Site icon Vistara News

H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು

h3n2 virus

ಹಾಸನ: ಎಚ್‌3ಎನ್‌2 ಇನ್‌ಫ್ಲುಯೆಂಜಾ ಜ್ವರಕ್ಕೆ (H3N2 Virus) ಹಾಸನದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಎಚ್‌3ಎನ್‌2ಗೆ ಮೊದಲ ಬಲಿಯಾಗಿದೆ. ಈ ನಡುವೆ ಹರಿಯಾಣದಲ್ಲಿ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಮಾರಣಾಂತಿಕವಾಗದು ಎಂಬ ನಂಬಿಕೆ ಇದ್ದ ಈ ವೈರಸ್‌ ಈಗ ಜೀವ ಬಲಿಗೆ ಕಾರಣವಾಗಿದ್ದು ಆತಂಕ ಮೂಡಿಸಿದೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ಮೂಲದ 78 ವರ್ಷದ ಹಿರಿಯ ನಾಗರಿಕರೊಬ್ಬರು ಮಾರ್ಚ್ 1ರಂದು ಆಲೂರಿನಲ್ಲಿ ಮೃತಪಟ್ಟಿದ್ದರು. ಇವರಿಗೆ H3N2 ಪಾಸಿಟಿವ್‌ ಇದ್ದುದು ದೃಢವಾಗಿದೆ. ಜ್ಚರ, ಗಂಟಲುನೋವು, ಕೆಮ್ಮಿನಿಂದ ಇವರು ಬಳಲುತ್ತಿದ್ದರು. ಮೃತರಿಗೆ H3N2 ಇದ್ದುದನ್ನು ಆರೋಗ್ಯ ಇಲಾಖೆ ದೃಢಪಡಿಸಿದ್ದು, ಈ ಸೋಂಕಿನ ಬಗ್ಗೆ ಇನ್ನಷ್ಟು ಆತಂಕ ಮೂಡಿಸಿದೆ.

H3N2 ವೈರಸ್‌ನಿಂದ ರಾಜ್ಯದಲ್ಲಿ ಆಗುತ್ತಿರುವ ಮೊದಲ ಸಾವು ಇದಾಗಿದೆಯಲ್ಲದೆ, ದೇಶದಲ್ಲಿಯೇ ಮೊದಲ ಸಾವು ಕೂಡ ಆಗಿದೆ. ಕೋವಿಡ್‌ ವೈರಸ್‌ನ ಮೊದಲ ಸಾವು ಕೂಡ ಕರ್ನಾಟಕದ ಕಲಬುರಗಿಯಲ್ಲಿ ಆಗಿದ್ದುದನ್ನು ಇಲ್ಲಿ ಸ್ಮರಿಸಬಹುದು.

ಮೃತ ವ್ಯಕ್ತಿ ಇರುವ ಗ್ರಾಮದ ಸುತ್ತಮುತ್ತಲ‌ ಹಳ್ಳಿಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಅನಾರೋಗ್ಯ ಪೀಡಿತರು ಹಾಗು ವೃದ್ಧರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಗಂಟಲು ದ್ರವವನ್ನು ಲ್ಯಾಬ್‌ಗೆ ಕಳಿಸಲಾಗಿದೆ ಎಂದು ವಿಸ್ತಾರ ನ್ಯೂಸ್‌ಗೆ ಡಿಎಚ್‌ಒ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್3ಎನ್2 ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಹಾಸನದಲ್ಲಿ ಆರು ಮಂದಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಕೋವಿಡ್‌ ನಂತರ ಆತಂಕ ಮೂಡಿಸಿರುವ ಈ ಜ್ವರದಿಂದ ಕೋಮಾರ್ಬಿಡಿಟೀಸ್‌ ಇರುವವರು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಆತಂಕವಿದ್ದು, ಎಚ್ಚರದಿಂದ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಡಯಾಬಿಟೀಸ್‌ ಮುಂತಾದ ಕಾಯಿಲೆಗಳು ಹಾಗೂ 60 ವರ್ಷ ಮೇಲ್ಪಟ್ಟವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಜ್ವರ ಕಾಣಿಸಿಕೊಂಡವರು ಸ್ವಯಂ ಚಿಕಿತ್ಸೆ ತೆಗೆದುಕೊಳ್ಳದೇ ವೈದ್ಯರ ಭೇಟಿ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: H3N2 Influenza: ಕೊವಿಡ್ 19ಗೂ-ಎಚ್​3ಎನ್​2ಗೂ ಏನು ಸಂಬಂಧ?-ಐಸಿಯು ದಾಖಲಾತಿ ಕೇಸ್​​ ಹೆಚ್ಚಾಗುತ್ತಿರುವ ಆತಂಕ

Exit mobile version