ಪರಶುರಾಮ್ ತಹಶೀಲ್ದಾರ್, ಹುಬ್ಬಳ್ಳಿ
ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರ ಉತ್ತಮವಾದ ಕೃಷಿಭೂಮಿ ಹಾಗೂ ಒಕ್ಕಲುತನಕ್ಕೆ ಹೆಸರುವಾಸಿ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಗೆ ಈ ತಾಲೂಕು ಅನೇಕ ಹೆಮ್ಮೆಯ ಪ್ರತಿಭೆಗಳನ್ನು ನೀಡಿದೆ. ಈ ತಾಲೂಕಿನ ಕಮಡೊಳ್ಳಿ ಗ್ರಾಮದ ಎಸ್.ಆರ್. ಬೊಮ್ಮಾಯಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. 1957 ರಿಂದಲೂ ಕುಂದಗೋಳ ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿದೆ. ಈ ಮೊದಲು 179-ಕುಂದಗೋಳ ವಿಧಾನಸಭಾ ಕ್ಷೇತ್ರವೆಂದು ಗುರುತಿಸಲ್ಪಡುತ್ತಿತ್ತು. 2008ರ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ 70-ಕುಂದಗೋಳ ವಿಧಾನಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿದೆ. ಕುಂದಗೋಳ ತಾಲೂಕು ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಹಲವು ಹಳ್ಳಿಗಳನ್ನು ಕ್ಷೇತ್ರ ಒಳಗೊಂಡಿದೆ. ಇದುವರೆಗೆ 15 ಚುನಾವಣೆಗಳು ಈ ಕ್ಷೇತ್ರದಲ್ಲಿ ನಡೆದಿವೆ.
ರಾಜಕೀಯ ಹಿನ್ನೆಲೆ
2018 ರಲ್ಲಿ ಕಾಂಗ್ರೆಸ್‌ನ ಸಿ.ಎಸ್ ಶಿವಳ್ಳಿ ಈ ಕ್ಷೇತ್ರದಿಂದ 643 ಮತಗಳಿಂದ ಗೆದ್ದು ಬಂದಿದ್ದರು. ಸಿ.ಎಸ್ ಶಿವಳ್ಳಿ ಕುರುಬ ಸಮಾಜಕ್ಕೆ ಸೇರಿದವರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ಐ. ಚಿಕ್ಕನಗೌಡ್ರ ಲಿಂಗಾಯತ ಸಮುದಾಯದವರು. ಕ್ಷೇತ್ರದಲ್ಲಿ ಮಾಡಿದ ಜನಪರ ಕಾರ್ಯಗಳಿಂದ ಸಿ.ಎಸ್. ಶಿವಳ್ಳಿ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದರು. ಅತ್ಯಂತ ಸರಳ ಸಜ್ಜನ ರಾಜಕಾರಣಿ ಅಂತಲೇ ಸಿ.ಎಸ್. ಶಿವಳ್ಳಿ ಹೆಸರುವಾಸಿ. ಈ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಪ್ರಮುಖ ಕಾರಣ ಬಿಜೆಪಿಯಲ್ಲಿ ಒಳ ಜಗಳ, ಎಸ್.ಐ. ಚಿಕ್ಕನಗೌಡ್ರ ಹಾಗೂ ಎಂ.ಆರ್. ಪಾಟೀಲ್ ಮಧ್ಯೆ ನಡೆದ ಟಿಕೆಟ್ ಫೈಟ್. ಯಡಿಯೂರಪ್ಪನವರ ಸಂಬಂಧಿಕರಾಗಿರುವ ಎಸ್.ಐ. ಚಿಕ್ಕನಗೌಡ್ರ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರಿಂದ ಎಂ.ಆರ್. ಪಾಟೀಲ್ ನಿರೀಕ್ಷಿತ ಪ್ರಮಾಣದಲ್ಲಿ ಓಡಾಡಲಿಲ್ಲ, ಬದಲಾಗಿ ಒಳಪೆಟ್ಟು ಕೊಟ್ಟರು ಇದು ಪಕ್ಷದ ಸೋಲಿಗೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ | ಎಲೆಕ್ಷನ್ ಹವಾ | ಕಲಘಟಗಿ | ಸಂತೋಷ್ ಲಾಡ್ ಯಾವ ಪಾರ್ಟಿ ಟಿಕೆಟ್ ತರುತ್ತಾರೆ ಎನ್ನುವುದೇ ಚರ್ಚೆ
ರಾಜ್ಯದ ಪೌರಾಡಳಿತ ಸಚಿವರಾಗಿ ಸಿ.ಎಸ್. ಶಿವಳ್ಳಿ ಕೆಲಸ ಮಾಡಿದರು. 2019, ಮಾರ್ಚ್ 22 ರಂದು ಅಕಾಲಿಕವಾಗಿ ಹೃದಯಾಘಾತದಿಂದ ನಿಧನರಾದರು. 2019ರ ಮೇ19ರಂದು ಉಪಚುನಾವಣೆ ನಡೆಯಿತು. ಈ ಉಪ ಚುನಾವಣೆಯಲ್ಲಿ ದಿವಂಗತ ಸಿ.ಎಸ್. ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಯಿತು. ಅನುಕಂಪದ ಅಲೆಯಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದು ಬಂದರು. ಚುನಾವಣೆ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇತ್ತು. ಈ ಚುನಾವಣೆಯನ್ನು ಡಿ.ಕೆ. ಶಿವಕುಮಾರ್ ಒಂದು ಪ್ರತಿಷ್ಠೆಯ ಕಣವಾಗಿ ಸ್ವಿಕರಿಸಿದ್ದರು. 15 ದಿನಗಳ ಕಾಲ ಕ್ಷೇತ್ರದಲ್ಲಿ ಬೀಡು ಬಿಟ್ಟು ಹಣದ ಹೊಳೆಯನ್ನೇ ಹರಿಸಿದ್ದರು. ಇದು ಸಹ ಚುನಾವಣೆ ಗೆಲುವಿಗೆ ಪ್ರಮುಖ ಕಾರಣವಾಗಿತ್ತು.
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ಪಮತಗಳಿಂದ ಸೋತ್ತಿದ್ದ ಎಸ್.ಐ. ಚಿಕ್ಕನಗೌಡ್ರ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ನೀಡಲಾಯಿತು. ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದ ಎಮ್.ಆರ್ ಪಾಟೀಲ್ ಮುನಿಸಿಕೊಂಡಿದ್ದರು. ಪ್ರಲ್ಹಾದ್ ಜೋಶಿ ಆಪ್ತ ಎಮ್.ಆರ್. ಪಾಟೀಲ್ ಚುನಾವಣೆ ವೇಳೆ ಕೆಲ ದಿನಗಳ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಟಿಕೆಟ್ ಕೈತಪ್ಪಿದ್ದರಿಂದ ಒಳ ಹೊಡೆತ ಕೊಟ್ಟರು ಎಂಬ ಚರ್ಚೆಯಿದೆ.
2023ರ ಚುನಾವಣೆಗೆ ಆಕಾಂಕ್ಷಿಗಳು
2023ಕ್ಕೆ ಕಾಂಗ್ರೆಸ್ ನಿಂದ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅರಿಗೆ ಟಿಕೆಟ್ ನೀಡಬಹುದು. ಕಾಂಗ್ರೆಸ್ ಹೊಸ ಅಭ್ಯರ್ಥಿಗೂ ಮಣೆ ಹಾಕಬಹುದು ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್‌ನಿಂದ ಕುಂದಗೋಳ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ವೀರಶೈವ ಸಮಾಜದ ಮುಖಂಡ ಅಂದಾನಪ್ಪ ಉಪ್ಪಿನ, ಅವರ ಸಹೋದರ ಜಗದೀಶ್ ಉಪ್ಪಿನ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮೇಶ್ ಹೆಬಸೂರು, ಮಾಜಿ ಶಾಸಕ ಮಲ್ಲಿಕಾರ್ಜುನ ಅಕ್ಕಿ, ಸಿ.ಎಸ್. ಶಿವಳ್ಳಿ ಸಹೋದರ ಮುತ್ತಣ್ಣ ಶಿವಳ್ಳಿ ಮತ್ತು ಷಣ್ಮುಖ ಶಿವಳ್ಳಿ ಸದ್ಯಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಪ್ರಮುಖರು.
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಮತದಾರರ ಸಂಖ್ಯೆ ಗಣನೀಯವಾಗಿದೆ. ಅಹಿಂದ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಹೀಗಾಗಿ ಮಾಜಿ ಸಿಎಮ್ ಸಿದ್ದರಾಮಯ್ಯ ಬೆಂಬಲಿಗರೂ ಕ್ಷೇತ್ರದಲ್ಲಿ ಸರ್ವೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಕುಂದಗೋಳ ಕ್ಷೇತ್ರದಿಂದ ಕಣಕ್ಕೆ ಇಳಿಸುವ ಪ್ಲ್ಯಾನ್ ನಡೆಯುತ್ತಿದೆ ಅನ್ನೋದು ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿರುವ ವಿಚಾರ.
ಬಿಜೆಪಿಯಲ್ಲಿ ಸಹ ಆಕಾಂಕ್ಷಿಗಳ ಪಟ್ಟಿ ದೊಡ್ಡದು
ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಅಥವಾ ಅವರ ಕುಟುಂಬದ ಸದಸ್ಯರ ಟಿಕೆಟ್‌ಗೆ ಮತ್ತೊಮ್ಮೆ ಬೇಡಿಕೆ ಇಡಬಹುದು. ಈ ಹಿಂದೆ ಮಾತುಕತೆ ನಡೆದಂತೆ, ಕಳೆದ ಎರಡು ಚುನಾವಣೆ ಸೋತಿರುವುದರಿಂದ ಎಸ್.ಐ. ಚಿಕ್ಕನಗೌಡ್ರ ಅವರಿಗೆ ಟಿಕೆಟ್ ಕೈತಪ್ಪಿದರೆ, ಪ್ರಲ್ಹಾದ್ ಜೋಶಿ ಆಪ್ತ ಎಂ.ಆರ್. ಪಾಟೀಲ್ ಸಹ ಪ್ರಬಲ ಟಿಕೆಟ್ ಆಕಾಂಕ್ಷಿ. ಒಂದು ವೇಳೆ ಹೊಸ ಮುಖಗಳಿಗೆ ಅಥವಾ ಯುವಕರಿಗೆ ಆದ್ಯತೆ ವಿಚಾರ ಬಂದಾಗ ಬಿಜೆಪಿ ಯುವಕ ಮುಖಂಡ ಮಲ್ಲಿಕಾರ್ಜುನ ಬಾಳಿಕಾಯಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ನಿರ್ಣಾಯಕ ವಿಷಯ
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಜಾತಿ ವಿಚಾರ ಪ್ರಮುಖ ಅಸ್ತ್ರ. ಎರಡನೇ ವಿಚಾರ ಪಕ್ಷ, ಯಾವ ಪಕ್ಷದಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಮೂರನೆಯದ್ದು ಅಭಿವೃದ್ಧಿ ವಿಚಾರ. ಶೈಕ್ಷಣಿಕವಾಗಿ, ಅಭಿವೃದ್ಧಿಯಲ್ಲಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಇರುವುದರಿಂದ ಅಭಿವೃದ್ಧಿ ವಿಚಾರವೂ ಚುನಾವಣಾ ಸಂದರ್ಭದಲ್ಲಿ ಚರ್ಚೆಗೆ ಬರಲಿದೆ.
ಒಳ ಹೊಡೆತದ ಅಪಾಯ
ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವುದರಿಂದ ಒಬ್ಬರಿಗೆ ಟಿಕೆಟ್ ಸಿಕ್ಕರೆ ಉಳಿದವರು ಅಸಮಾಧಾನಗೊಳ್ಳುವುದು ಸಹಜ. ಪಕ್ಷಗಳು ಇದನ್ನು ಯಾವ ರೀತಿ ನಿಭಾಯಿಸಲಿವೆ ಎನ್ನುವುದು ಪ್ರಮುಖವಾಗುತ್ತದೆ.
2023ಕ್ಕೆ ಸಂಭಾವ್ಯ ಪ್ರತಿಸ್ಪರ್ಧಿಗಳು
1. ಕುಸುಮಾವತಿ ಶಿವಳ್ಳಿ, ಅಂದಾನಪ್ಪ ಉಪ್ಪಿನ, ಜಗದೀಶ್ ಉಪ್ಪಿನ, ಉಮೇಶ್ ಹೆಬಸೂರು, ಮಲ್ಲಿಕಾರ್ಜುನ ಅಕ್ಕಿ, ಮುತ್ತಣ್ಣ ಶಿವಳ್ಳಿ, ಷಣ್ಮುಖ ಶಿವಳ್ಳಿ (ಕಾಂಗ್ರೆಸ್)
2. ಎಸ್.ಐ. ಚಿಕ್ಕನಗೌಡ್ರ, ಎಂ.ಆರ್. ಪಾಟೀಲ್, ಮಲ್ಲಿಕಾರ್ಜುನ ಬಾಳಿಕಾಯಿ (ಬಿಜೆಪಿ)
ಇದನ್ನೂ ಓದಿ | ಎಲೆಕ್ಷನ್ ಹವಾ | ಹುಬ್ಬಳ್ಳಿ ಧಾರವಾಡ ಪೂರ್ವ | ಹ್ಯಾಟ್ರಿಕ್ ಕನಸಿನಲ್ಲಿರುವ ಕಾಂಗ್ರೆಸ್‌ನ ಅಬ್ಬಯ್ಯಗೆ AIMIM ಆತಂಕ