ಶ್ರೀಧರ್ ಮುಂಡರಗಿ, ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಸೆಂಟ್ರಲ್(ಕೇಂದ್ರ) ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದು. ಈ ಕ್ಷೇತ್ರದಿಂದ ಗೆದ್ದವರು ಇಬ್ಬರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಎಸ್. ಆರ್. ಬೊಮ್ಮಾಯಿ ಹಾಗೂ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಕ್ರಮವಾಗಿ 11 ಹಾಗೂ 21ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. 1994ರಲ್ಲಿ ಬೊಮ್ಮಾಯಿ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದ ಶೆಟ್ಟರ್ ಸತತ ಆರು ಬಾರಿ ಗೆದ್ದು ಕ್ಷೇತ್ರದ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದಾರೆ
ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಯನ್ನು ಬದಲಾಯಿಸಲು ಇಲ್ಲಿನ ಮತದಾರರು ಮುಂದಾಗುವುದಿಲ್ಲ. ಒಮ್ಮೆ ಆಯ್ಕೆ ಮಾಡಿದವರಿಗೇ ಮರು ಆಯ್ಕೆಯ ಅವಕಾಶ ನೀಡುತ್ತ ಬಂದಿದ್ದಾರೆ. 1957ರಿಂದ 2018ರ ವರೆಗೆ ಕೇವಲ ನಾಲ್ಕು ಜನರಷ್ಟೆ ಶಾಸಕರಾಗಿದ್ದಾರೆ. ಇವರಲ್ಲಿ ಒಬ್ಬರು ಎರಡು ಬಾರಿ, ಇಬ್ಬರು ಮೂರು ಬಾರಿ ಹಾಗೂ ಒಬ್ಬರು ಆರು ಬಾರಿ ಪ್ರತಿನಿಧಿಸಿದ್ದಾರೆ. ಹಾಲಿ ಶಾಸಕ ಜಗದೀಶ್ ಶೆಟ್ಟರ್ ಅವರ ಹೆಸರಿನಲ್ಲೇ, ಅತಿ ಹೆಚ್ಚು ಜಯಿಸಿದ ದಾಖಲೆ ಇದೆ,
ಕಾಂಗ್ರೆಸ್‌ನ ಡಾ. ಮಹೇಶ್ ನಾಲವಾಡ 2018ರಲ್ಲಿ ಶೆಟ್ಟರ್ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಾರೆ ಎಂದೇ ಭಾವಿಸಲಾಗಿತ್ತು. ಸತತ ಆಯ್ಕೆ ಆಗಿರುವ ಶೆಟ್ಟರ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಜಗದೀಶ್ ಶೆಟ್ಟರ್ 21,306 ಮತಗಳ ಅಂತರದಿಂದ ಗೆಲವು ಸಾಧಿಸಿದರು. ಸ್ಪರ್ಧಿಸಿದ್ದ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ ಸೋಲಿಗೆ ಪ್ರಮುಖ ಕಾರಣ, ಜಗದೀಶ್ ಶೆಟ್ಟರ್ ಅವರ ಪ್ರಭಾವ ಒಂದೆಡೆಯಾದರೆ, ಕಾಂಗ್ರೆಸ್ ಪಕ್ಷದಲ್ಲಿನ ಅಂತರಿಕ ಕಚ್ಚಾಟ, ಒಳಪೆಟ್ಟು ಎನ್ನಲಾಗಿದೆ. ಪಕ್ಷದಲ್ಲಿ ತಮಗೆ ಭವಿಷ್ಯವಿಲ್ಲವೆಂದು ಅರಿತು ಮಹೇಶ್ ನಾಲವಾಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
2023ರ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಯಾರು?
ಮಹೇಶ್ ನಾಲವಾಡ ಈಗ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಮತ್ತೊಂದೆಡೆ ಜೆಡಿಎಸ್‌ನಿಂದ ಜಗದೀಶ್ ಶೆಟ್ಟರ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ರಾಜಣ್ಣ ಕೊರವಿ ಸಹ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ. ಕಳೆದ ಚುನಾವಣೆಯ ಮೂವರೂ ಪ್ರತಿಸ್ಪರ್ಧಿಗಳು ಒಂದೇ ಪಕ್ಷದಲ್ಲಿರುವುದರಿಂದ ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಹೊಸ ಅಭ್ಯರ್ಥಿಗಳತ್ತ ಮುಖ ಮಾಡುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ | ಎಲೆಕ್ಷನ್ ಹವಾ | ನಾಗಮಂಗಲ | ಒಕ್ಕಲಿಗರ ಪ್ರಾಬಲ್ಯದ ನಡುವೆ ʻಗೌಡʼರ ಕುಟುಂಬದ ಪ್ರತಿಷ್ಠೆಯ ಕಣ
2023ರ ಚುನಾವಣೆಗೆ ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಆದರೆ ಟಿಕೆಟ್‌ಗಾಗಿ ಮಹೇಶ್ ತೆಂಗಿನಕಾಯಿ, ಮಹೇಶ್ ನಾಲವಾಡ ಟಿಕೆಟ್‌ಗೆ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಜಗದೀಶ್ ಶೆಟ್ಟರ್ ರಾಜ್ಯಪಾಲರಾದರೆ ಅಥವಾ ಚುನಾವಣಾ ರಾಜಕೀಯದಿಂದ ನಿವೃತ್ತರಾದರೆ ತಮಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಯುವ ಮುಖಂಡರುಗಳಾದ, ಸಿದ್ದರಾಮಯ್ಯ ಬಣದ ಗಿರೀಶ್ ಗದಿಗೆಪ್ಪಗೌಡ, ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ, ಅನಿಲ ಕುಮಾರ್ ಪಾಟೀಲ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಎಸ್‌ನಿಂದ ರಿಯಲ್ ಎಸ್ಟೇಟ್ ಉದ್ಯಮಿ ತಬ್ರೇಜ್ ಸಂಶಿ ಪ್ರಬಲ ಆಕಾಂಕ್ಷಿ.
2023ರ ಚುನಾವಣೆಗೆ ಕ್ಷೇತ್ರದ ನಿರ್ಣಾಯಕ ವಿಷಯ ?
ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರ ಹಾಗೂ ಜಾತಿ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸಲಿವೆ. ಲಿಂಗಾಯತ ಮತದಾರರು ಇಲ್ಲಿ ನಿರ್ಣಾಯಕರು. ಜಗದೀಶ್ ಶೆಟ್ಟರ್ ಸತತವಾಗಿ ಆರು ಬಾರಿ ಗೆದ್ದುಬಂದ್ರು, ಸಚಿವರು, ಪಕ್ಷದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರಾಗಿದ್ದರು, ಮುಖ್ಯಮಂತ್ರಿ ಆಗಿದ್ದವರು. ಇನ್ನಷ್ಟು ಪ್ರಮಾಣದಲ್ಲಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕಿತ್ತು ಎಂಬ ಮಾತಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ನಿರಂತರವಾಗಿ ಕುಡಿಯುವ ನೀರು ಪೂರೈಸುವ ಯೋಜನೆ ೮ ವಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ಚಾಲನೆ ನೀಡಬೇಕಿದೆ.
2023ರ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಜಗದೀಶ್ ಶೆಟ್ಟರ್ (ಬಿಜೆಪಿ)
2. ರಜತ್ ಉಳ್ಳಾಗಡ್ಡಿಮಠ, ಗಿರೀಶ್ ಗದಿಗೆಪ್ಪಗೌಡ, ಅನಿಲ ಕುಮಾರ್ ಪಾಟೀಲ್(ಕಾಂಗ್ರೆಸ್)
3. ತಬ್ರೇಜ್ ಸಂಶಿ(ಜೆಡಿಎಸ್)
ಇದನ್ನೂ ಓದಿ | ಎಲೆಕ್ಷನ್ ಹವಾ | ಹುಬ್ಬಳ್ಳಿ-ಧಾರವಾಡ ಪಶ್ಚಿಮ | ಮೂರನೇ ಬಾರಿಯೂ ʻಬೆಲ್ಲದʼ ಸಿಹಿ ಸವಿಯುವರೇ ಅರವಿಂದ?