ಬೆಂಗಳೂರು: ರಾಜ್ಯ ಸರ್ಕಾರದ ಮೂರು ವರ್ಷದ ಸಂಭ್ರಮದ ಕಾರ್ಯಕ್ರಮ ಆಯೋಜನೆ ಮೂಲಕ ವಿಧಾನಸಭೆ ಚುನಾವಣೆಗೆ ಚಾಲನೆ ನೀಡಬೇಕು ಎಂಬ ಬಿಜೆಪಿ ಪ್ರಯತ್ನಕ್ಕೆ ಕೊನೆಗೂ ಕಾಲಕೂಡಿ ಬಂದಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಸಿಎಂ ಬೊಮ್ಮಾಯಿ-ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿದೆ. ಈ ಕುರಿತು ತಾತ್ಕಾಲಿಕ ಪ್ರವಾಸದ ವಿವರವನ್ನು ಬಿಡುಗಡೆ ಮಾಡಲಾಗಿದೆ.
ಜುಲೈ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ಆಯೋಜನೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಜುಲೈ 26ರಂದು ದಕ್ಷಿಣ ಕನ್ನಡದ ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಸಂಭವಿಸಿ ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದಿತ್ತು. ನಂತರ ಕಾರ್ಯಕ್ರಮವನ್ನು ಮುಂದೂಡಲಾಯಿತು.
ಆಗಸ್ಟ್ 28ಕ್ಕೆ ಕಾರ್ಯಕ್ರಮ ಆಯೋಜನೆಗೆ ನಿರ್ಧರಿಸಲಾಯಿತಾದರೂ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅಲಭ್ಯತೆಯ ಕಾರಣಕ್ಕೆ ಅದೂ ಸಾಧ್ಯವಾಗಲಿಲ್ಲ. ಇದೀಗ ಸೆಪ್ಟೆಂಬರ್ 8ರ ಗುರುವಾರ ದೊಡ್ಡಬಳ್ಳಾಪುರದಲ್ಲೆ ಜನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲು ದಿನಾಂಕ ನಿಗದಿಯಾಗಿದೆ. ಜೆ.ಪಿ. ನಡ್ಡಾ ಆಗಮಿಸಲಿದ್ದು, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮುಂದಾಳತ್ವ ವಹಿಸಿದ್ದಾರೆ. ಜನೋತ್ಸವದ ಬೆನ್ನಲ್ಲೇ ಎರಡು ತಂಡಗಳ ಮೂಲಕ ಬಿಜೆಪಿ ನಾಯಕರು ಪ್ರವಾಸ ಆರಂಭಿಸಲಿದ್ದಾರೆ.
ಕೆ.ಆರ್.ನಿಂದ ಮಂಗಳೂರಿಗೆ ಕಟೀಲು
ನಳಿನ್‌ಕುಮಾರ್ ಕಟೀಲು ಅವರು ಮೈಸೂರಿನ ಕೃಷ್ಣರಾಜದಿಂದ ಆರಂಭಿಸಿ ನಂಜನಗೂಡು ಪ್ರವಾಸ ಪೂರ್ಣಗೊಳಿಸಲಿದ್ದಾರೆ. ನಂತರ ಜನೋತ್ಸವದಲ್ಲಿ ಭಾಗಿಯಾಗುತ್ತಾರೆ. ನಂತರ ಮತ್ತೆ ಹನೂರಿನಿಂದ ಆರಂಭಿಸಿ ಹನೂರು, ಗುಂಡ್ಲುಪೇಟೆ, ಮಂಡ್ಯ, ಶ್ರೀರಂಗಪಟ್ಟಣ, ಹಾಸನ, ಬೇಲೂರು, ಮೂಡಿಗೆರೆ ಮಾರ್ಗವಾಗಿ 52 ಕ್ಷೇತ್ರಗಳ ಮೂಲಕ ಹಾದು ಮಂಗಳೂರು ತಲುಪಲಿದ್ದಾರೆ.
ಸಿಎಂ ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ತಂಡ ರಾಯಚೂರು ನಗರದಿಂದ ಆರಂಭಿಸಿ ದೇವರಹಿಪ್ಪರಗಿವರೆಗೆ 52 ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಇದೆಲ್ಲದರ ನಡುವೆ ದೊಡ್ಡಬಳ್ಳಾಪುರ, ಬಳ್ಳಾರಿ, ಮೈಸೂರು, ಕಲಬುರಗಿ, ಬೆಂಗಳೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ಬೃಹತ್ ಸಮಾವೇಶಗಳು ನಡೆಯಲಿದ್ದು, ಎರಡೂ ತಂಡಗಳ ನಾಯಕರು ಭಾಗವಹಿಸಲಿದ್ದಾರೆ.
ಮಳೆ ತೀವ್ರತೆ ಕಡಿಮೆ ಆದ ಬಳಿಕ ಪ್ರವಾಸ: ಎನ್.ರವಿಕುಮಾರ್
ಮಳೆ ತೀವ್ರತೆ ಕಡಿಮೆ ಆದ ಬಳಿಕ 104 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯ ಬಿಜೆಪಿಯ ಎರಡು ತಂಡಗಳ ಪ್ರವಾಸ ಏರ್ಪಡಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬುಧವಾರದಿಂದ ಆರಂಭಗೊಳ್ಳಬೇಕಿದ್ದ ರಾಜ್ಯಾಧ್ಯಕ್ಷರ ತಂಡದ ಪ್ರವಾಸ ಹಾಗೂ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇನ್ನೊಂದು ತಂಡದ ಪ್ರವಾಸವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಫಲಾನುಭವಿಗಳ ಸಮಾವೇಶ, ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಮನೆಯಲ್ಲಿ ಉಪಹಾರ ಮತ್ತು ಅದೇ ಪರಿಸರದಲ್ಲಿ ಸಭೆ ನಡೆಸಲಾಗುತ್ತದೆ. ಮಠ, ಮಂದಿರಗಳಿಗೆ ಭೇಟಿ ನೀಡಲಿದ್ದೇವೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರ ತಂಡ ಪ್ರವಾಸದ 52 ಕ್ಷೇತ್ರಗಳಲ್ಲಿ ಬೂತ್, ಶಕ್ತಿ ಕೇಂದ್ರಗಳ, ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಿದೆ. ಪಂಚರತ್ನ- 5 ಪ್ರಮುಖ ಕಾರ್ಯಕರ್ತರ ಸಭೆ ನಡೆಸಲಾಗುವುದು. ಒಂದು ತಂಡ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಇರಲಿದೆ. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿಗಳ ತಂಡ ಇನ್ನೊಂದು ಭಾಗದಲ್ಲಿ ಪ್ರವಾಸ ಮಾಡಲಿದೆ. ಕೋರ್ ಕಮಿಟಿಯ 16 ಸದಸ್ಯರು ಅವಶ್ಯಕತೆಗೆ ಅನುಗುಣವಾಗಿ ಭಾಗವಹಿಸಲು ಯೋಜಿಸಿದೆ. ರಾಜ್ಯ ಪ್ರಭಾರಿ ಅರುಣ್ ಸಿಂಗ್, ಸಹ ಪ್ರಭಾರಿ ಅರುಣಾ ಅವರು ಪಾಲ್ಗೊಳ್ಳಲಿದ್ದಾರೆ ಎಂದರು.
ರೈತ ಸಮಾವೇಶ, ಎಸ್‍ಸಿ ಸಮಾವೇಶ, ಒಬಿಸಿ ಸಮಾವೇಶ, ಯುವ ಸಮಾವೇಶ, ಮಹಿಳಾ ಸಮಾವೇಶ, ಎಸ್‍ಟಿ, ಅಲ್ಪಸಂಖ್ಯಾತ ಬಂಧುಗಳ ಸಮಾವೇಶವನ್ನೂ ಆಯೋಜಿಸಲಾಗುತ್ತದೆ. ಡಿಸೆಂಬರ್ 15ರೊಳಗೆ 104 ಕ್ಷೇತ್ರ ಪ್ರವಾಸ ಮತ್ತು 7 ಸಮಾವೇಶಗಳನ್ನೂ ಯೋಜಿಸಿದೆ. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಸಮಾವೇಶವನ್ನು ಸಂಘಟಿಸಲಿವೆ ಎಂದರು. ಪ್ರವಾಸ ಮತ್ತು ಸಮಾವೇಶ ಯಶಸ್ವಿಗಾಗಿ ಪ್ರಭಾರಿಗಳನ್ನು ನೇಮಿಸಿದೆ. 150 ಕ್ಷೇತ್ರ ಗೆಲುವಿನ ಗುರಿ ಮುಟ್ಟುವ ಹಿನ್ನೆಲೆಯಲ್ಲಿ ಕಾರ್ಯಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ಎರಡೂ ತಂಡಕ್ಕೆ ಸಂಚಾಲಕರ ನಿಯೋಜನೆ
ನಳಿನ್ ಕುಮಾರ್ ಕಟೀಲ ಅವರ ಪ್ರವಾಸದ ಸಂಚಾಲಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಹಾಗೂ ಸಿದ್ದರಾಜು ನೇಮಕವಾಘಿದ್ದಾರೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಪ್ರವಾಸದ ಸಂಚಾಲಕರಾಗಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ ಸುರಾನಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಹಾಗೂ ಸಚಿವ ಅಶ್ವತ್ಥನಾರಾಯಣ ಇರಲಿದ್ದಾರೆ.
ಇದನ್ನೂ ಓದಿ | BJP Janothsava | ರದ್ದಾಗಿದ್ದ ಜನೋತ್ಸವಕ್ಕೆ ದಿನಾಂಕ ಫಿಕ್ಸ್: ಬರಲಿದ್ದಾರೆ ಜೆ.ಪಿ. ನಡ್ಡಾ