ಹುಬ್ಬಳ್ಳಿ: ಮತಾಂತರಕ್ಕೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ, ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಪ್ರಕರಣ (Conversion) ದಾಖಲಾಗಿದೆ.
ಮಂಡ್ಯದ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ ಎಂಬುವವರು ಮತಾಂತರಕ್ಕೆ ಸಂಬಂಧಿಸಿ ದೂರು ಸಲ್ಲಿಸಿದ್ದಾರೆ. ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ್ದಾರೆ ಎಂದು ಶ್ರೀಧರ ದೂರು ದಾಖಲಿಸಿದ್ದಾರೆ.
ಮಂಡ್ಯದ ಅತ್ತಾವರ ರೆಹಮಾನ್, ಬೆಂಗಳೂರಿನ ಅಜೀಸಾಬ್, ನಯಾಜ್ ಪಾಷಾ, ನದೀಮ್ ಖಾನ್, ಅನ್ಸಾರ್ ಪಾಷಾ, ಸಯ್ಯದ್ ದಸ್ತಗಿ, ಮಹ್ಮದ್ ಇನ್ಸಾಲ್, ರಫಿಕ್, ಶಬ್ಬೀರ್, ಖಾಲಿದ್, ಷಾಕಿಲ್ ಮತ್ತು ಅಲ್ತಾಪ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕಳೆದ ಮೇ ತಿಂಗಳಲ್ಲಿ ಶ್ರೀಧರ ಅವರನ್ನು ಬೆಂಗಳೂರಿಗೆ ಆರೋಪಿಗಳು ಕರೆದೊಯ್ದಿದ್ದರು. ಬನಶಂಕರಿಯ ಮಸೀದಿಯೊಂದರಲ್ಲಿ ಬಲವಂತವಾಗಿ ಬಂಧಿಸಿಟ್ಟು ಮತಾಂತರಕ್ಕೆ ಯತ್ನಿಸಲಾಗಿದೆ. ದನದ ಮಾಂಸ ತಿನ್ನುವಂತೆ ಒತ್ತಾಯಿಸಿ ಹಲ್ಲೆ ನಡೆಸಲಾಗಿದೆ.
ಪ್ರತಿವರ್ಷ ಮೂವರನ್ನು ಇಸ್ಲಾಂಗೆ ಮತಾಂತರ ಮಾಡಬೇಕೆಂದು ಆಗ್ರಹಿಸಲಾಗಿದೆ. ಕೈಯ್ಯಲ್ಲಿ ಪಿಸ್ತೂಲ್ ಹಿಡಿಸಿ ಫೋಟೊ ತೆಗೆದು, ಭಯೋತ್ಪಾದಕನೆಂದು ಬಿಂಬಿಸುವುದಾಗಿ ಬೆದರಿಕೆ ಹಾಕಲಾಗಿದೆ. ಸೆಪ್ಟೆಂಬರ್ 21ರಂದು ಹುಬ್ಬಳ್ಳಿಯ ಬೈರಿದೇವರಕೊಪ್ಪಕ್ಕೆ ಬಂದಾಗ ಹಲ್ಲೆ ನಡೆಸಲಾಗಿದೆ ಎಂದು ಶ್ರೀಧರ ಅವರು ಆರೋಪಿಸಿದ್ದಾರೆ.