Site icon Vistara News

ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌: ನಂಜಾವಧೂತ ಸ್ವಾಮೀಜಿ

Nanjavadhuta Swamiji

ರಾಮನಗರ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಸಮರ ಹೊಸತೇನಲ್ಲ. ಈ ಮಧ್ಯೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಟ್ಟಿದ್ದು ಡಿ.ಕೆ.ಶಿವಕುಮಾರ್‌ ಎಂದು ನಂಜಾವಧೂತ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬಿಡದಿಯ ಹೆಜ್ಜಾಲದಲ್ಲಿ ನಡೆದ ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು “”ಒಕ್ಕಲಿಗ ನಾಯಕರು ಅವಕಾಶವಾದಿಗಳಲ್ಲ, ಬದಲಿಗೆ ಸ್ವಾಭಿಮಾನಿಗಳುʼʼ ಎಂದಿದ್ದಾರೆ.

ಎಚ್‌.ಸಿ.ಬಾಲಕೃಷ್ಣ ಬದ್ಧತೆ ಇಟ್ಟುಕೊಂಡು ಕೆಲಸ ಮಾಡುವಂತಹ ರಾಜಕಾರಣಿ. ಎಂಎಲ್‌ಎ ಆಗಿದ್ದಾಗಲೇ ಅವರೇನಾದರೂ ಬಿಜೆಪಿ ಪಕ್ಷದಲ್ಲಿ ಉಳಿದಿದ್ದರೆ ಇವತ್ತಿಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇರುತ್ತಿದ್ದರು. ಅವರು ರಾಜ್ಯಮಟ್ಟದಲ್ಲಿ ಹೊರಹೊಮ್ಮುವಂತಹ ನಾಯಕರು. ರಾಜಕೀಯ ಅವಕಾಶ ಇದ್ದರೂ ತ್ಯಾಗ ಮಾಡಿ, ಮಾಜಿ ಸಿಎಂ ಕುಮಾರಸ್ವಾಮಿಯವರ ಪರವಾಗಿ ಬಲವಾಗಿ ನಿಂತವರು ಎಂದು ಸ್ಮರಿಸಿಕೊಂಡರು.

ಡಿ.ಕೆ ಶಿವಕುಮಾರ್ ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಸಿಎಂ ಆಗಲಿ ಎಂದು ಆಶಿಸಿದರು. ಅದೇ ರೀತಿಯಲ್ಲಿ ನಡೆದುಕೊಂಡರು. ನಂತರ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಕೂಡ ಅವರ ಬೆನ್ನಿಗೆ ಡಿ.ಕೆ ಶಿವಕುಮಾರ್ ನಿಂತಿದ್ದರು. ಸಿಕ್ಕ ಅವಕಾಶಗಳನ್ನು ಶಿವಕುಮಾರ್‌ ಬಳಸಿಕೊಂಡಿದ್ದರೆ ಇವತ್ತು ಏನೆಲ್ಲ ನೋವು ಅನುಭವಿಸುತ್ತಿದ್ದರೋ ಆ ಕಷ್ಟ ಬರುತ್ತಿರಲಿಲ್ಲ ಎಂದರು.

ಇದನ್ನೂ ಓದಿ | ಭ್ರಷ್ಟಾಚಾರದ ಚರ್ಚೆಗೆ ಟೈಮ್‌ ಕೊಡ್ತೇನೆ, ಹಿಂದೆ ಸರಿಯಲಾರೆ ಎಂದ ಡಿಕೆಶಿ

ಕುಮಾರಸ್ವಾಮಿ ಅವರು ಕೂಡ ಸಿಕ್ಕ ಅವಕಾಶ ಬಳಸಿಕೊಂಡಿದ್ದರೆ ಇವತ್ತಿಗೂ ಮುಖ್ಯಮಂತ್ರಿಯಾಗಿ ಉಳಿಯುತ್ತಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕುಮಾರಸ್ವಾಮಿಯವರನ್ನು ಸಂಪರ್ಕಿಸಿ, ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿ ಮುಂದುವರಿಯಿರಿ ಎಂದು ಹೇಳಿದ್ದರು. ಆದರೆ ಆಗ ಕುಮಾರಸ್ವಾಮಿ ಅವರು ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಈ ಮೂಲಕ ಗೊತ್ತಾಗುವುದೇನೆಂದರೆ ಒಕ್ಕಲಿಗರು ಅವಕಾಶವಾದಿಗಳಲ್ಲ, ಸ್ವಾಭಿಮಾನಿಗಳು. ಎಲ್ಲರನ್ನೂ ಪ್ರೀತಿಸುವವರು ಎಂದು ಒಕ್ಕಲಿಗ ನಾಯಕರ ಪರವಾಗಿ ಸ್ವಾಮೀಜಿ ಮಾತನಾಡಿದರು.

ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ “”ದೇವೇಗೌಡರನ್ನು ಗೆಲ್ಲಿಸುವ ಸಲುವಾಗಿ ಬಿಜೆಪಿ ತೊರೆದು ಜೆಡಿಎಸ್ ಸೇರಿದೆ. ಯಾವುದೇ ಸ್ವಾರ್ಥಕ್ಕಾಗಿ ಜೆಡಿಎಸ್‌ ಸೇರಲಿಲ್ಲ. ಆದರೆ ದೇವೇಗೌಡ್ರು ನಮ್ಮನ್ನೆಲ್ಲಾ ಅವತ್ತು ಹೊರಗೆ ಅಟ್ಟಿದರು. ನನ್ನ ಕುಟುಂಬವನ್ನು ಭಾಗ ಮಾಡುತ್ತಿದ್ದೀರಾ, ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಸಿಎಂ ಆಗುವುದಿಲ್ಲ ಎಂದು ಹೇಳಿದ್ದರು. ಆಗ ದೇವೇಗೌಡರ ವಿರೋಧ ಕಟ್ಟಿಕೊಂಡು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದೆವು. ಆದರೆ ಕೊಟ್ಟ ಅವಕಾಶವನ್ನು ಕುಮಾರಸ್ವಾಮಿ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ದೇವೇಗೌಡ್ರು, ಕುಮಾರಸ್ವಾಮಿ ಅವರಿಗೆ ಅವಕಾಶ ಕೊಟ್ಟಿದ್ದೀರಿ. ಈಗ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಕೊಡಿ ಎಂದು ಕಾರ್ಯಕ್ರಮದಲ್ಲಿ ಮನವಿ ಮಾಡಿದರು.

ಸಿದ್ದರಾಮಯ್ಯ ಪರ ಅವರ ಇಡೀ ಸಮೂಹ ಹಿಂದೆ ನಿಂತಿದೆ. ಹಾಗಾಗಿ ಹೈಕಮಾಂಡ್ ಕೂಡ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ನೀವು ಕೂಡ ಒಂದು ತೀರ್ಮಾನ ಮಾಡಿ, ನಿಮ್ಮ ಮನೆಯ ಮಗ ಡಿ ಕೆ ಶಿವಕುಮಾರ್‌ಗೆ ಒಂದು ಅವಕಾಶ ಕೊಡಿ. ಆಗ ಎಲ್ಲರೂ ತಿರುಗಿ ನೋಡುತ್ತಾರೆ. ಅವಕಾಶ ಮಾಡಿಕೊಡದೇ ನಮ್ಮವರು ಸಿಎಂ ಆಗಬೇಕು ಎಂದರೆ ಹೇಗೆ ಎಂದು ಪ್ರಶ್ನಿಸಿದರು. ನಾವು ಲಾಟರಿ ಮುಖ್ಯಮಂತ್ರಿ ಆಗುವುದು ಬೇಡ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಾಲಕೃಷ್ಣ ಟಾಂಗ್ ಕೊಟ್ಟರು.

ಇತ್ತೀಚೆಗೆ ಜಮೀರ್ ನಾಲಿಗೆ ಮತ್ತು ಬಾಯಿಗೆ ಕನೆಕ್ಷನ್ ಕಟ್ ಮಾಡಿಕೊಂಡಿದ್ದು, ಯಾಕೆ ಆ ರೀತಿ ಮಾತಾಡುತ್ತಿದ್ದರೋ ನಮಗೂ ಗೊತ್ತಿಲ್ಲ. ನಾವು ಕೂಡ ಹಲವು ಬಾರಿ ಹೇಳಿದ್ದೇವೆ, ಉದ್ದೇಶ ಪೂರ್ವಕವಾಗಿ ಜಮೀರ್ ಹೇಳುವುದಿಲ್ಲ, ಆವೇಶಭರಿತವಾಗಿ ಮಾತನಾಡುತ್ತಾರೆ. ಹೀಗಾಗಿ, ನಾವು ಕೂಡ ಈ ರೀತಿ ಮಾತಾಡುವುದು ತಪ್ಪು ಎಂದಿದ್ದೇವೆ ಎಂದರು.‌

ಇದನ್ನೂ ಓದಿ | ಬರೆದಿಟ್ಟುಕೊಳ್ಳಿ, ಕಾಂಗ್ರೆಸ್‌ ಪಕ್ಷ 70 ಸೀಟು ದಾಟಲ್ಲ: HD ಕುಮಾರಸ್ವಾಮಿ ಚಾಲೆಂಜ್‌

Exit mobile version