಾಟೀಲ್ ಮುನೇನಕೊಪ್ಪ (ಬಿಜೆಪಿ) 49436 | ಕೆ ಎನ್ ಗಡ್ಡಿ (ಕಾಂಗ್ರೆಸ್)32541 | 16895 |
2013 | ಎನ್ ಹೆಚ್ ಕೋನರೆಡ್ಡಿ (ಜೆಡಿಎಸ್ ಪಕ್ಷ) 44,448 | ಶಂಕರಪಾಟೀಲ್ ಮುನೇನಕೊಪ್ಪ (ಬಿಜೆಪಿ) 41,779 | 2,669 |
2018 | ಶಂಕರಪಾಟೀಲ್ ಮುನೇನಕೊಪ್ಪ(ಬಿಜೆಪಿ) 65,718 | ಎನ್ ಹೆಚ್ ಕೋನರೆಡ್ಡಿ (ಜೆಡಿಎಸ್) 45,197 | 20,521 |
ಇದನ್ನೂ ಓದಿ | ಎಲೆಕ್ಷನ್ ಹವಾ | ನಾಗಮಂಗಲ | ಒಕ್ಕಲಿಗರ ಪ್ರಾಬಲ್ಯದ ನಡುವೆ ʻಗೌಡʼರ ಕುಟುಂಬದ ಪ್ರತಿಷ್ಠೆಯ ಕಣ