Site icon Vistara News

ಜಿಮ್‌ಗಳಲ್ಲಿ ಪ್ರೋಟೀನ್‌ ಪೌಡರ್‌ ಸೇವಿಸಿ ಯುವಕ ಸಾವು: ವಿಧಾನಸಭೆಯಲ್ಲಿ ಸರ್ಕಾರದ ಎಚ್ಚರಿಕೆ

gym protien powder

ವಿಧಾನಸಭೆ: ಜಿಮ್‌ಗಳಲ್ಲಿ ಬಾಡಿಬಿಲ್ಡಿಂಗ್‌ಗಾಗಿ ಅನಧಿಕೃತವಾಗಿ ಪ್ರೋಟೀನ್‌ ಪೌಡರ್‌ ನೀಡಿ ಯುವಕರು ನಿಧನರಾಗುತ್ತಿರುವುದರ ಕುರಿತು ವಿಧಾನಸಭೆಯಲ್ಲಿ ಕೆಲಹೊತ್ತು ಗಂಭೀರ ಚರ್ಚೆ ನಡೆಯಿತು. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಈ ರೀತಿ ಒಬ್ಬ ಯುವಕ ನಿಧನರಾಗಿರುವುದಾಗಿ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು.

ಸಣ್ಣಗಾಗಲು ಅಥವಾ ದಪ್ಪಗಾಗಲು ಜಿಮ್‌ಗಳಲ್ಲಿ ಪ್ರೋಟೀನ್‌ ಪೌಡರ್ ನೀಡುತ್ತಾರೆ. ಅಕ್ರಮವಾಗಿ ಇದನ್ನು ಮಾಡುತ್ತಿದ್ದು, ನನ್ನ ಕ್ಷೇತ್ರದಲ್ಲಿ ಸಂತೋಷ್ ಎಂಬ ಯುವಕ ಇದರಿಂದ ಕೊನೆಯುಸಿರೆಳೆದಿದ್ದಾನೆ ಎಂದರು.

ಅವನು ಈ ಪೌಡರ್ ತೆಗೆದುಕೊಂಡು ಎಲ್ಲ ಅಂಗಗಳು ವಿಫಲವಾಗಿದ್ದವು. ಅವನನ್ನು ಉಳಿಸಲು 50 ಲಕ್ಷ ರೂ. ಖರ್ಚು ಮಾಡಿದರು. ಆದರೂ ಕೊನೆಯುಸಿರೆಳೆದಿದ್ದಾನೆ. ಈ ಪ್ರೋಟೀನ್ ಪೌಡರ್ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಈ ಬಗ್ಗೆ ಸಮಗ್ರ ತನಿಖೆ ಮಾಡಿಸಿ, ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಆರೋಗ್ಯ ಸಚಿವ ಸುಧಾಕರ್‌ ಪ್ರತಿಕ್ರಿಯಿಸಿ, ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಗಮನಹರಿಸಿದ್ದೇವೆ ಎಂದರು.

ಇದನ್ನೂ ಓದಿ | ನಳನಳಿಸುವ ಆರೋಗ್ಯಕ್ಕಾಗಿ ಐದು ಸೂಪರ್‌ ಫುಡ್‌ಗಳು

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಹೇಳಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ದಪ್ಪ ಇದ್ದೋರು ಸಣ್ಣ ಆಗುತ್ತಾರೆ ಎಂದರೆ, ಸಣ್ಣ ಇರುವವರು ದಪ್ಪ ಆಗುತ್ತಾರೆ ಎಂದರೆ ಯಾರಿಗೆ ತಾನೇ ಆಸೆ ಇರುವುದಿಲ್ಲ? ಆ ಪೌಡರ್ ವೈಜ್ಞಾನಿಕವಾಗಿ ಇದೆಯೋ, ಇಲ್ಲವೋ ಎಂಬುದರ ಬಗ್ಗೆ ಪತ್ತೆ ಹಚ್ಚಿ. ಆರೋಗ್ಯ, ಗೃಹ, ಹಾಗೂ ಆಹಾರ ಇಲಾಖೆಗಳ ಸಚಿವರು ಸಭೆ ಮಾಡಿ ತೀರ್ಮಾನ ಕೈಗೊಳ್ಳಿ ಎಂದರು.

ಅನೈಸರ್ಗಿಕ ಬೆಳವಣಿಗೆ

ಅಧೀವೇಶನದ ನಂತರ ʼವಿಸ್ತಾರ ನ್ಯೂಸ್‌ʼ ಜತೆ ಮಾತನಾಡಿದ ಸತೀಶ್‌ ರೆಡ್ಡಿ, ಜಿಮ್‌ಗಳಲ್ಲಿ ಅನೈಸರ್ಗಿಕವಾಗಿ ದೇಹವನ್ನು ಬೆಳೆಸಲು ಪ್ರೋಟೀನ್‌ ಪೌಡರ್ ಕೊಡುತ್ತಾರೆ. ಈ ಪೌಡರ್‌ ನೀಡಲು ಯಾವುದೇ ವೈದ್ಯರ ಸಲಹೆ ಪಡೆಯುವುದಿಲ್ಲ. ಇಂತಹ ಚಟುವಟಿಕೆಗಳನ್ನು ಮಾಡುತ್ತಿರುವ ಜಿಮ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವುಗಳ ಲೈಸೆನ್ಸ್ ರದ್ದು ಮಾಡಬೇಕು ಎಂದು ಒತ್ತಾಯ ಮಾಡಿದ್ದೇನೆ. ಸರ್ಕಾರ ಸಹ ಇದಕ್ಕೆ ಒಪ್ಪಿಗೆ ಸೂಚಿಸಿದೆ ಎಂದರು.

ಶಾಸಕರೇ ತೆಗೆದುಕೊಂಡಿದ್ದರು !

ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ನಂತರ ಶಾಸಕರೊಬ್ಬರೇ ಆಗಮಿಸಿ, ತಾವೂ ಈ ಹಿಂದೆ ಇಂತಹ ಪೌಡರ್‌ ತೆಗೆದುಕೊಂಡಿದ್ದಾಗಿ ಹೇಳಿದರು ಎಂದು ಸತೀಶ್‌ ರೆಡ್ಡಿ ತಿಳಿಸಿದರು. ಇದನ್ನು ತೆಗೆದುಕೊಂಡಿದ್ದರಿಂದ ಯಾವುದೇ ಉಪಯೋಗ ಆಗುವುದಿಲ್ಲ, ಆರೋಗ್ಯ ಹದಗೆಡುತ್ತದೆ. ಆದರೆ ಆ ಶಾಸಕರ ಹೆಸರನ್ನು ಹೇಳುವುದಿಲ್ಲ ಎಂದು ಸತೀಶ್‌ ರೆಡ್ಡಿ ತಿಳಿಸಿದರು.

ಇದನ್ನೂ ಓದಿ | ಜಿಮ್‌ನಲ್ಲಿ ಮಹಿಳೆ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ..! ಹಾಗಾದ್ರೆ ಅಸಲಿ ಕಾರಣವೇನು..?

Exit mobile version