ಬೆಂಗಳೂರು: ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸೇರಿದಂತೆ ಹಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಮೋದಿ ಅವರನ್ನು ಅಭೂತಪೂರ್ವ ರೀತಿಯಲ್ಲಿ ಸ್ವಾಗತಿಸಲು ಆಡಳಿತರೂಢ ಬಿಜೆಪಿ ಸರ್ಕಾರ ಸಜ್ಜಾಗಿದೆ. ಪೊಲೀಸರು ವ್ಯಾಪಕ ಭದ್ರತಾ ಏರ್ಪಾಟು ಮಾಡುತ್ತಿದ್ದಾರೆ.
ಇದನ್ನೂ ಓದಿ | ಬೆಂಗಳೂರಿನಲ್ಲಿ ಜೂ.20ರಂದು ಮೋದಿ ರೋಡ್ ಶೋ; ಅಭೂತಪೂರ್ವ ಸ್ವಾಗತಕ್ಕೆ ಸಿಎಂ ಸೂಚನೆ
ಎರಡು ದಿನಗಳ ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಜೂನ್ 20ರಂದು ಬೆಂಗಳೂರಿಗೆ ಮೋದಿ ಆಗಮಿಸಲಿದ್ದಾರೆ. ನಗರದ ಹೊರವಲಯದ ಕೊಮ್ಮಘಟ್ಟದಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಅಂತಿಮ ಹಂತದ ಪರಿಶೀಲನೆ ನಡೆಸಿದ್ದಾರೆ.
ಗೃಹ ಸಚಿವರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಾಥ್ ನೀಡಿದ್ದರು.
ಮೋದಿ ಪ್ರವಾಸ ವೇಳಾಪಟ್ಟಿ ಹೀಗಿದೆ
– ಜೂನ್ 20ರ ಬೆಳಗ್ಗೆ 9 ಗಂಟೆಗೆ ದೆಹಲಿಯಿಂದ ಮೋದಿ ಹೊರಟು ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಬೆಳಗ್ಗೆ 11.55ಕ್ಕೆ ತಲುಪಲಿದ್ದಾರೆ.
– ಮಧ್ಯಾಹ್ನ 12.20: ಹೆಲಿಕಾಪ್ಟರ್ ಮೂಲಕ ಕೊಮ್ಮಘಟ್ಟ ಹೆಲಿಪ್ಯಾಡ್‌ಗೆ ಆಗಮನ.
-ಮಧ್ಯಾಹ್ನ 12.30ರಿಂದ 1.45: ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶಂಕು ಸ್ಥಾಪನೆ, ರೈಲ್ವೇ ರೋಡ್ ಯೋಜನೆ ಮತ್ತು ಬಹು ಮಾದರಿ ಲಾಜಿಸ್ಟಿಕ್ ಪಾರ್ಕ್‌ಗೆ ಶಂಕುಸ್ಥಾಪನೆ.
-ಮಧ್ಯಾಹ್ನ 2.30ರಿಂದ 3.30: ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಉದ್ಘಾಟನೆ, ಅಂಬೇಡ್ಕರ್ ಪ್ರತಿಮೆ ಅನಾವರಣ, ಮೇಲ್ದರ್ಜೆಗೇರಿಸಲ್ಪಟ್ಟ 150 ಐಟಿಐಗಳ ಲೋಕಾರ್ಪಣೆ
-ಸಂಜೆ 4: ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಫ್ಟರ್ ಮೂಲಕ ಪ್ರಯಾಣ
-ಸಂಜೆ 4.50: ಮೈಸೂರಿಗೆ ಆಗಮನ
-ಸಂಜೆ 5: ಮಹಾರಾಜ ಕಾಲೇಜು ಮೈದಾನದಲ್ಲಿ ಐಐಎಸ್‌ಎಚ್ ಎಕ್ಸಲೆನ್ಸ್ ಸೆಂಟರ್ ಲೋಕಾರ್ಪಣೆ ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ.
-ಸಂಜೆ 6.30: ಸುತ್ತೂರು ಮಠಕ್ಕೆ ಭೇಟಿ, ವೇದ ಪಾಠಶಾಲಾ ಕಟ್ಟಡ ಲೋಕಾರ್ಪಣೆ
-ರಾತ್ರಿ 7.30: ಚಾಮುಂಡಿ ಬೆಟ್ಟಕ್ಕೆ ಭೇಟಿ
-ರಾತ್ರಿ 8.10: ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ
-ಜೂನ್ 21 ರಂದು ಬೆಳಗ್ಗೆ 6.30: ಮೈಸೂರು ಅರಮನೆ ಮುಂಭಾಗ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿ
-ಬೆಳಗ್ಗೆ 8 ಗಂಟೆಗೆ ಅರಮನೆ ಮುಂಭಾಗದಲ್ಲಿ ವಸ್ತು ಪ್ರದರ್ಶನ ವೀಕ್ಷಣೆ
-ಬೆಳಗ್ಗೆ 8.30ಕ್ಕೆ ಮೈಸೂರು ಅರಮನೆಗೆ ಭೇಟಿ
-ಬೆಳಗ್ಗೆ 9.25 ಕ್ಕೆ ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ತಿರುವನಂತಪುರಕ್ಕೆ ಪ್ರಯಾಣ
ಜವಾಬ್ದಾರಿ ಹಂಚಿಕೆ ಮಾಡಿದ ಸಿಎಂ ಬೊಮ್ಮಾಯಿ
ಕೊಮ್ಮಘಟ್ಟದಲ್ಲಿ ಬೃಹತ್ ಸಮಾವೇಶ ಯಶಸ್ವಿಗೊಳಿಸಲು ಸಚಿವರು, ಶಾಸಕರು, ಮಾಜಿ ಕಾರ್ಪೊರೇಟರ್‌ಗಳಿಗೆ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಮೋದಿ ಆಗಮನ ಹಿನ್ನೆಲೆ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ಬೃಹತ್ ಜನ ಸಮಾವೇಶಕ್ಕೆ ಬಿಜೆಪಿ ಪ್ಲಾನ್ ಮಾಡಿದ್ದು, 50-60 ಸಾವಿರ ಜನ ಸೇರಿಸಲು ಯೋಜನೆ ರೂಪಿಸಿದೆ. ಕಾರ್ಯಕ್ರಮ ಸ್ಥಳದಲ್ಲಿ 30 ಸಾವಿರ ಕುರ್ಚಿಗಳ ವ್ಯವಸ್ಥೆ, ಜನರನ್ನು ಕರೆತರಲು 656 ಬಸ್‌ಗಳ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.ಈ ಕಾರ್ಯಕ್ರಮಕ್ಕಾಗಿ ಬಿಡಿಎಯಿಂದ 9 ಕೋಟಿ ಹಣದ ನೆರವು ಕಲ್ಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | ಪ್ರಧಾನಿ ಮೋದಿಗೆ ಕಾನೂನು ಅರಿವಿಲ್ಲ: ವಿ.ಎಸ್. ಉಗ್ರಪ್ಪ ಕಿಡಿ